news18-kannada Updated:March 3, 2021, 2:53 PM IST
ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು (ಮಾ. 3): ರಾಸಲೀಲೆ ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ನೀರಾವರಿ ಸಚಿವ ರಮೇಶ್ ಜಾರಕಿಹೊಳಿ (Ramesh jarkiholi video) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಚಿವರ ರಾಜೀನಾಮೆ ಪತ್ರವನ್ನು ಅವರ ತಮ್ಮ ಬಾಲಚಂದ್ರ ಜಾರಕಿಹೊಳಿ ಸಿಎಂಗೆ ನೀಡಿದರು. ಬಾಲಚಂದ್ರ ಜಾರಕಿಹೊಳಿ ನೀಡಿದ ನೀರಾವರಿ ಸಚಿವರ ರಾಜೀನಾಮೆಯನ್ನು ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಂಗೀಕರಿಸಿದ್ದಾರೆ. ಸಿಎಂ ಭೇಟಿ ಬಳಿಕ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಈ ಪ್ರಕರಣದ ಕುರಿತು ಆದಷ್ಟು ಬೇಗ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಈ ಪ್ರಕರಣ ರಾಜಕೀಯ ಷಡ್ಯಂತ್ರವಾಗಿದ್ದು, ಇದು ನಕಲಿ ವಿಡಿಯೋ ಅಥವಾ ಅಸಲಿಯೋ ಎಂಬುದು ತನಿಖೆಯಲ್ಲಿ ಬಯಲಾಗಲಿದೆ. ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಆರೋಪ ಮುಕ್ತವಾಗಿ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಇದೇ ವೇಳೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಮೇಶ್ ಜಾರಕಿಹೊಳಿ ಅಜ್ಞಾತಸ್ಥಳಕ್ಕೆ ತೆರಳಿದ್ದಾರೆ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ರಮೇಶ್ ಬೆಂಗಳೂರಿನಲ್ಲೇ ಇದ್ದಾರೆ. ಇಲ್ಲಿಯೇ ಇರುತ್ತಾರೆ. ಸಾಧ್ಯವಾದರೆ ಇಂದು ಅಥವಾ ನಾಳೆ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದರು.
ಇನ್ನು ಬಿಜೆಪಿ ಸರ್ಕಾರ ರಚಿಸುವಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಮುಖ್ಯವಾಗಿತ್ತು. ಈಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಸಚಿವ ಸ್ಥಾನ ಬಾಲಚಂದ್ರ ಜಾರಕಿಹೊಳಿಗೆ ಸಿಗಲಿದೆ ಎಂಬ ಮಾತು ನಡೆದಿದೆ. ಈ ಕುರಿತು ಮಾತನಾಡಿದ ಅವರು, ನನಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ಆಗಿಲ್ಲ. ಅದರ ಬಗ್ಗೆ ಮುಂದೆ ನೋಡೋಣ. ಆದಷ್ಟು ಬೇಗ ರಮೇಶ್ ನಿರ್ದೋಷಿಯಾಗಿ ಬರುತ್ತಾರೆ ಎಂದರು.
ಇದನ್ನು ಓದಿ: ‘ಶ್ರೀದೇವಿ’ ಕರ್ಮಕಾಂಡ; 15 ದಿನದಲ್ಲಿ ಕ್ರಮ ಕೈಗೊಳ್ಳದಿದ್ದರೆ ಸಿಡಿ ಬಿಡುಗಡೆ – ಮಾಜಿ ಸಚಿವ ಎಚ್ಚರಿಕೆ
ಇದಕ್ಕೂ ಮುನ್ನ ಮಾತನಾಡಿದ ಬಾಲಚಂದ್ರ, ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಕುಗ್ಗಿಸಲು ಈ ರೀತಿ ಷಡ್ಯಂತ್ರ ರೂಪಿಸಲಾಗಿದೆ, ಸಿಡಿ ಬಿಡುಗಡೆ ಮಾಡಿದವರ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ಧಮೆ ಹೂಡುವ ಕುರಿತು ವಕೀಲರೊಂದಿಗೆ ಮಾತುಕತೆ ನಡೆಸಿದ್ದೇವೆ. ಈ ಪ್ರಕರಣದ ಹಿಂದೆ ರಾಜಕೀಯ ಪ್ರಭಾವಿಗಳಿದ್ದರೆ ಎಂದು ಆರೋಪಿಸಿದ್ದರು.
ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಗೋವಿಂದ ಕಾರಜೋಳ ಜೊತೆ ಚರ್ಚೆ ನಡೆಸಲಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡ ಸಭೆಗೆ ಆಗಮಿಸಿದ್ದಾರೆ. ಸಿಡಿ ಪ್ರಕರಣ ಸಿಐಡಿ ಅಥವಾ ಸಿಬಿಐಗೆ ವಹಿಸುವಂತೆ ಬಾಲಚಂದ್ರ ಜಾರಕಿಹೊಳಿ ಒತ್ತಾಯ ಮಾಡಿರುವುದರಿಂದ ಈ ಪ್ರಕರಣವನ್ನು ತನಿಖೆಗೆ ಒಳಪಡಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು.
Published by:
Seema R
First published:
March 3, 2021, 2:53 PM IST