ಮಂಗಳೂರು: ಪಾಣೆಮಂಗಳೂರು ಸಮೀಪದ ನೇತ್ರಾವತಿ ನದಿಯಲ್ಲಿ (Netravati River) ಭಜರಂಗದಳ (Bajrang Dal) ಮುಖಂಡನ ಶವ ಪತ್ತೆಯಾಗಿದೆ. ಮೃತ ವ್ತಕ್ತಿಯನ್ನು ಕಲ್ಲಡ್ಕ ಪ್ರಖಂಡದ ಗೋ ರಕ್ಷಾ ಪ್ರಮುಖ್ ರಾಜೇಶ್ ಪೂಜಾರಿ (26) ಎಂದು ಗುರುತಿಸಲಾಗಿದೆ. ಪಾಣೆಮಂಗಳೂರಿನ ಹಳೆಯ ಸೇತುವೆಯ ಪಕ್ಕದಲ್ಲಿ ರಾಜೇಶ್ ಪೂಜಾರಿಯವರ ದ್ವಿಚಕ್ರವಾಹನ ಪತ್ತೆಯಾಗಿತ್ತು. ಇದು ಹಲವು ಅನುಮಾನಗಳಿಗೆ ಮೂಡಿಸಿದ್ದು, ಸಂಶಯಗೊಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು (Police) ಪರಿಶೀಲನೆ ನಡೆಸಿ, ಮಾಹಿತಿ ಕಲೆಯಾಕಿದ್ದಾರೆ. ನಂತರ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ತಂಡ ಕಾರ್ಯಚರಣೆ ನಡೆಸಿ ನದಿಯಲ್ಲಿದ್ದ ರಾಜೇಶ್ ಪೂಜಾರಿ ಮೃತ ದೇಹವನ್ನು ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ.
ರಾಜೇಶ್ ಸಜೀಪದ ತಮ್ಮ ಮನೆಯಿಂದ ಬರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿರುವುದು, ಸೇತುವೆಗೆ ಬೈಕ್ ಡಿಕ್ಕಿಯಾಗಿ ನದಿಗೆ ಬಿದ್ದು ಸಾವನ್ನಪ್ಪಿರಬಹುದಾ ಎಂಬ ಸಂದೇಹ ಕೂಡ ವ್ಯಕ್ತವಾಗಿದೆ. ಆದರೂ ರಾಜೇಶ್ ಪೂಜಾರಿ ಸಾವಿನ ಬಗ್ಗೆ ಸ್ಥಳೀಯರು ಹಲವು ಅನುಮಾನ ವ್ಯಕ್ತಪಡಿಸಿದ್ದು, ಇದು ಆತ್ಮಹತ್ಯೆಯೇ, ಅಪಘಾತವೋ ಅಥವಾ ಕೊಲೆಯೋ ಎನ್ನುವುದರ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ರಾಜೇಶ್
ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ರಾಜೇಶ್ ಪೂಜಾರಿ ಭಜರಂಗದಳ ಹಾಗೂ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಹಿಂದು ಸಂಘಟನೆಯ ಹೋರಾಟಗಳು, ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮೂರು ದಿನಗಳ ಹಿಂದೆ ಸುನಿಲ್ ಎಂಬ ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ನಡೆದಿತ್ತು. ಅನ್ಯಕೋಮಿನ ಯುವಕನೊಬ್ಬ ಮಾರಾಕಾಸ್ತ್ರದಿಂದ ಸುನಿಲ್ ಬೈಕ್ ಮೇಲೆ ಬರುತ್ತಿದ್ದ ವೇಳೆ ಹಲ್ಲೆಗೆ ಯತ್ನಿಸಿದ್ದ. ಸಮೀರ್ ತಲ್ವಾರ್ ಬೀಸುತ್ತಿದ್ದಂತೆ ಬೈಕ್ನಲ್ಲಿ ಬಂದಿದ್ದ ಸುನೀಲ್ ಬೈಕ್ ಚಲಾಯಿಸಿಕೊಂಡು ಹೋಗುವ ಮೂಲಕ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದ. ಶೌರ್ಯ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿತ್ತು.
ಸುನಿಲ್ ಮತ್ತು ಸಮೀರ್ ಸಾಗರದ ನೆಹರು ನಗರದ ನಿವಾಸಿಗಳಾಗಿದ್ದು, ಹಳೇ ವೈಷಮ್ಯದ ಹಿನ್ನಲೆಯಲ್ಲಿ ಈ ಹಲ್ಲೆ ನಡೆದಿರಬಹುದು ಎಂದು ಹೇಳಲಾಗಿತ್ತು. ಘಟನೆ ಕುರಿತು ಸಾಗರ ಟೌನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಪತ್ತೆ ಹಚ್ಚುವುದಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿತ್ತು. ಮಂಗಳವಾರ ಆರೋಪಿ ಸಮೀರ್ ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಇದನ್ನೂ ಓದಿ: Shivamogga: ಭಜರಂಗದಳದ ಕಾರ್ಯಕರ್ತನ ಹತ್ಯೆ ಯತ್ನ ಕೇಸ್ಗೆ ಬಿಗ್ ಟ್ವಿಸ್ಟ್; ಸುನಿಲ್ ವಿರುದ್ಧ ದೂರು ದಾಖಲು
ಹಲ್ಲೆಗೆ ವೈಯಕ್ತಿಕ ಘಟನೆ ಕಾರಣ
ವೈಯಕ್ತಿಕ ಕಾರಣದಿಂದ ಸಮೀರ್, ಸುನಿಲ್ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಮಾಹಿತಿಯನ್ನು ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಕಳೆದ ನಾಲ್ಕೈದು ತಿಂಗಳಿನಿಂದ ಸಮೀರ್ ಸಹೋದರಿಯನ್ನು ಸುನಿಲ್ ಚುಡಾಯಿಸಿದ್ದ, ಈ ಬಗ್ಗೆ ಸುನಿಲ್ಗೆ ಸಮೀರ್ ಎಚ್ಚರಿಕೆ ಕೂಡ ನೀಡಿದ್ದನು.
ಆದರೆ ಸುನಿಲ್ ತನ್ನ ಚಾಳಿ ಮುಂದುವರಿಸಿ ಸಮೀರ್ ಸಹೋದರಿಯ ಫೋನ್ ನಂಬರ್ ಕೇಳಿದ್ದಾನೆ. ಈ ಸಂಬಂಧ ಸಮೀರ್ ಮತ್ತು ಸುನಿಲ್ ನಡುವೆ ಮಾತಿಗೆ ಮಾತು ಕೂಡ ನಡೆದಿತ್ತು. ನಂತರ ಸಮೀರ್, ಸುನಿಲ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆದರೆ ಇಂತಹ ವಿಚಾರಗಳು ನಡೆದಾಗ ಯಾರಾದರೂ ಪೊಲೀಸರ ಗಮನಕ್ಕೆ ತರಬೇಕೆ ಹೊರೆತು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಎಸ್ಪಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ