ಕಳ್ಳಭಟ್ಟಿ ಸಾರಾಯಿಗೆ ಗುಡ್​ ಬೈ ಹೇಳಿ ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿಗಳಾದ ಲಂಬಾಣಿ ಮಹಿಳೆಯರು

ಒಂದು ಜೋಡಿ ಉಡುಗೆಗೆ ಹದಿನೈದು ಸಾವಿರ. ಸಣ್ಣ ಮಕ್ಕಳ ಉಡುಗೆಗೆ ಹತ್ತು ಸಾವಿರ ಬೆಲೆ ಇದ್ದು, ಡಿಸೈನ್​​ಗೆ ತಕ್ಕಂತೆ ಬೆಲೆಯಲ್ಲಿ ಏರಿಳಿತದ ಮೂಲಕ ಗ್ರಾಹಕರ ಕೈ ಸೇರುತ್ತವೆ ಈ ಉಡುಗೆಗಳು. ಇನ್ನು ಒಂದು ಗಾಗ್ರಾ ತಯಾರಿಸೋಕೆ ಒಬ್ಬ ಮಹಿಳೆಗೆ ಒಂದುವರೆ ತಿಂಗಳು ಬೇಕಾಗುತ್ತದೆ. ಒಂದು ಡ್ರೆಸ್ ನಿಂದ ಇವರಿಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಉಳಿಯುತ್ತದೆ‌.

ಲಂಬಾಣಿ ಮಹಿಳೆಯರು

ಲಂಬಾಣಿ ಮಹಿಳೆಯರು

  • Share this:
ಬಾಗಲಕೋಟೆ (ಮಾ.20): ಬಂಜಾರಾ ಸಮುದಾಯದ ಸಾಂಪ್ರದಾಯಿಕ ಉಡುಗೆಯನ್ನು ಬಾಗಲಕೋಟೆ ತಾಲೂಕಿನ ಆಲೂರು ತಾಂಡಾದ ಉಮಿಬಾಯಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಮೂಲಕ ತಯಾರಿಸಿ ಹೊರ ರಾಜ್ಯಕ್ಕೂ ಮಾರಾಟ ಮಾಡುತ್ತಿದ್ದಾರೆ.

ಕಳ್ಳಭಟ್ಟಿ ಸಾರಾಯಿಗೆ ಬೈ, ಸ್ವಯಂ ಉದ್ಯೋಗಕ್ಕೆ ಜೈ!!

ಬಾಗಲಕೋಟೆ ತಾಲೂಕಿನ ಆಲೂರು ತಾಂಡಾದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುವುದನ್ನು ಅಧಿಕಾರಿಗಳು ತಡೆಗಟ್ಟಿದ್ದಾರೆ. ಈ ವೇಳೆ ಮಹಿಳೆಯರು ನಮಗೆ ಮುಂದೆ ಏನು ಉದ್ಯೋಗ ಎನ್ನುವ ಚಿಂತೆಯಲ್ಲಿದ್ದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಉಮಿಬಾಯಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಸ್ಥಾಪಿಸಿದ್ದಾರೆ. ಈ ವೇಳೆ 10 ಜನ ಮಹಿಳೆಯರು ಸೇರಿ ಸ್ವಯಂ ಉದ್ಯೋಗಕ್ಕೆ ಮುಂದಾಗಿದ್ದಾರೆ.  ಲಂಬಾಣಿ ಸಾಂಪ್ರದಾಯಿಕ ಉಡುಗೆಯನ್ನು ಕಸೂತಿ ಮೂಲಕ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ.

ಒಂದು ಉಡುಗೆ ತಯಾರಿಕೆಗೆ 2 ತಿಂಗಳು ಬೇಕಾಗುತ್ತೆ, ಜೊತೆಗೆ 10 ಸಾವಿರ ಖರ್ಚಾಗುತ್ತದೆ. ಅದನ್ನು 15 ಸಾವಿರಕ್ಕೆ ಮಾರಾಟ ಮಾಡಲಾಗುತ್ತೆ. ಮಧ್ಯವರ್ತಿಗಳು ಮಹಾರಾಷ್ಟ್ರ, ಗೋವಾಗೆ ತೆಗೆದುಕೊಂಡು ಹೋಗಿ 20ಸಾವಿರಕ್ಕೆ ಮಾರಾಟ ಮಾಡುತ್ತಾರೆ. ಹಾಗಾಗಿ ಸರ್ಕಾರ ನೇರವಾಗಿ ಮಾರುಕಟ್ಟೆ ಕಲ್ಪಿಸಿದರೆ ಅನುಕೂಲವಾಗುತ್ತೇ ಎನ್ನುವುದು ಲಂಬಾಣಿ ಮಹಿಳೆಯರಾದ ಮಂಜುಳಾ ನಾಯಕ್ ಸೇರಿದಂತೆ ಸದಸ್ಯರ ಮಾತು.

ಇನ್ನು ಲಂಬಾಣಿ ಜನಾಂಗದ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಅಂದರೆ ಅದರ ಸೌಂದರ್ಯವೇ ಬೇರೆ. ಅದಕ್ಕಿರುವ ಗೌರವ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಹಿಳೆಯರ ಅಂದವನ್ನು ಮತ್ತಷ್ಟು ಹೆಚ್ಚಿಸುವ ತಾಕತ್ತು ಲಂಬಾಣಿ ಉಡುಗೆಯಲ್ಲಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ನೀರೆಯರನ್ನು ನೋಡುವುದೆ ಚೆಂದ. ಲಂಬಾಣಿ ವೇಷದಲ್ಲಿ ಮಹಿಳೆಯರ ಸೌಂದರ್ಯ ಇಮ್ಮಡಿಯಾಗಿರುತ್ತದೆ. ಆದರೆ, ಇಂತಹ ಲಂಬಾಣಿ ಉಡುಗೆಗಳು ಇತ್ತೀಚಿಗೆ ಆಧುನಿಕತೆಯ ಭರಾಟೆಗೆ ಸಿಕ್ಕು ಆ ಉಡುಪುಗಳು ಸಹ ಅಪರೂಪವಾಗುತ್ತಿವೆ.

ಕೋಲಾರ: ಗ್ರಾ.ಪಂ. ಕಚೇರಿಯಲ್ಲಿ ಆಕಸ್ಮಿಕ ಆಗ್ನಿ ಅವಘಡ; ದಾಖಲೆ ನಾಶಪಡಿಸಲು ಪಿಡಿಒ ಕೈವಾಡವೆಂದು ಗ್ರಾಮಸ್ಥರ ಆರೋಪ

ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಹಿರಿಯ ಮಹಿಳೆಯರು‌ ಲಂಬಾಣಿ ಉಡುಗೆಯಲ್ಲಿ ಕಾಣಿಸುತ್ತಾರೆ. ಉಳಿದಂತೆ ಅವುಗಳು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿವೆ. ಈ ಮಧ್ಯೆ ಲಂಬಾಣಿ ಸಮುದಾಯದ ಉಡುಗೆ ತೊಡುಗೆ ಉಳಿವಿಗಾಗಿ ಆಲೂರು ತಾಂಡಾದ ಉಮಿಬಾಯಿ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಶ್ರಮಿಸುತ್ತಿದ್ದಾರೆ. ತಮ್ಮ ಸಾಂಪ್ರದಾಯಿಕ ‌ಉಡುಗೆಯ ಅಭಿಮಾನದಿಂದ ದಿನಾಲೂ ಎಲ್ಲ ಮಹಿಳೆಯರು ಸೇರಿ ಲಂಬಾಣಿ  ಉಡುಗೆ ತಯಾರಿಸಿ ಮೂಲ ಉಡುಗೆ ರಕ್ಷಣೆಯ ಕಾರ್ಯ ‌ಮಾಡುತ್ತಿದ್ದಾರೆ. ಇದರ ಜೊತೆಗೆ ಆ ಒಂದು ಕಸುಬು ತೊರೆದಿರುವ ಕುಟುಂಬಗಳಿಗೆ ಪರ್ಯಾಯ ಉದ್ಯೋಗವಾಗಿ ಜೀವನಾಧಾರವೂ ಆಗಿದೆ.

ಇನ್ನು ಉಮಿಬಾಯಿ ಸ್ತ್ರೀ ಶಕ್ತಿ ಸಂಘದಲ್ಲಿ ಒಟ್ಟು ಹತ್ತು ಜನ‌ ಮಹಿಳೆಯರಿದ್ದು ,ಮುಖ್ಯಸ್ಥರಾಗಿ ಮಂಜುಳಾ ನಾಯಕ್, ಭಾಗ್ಯಶ್ರಿ ಪವಾರ ಎಲ್ಲರನ್ನೂ ಕಟ್ಟಿಕೊಂಡು ಸಂಘ ಮುನ್ನಡೆಸುತ್ತಿದ್ದಾರೆ. ಸಂಘದಲ್ಲಿ ಕೆಲ ಮಹಿಳೆಯರು ಮೊದಲು ಸಾರಾಯಿ ತಯಾರಿಕೆ ಕೆಲಸ ಕೂಡ ಹೊಟ್ಟೆಪಾಡಿಗಾಗಿ ಮಾಡುತ್ತಿದ್ದರು. ಆದರೆ, ಆರು ವರ್ಷಗಳ ಹಿಂದೆ ಅವರ‌ ಮನ ಪರಿವರ್ತನೆ ಮಾಡಿ ಉಮಿಬಾಯಿ ಸಂಘದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮಹಿಳೆಯರು ಕಳ್ಳಬಟ್ಟಿ ತಯಾರಿಸೋದನ್ನು ಬಿಟ್ಟು ಬದುಕಿಗೆ ಪರ್ಯಾಯ ಮಾರ್ಗವೇನು ಎನ್ನುವ ಪ್ರಶ್ನೆ ಎದುರಾದಾಗಲೇ ಸ್ವಸಹಾಯ ಸಂಘದ ಮೂಲಕ ಹಣ ಉಳಿತಾಯದ ಜೊತೆಗೆ ತಮ್ಮ ಮೂಲ‌ ಉಡುಪು ತಯಾರಿಕೆ‌ ಮೂಲಕ ಜೀವನ ಕಂಡುಕೊಳ್ಳುತ್ತಿದ್ದಾರೆ.

ಇವರ ಈ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಸ್ಪಂದಿಸಿದೆಯಂತೆ. ಈ ಉಡುಪು ತಯಾರಿಸಲು ವಿಜಯಪುರದಿಂದ ಶುದ್ದ ಕಾಟನ್ ಬಟ್ಟೆ ತರುತ್ತಾರೆ. ಆಲಮಟ್ಟಿ , ವಿಜಯಪುರ, ನಾಗಲಕೋಟೆಯ ವಿವಿಧ ಅಂಗಡಿಗಳು, ಜಾತ್ರೆಗಳಿಗೆ ಹೋಗಿ ಬಟ್ಟೆ ತಯಾರಿಸಲು ಕಚ್ಚಾವಸ್ತುಗಳಾದ ಗಾಜು, ಟಿಕಳಿ, ಮಣಿ ಲೇಸ್ ಕವಡೆ ಖರೀದಿಸುತ್ತಾರೆ. ಬಳಿಕ ಮನೆಯಲ್ಲಿ ಸುಂದರ ಲಂಬಾಣಿ ಉಡುಗೆ ತಯಾರಿಸುತ್ತಾರೆ. ಇದನ್ನು ಪಾರ್ಟ್ ಟೈಮ್ ಎಂಬಂತೆ ಕೆಲಸ‌ ಮಾಡುತ್ತಿದ್ದು ಎಲ್ಲ ಮಹಿಳೆಯರು ತಿಂಗಳಿಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

ಒಂದು ಜೋಡಿ ಉಡುಗೆಗೆ ಹದಿನೈದು ಸಾವಿರ. ಸಣ್ಣ ಮಕ್ಕಳ ಉಡುಗೆಗೆ ಹತ್ತು ಸಾವಿರ ಬೆಲೆ ಇದ್ದು, ಡಿಸೈನ್​​ಗೆ ತಕ್ಕಂತೆ ಬೆಲೆಯಲ್ಲಿ ಏರಿಳಿತದ ಮೂಲಕ ಗ್ರಾಹಕರ ಕೈ ಸೇರುತ್ತವೆ ಈ ಉಡುಗೆಗಳು. ಇನ್ನು ಒಂದು ಗಾಗ್ರಾ ತಯಾರಿಸೋಕೆ ಒಬ್ಬ ಮಹಿಳೆಗೆ ಒಂದುವರೆ ತಿಂಗಳು ಬೇಕಾಗುತ್ತದೆ. ಒಂದು ಡ್ರೆಸ್ ನಿಂದ ಇವರಿಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಉಳಿಯುತ್ತದೆ‌. ಇವುಗಳನ್ನು ಜಿಲ್ಲೆ ಪರ ಜಿಲ್ಲೆ, ಗೋವಾ, ಮಹಾರಾಷ್ಟ್ರ, ಆಂದ್ರ ಸೇರಿದಂತೆ ವಿವಿಧ ಕಡೆ ಮಾರಾಟ ಮಾಡುತ್ತಾರೆ. ಜೊತೆಗೆ ಸರಕಾರಿ ಖಾಸಗಿ ಸಂಸ್ಥೆಗಳ ಮೂಲಕ ನಡೆಯುವ ವಸ್ತು ಪ್ರದರ್ಶನ,ಮಾರಾಟದಲ್ಲೂ ಇವರು ಬಟ್ಟೆಯನ್ನು ಪ್ರದರ್ಶಿಸಿ ಮಾರಾಟ ಮಾಡ್ತಾರೆ. ಈ‌ ಮೂಲಕ ತಮ್ಮ ಸಾಂಪ್ರದಾಯಿಕ ಉಡುಪನ್ನು ಉಳಿಸಿ ಬೆಳೆಸೋದು ಹಾಗೂ ಆರ್ಥಿಕವಾಗಿ ಸದೃಢರಾಗುತ್ತಾ ಸಾಗುತ್ತಿದ್ದು ಇವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯುವತಿಯರು ಉಡುಗೆ ತೊಟ್ಟು ಸಂಭ್ರಮಿಸುತ್ತಿದ್ದಾರೆ.

ಒಟ್ಟಿನಲ್ಲಿ ಒಂದು ಸಂಘದಿಂದ ಉಡುಗೆ ತಯಾರಾಗುತ್ತಿದ್ದರೂ ಇದರಲ್ಲಿ ಕೆಲ ಸದುದ್ದೇಶಗಳು ಇವೆ. ಸಾಂಪ್ರದಾಯಿಕ ಉಡುಪಿನ ರಕ್ಷಣೆ, ಕಳ್ಳಬಟ್ಟಿ ದಂಧೆ ಬಿಟ್ಟವರಿಗೆ ಬದುಕಿಗೆ ಮಾರ್ಗ, ಜೊತೆಗೆ ಆರ್ಥಿಕ ಅಭಿವೃದ್ದಿಯತ್ತ ಹೆಜ್ಜೆ ಹಾಕುವುದಾಗಿದೆ. ಈ ಮಹಿಳಾ ಸಂಘದ ಕಾರ್ಯ ಅನೇಕರಿಗೆ ಪ್ರೇರಣೆಯಾಗಿದೆ. ಸೆರೆಯಿಂದ ಸರಿದವರು ಈ ಮಾದರಿ ಕಾರ್ಯ ನಿಜಕ್ಕೂ  ಶ್ಲಾಘನೀಯವಾಗಿದೆ.
Published by:Latha CG
First published: