ಕೇದಾರನಾಥ ಶುಗರ್ಸ್​ ಕಾರ್ಖಾನೆ ಬಾಕಿ ಬಿಲ್​ಗೆ ಆಗ್ರಹಿಸಿ ಅಮರಣಾಂತ ಉಪವಾಸಕ್ಕೆ ನಿರ್ಧರಿಸಿದ ರೈತರು

ಕಬ್ಬು ಪೂರೈಸಿ 10ವರ್ಷವಾದರೂ ಕಾರ್ಖಾನೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ರೈತರು ಸುಮ್ಮನಿದ್ದಾರೆ. ಈಚೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಕೇದಾರನಾಥ ಶುಗರ್ಸ್ ಕಾರ್ಖಾನೆ ಖರೀದಿಸಿ, ಕಾರ್ಖಾನೆ ಪುನಶ್ಚೇತನಕ್ಕೆ ಭರದಿಂದ ಕಾಮಗಾರಿ ಆರಂಭಿ‌ಸಿದ್ದಾರೆ. ಆದರೆ ರೈತರು ಬಾಕಿ ಬಿಲ್ ಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುತ್ತಿರುವ ರೈತರು

ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುತ್ತಿರುವ ರೈತರು

  • Share this:
ಬಾಗಲಕೋಟೆ (ಅಕ್ಟೋಬರ್ 10): ಮಾಜಿ ಸಚಿವ ಮುರುಗೇಶ್ ನಿರಾಣಿ ಖರೀದಿಸಿರುವ  ಕೇದಾರನಾಥ ಸಕ್ಕರೆ ಕಾರ್ಖಾನೆ ಬಾಕಿ ಬಿಲ್​ಗಾಗಿ ರೈತರು ಸಕ್ಕರೆ ಕಾರ್ಖಾನೆ ಬಳಿ ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ ದಶ ವರ್ಷಗಳಿಂದ ಬಂದ್ ಆಗಿದ್ದ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿಯಿರುವ ಕೇದಾರನಾಥ ಸಕ್ಕರೆ ಕಾರ್ಖಾನೆ  ಮತ್ತೆ ಪುನರಾರಂಭಕ್ಕೆ ಮೊದಲ ಕಂಟಕ ಎದುರಾಗಿದೆ.  ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿ ಮಹಾರಾಷ್ಟ್ರ ಮೂಲದ ವಿಕ್ರಮ ಸಿಂಹ ಅಪರಾಧ ಎಂಬುವರು ಕೇದಾರನಾಥ ಸಕ್ಕರೆ ಕಾರ್ಖಾನೆ ಕಳೆದ 12ವರ್ಷಗಳ ಹಿಂದೆ ಆರಂಭಿಸಿದ್ದಾರೆ.  ಆರಂಭವಾದ ಮೊದಲ ವರ್ಷ 2010ರಲ್ಲಿ ಕೇದಾರನಾಥ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವದಕ್ಕಿಂತ ಸಮಸ್ಯೆಗಳನ್ನು ಅರೆದಿದ್ದೇ ಹೆಚ್ಚು. ಆರಂಭದಲ್ಲಿ ಒಂದೇ ಬಾರಿ ಕಬ್ಬು ನುರಿಸಿದೆ.ಆ ಬಳಿಕ ವಿಕ್ರಮ ಸಿಂಹ ಅಪರಾಧ ಕೌಟುಂಬಿಕ ಕಲಹ, ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದ್ದಕ್ಕೆ ಆಡಳಿತ ಮಂಡಳಿ- ವಿಕ್ರಮ ಸಿಂಹ ಅಪರಾಧ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ. ಜೊತೆಗೆ ಆರ್ಥಿಕ ಮುಗ್ಗಟ್ಟಿನಿಂದ ಕಾರ್ಖಾನೆ ಬಂದ್ ಆಗಿತ್ತು. ಕಳೆದ ಎರಡು ವರ್ಷಗಳ  ಹಿಂದೆ ವಿಕ್ರಮ ಸಿಂಹ ಅಪರಾಧ ಅನಾರೋಗ್ಯದಿಂದ ಮೃತಪಟ್ಪಿದ್ದಾರೆ.

ದಶಕಗಳ  ಬಳಿಕ ಮಾಜಿ ಸಚಿವ ಮುರುಗೇಶ್ ನಿರಾಣಿ ಈಚೆಗೆ ಸರ್ಕಾರಿ ಹರಾಜು ನಿಯಮದಂತೆ ಹೈಕೋರ್ಟ್ ಆದೇಶದ ಮೇರೆಗೆ 82ಕೋಟಿ ಸಕ್ಕರೆ ಕಾರ್ಖಾನೆ ಖರೀದಿ‌ಸಿದ್ದಾರೆ‌‌. 2010-11ರಲ್ಲಿ ಕೇದಾರನಾಥ ಶುಗರ್ಸ್ ಕಾರ್ಖಾನೆ ರೈತರು ಕಬ್ಬು ಪೂರೈಸಿದ ಒಟ್ಟು 14.59ಕೋಟಿ ಬಾಕಿ ಬಿಲ್ ಇದೆ. ಜೊತೆಗೆ ಟ್ರಾನ್ಸ್ ಪೋರ್ಟ್ ಬಿಲ್. ಬಾಕಿ ಬಿಲ್ ಗೆ ಬಡ್ಡಿ ಸೇರಿ 21ಕೋಟಿ ಬಾಕಿ ಹಣ ಇದೆ ಎನ್ನಲಾಗಿದೆ.  ಕಬ್ಬು ಪೂರೈಸಿ 10ವರ್ಷವಾದರೂ ಕಾರ್ಖಾನೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ರೈತರು ಸುಮ್ಮನಿದ್ದಾರೆ. ಈಚೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಕೇದಾರನಾಥ ಶುಗರ್ಸ್ ಕಾರ್ಖಾನೆ ಖರೀದಿಸಿ, ಕಾರ್ಖಾನೆ ಪುನಶ್ಚೇತನಕ್ಕೆ ಭರದಿಂದ ಕಾಮಗಾರಿ ಆರಂಭಿ‌ಸಿದ್ದಾರೆ. ಆದರೆ ರೈತರು ಬಾಕಿ ಬಿಲ್ ಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಕೇದಾರನಾಥ ಶುಗರ್ಸ್ ಕಾರ್ಖಾನೆಗೆ ಕಬ್ಬು ಪೂರೈಸಿದ ಅಂದಾಜು 2ಸಾವಿರ ರೈತರಿದ್ದಾರೆ. ಜೊತೆಗೆ ಷೇರುದಾರರಿದ್ದಾರೆ. ಶುಕ್ರವಾರ ರೈತರು ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಎದುರು  ಕೇದಾರನಾಥ ಶುಗರ್ಸ್ ಕಾರ್ಖಾನೆ ಬಾಕಿ ಬಿಲ್ ಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿ, ಹಾಗೂ ರೈತ ಮುಖಂಡ  ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಧ್ಯೆ ವಾಗ್ವಾದ ನಡೆದಿದೆ. ಬಾಕಿ ಬಿಲ್ ಸಮಸ್ಯೆಯನ್ನು ನಾಳೆಯೇ ಇತ್ಯರ್ಥ ಮಾಡಿ ಎಂದು ಮುತ್ತಪ್ಪ ಕೋಮಾರ ಪಟ್ಟು ಹಿಡಿದರು. ಈ ವೇಳೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ 15ದಿನದೊಳಗೆ ಸಭೆ ಕರಿತಿನಿ,ನೀವೂ ಹೇಳಿದಂತೆ ಕೇಳೋಕೆ ಆಗೋಲ್ಲ. 10ವರ್ಷ ಬಿಟ್ಟಿದ್ದೀರಿ ಈಗ ಕೇಳ್ತಿದ್ದೀರಿ, ಸಮಸ್ಯೆ ಬಗೆಹರಿಸಲಾಗುವುದು. ಈ ವಿಚಾರದಲ್ಲಿ ಮುತ್ತಪ್ಪ ಕೋಮಾರ ರಾಜಕೀಯ ಮಾಡ್ಬೇಡಿ ಎಂದರು.

Virus - ಅಡಿಕೆ ತೋಟಗಳಿಗೆ ಹೊಸ ವೈರಸ್ ದಾಳಿ; ಸಂಕಷ್ಟದಲ್ಲಿ ಮಲೆನಾಡ ರೈತ

ನಿನ್ನೆ ನಾವು ನಿಮಗೆ ಖುದ್ದು ಭೇಟಿಗೆ ಬಂದಾಗ 10ವರ್ಷ ಮಲಗಿಕೊಂಡಿದ್ರೇನು ಎಂದು ಕೇಳಿದ್ದೀರಿ, ಈ ರೀತಿ ನೀವು ಮಾತನಾಡೋದು ಸರಿಯಲ್ಲ. ರೈತರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದರು. ಇನ್ನು  ಕಾರ್ಖಾನೆಯನ್ನು ಈಚೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ  ಖರೀದಿಸಿದ್ದಾರೆ. ಖರೀದಿ ವೇಳೆ ಷೇರುದಾರರನ್ನು ಗಣನೆಗೆ ತೆಗೆದುಕೊಂಡಿಲ್ಲ. ಪ್ರತಿಭಟನೆ ವೇಳೆ ರೈತರು ಜಿಲ್ಲಾಧಿಕಾರಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ನೀವೂ ರೈತರಪರ ಇಲ್ಲ‌. ಕಾರ್ಖಾನೆ ಪರ ಇದ್ದೀರಿ ಎಂದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಆಗ  ಡಿಸಿ ಕ್ಯಾಪ್ಟನ್ ರಾಜೇಂದ್ರ, ನಾನು ರೈತನ ಮಗನಿದ್ದೇನೆ, ರೈತರ ಸಮಸ್ಯೆ ಗೊತ್ತಿದೆ. ನಿಮ್ಮೆಲ್ಲರ ಸಭೆ ಕರಿತೀನಿ ಎಂದಾಗ ಶೀಘ್ರವೇ ಸಮಸ್ಯೆ ಇತ್ಯರ್ಥಕ್ಕೆ ರೈತರು ಪಟ್ಟು ಹಿಡಿದಾಗ ಜಿಲ್ಲಾಧಿಕಾರಿ ಒಪ್ಪಲಿಲ್ಲ.

ನಾನು 10ವರ್ಷದ ಹಿಂದಿನ ದಾಖಲಾತಿ ನೋಡ್ಬೇಕಾಗುತ್ತೆ ಎಂದರು. ಆಗ ರೈತ ಮುಖಂಡ ಈರಪ್ಪ ಹಂಚಿನಾಳ,ನಾವು ಬಾಕಿ ಕೊಡಿ ಎಂದು ಡಿಸಿಯವರಿಗೆ ಪದೇ ಪದೇ ಮನವಿ ಕೊಡುವುದು ಬೇಡ, ರೈತರ ಪವರ್ ಏನಿದೆ ತೋರಿಸೋಣ, ಸತ್ಯಾಗ್ರಹ ಆರಂಭಿಸೋಣವೆಂದರು. ಆಗ  ರೈತರು ಬಾಕಿ ಬಿಲ್ ಗಾಗಿ ಆಗ್ರಹಿಸಿ ಸಕ್ಕರೆ ಕಾರ್ಖಾನೆ ಎದುರು ಅಕ್ಟೋಬರ್ 12ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಿರ್ಧರಿಸಿ, ಜಿಲ್ಲಾಧಿಕಾರಿಯವರಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಕೇದಾರನಾಥ ಶುಗರ್ಸ್ ಕಾರ್ಖಾನೆ ಖರೀದಿಸಿದವರು ರೈತರಿಗೆ ಬಾಕಿ ಬಿಲ್ ಕೊಡಬೇಕು.ಈ ಎಲ್ಲಾ ಷರತ್ತು ವಿಧಿಸಿ ಹರಾಜು ಪ್ರಕ್ರಿಯೆ ನಡೆಸಿರುತ್ತಾರೆ‌ .ಜಿಲ್ಲಾಡಳಿತ ರೈತರಿಗೆ ಕಾರ್ಖಾನೆಯಿಂದ ಬಾಕಿ ಬಿಲ್ ಕೊಡಿಸಬೇಕು. ಇನ್ನು ಕಬ್ಬು ಪೂರೈಸಿ, 10ವರ್ಷವಾಗಿದೆ. ಬಾಕಿ ಬಿಲ್ ಗೆ ಬಡ್ಡಿ ಯಾರು ಕೊಡುತ್ತಾರೆ. ರೈತರದಾದರೆ ದುಡ್ಡು ಅಲ್ಲವೇ, ಜಿಲ್ಲಾಡಳಿತ ಪ್ರಭಾವಿಗಳಿಗೆ ಮಣಿಯುತ್ತಿದೆ ಎಂದು ರೈತರು ಆರೋಪಿಸಿದರು.

ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವಂತೆ ಆಗ್ರಹ

ಕೆರಕಲಮಟ್ಟಿ ಗ್ರಾಮದ ಬಳಿಯ ಕೇದಾರನಾಥ ಶುಗರ್ಸ್ ಕಾರ್ಖಾನೆ ಆರಂಭವಾದಾಗ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗುತ್ತವೆ ರೈತರು ಎಂದುಕೊಂಡಿದ್ದರು. ಆದರೆ ಮಹಾರಾಷ್ಟ್ರ ಮೂಲದ ವಿಕ್ರಮ ಸಿಂಹ ಅಪರಾಧ, ಹೆಚ್ಚಿನ ಉದ್ಯೋಗಾವಕಾಶ ಹೊರ ರಾಜ್ಯದವರಿಗೆ ನೀಡಿದ್ದರು.ಹೀಗಾಗಿ ಕೆರಕಲಮಟ್ಟಿ, ಹಾಗೂ ಸುತ್ತಮುತ್ತಲಿನ ರೈತರು, ಸ್ಥಳೀಯ ನಿರ್ದೇಶಕರ ಕೆಂಗಣ್ಣಿಗೆ ಗುರಿಯಾಗಿ, ವಿಕ್ರಮ ಸಿಂಹ ಅಪರಾಧ ಹಾಗೂ ಸ್ಥಳೀಯರ ಭಿನ್ನಾಭಿಪ್ರಾಯ ಸೃಷ್ಟಿಯಾಗಿ ಸಕ್ಕರೆ ಕಾರ್ಖಾನೆ ಬಂದ್ ಆಗುವ ಮಟ್ಟಿಗೆ ಬಂದು ತಲುಪಿತ್ತು.ಇದೀಗ  ಮಾಜಿ ಸಚಿವ ಮುರುಗೇಶ್ ನಿರಾಣಿ ಕೇದಾರನಾಥ ಸಕ್ಕರೆ ಕಾರ್ಖಾನೆ ಖರೀದಿಸಿದ್ದು,ಸ್ಥಳೀಯ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಬೇಕಿದೆ.ಕೇದಾರನಾಥ ಶುಗರ್ಸ್,ಆಗ್ರೋ ಪ್ರಾಡೆಕ್ಟ್ ಲಿಮಿಟೆಡ್ ಆರಂಭದಲ್ಲಿ ಮಾಡಿದ್ದ ತಪ್ಪನ್ನು ಈಗ ಮಾಡಬೇಡಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವಂತೆ ಸುತ್ತಲಿನ ರೈತರ, ನಿರುದ್ಯೋಗಿ ಯುವಕರ ಕೂಗಾಗಿದೆ.

ಸತ್ಯಾಗ್ರಹಕ್ಕಾಗಿ ರೈತರ ಸಂಘಟನಾ ಸಭೆ

ಕೇದಾರನಾಥ ಶುಗರ್ಸ್ ಕಾರ್ಖಾನೆ ಎದುರು ಅಕ್ಟೋಬರ್ 12ರಿಂದ ರೈತರು ಬಾಕಿ ಬಿಲ್ ಗಾಗಿ ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಕಲಾದಗಿ ಗ್ರಾಮದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ್ದ ರೈತರ ಸಭೆ ನಡೆಸಿದರು.ರೈತರು ಸಂಘಟನಾತ್ಮಕ ಹೋರಾಟ ಮಾಡುವ ಬಗ್ಗೆ ಚರ್ಚಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸೇರಿದಂತೆ ರೈತರು ಭಾಗಿಯಾಗಿದ್ದರು.

ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಯಾದ ಬಾಕಿ ಬಿಲ್ ಗೆ ಮುಕ್ತಿ ಇಲ್ಲವೆ ಎನ್ನುವ ಪ್ರಶ್ನೆ ಪ್ರತಿ ವರ್ಷ ಕಾಡುತ್ತಿದೆ.ಜಿಲ್ಲೆಯಲ್ಲಿ ರೈತರು ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ,ಬಿಲ್ ಕೊಡಿ ಎಂದು ಅಲೆದಾಡುವ ಪರಿಸ್ಥಿತಿ, ಹೋರಾಟ ಮಾತ್ರ ನಿಲ್ಲುತ್ತಿಲ್ಲ. ಏನೇ ಆಗಲಿ ಇನ್ನು ಮೇಲಾದರೂ ಸಕ್ಕರೆ ಕಾರ್ಖಾನೆ ಮಾಲೀಕರು, ರೈತರು ಪೂರೈಸಿದ ಕಬ್ಬಿಗೆ ಬಿಲ್ ಸಕಾಲಕ್ಕೆ ನೀಡುವತ್ತ ಮನಸು ತೋರಬೇಕಿದೆ.
Published by:Latha CG
First published: