ಕೆಂಪುಶಿಲೆಯ ನಾಡಿನಲ್ಲಿ ಬಿಜೆಪಿ ಕಂಪನ; ಕಮಲದ ಒಡಕಿನ ಲಾಭದ ನಿರೀಕ್ಷೆಯಲ್ಲಿ 'ಕೈ'ಪಡೆ

news18
Updated:March 13, 2018, 10:30 PM IST
ಕೆಂಪುಶಿಲೆಯ ನಾಡಿನಲ್ಲಿ ಬಿಜೆಪಿ ಕಂಪನ; ಕಮಲದ ಒಡಕಿನ ಲಾಭದ ನಿರೀಕ್ಷೆಯಲ್ಲಿ 'ಕೈ'ಪಡೆ
news18
Updated: March 13, 2018, 10:30 PM IST
-ಆನಂದ್​, ನ್ಯೂಸ್​ 18 ಕನ್ನಡ

ಬಾಗಲಕೋಟೆ,(ಮಾ.13):  ಕೆಂಪು ಶಿಲೆಯ ಗ್ರಾನೈಟ್ ಬೀಡಾಗಿರುವ ಹುನಗುಂದ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷವೇ ಇಲ್ಲದ ಒಂದು ಕಾಲ ಇತ್ತು. ಈಗ ಕೆಂಪುಶಿಲೆ ನಾಡಿನಲ್ಲಿ ಬಿಜೆಪಿ ಅರಳುತ್ತಿದ್ದು, ಅದನ್ನು ಕಮರಿಸಲು ಬಿಜೆಪಿ ಪಕ್ಷದವರೇ ಮುಂದಾಗುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಲಾಭಕ್ಕೆ ಕಾರಣವಾಗುತ್ತಿದೆ.

ಹುನಗುಂದ ಮತ ಕ್ಷೇತ್ರದಲ್ಲಿ ಇಲಕಲ್ಲ ಪಟ್ಟಣ ವಾಣಿಜ್ಯ ಪ್ರಮುಖ ನಗರವಾಗಿದೆ. ಅತಿ ದೊಡ್ಡ ಪಟ್ಟಣವಾಗಿರುವ ಈ ಕ್ಷೇತ್ರದಲ್ಲಿ ರಾಜಕೀಯ ನಾಯಕರಿಗೆ ಭವಿಷ್ಯವನ್ನು ಬದಲಾವಣೆ ಮಾಡುವ ತಾಕತ್ತು ಇದೆ. ಹುನಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜನತಾದಳ ಆಡಳಿತ ನಡೆಸಿದರೆ ಬಿಜೆಪಿಯಲ್ಲಿರುವವರೆಲ್ಲರೂ ಹೆಚ್ಚಾಗಿ ಜನತಾದಳದ ಮುಖಂಡರೇ ಆಗಿದ್ದರು. 90 ರ ದಶಕದಲ್ಲಿ ಬೆರಳಣಿಕೆಯಷ್ಟಿದ್ದ ಬಿಜೆಪಿ ಕಾರ್ಯಕರ್ತರಲ್ಲಿ, ಇಳಕಲ್ಲ ನಿವಾಸಿ ಗುರುನಾಥ ಗೋಗಿ, ತಿಪ್ಪಣ್ಣ, ಕಾಶಣ್ಣ ಚಿಲ್ಲಾಳ, ರೊಡ್ಡಾ, ಭಂಡಾರಿ, ಕೆಲವೇ ಕಾರ್ಯಕರ್ತರು ಪಕ್ಷವನ್ನು ಬೆಳೆಸಲು ಸಾಕಷ್ಟು ಶ್ರಮಿಸಿದ್ದರು. ಕಾಲಾಂತರದಲ್ಲಿ ಬಿಜೆಪಿ ವರ್ಚಸ್ಸು ಗ್ರಾನೈಟ್​  ಗಣಿಧಣಿಗಳ ಕೈಯಲ್ಲಿ ಸಿಕ್ಕು ಪ್ರಬಲವಾಗುತ್ತಾ ಸಾಗಿ 2002ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ವರ್ಧಿಸಿದ್ದ ಎಂ.ಎಸ್ ಪಾಟೀಲರಿಂದ ಪಕ್ಷ ಮತ್ತಷ್ಟು ಬಲಿಷ್ಠವಾಯಿತು. ಅದುವೇ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಕಾರಣವಾಯಿತು. ಬಿಜೆಪಿ ಪಕ್ಷದಿಂದ ಶಾಸಕರಾಗಿದ್ದ ದೊಡ್ಡನಗೌಡ ಪಾಟೀಲ್ ತಮ್ಮ ಎಡ ಬಲ ಭಾಗದಲ್ಲಿದ್ದ ಕೆಲವರು ಹೇಳುತ್ತಿದ್ದ ಮಾತುಗಳನ್ನು ಕೇಳಿ ಬಹಳಷ್ಟು ನಾಯಕರ ಮಾತುಗಳನ್ನು ನಿರ್ಲಕ್ಷಿಸಿ ಏಕಚಕ್ರಾಧಿಪತ್ಯ ಸಾಧಿಸಲು ಹೊರಟಿದ್ದು ಮುಂದೆ ಬಿಜೆಪಿ ಸೋಲಲು ಕಾರಣವಾಯಿತು ಎಂಬುದು ಇತಿಹಾಸ.

ಈಗ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ಕುರಿತು ಹೋರಾಟಗಳನ್ನು ಮಾಡುವ ಹುಮ್ಮಸ್ಸು ಕುಂಠಿತಗೊಂಡಿತು. ಜೊತೆಗೆ ವಿರೋಧಿಗಳಿಗೆ ಬಗ್ಗು ಬಡಿಯುವ ತಂತ್ರವನ್ನು ಮಾಡದೇ, ಬಹಿರಂಗವಾಗಿ ಹೇಳಿಕೆ ನೀಡದೇ, ಈಗಿನ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ದ ತೊಡೆ ತಟ್ಟಿ ನಿಲ್ಲಲು ಸಹ ಭಯ ಪಡುತ್ತಿರುವುದು ಬಿಜೆಪಿ ಕಾರ್ಯಕರ್ತರಲ್ಲಿಯೇ ಅಸಮಾಧಾನ ಮೂಡಿಸಿದೆ. ಇದು ಈಗ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತದೆ ಕಾರಣವೂ ಸಹ ಆಗಿದೆ.

ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತಾ ಶಾ ಅವರು, ವಿವಿಧ ಸಮೀಕ್ಷೆ ಆಧರಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್​ ಪಕ್ಕಾ ಎಂದು ಹೇಳುತ್ತಿದ್ದರೂ ಹಲವು ಆಕಾಂಕ್ಷಿಗಳು ತಮಗೆ ಟಿಕೆಟ್​ ದೊರೆಯಲೆಂದು ವಿವಿಧ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಪ್ರತಿನಾಯಕರು ತಮ್ಮ ತಮ್ಮ ಕಾರ್ಯಕರ್ತರ ಪಡೆಯನ್ನು ಸಿದ್ದಗೊಳಿಸಿ, ತಮ್ಮ ಕಾರ್ಯಕರ್ತರನ್ನು ಹಿಡಿದು ಇಟ್ಟಿಕೊಳ್ಳುವಲ್ಲಿ ತಂತ್ರ ರೂಪಿಸುತ್ತಿದ್ದಾರೆ. ಅವರ ಸಭೆ, ಕಾರ್ಯಕ್ರಮಕ್ಕೆ ಇವರಿಲ್ಲ ಇವರ ಸಭೆ, ಕಾರ್ಯಕ್ರಮಕ್ಕೆ ಅವರನ್ನು ಕರೆಯುವದಿಲ್ಲ.ಇದು ಈಗ ಇಲಕಲ್ಲ ಪಟ್ಟಣದಲ್ಲಿ ಚರ್ಚೆಯ ವಿಷಯವಾಗಿದ್ದು, ಹೀಗೆ ಮುಂದುವರೆದರೆ ಬಿಜೆಪಿ ಪಕ್ಷದ ಭವಿಷ್ಯ ಹೇಗೆ ಎಂಬುದು ಕಾರ್ಯಕರ್ತರ ಚಿಂತೆಯಾಗಿದೆ.

ಮತಕ್ಷೇತ್ರದಲ್ಲಿ ಲವಳಸರದ ಉದ್ಯಮಿ ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಆರ್ ಮಾರುತೇಶ ಕಾರ್ಯಕರ್ತರರೊಂದಿಗೆ ಕ್ಷೇತ್ರದಲ್ಲಿ ಹೋರಾಟ ಜನ ಸೇವೆಯ ಮೂಲಕ ಪ್ರಚಾರ ಆರಂಭಿಸಿದಾಗ ಆರಂಭಗೊಂಡ ಪಕ್ಷದಲ್ಲಿನ ವಿಮುಖ ನೀತಿ ಇನ್ನು ಬೆಳೆಯುತ್ತಲಿದೆ. ಇವರೊಂದಿಗೆ ಮಲ್ಲಿಕಾರ್ಜುನ ಶೆಟ್ಟರ, ಸುಭಾಸ ತಾಳಿಕೋಟಿ, ವಿರೇಶ ಕೊಡ್ಲಗಿಮಠ, ಎಂ ಎಸ್ ಪಾಟೀಲ, ಮಹಾಂತೇಶ ಅಂಗಡಿ ಇತರರು ಇದ್ದರೆ ಬಿಜೆಪಿಯಿಂದ ಸ್ವರ್ಧಿಸಬೇಕೆಂದು ಕಳೆದ 6 ತಿಂಗಳಿಂದ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮನರಂಜನೆ ಕ್ರೀಡೆ ಇತರೆ ಚಟುವಟಿಕೆಗಳಿಂದ ಹಾಗೂ ನವಲಿಹೀರೆಮಠ ಫೌಂಡೇಶನ ಮೂಲಕ ವಿವಿಧ ಉದ್ದೇಶಗಳಿಗೆ ಸಾಕಷ್ಟು ಹಣ ಖರ್ಚು ಮಾಡುತ್ತಿರುವ ಗುತ್ತಿಗೆದಾರ ನವಲಿ ಹಿರೇಮಠರು ಶತಾಯ ಗತಾಯ ಹೈಕಮಾಂಡ ಮೂಲಕ ಹುನಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂದು ಟಿಕೆಟು ಪಡೆಯುವ ತಂತ್ರ ನಡೆಸಿದ್ದಾರೆ. ಅದು ಅಲ್ಲದೆ, ಚಿತ್ರನಟರಾದ ದರ್ಶನ,ಜೈಹೋ ಪ್ರಕಾಶ ಅವರನ್ನು ಕರೆಯಿಸಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು, ಯುವಕರನ್ನು ಸೆಳೆಯುವ ತಂತ್ರ ನಡೆಸಿದ್ದಾರೆ. ಅದು ಅಲ್ಲದೆ,ಎಲ್ಲ ಅಭಿಮಾನಗಳ ಆಶೆಯಂತೆ ಬಿಜೆಪಿ ಪಕ್ಷದಿಂದಲೇ ಟಿಕೆಟ್ ಪಡೆಯುವ ಯತ್ನ ನಡೆಸಿದ್ದೇನೆ ಎಂದು ನವಲಿ ಹಿರೇಮಠ ಇತ್ತಿಚಿಗೆ ಬಹಿರಂಗವಾಗಿಯೇ ಹೇಳಿದ್ದರು. ಇವರೊಂದಿಗೆ ಜಿ ಪಂ ಸದಸ್ಯ ಹಾಗೂ ವಿಜಯ ಮಹಾಂತೇಶ ಬ್ಯಾಂಕಿನ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಗುರುಂ ಲಕ್ಷಣ, ಎಲ್.ಎಂ ಪಾಟೀಲ, ರಾಜೊಳ್ಳಿ ಇತರರು ಸಾಥ ನೀಡುತ್ತಿದ್ದಾರೆ.

ಮಾಜಿ ಶಾಸಕರಾಗಿರುವ ದೊಡ್ಡನಗೌಡ ಪಾಟೀಲ್ ಹಾಗೂ ಇತರೆ ನಾಯಕರು ಅಹಂಭಾವ ಬಿಟ್ಟು ಎಲ್ಲ ನಾಯಕರನ್ನು ಒಗ್ಗೂಡಿಸಿಕೊಂಡು ಹೋಗುವ ಕೆಲಸ ಮಾಡಿದರೆ,ಮುಂದಿನ ದಿನಮಾನದಲ್ಲಿ ಬಿಜೆಪಿ ಪಕ್ಷದ ಭವಿಷ್ಯ ಉಳಿಯುತ್ತದೆ.ಇಲ್ಲವೇ ನೀನೊಂದು ತೀರ ನಾನೊಂದು ತೀರ ಎಂಬಂತೆ ಆದಲ್ಲಿ, ಕಾಂಗ್ರೆಸ್ ಪಕ್ಷದ ಈಗಿನ ಶಾಸಕರಾಗಿರುವ ವಿಜಯಾನಂದ ಕಾಶಪ್ಪನವರ ಗೆಲುವಿನ ದಾರಿಗೆ ಸೋಪಾನ ಹಾಕಿದಂತಾಗುತ್ತದೆ. ಬಿಜೆಪಿ ಪಕ್ಷದಲ್ಲಿ ಇಂತಹ ಬೆಳವಣಿಗೆಯಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅಸಮಾಧಾನ ಮೂಡಿಸಿದೆ. ಯಾರೇ ಆಗಲಿ,ಎಲ್ಲರೂ ಒಗ್ಗಟ್ಟಾಗಿ ವೈಮನಸ್ಸು ಬಿಟ್ಟು ಪಕ್ಷಕ್ಕಾಗಿ ದುಡಿಯುವುದು ಮುಖ್ಯವಾಗಿದೆ ಎಂದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಎಲ್ಲ ನಾಯಕರ ಮೇಲಿದೆ.ಈ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಇಲ್ಲಿನ ಭಿನ್ನಮತ ಗಮನಕ್ಕೆ ತೆಗೆದಕೊಂಡು ಶಮನ ಮಾಡಿ, ಬಿಜೆಪಿಯಲ್ಲಿ ಬದಲಾವಣೆ ತರುತ್ತಾರೆಯೇ ಎಂಬುದನ್ನು ಜನ ಸಾಮಾನ್ಯರು ಮತ್ತು ಕಾರ್ಯಕರ್ತರು ಕಾಯ್ದು ನೋಡುವಂತಾಗಿದೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ