ಬಾಗಲಕೋಟೆ (ಫೆ. 23) : ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಬಾಬು ಜಗಜೀವನರಾಂ ಸಮುದಾಯ ಭವನದ ಬಾಗಿಲು ವಿವಾದ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು,9ಜನರ ವಿರುದ್ಧ ಕೇಸ್ ದಾಖಲಾಗಿದೆ. ತಾಲೂಕಿನ ಬೇವೂರು ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಬಾಬು ಜಗಜೀವನರಾಂ ಸಮುದಾಯ ನಿರ್ಮಾಣಕ್ಕೆ 2015-16 ರಲ್ಲಿ ರೂ. 12 ಲಕ್ಷ ಅನುದಾನ ಬಿಡುಗಡೆ ಆಗಿದೆ. ನಿವಾಸಿಗಳ ಮಧ್ಯೆ ತಿಕ್ಕಾಟದಿಂದ ಸಮುದಾಯ ಭವನ ನಿರ್ಮಾಣ ವಿಳಂಬವಾಗಿದೆ. ಇತ್ತೀಚೆಗೆ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆಯಾಗಿ ಕಟ್ಟಡ ಕಾಮಗಾರಿ ಕೂಡಾ ನಡೆದಿದೆ. ಆದರೆ ಕಟ್ಟಡ ಕಾಮಗಾರಿ ಬಾಗಿಲುವರೆಗೂ ಬಂದಾಗ ಬಾಗಿಲು ಯಾವ ದಿಕ್ಕಿಗೆ ಇಡಬೇಕು ಎಂಬ ವಿಚಾರವಾಗಿ ವಿವಾದ ಶುರುವಾಗಿದೆ. ಸಮುದಾಯ ಭವನದ ಕಟ್ಟಡದ ಮುಖ್ಯದ್ವಾರ ಪೂರ್ವಕ್ಕೆ ತೆರೆಯಲಾಗಿತ್ತು. ಆದರೆ ಹಳೆಯ ಕಟ್ಟಡದಲ್ಲಿ ಬಾಗಿಲು ದಕ್ಷಿಣ ಭಾಗಕ್ಕೆ ಇತ್ತು. ಈಗ ಪೂರ್ವಕ್ಕೆ ಯಾಕೆ. ಅಲ್ಲದೇ ಪೂರ್ವ ದಿಕ್ಕಿನಲ್ಲಿ ಕೇವಲ 5 ಅಡಿ ಜಾಗದಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಬರುವುದಿಲ್ಲ. ಇದರಿಂದ ಹಿಂದಿನಂತೆ ದಕ್ಷಿಣ ದಿಕ್ಕಿನಲ್ಲೇ ಮುಖ್ಯದ್ವಾರ ತೆರೆದರೆ ಅನುಕೂಲ ಆಗುತ್ತದೆ. ಜೊತೆಗೆ 50 ಅಡಿ ಜಾಗ ಇರುವುದರಿಂದ ಶುಭ ಕಾರ್ಯಕ್ರಮ ಮಾಡಲು ಅನುಕೂಲ ಆಗುತ್ತದೆ ಎಂಬ ವಾದ ಮಂಡಿಸಲಾಗುತ್ತಿದೆ.
ಆದರೆ ರಾಜಕೀಯ ಕುಮ್ಮಕ್ಕಿನಿಂದ ಮುಖ್ಯದ್ವಾರ ಪೂರ್ವಕ್ಕೆ ಬಿಡಲಾಗಿದೆ. ನಾವು ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ತೆರೆಯುವಂತೆ ಮನವಿ ಕೊಟ್ಟರೂ ಯಾವುದೇ ಸ್ಪಂದನೆ ಮಾಡಲಿಲ್ಲ. ಹಾಗಾಗಿ ನಾವು ಬಾಗಿಲು ಮೊದಲೆಲ್ಲಿತ್ತು ಅಲ್ಲೆ ಬಾಗಿಲು ತೆರೆದಿದ್ದೇವೆ. ಈ ಮುಖ್ಯದ್ವಾರ ನೆಪ ಇಟ್ಟುಕೊಂಡು ನಮ್ಮ ಸಮಾಜದ 9 ಜನರ ಮೇಲೆ ಅಧಿಕಾರಿಗಳು ದೂರು ನೀಡಿದ್ದಾರೆ. ಈಗಾಗಲೇ ಓರ್ವನ ಬಂಧನ ಮಾಡಿದ್ದಾರೆ. ನಮ್ಮ ಮೇಲಿನ ಎಫ್ಐಆರ್ ರದ್ದು ಮಾಡಬೇಕು. ಜೊತೆಗೆ ಮೊದಲು ದ್ವಾರ ಬಾಗಿಲು ಎಲ್ಲಿತ್ತು. ಅಲ್ಲಿಯೇ ತೆರೆಯಬೇಕು. ಇಲ್ಲದಿದ್ದರೆ, ಬೇವೂರಿನಿಂದ ಡಿಸಿ ಕಚೇರಿಯವರೆಗೂ ಪಾದಯಾತ್ರೆ ಮಾಡುವದಾಗಿ ನಿವಾಸಿ ಗ್ಯಾನಪ್ಪ ಮಾದರ ಸೇರಿದಂತೆ ನಿವಾಸಿಗಳು ಎಚ್ಚರಿಸಿದ್ದಾರೆ.
ಫೆಬ್ರವರಿ 18ರಂದು ನಿರ್ಮಾಣ ಹಂತದಲ್ಲಿದ್ದ ಸರ್ಕಾರಿ ಸಮುದಾಯ ಭವನದ ಗೋಡೆ ಒಡೆಯುವ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ಆಧರಿಸಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸೈರಾಬಾನು ನದಾಫ್ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 9ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಈರಪ್ಪ ಕಡೇಮನಿ, ನಿಂಗಪ್ಪ ಕಡೇಮನಿ, ಚಿದಾನಂದ ಹೊಸಮನಿ, ಭೀಮಪ್ಪ ಕಡೇಮನಿ, ಯಲ್ಲಪ್ಪ ಕಡೇಮನಿ, ಮಹಾಂತೇಶ್ ಪೂಜಾರಿ, ಅಂದಾನೆಪ್ಪ ಕಡೇಮನಿ, ಆಸಂಗೆಪ್ಪ ಮಾದರ, ಚಂದ್ರಪ್ಪ ಮಾದರ, ಪರಸಪ್ಪ ಆಸೇದಾರ್ ಎನ್ನುವವರ ವಿರುದ್ಧ ದೂರು ದಾಖಲಾಗಿದೆ.
ಇದನ್ನು ಓದಿ: ಸರ್ಕಾರಿ ನೌಕರರ ವಿರುದ್ಧ ದೂರುಗಳ ತನಿಖೆಗೆ ಸಿಎಂ ತಡೆ
ಸದ್ಯ ದೂರು ದಾಖಲಾದ ಬಳಿಕ ಪ್ರತಿಭಟನೆ ಕೈಗೊಂಡ ಬೇವೂರಿನ ದಲಿತ ಸಮುದಾಯದವರು ಪ್ರಕರಣ ಹಿಂಪಡೆಯಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಆಗ್ರಹ ಪಡಿಸಿದ್ದಾರೆ.ಇನ್ನು ಸಮುದಾಯ ಭವನ ನಿರ್ಮಾಣ ಕಾರ್ಯವನ್ನು ಕೆಆರ್ ಡಿ ಎಲ್ ಗೆ ವಹಿಸಿದ್ದು, ಬಾಗಿಲು ಎಸ್ಟಿಮೇಟ್ ಪ್ರಕಾರ ಪೂರ್ವಕ್ಕೆ ಇದ್ದು, ಅದನ್ನು ಬದಲಾಯಿಸಿ ದಕ್ಷಿಣಕ್ಕೆ ಮಾಡಲು ಇಂಜಿನಿಯರ್ ಲಂಚ ಕೇಳಿದ್ದರು ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಕೇವಲ ಸಮುದಾಯ ಭವನದ ಬಾಗಿಲು ದಿಕ್ಕು ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ವಿಪರ್ಯಾಸವೇ ಸರಿ.ಬಾಗಿಲು ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ