ಬಾಗಲಕೋಟೆ: ಐತಿಹಾಸಿಕ ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಕಾಲ ಕೂಡಿ ಬರೋದು ಯಾವಾಗ?

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆದಾಗ ಸ್ಥಳಾಂತರಕ್ಕಾಗಿ 60 ಕೋಟಿ ಘೋಷಣೆ ಮಾಡಲಾಗಿತ್ತು. ಆದರೆ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ  ಮುರುಕಲು ಮನೆಗಳಲ್ಲಿಯೇ ಇಲ್ಲಿನ ಜನ ಬದುಕುತ್ತಿದ್ದಾರೆ. ಮಳೆ ಬಂದರೆ ನೆನೆಯುತ್ತಾ, ರಾತ್ರಿಯಾದರೆ ಹಳೆಯ ಮನೆ ಬೀಳುವುದೋ ಎಂಬ ಭಯದಲ್ಲಿ ವಾಸ ಮಾಡುವ ಪರಿಸ್ಥಿತಿ ಇವರದ್ದಾಗಿದೆ.

ಐಹೊಳೆ ಗ್ರಾಮ

ಐಹೊಳೆ ಗ್ರಾಮ

  • Share this:
ಬಾಗಲಕೋಟೆ (ಮಾ. 21): ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಐಹೊಳೆ ಗ್ರಾಮ ಸ್ಥಳಾಂತರವಾಗಬೇಕೆನ್ನುವುದು ಹಲವು ದಶಕಗಳ ಬೇಡಿಕೆ. ಆದರೆ ಅದು ನೆನೆಗುದಿಗೆ ಬಿದ್ದಿದ್ದು, ಅತ್ತ ಗ್ರಾಮಸ್ಥರು ಮನೆ ರಿಪೇರಿ ಮಾಡುವಂತಿಲ್ಲ, ಇತ್ತ ಸ್ಥಳಾಂತರವಾಗದೇ ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಇದೀಗ ಮನೆ ಸರ್ವೆ ಕಾರ್ಯ, ಜಾಗ ಗುರುತಿಸುವ ಪ್ರಕ್ರಿಯೆ ನಡೆದಿದ್ದು ಗ್ರಾಮಸ್ಥರಲ್ಲಿ ಹೊಸ ಭರವಸೆ ತಂದಿದೆ.

ಬಾಲಗಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಐಹೊಳೆ ಗ್ರಾಮಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ ಐಹೊಳೆ ಗ್ರಾಮದಲ್ಲಿ ಚಾಲುಕ್ಯ ಕಾಲದ  120 ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕ ದೇಗುಲಗಳ ಸುತ್ತಲೂ ಮನೆಗಳಿವೆ. ಇದರಿಂದ ಪ್ರವಾಸಿಗರು ಸ್ಮಾರಕ, ದೇಗುಲ ಕಣ್ತುಂಬಿಕೊಳ್ಳಲು ಆಗುತ್ತಿಲ್ಲ. ಗ್ರಾಮಸ್ಥರು ಜಾನುವಾರು ಸ್ಮಾರಕ ಬಳಿಯೇ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಈಚೆಗೆ ಸಂಭವಿಸಿದ ಭೀಕರ ಪ್ರವಾಹಕ್ಕೆ ಐಹೊಳೆ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ.ಮನೆಗಳು ಬಿದ್ದಿವೆ. ಅವುಗಳ ದುರಸ್ತಿಗೂ ಅವಕಾಶ ನೀಡುತ್ತಿಲ್ಲ.

ಇನ್ನು ಕೆಲವೆಡೆ ಮಾನವೀಯತೆ ದೃಷ್ಟಿಯಿಂದ ದುರಸ್ತಿಗೆ ಅವಕಾಶ ಕೊಟ್ಟಿದ್ದಾರೆ.  ಎಲ್ಲಾ ದೇಗುಲಗಳು ಪುರಾತತ್ವ ಇಲಾಖೆಗೆ ಸೇರಿದ್ದರಿಂದ ಇಲ್ಲಿನ ಸ್ಥಿತಿಗತಿಯನ್ನು ಯಥಾವತ್ತಾಗಿ ಕಾಪಾಡಬೇಕಾಗುತ್ತದೆ.ಇದರಿಂದ ಇಲ್ಲಿನ ನಿವಾಸಿಗಳಿಗೆ ಮನೆ ದುರಸ್ಥಿ ಮಾಡಲಾಗುತ್ತಿಲ್ಲ. ಮನೆ ಬಿದ್ದರೆ ನೂತನ ಮನೆ ನಿರ್ಮಾಣ ಮಾಡಲು ಆಗುತ್ತಿಲ್ಲ.ಎಲ್ಲದಕ್ಕೂ ಪುರಾತತ್ವ ಇಲಾಖೆ ಅಡ್ಡಿಪಡಿಸುತ್ತದೆ.

ತನ್ವೀರ್ ಸೇಠ್​ ಆಪ್ತರ ಅಮಾನತು ಖಂಡಿಸಿ ಎನ್.ಆರ್.ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಕೈ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ

ಇನ್ನು ಈ ಬಾರಿ ಬಜೆಟ್ ನಲ್ಲಿ ಐಹೊಳೆ ಬಗ್ಗೆ ಏನಾದರೂ ಹಣ ಮೀಸಲಿಡುತ್ತಾರಾ ಎಂದು ಸ್ಥಳೀಯರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದು ಕೂಡ ಈಡೇರದೆ ಗ್ರಾಮಸ್ಥರು ನಿರಾಶರಾಗಿದ್ದು, ಆದಷ್ಟು ಬೇಗ ನಮ್ಮನ್ನು ಸ್ಥಳಾಂತರ ಮಾಡಿ ನಮಗೆ ಈ ಕಷ್ಟದಿಂದ ಮುಕ್ತಿ ಕೊಡಿ ಎಂದು ಗ್ರಾಮಸ್ಥರಾದ ಶರಣಪ್ಪ ಮಾಯಾಚಾರಿ, ಸಣ್ಣ ಹನಮಂತ  ಆಗ್ರಹಿಸಿದ್ದಾರೆ.

ಐಹೊಳೆ ಗ್ರಾಮವನ್ನು ಸ್ಥಳಾಂತರ ಮಾಡಿ ಎಂಬ ಬೇಡಿಕೆ ಬಹಳ ದಿನಗಳಿಂದಲೂ ಇದೆ. ಹಿಂದೆ ಬಿಜೆಪಿ ಸರಕಾರದಲ್ಲಿ ಐಹೊಳೆ ಗ್ರಾಮದ ಅಳಿಯ ಅಂದಿನ  ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಸ್ಥಳಾಂತರಕ್ಕೆ ಮನಸ್ಸು ಮಾಡಿದ್ದರು.ಆದರೆ ನಂತರ ಬಂದ ಕಾಂಗ್ರೆಸ್ ಸರಕಾರದಲ್ಲಿ ಸ್ಥಳಾಂತರ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಐಹೊಳೆ ಗ್ರಾಮದಲ್ಲಿ ರಸ್ತೆ ಕೂಡ ದುರಸ್ಥಿ ಮಾಡುವ ಹಾಗಿಲ್ಲ. ಮನೆಯ ಒಂದು ಕಲ್ಲನ್ನು ಬಿಚ್ಚಿದರೂ ಪುರಾತತ್ವ ಇಲಾಖೆ ಅಧಿಕಾರಿಗಳು ಬಂದು ಎಚ್ಚರಿಕೆ ನೀಡುತ್ತಾರೆ.

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆದಾಗ ಸ್ಥಳಾಂತರಕ್ಕಾಗಿ 60 ಕೋಟಿ ಘೋಷಣೆ ಮಾಡಲಾಗಿತ್ತು. ಆದರೆ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ  ಮುರುಕಲು ಮನೆಗಳಲ್ಲಿಯೇ ಇಲ್ಲಿನ ಜನ ಬದುಕುತ್ತಿದ್ದಾರೆ. ಮಳೆ ಬಂದರೆ ನೆನೆಯುತ್ತಾ, ರಾತ್ರಿಯಾದರೆ ಹಳೆಯ ಮನೆ ಬೀಳುವುದೋ ಎಂಬ ಭಯದಲ್ಲಿ ವಾಸ ಮಾಡುವ ಪರಿಸ್ಥಿತಿ ಇವರದ್ದಾಗಿದೆ. ಇನ್ನು ಈ  ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಈಗಾಗಲೇ ಸರಕಾರಕ್ಕೆ 261 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದೆ. 1058ಕುಟುಂಬಗಳ ಸ್ಥಳಾಂತರಕ್ಕೆ 137   ಎಕರೆ ಜಾಗ ಕೂಡ ಗುರುತು ಮಾಡಲಾಗಿದೆ.

ರೈತರೊಂದಿಗೆ ಭೂಸ್ವಾಧೀನಕ್ಕಾಗಿ  ಸಭೆ ನಡೆಸಿ ಬೆಲೆ ನಿಗದಿ ಮಾಡಲಾಗುವುದು. ಸರಕಾರದಿಂದ   ಹಣ ಮಂಜೂರಾಗಿ ಅನುಮೋದನೆ ಸಿಗಬೇಕಾಗಿದೆ. ಸಿಕ್ಕ ನಂತರ ಸ್ಥಳಾಂತರ ಕಾರ್ಯ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವ ಕಾರ್ಯ ಆರಂಭಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದ್ದಾರೆ.

ಒಟ್ಟಾರೆ ಅತ್ತ ಸ್ಥಳಾಂತರವೂ ಇಲ್ಲ, ಇತ್ತ ನೂತನ ಮನೆ ನಿರ್ಮಾಣದ ಭಾಗ್ಯನೂ ಇಲ್ಲದಂತ ಪರಿಸ್ಥಿತಿ ಈ ಗ್ರಾಮಸ್ಥರದ್ದಾಗಿದೆ. ಈ ಬಾರಿ ಬಜೆಟ್ ನಲ್ಲೂ ಕೂಡ ನಿರ್ಲಕ್ಷ್ಯ ಮಾಡಿದ್ದು, ಆದಷ್ಟು ಬೇಗ ಸ್ಥಳಾಂತರ ಕಾರ್ಯ ಮಾಡಬೇಕಾಗಿದೆ.
Published by:Latha CG
First published: