news18-kannada Updated:December 18, 2020, 7:02 PM IST
ನಟಿ ರಂಜನಿ ರಾಘವನ್
ಬಾಗಲಕೋಟೆ(ಡಿಸೆಂಬರ್. 18): ವಿಧಾನಸಭಾ, ಲೋಕಸಭಾ ಚುನಾವಣೆಗೆ ಸ್ಟಾರ್ ಪ್ರಚಾರಕರನ್ನು ಕರೆಸಿ, ಮತ ಸೆಳೆಯುವದನ್ನು ನೋಡಿದ್ದೇವೆ ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಅಖಾಡಕ್ಕೂ ಕಿರುತೆರೆ ನಟಿಯೊಬ್ಬರು ಧುಮುಕಿ, ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಹೀಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಪರ ಪ್ರಚಾರ ನಡೆಸುವುದಾಗಿ ಪುಟ್ಟಗೌರಿ, ಕನ್ನಡತಿ ಧಾರಾವಾಹಿ ನಟಿ, ಬಿಗ್ ಬಾಸ್ ಖ್ಯಾತಿಯ ರಂಜನಿ ರಾಘವನ್ ಸ್ವತಃ ವಿಡಿಯೋ ಮೂಲಕ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳಾದ ವಿಜಯಲಕ್ಷ್ಮಿ ಹೂಗಾರ, ಯಂಕಪ್ಪ ನುಚ್ಚಿನ ಹಾಗೂ ಬಿ.ಎನ್. ಮೇತ್ರಿ ಪರ ಡಿಸೆಂಬರ್ 19ರಂದು ಪ್ರಚಾರ ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಗಿರಿಸಾಗರ ಗ್ರಾಮ ಪಂಚಾಯಿತಿ ಒಟ್ಟು 19 ಸ್ಥಾನಗಳಲ್ಲಿ 6 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ.13 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೂವರು ಅಭ್ಯರ್ಥಿಗಳ ಪರವಾಗಿ ಕಿರುತೆರೆ ನಟಿ ರಂಜನಿ ರಾಘವನ್ ಪ್ರಚಾರಕ್ಕೆ ಆಗಮಿಸುತ್ತಿರುವದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕೊರೋನಾ ಮಧ್ಯೆಯೂ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆಗೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಸೂಚಿಸಿ ಆದೇಶಿಸಿದೆ. ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರದ ವೇಳೆ ಐದು ಜನಕ್ಕಿಂತ ಹೆಚ್ಚಿಗೆ ಸೇರುವಂತಿಲ್ಲ. ಸಾಮಾಜಿಕ ಅಂತರ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಇದೀಗ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಹಳ್ಳಿಗಳಲ್ಲಿ ರಂಗು ಪಡೆದುಕೊಂಡಿದೆ.
ಮನೆ ಮನೆಗೆ ತೆರಳಿ ಅಭ್ಯರ್ಥಿಗಳು ಅವರ ಹಿಂಬಾಲಕರು ಪ್ರಚಾರ ಮಾಡುತ್ತಿದ್ದಾರೆ. ಇದೀಗ ಗಿರಿಸಾಗರಕ್ಕೆ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಆಗಮಿಸುತ್ತಿರುವದರಿಂದ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎನ್ನುವ ನಿಯಮ ಉಲ್ಲಂಘನೆಯಾಗಲಿದೆ.
ಸಹಜವಾಗಿ ಸ್ಟಾರ್ ಪ್ರಚಾರಕರು ಬಂದ ವೇಳೆ ಜನ ಜಮಾಯಿಸುವುದು ಮಾಮೂಲಿ. ಇನ್ನು ಸ್ಟಾರ್ ಪ್ರಚಾರಕರನ್ನು ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರಕ್ಕೆ ಕರೆ ತರುವದರಿಂದ ಅವರ ಸಂಭಾವನೆ ವೆಚ್ಚ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಬೀಳಬಹುದು. ಧಾರಾವಾಹಿ ನಟಿ ರಂಜನಿ ರಾಘವನ್ ಪ್ರಚಾರಕ್ಕೆ ಅನುಮತಿ ತಾಲೂಕಾಡಳಿತದಿಂದ ಅನುಮತಿ ಬಗ್ಗೆಯೂ ಅಧಿಕಾರಿಗಳು ಬಿಟ್ಟು ಕೊಡುತ್ತಿಲ್ಲ.
ಇದನ್ನೂ ಓದಿ :
Siddaramaiah: ನನ್ನನ್ನು ಸೋಲಿಸಲು ಕಾರಣಗಳೇನು ಹೇಳಿ: ಚಾಮುಂಡೇಶ್ವರಿ ಕ್ಷೇತ್ರದ ಜನರನ್ನು ಕೇಳಿದ ಸಿದ್ದರಾಮಯ್ಯ
ಇನ್ನು ರಂಜನಿ ರಾಘವನ್ ಎಷ್ಟು ಸಂಭಾವನೆ ಪಡೆದು ಪ್ರಚಾರಕ್ಕೆ ಬರುತ್ತಿದ್ದಾರೆ ಎನ್ನುವದು ತಿಳಿದು ಬಂದಿಲ್ಲ. ಇನ್ನು ವಿಚಿತ್ರವೆಂದರೆ ಗಿರಿಸಾಗರ ಗ್ರಾಮಕ್ಕೆ ಕಿರುತೆರೆ ನಟಿ ರಂಜನಿ ರಾಘವನ್ ಆಗಮಿಸುವ ಬಗ್ಗೆ ಗ್ರಾಮಸ್ಥರು ಖಚಿತವಾಗಿ ಹೇಳುತ್ತಿಲ್ಲ. ಯಾಕಂದರೆ ಚುನಾವಣೆ ಪ್ರಚಾರಕ್ಕೆ ಅಡ್ಡಿಯಾಗಬಹುದು ಎಂದು ಹಿಂಜರಿಯುತ್ತಿದ್ದಾರೆ.
ಒಟ್ಟಿನಲ್ಲಿ ಹಳ್ಳಿ ಪೊಲಿಟಿಕ್ಸ್ ನಲ್ಲಿ ಅಭ್ಯರ್ಥಿಗಳು ಗೆಲುವಿಗಾಗಿ ಹಲವು ಕಸರತ್ತು ನಡೆಸುತ್ತಿದ್ದಾರೆ. ಸ್ಟಾರ ಕಿರುತೆರೆ ನಟಿ ಪ್ರಚಾರಕ್ಕೆ ಕರೆಯಿಸಿ, ಮತ ಸೆಳೆಯಲು ಮುಂದಾಗಿದ್ದಾರೆ.
Published by:
G Hareeshkumar
First published:
December 18, 2020, 6:47 PM IST