news18-kannada Updated:October 2, 2020, 6:04 PM IST
ಆನೆಗೆ ಉಪಚರಿಸುತ್ತಿರುವ ಸಿಬ್ಬಂದಿ
ಹಾಸನ (ಅ.2): ನಾಲ್ಕು ದಿನಗಳ ಹಿಂದೆ ಜನಿಸಿದ ಮರಿಯಾನೆಯೊಂದು ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಹುಟ್ಟಿದಾಗಿನಿಂದ ಮರಿ ಮೇಲೆಳಲಾಗದೇ ಸ್ಥಿತಿ ಕಂಡು ತಾಯಿ ಆನೆ ಕೂಡ ಆತಂಕಗೊಂಡು ಪ್ರತಿನಿತ್ಯ ರೋದಿಸುತ್ತಿದೆ. ಮರಿಯ ಸಂಕಷ್ಟ, ತಾಯಿಯ ಆಕ್ರಂದನ ಸ್ಥಳೀಯರ ಕಣ್ಣು ಒದ್ದೆ ಮಾಡಿದೆ. ಸಕಲೇಶಪುರ ತಾಲೂಕಿನ, ಮಳಲಿ ಗ್ರಾಮದ ಸಮೀಪದಲ್ಲಿ ಅನಿಲ್ ಎಂಬುವರ ಕಾಫಿ ತೋಟದಲ್ಲಿ ನಾಲ್ಕು ದಿನದ ಹಿಂದೆ ಆನೆಯೊಂದು ಮರಿಯಾಗಿದೆ. ಆರಂಭದಲ್ಲಿ ತನ್ನ ಕಂದನನ್ನು ಕರೆದೊಯ್ಯಲು ಪ್ರಯತ್ನಿಸಿದ ತಾಯಿ ಆನೆ ವಿಫಲವಾಗಿದೆ. ಇದಾದ ಬಳಿಕ ತನ್ನ ಮರಿಗೆ ಹಾಲುಣಿಸಲು ಶತಪತ ಪ್ರಯತ್ನ ನಡೆಸಿದರೂ ಅದು ಕೂಡ ವಿಫಲವಾಗಿದ್ದು, ಆನೆ ರೋಧಿಸುತ್ತಾ ಕಾಫಿ ತೋಟದಲ್ಲಿ ಅಡ್ಡಾಡುತ್ತಿದೆ.

ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವೈದ್ಯರು, ತಾಯಿ ಆನೆ ಆಹಾರ ಸೇವನೆಗೆ ಹೋದ ತಕ್ಷಣ ಮರಿಯಾನೆಗೆ ಚಿಕಿತ್ಸೆ ನೀಡಿ, ಕೃತಕವಾಗಿ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೂ ಮರಿಯಾನೆ ಇನ್ನು ಕೂಡ ಗುಣಮುಖವಾಗಿಲ್ಲ.
ಆನೆಯ ಮಾತೃ ವಾತ್ಸಲ್ಯ ಕಂಡು ಮರುಗುತ್ತಿರುವ ಸ್ಥಳೀಯರು, ದಯವಿಟ್ಟು ಮರಿಯಾನೆಯನ್ನ ಇಲ್ಲಿಂದ ಬೇರೆಡೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ನೀಡಿ ಎಂದು ಮನವಿ ಮಾಡುತ್ತಿದ್ದಾರೆ. ಮರಿಯಾನೆ ಕೂಡ ಮೇಲೆಳಲಾಗದೇ, ದೂರದಿಂದಲೇ ತಾಯಿ ಕಂಡು ರೋಧಿಸುತ್ತಿದೆ. ಇತ್ತ ತಾಯಿ ಆನೆ ಆಹಾರ ಅರಸಿ ಮತ್ತೆ ಮಗುವಿನ ಬಳಿ ಬಂದು ಆಕ್ರಂದನ ಮಾಡುತ್ತಿರುವ ದೃಶ್ಯ ಹೃದಯ ಕಲಕುವಂತಿದೆ.
Published by:
Seema R
First published:
October 2, 2020, 5:59 PM IST