ತುಮಕೂರು: ಶಿಕಾರಿಪುರ ಕ್ಷೇತ್ರದ (Shikaripur) ಬಿಜೆಪಿ(BJP) ಅಭ್ಯರ್ಥಿ ಬಿವೈ ವಿಜಯೇಂದ್ರ (BY Vijayendra) ಅವರು ನಾಮಪತ್ರ ಸಲ್ಲಿಸುವ ಮುನ್ನ ಯಡಿಯೂರಿನ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ (Siddlingeshwar Temple) ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ, ಮಾಜಿ ಡಿಸಿಎಂ ಪರಮೇಶ್ವರ್ (G Parameshwara) ಅವರನ್ನು ಭೇಟಿಯಾಗಿದ್ದ ವಿಜಯೇಂದ್ರ, ಪರಂ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಕುರಿತ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಎಡೆಯೂರು ದೇವಸ್ಥಾನದಲ್ಲಿ ಬಿ ವೈ ವಿಜಯೇಂದ್ರ, ಜಿ.ಪರಮೇಶ್ವರ್ ಅವರು ಮುಖಾಮುಖಿಯಾದ ಸಂದರ್ಭದಲ್ಲಿ ಘಟನೆ ನಡೆದಿದೆ.
ಪರಮೇಶ್ವರ್ ಅವರ ಕಾಲಿಗೆ ನಮಸ್ಕರಿಸಿದ ವಿಜಯೇಂದ್ರ
ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಎರಡು ದಿನಗಳಿಂದ ಆರಂಭವಾಗಿದ್ದು, ಬಹುತೇಕ ನಾಯಕರು ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಇದರಂತೆ ಕುಣಿಗಲ್ ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ದೇವರಿಗೆ ಪರಮೇಶ್ವರ್ ಹಾಗೂ ವಿಜಯೇಂದ್ರ ಯಡಿಯೂರಪ್ಪ ಅವರು ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಮುಖಾಮುಖಿಯಾದ ನಾಯಕರು, ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿದ್ದರು. ಅಲ್ಲದೆ, ತಮಗೆ ಸನ್ಮಾನಿಸಲು ಬಂದ ಶಾಲನ್ನು ವಿಜಯೇಂದ್ರ ಅವರಿಗೆ ಹೊದಿಸಿ ಆಶೀರ್ವಾದ ಮಾಡಿದರು. ಈ ವೇಳೆ ಪರಮೇಶ್ವರ್ ಅವರ ಕಾಲಿಗೆ ಬಿದ್ದು ವಿಜಯೇಂದ್ರ ನಮಸ್ಕರಿಸಿದರು.
ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಿರುವ ವಿಜಯೇಂದ್ರ ಅವರು, ನಾಮಪತ್ರ ಸಲ್ಲಿಕೆ ಮಾಡುವ ಮೂರು ದಿನಗಳ ಮುನ್ನವೇ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬಿಜೆಪಿ ನಾಯಕರು ಭಾರೀ ಚರ್ಚೆಯ ನಂತರ ವಿಜಯೇಂದ್ರ ಅವರಿಗೆ ಶಿಕಾರಿಪುರದಿಂದ ಟಿಕೆಟ್ ಘೋಷಣೆ ಮಾಡಿದ್ದರು.
ಟಿಕೆಟ್ ಘೋಷಣೆಗೂ ಮುನ್ನ ವಿಜಯೇಂದ್ರ ಅವರನ್ನು ಸಿದ್ದರಾಮ್ಯಯ ಅವರ ಎದುರು, ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಡ ಕೇಳಿ ಬಂದಿತ್ತು. ಆದರೆ ಇದನ್ನು ತಳ್ಳಿ ಹಾಕಿದ್ದ ಯಡಿಯೂರಪ್ಪ ಅವರು ವಿಜಯೇಂದ್ರ ಶಿಕಾರಿಪುದರಿಂದ ಮಾತ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಸ್ಪಷಪಡಿಸಿದ್ದರು. ಯಡಿಯೂರಪ್ಪ 1983 ರಿಂದ ಏಳು ಬಾರಿ ಶಿಕಾರಿಪುರದಿಂದ ಆಯ್ಕೆಯಾಗಿ ಬಿಜೆಪಿಯ ಭದ್ರ ಕೋಟೆಯನ್ನಾಗಿ ಮಾಡಿದ್ದರು.
ಬಿಎಸ್‌ವೈ ಮಗ ಅಂತ ಮಾತ್ರ ಟಿಕೆಟ್ ಕೊಟ್ಟಿಲ್ಲ
ಶಿಕಾರಿಪುರ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ವಿಜಯೇಂದ್ರ ಅವರು, ನನ್ನ ತಂದೆ 40 ವರ್ಷಗಳಿಂದ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಸ್ಪರ್ಧಿಸಿರುವುದು ನನಗೆ ಸಿಕ್ಕ ಆಶೀರ್ವಾದ. ಶಿಕಾರಿಪುರದಿಂದ ಸ್ಪರ್ಧಿಸಲು ನನಗೆ ಸಂತೋಷವಾಗುತ್ತಿದೆ.
ಇಂದು ನನ್ನ ಕನಸು ನನಸಾಗಿದೆ, ಆದರೆ ನಾನು ಬಿಎಸ್ ಯಡಿಯೂರಪ್ಪ ಅವರ ಪುತ್ರ ಎಂಬ ಕಾರಣಕ್ಕೆ ಮಾತ್ರ ಟಿಕೆಟ್ ನೀಡಿದ್ದಾರೆ ಎಂದರೆ ತಪ್ಪಾಗುತ್ತದೆ. ಯಡಿಯೂರಪ್ಪ ಹಾಗೂ ಪಕ್ಷದ ಹಿರಿಯ ನಾಯಕರು ರಾಜ್ಯದಲ್ಲಿ ಪಕ್ಷವನ್ನು ಮೂಲೆ ಮೂಲೆಗೂ ತಲುಪಿಸಿದ್ದರು. ಪ್ರಧಾನಿ ಮೋದಿ ನಾಯಕತ್ವ, ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕ ಜನರು ಸಂತೋಷದಿಂದ ಇದ್ದಾರೆ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ