ಬೆಂಗಳೂರು: ಕಾಲೇಜಿನ ಆವರಣದಲ್ಲೇ (Bengaluru College) ವಿದ್ಯಾರ್ಥಿನಿಗೆ ಮತ್ತೋರ್ವ ವಿದ್ಯಾರ್ಥಿ (College Student) ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ರಾಜಾನುಕುಂಟೆ (Rajanakunte) ಬಳಿ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು 19 ವರ್ಷದ ಲಯಸ್ಮಿತಾ ಎಂದು ಗುರುತಿಸಲಾಗಿದ್ದು, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಬಿಟೆಕ್ (B Tech) ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು, ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ವಿದ್ಯಾರ್ಥಿಯನ್ನು ಪವನ್ ಕಲ್ಯಾಣ್ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರ ದೌಡು
ಇಂದು ಮಧ್ಯಾಹ್ನ 12:30ರ ಸಮಯದಲ್ಲಿ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚಾಕು ಇರಿತಕ್ಕೆ ಒಳಗಾದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆ ಬಳಿಕ ಆರೋಪಿ ಪವನ್ ಕಲ್ಯಾಣ್ ಕೂಡ ಚಾಕುವಿನಿಂದ ಇರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು, ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Crime News: ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ಟೀಚರ್ ಸಾವು; ಟ್ರಯಾಂಗಲ್ ಲವ್ ಸ್ಟೋರಿಗೆ ತಾಯಿ-ಮಗ ಬಲಿ
ಆರೋಪಿ ಪವನ್ ಕಲ್ಯಾಣ್ ನೃಪತುಂಗ ಯೂನಿವರ್ಸಿಟಿಯಲ್ಲಿ ಬಿಸಿಎ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನಂತೆ. ಇಂದು ಕಾಲೇಜಿನ ಬಳಿ ಆಗಮಿಸಿದ್ದ ಪವನ್ ಕಲ್ಯಾಣ್ ಕಲ್ಯಾಣ್ ಮೊದಲು ವಿದ್ಯಾರ್ಥಿನಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಪ್ರೀತಿ ವಿಚಾರಕ್ಕೆ ಕೊಲೆ ಶಂಕೆ
ಇತ್ತ ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಲೇಜು ಭದ್ರತಾ ಸಿಬ್ಬಂದಿ ವಿದ್ಯಾರ್ಥಿನಿಯನ್ನುಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ. ಆದರೆ ಆ ವೇಳೆಗಾಗಲೇ ಆಕೆ ಸಾವನ್ನಪ್ಪಿದ್ದಳು ಎನ್ನಲಾಗಿದೆ. ಇತ್ತ ಆತ್ಮಹತ್ಯೆ ಯತ್ನಿಸಿದ್ದ ಪವನ್ ಕಲ್ಯಾಣ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸುವ ಕಾರ್ಯ ಮಾಡಲಾಗಿದೆ. ಮೇಲ್ನೋಟಕ್ಕೆ ಪ್ರೀತಿ ವಿಚಾರಕ್ಕೆ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರು ಕೋಲಾರ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಯನ್ನು ದೂರು ಮಾಡಿದ್ದೇ ಕೊಲೆ ಕಾರಣವಾಯ್ತಾ?
ಆರೋಪಿ ಪವನ್ ಕಲ್ಯಾಣ್ ಕೋಲಾರದ ಕಾಶಿಪುರ ಗ್ರಾಮದ ನಿವಾಸಿಯಾಗಿದ್ದು, ವಿದ್ಯಾರ್ಥಿನಿ ಲಯಸ್ಮಿತಾ ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿಯಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರಂತೆ. ಆದರೆ ಹೊಸ ಕಾಲೇಜಿಗೆ ಸೇರುತ್ತಿದ್ದಂತೆ ವಿದ್ಯಾರ್ಥಿನಿ ಲಯಸ್ಮಿತಾ, ಪವನ್ ನನ್ನು ದೂರ ಮಾಡಲು ಆರಂಭಿಸಿದ್ದಳಂತೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಪವನ್ ಇಂದು ಬ್ಯಾಗ್ ನಲ್ಲಿ ಚಾಕು ಹಿಡಿದು ಬಂದಿದ್ದಾನೆ. ಕಾಲೇಜು ಮುಗಿಸಿ ವಾಪಸ್ ಆಗುತ್ತಿದ್ದ ವಿದ್ಯಾರ್ಥಿನಿಗೆ ಕರೆ ಮಾಡಿ ತನ್ನ ಬಳಿ ಕರೆಯಿಸಿಕೊಂಡಿದ್ದಾನೆ.
ಸುಮಾರು ಐದು ನಿಮಿಷಗಳ ಕಾಲ ಮಾತುಕತೆ ನಡೆಸಿದ ಪವನ್, ಏಕಾಏಕಿ ಬ್ಯಾಗ್ನಿಂದ ಚಾಕು ತೆಗೆದು ವಿದ್ಯಾರ್ಥಿನಿಗೆ ಹಲವು ಬಾರಿ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಬಳಿಕ ತಾನು ಎದೆಗೆ ಚಾಕುವಿನಿಂದ ಇರಿದು ಕೊಂಡು ಕೊಲೆಗೆ ಯತ್ನಿಸಿದ್ದಾನೆ. ಸದ್ಯ ಪವನ್ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಲು ಪೊಲೀಸರ ನಿರ್ಧಾರ ಮಾಡಿದ್ದಾರೆ. ಇತ್ತ ಲಯಸ್ಮಿರಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಅಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ