B S Yediyurappa Resigns: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯನ್ನೇನೋ ಕೊಟ್ಟಿದ್ದಾರೆ. ಆದ್ರೆ ಇನ್ನೂ ನೂತನ ಮುಖ್ಯಮಂತ್ರಿಯ ಹೆಸರು ನಿಗೂಢವಾಗಿಯೇ ಇದೆ. ಸದ್ಯಕ್ಕಂತೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಅವರ ತವರು ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಓಡಾಡುತ್ತಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ನಳಿನ್ ಕುಮಾರ್ ಭೇಟಿ. ತಮ್ಮ ಮೂಲ ಮನೆಯಲ್ಲಿ ಪೂಜಿಸುವ ದೈವಗಳ ಆಶೀರ್ವಾದ ಪಡೆದ ನಳಿನ್ ಕುಮಾರ್ ಕಟೀಲ್ ತಾಯಿ ಸುಶೀಲಾವತಿ ಎನ್ ಶೆಟ್ಟಿ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಇದರ ನಂತರ ನೇರವಾಗಿ ದೆಹಲಿ ಪ್ರಯಾಣ ಬೆಳೆಸಿದ್ದಾರೆ. ಸದ್ಯ ಮುಂದಿನ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನಳಿನ್ ಕುಮಾರ್ ಕಟೀಲ್ ಹೆಸರು ಕೂಡಾ ಕೇಳಿಬರ್ತಿದೆ. ಇನ್ನು ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಎಸ್ವೈ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿ ಎಂ ಯಡಿಯೂರಪ್ಪನಿಗೆ ರಾಜಕೀಯದಲ್ಲಿ 50 ವರ್ಷಗಳ ಅನುಭವ ಇದೆ. ಬಿಜೆಪಿ ಕಟ್ಟಿ ಬೆಳೆಸಿದ್ದ ಬಿ ಎಸ್ ಯಡಿಯೂರಪ್ಪ, ಬಹಳಷ್ಟು ದುಖಃದಿಂದ ಯಡಿಯೂರಪ್ಪ ಭಾಷಣ ಮಾಡಿದರು. ಯುಗಾಂತ್ಯ ಆಯಿತು ಎಂದು ಆ ಕ್ಷಣದಲ್ಲಿ ಅನಿಸಿತು. 2023ರ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಬಿಜೆಪಿಯ ಬೆಳವಣಿಗೆ ಕಾತುರದಿಂದ ನೋಡುತ್ತಿದೆ. ಯಡಿಯೂರಪ್ಪ ಹೋರಾಟ, ಧೈರ್ಯದ ಬಗ್ಗೆ ಅಭಿಮಾನ ಇದೆ. ಯಡಿಯೂರಪ್ಪಗೆ ಅವಧಿ ಪೂರ್ಣ ಮಾಡಲು ಅವಕಾಶ ನೀಡಬಹುದಿತ್ತು. ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ, ಯಡಿಯೂರಪ್ಪ ಪಕ್ಷಾತೀತವಾಗಿ ಲೆಜೆಂಡ್ ನಾಯಕ. ದುಖಃದಿಂದ ರಾಜೀನಾಮೆ ನೀಡಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ. ರಾಜ್ಯದಲ್ಲಿ ಕೋವಿಡ್, ಪ್ರವಾಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಬೆಳವಣಿಗೆ ಸರಿಯಲ್ಲ. ಜನರ ಕಾಳಜಿಗಿಂತ ರಾಜಕೀಯ ಮುಖ್ಯವಾಗಿದ್ದು ಸರಿಯಲ್ಲ. ಇಂತಹ ಸಂದರ್ಭಗಳಲ್ಲಿ ಈ ಬೆಳವಣಿಗೆ ಅವಶ್ಯಕತೆ ಇತ್ತಾ ಎಂದು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಇನ್ನು ದಾವಣಗೆರೆಯಲ್ಲಿ ಶೋಷಿತರ ವರ್ಗಗಳ ಒಕ್ಕೂಟ ಬಿಎಸ್ವೈ ರಾಜೀನಾಮೆಗೆ ಬೇಸರ ವ್ಯಕ್ತಪಡಿಸಿದೆ. ಯಡಿಯೂರಪ್ಪ ಕೇವಲ ವೀರಶೈವ ನಾಯಕ ಅಲ್ಲ, ಎಲ್ಲಾ ಸಮುದಾಯದ ನಾಯಕರಾಗಿದ್ದವರು ಅವರು. ಹಿಂದುಳಿದ ವರ್ಗಗಳ ನಾಯಕರಾಗಿದ್ದ ಯಡಿಯೂರಪ್ಪ ರಾಜೀನಾಮೆ ವಿಷಾಧದ ಸಂಗತಿ. ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ದಾವಣಗೆರೆಯಲ್ಲಿ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್ ಎಚ್ಚರಿಕೆ ನೀಡಿದ್ದಾರೆ. ಶೋಷಿತ ಸಮುದಾಯಗಳನ್ನು ಮೇಲೆ ತರಲು ಬಿಎಸ್ವೈ ಬಹಳಷ್ಟು ಶ್ರಮ ವಹಿಸಿದ್ದರು. ಅವರ ರಾಜೀನಾಮೆ ಬೇಸರ ತರಿಸಿದೆ. ಹೈಕಮಾಂಡ್ ಈ ನಿರ್ಧಾರ ವಾಪಾಸ್ ಪಡೆಯಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಬಿಎಸ್ವೈ ರಾಜಿನಾಮೆ ಹಿನ್ನೆಲೆಯಲ್ಲಿ ಶಿಕಾರಿಪುರ ಬಹುತೇಕ ಸ್ಥಬ್ಧವಾಗಿದೆ. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಯಾವುದೇ ಪ್ರತಿಭಟನೆ ಮಾಡಬಾರದು ಎಂದು ಸಿಎಂ ಹೇಳಿದ್ದರು, ಹೀಗಾಗಿ ಸ್ವಯಂ ಪ್ರೇರಿತವಾಗಿ ಅಂಗಡಿಗಳು ಬಂದ್ ಆಗಿವೆ.
ಇನ್ನು ಧಾರವಾಡದಲ್ಲಿ ಬಿಜೆಪಿ ಶಾಸಕ ಅಮೃತ ದೇಸಾಯಿ ಪ್ರತಿಕ್ರಿಯೆ ನೀಡಿದ್ದು ಯಡಿಯೂರಪ್ಪ ಎರಡು ವರ್ಷದಿಂದ ಜನ ಮೆಚ್ಚುವ ಕೆಲಸ ಮಾಡಿದ್ದಾರೆ. ಜನರು ಸಹ ಅಷ್ಟೇ ಗೌರವ ಅವರ ಮೇಲೆ ಇಟ್ಟಿದ್ದಾರೆ. 75 ವರ್ಷ ಮೇಲ್ಪಟ್ಟವರು ಆಡಳಿತದಲ್ಲಿ ಇರಬಾರದು ಅಂತಾ ಪಕ್ಷದ ಅಜೆಂಡಾ ಇದೆ. ಯಡಿಯೂರಪ್ಪ 20 ವರ್ಷದ ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಪ್ರವಾಹಕ್ಕೆ ಹೃದಯಪೂರ್ವಕವಾಗಿ ಸ್ಪಂದಿಸಿದ್ದಾರೆ, ಪಕ್ಷದ ಅಜೆಂಡಾ ಹಿನ್ನೆಲೆ ಗೌರವಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಯಾರು ಸಿಎಂ ರೇಸ್ನಲ್ಲಿ ಇದ್ದಾರೆ ನಮಗೆ ಮಾಹಿತಿ ಇಲ್ಲ. ರಾಜ್ಯ ಕಷ್ಟ ಕಾಲದಲ್ಲಿದೆ, ಜನರ ಮೆಚ್ಚುಗೆ ಗಳಿಸಿ ಸೇವೆ ಸಲ್ಲಿಸುವಂತರನ್ನು ಸಿಎಂ ಮಾಡಬೇಕು…ಮತ್ತೆ ಬಿಜೆಪಿ ಆಡಳಿತಕ್ಕೆ ತರುವಂತವರನ್ನು ಸಿಎಂ ಮಾಡಬೇಕು. ಕಾರ್ಯಕರ್ತರ ಮನಸ್ಥಿತಿ ವರಿಷ್ಠರಿಗೆ ಗೊತ್ತಿರುತ್ತದೆ, ಪಕ್ಷ ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಇದೆ. ಉತ್ತರ ಕರ್ನಾಟಕದಲ್ಲೇ ನಮ್ಮ ಪಕ್ಷಕ್ಕೆ ಹೆಚ್ಚು ಮತ ಬರುತ್ತವೆ, ಹೀಗಾಗಿ ಇಲ್ಲಿನವರಿಗೇ ಕೊಟ್ಟರೆ ಅನುಕೂಲ ಎಂದರು.
ಇನ್ನು ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲೂ ಪರಿಸ್ಥಿತಿ ಭಿನ್ನವಾಗೇನು ಇಲ್ಲ. ಅಭಿಮಾನಿಗಳು ಶಿಕಾರಿಪುರದಲ್ಲಿ ಯಡಿಯೂರಪ್ಪ ಪರ ಘೋಷಣೆ ಕೂಗಿದ್ರು. ಪ್ರತಿಭಟನೆ ಮಾಡದೆ ತಮ್ಮ ನಾಯಕನಿಗೆ ಅಭಿಮಾನಿಗಳು ಬೀಳ್ಕೊಡುಗೆ ನೀಡಿದರು. ಕಾಲ್ನಡಿಗೆಯಲ್ಲಿ ಜಾಥಾ ಹೋಗುವ ಮೂಲಕ ಅಭಿನಂದನೆ ಸಲ್ಲಿಸಿ ಸಿಎಂ ಪರ ಘೋಷಣೆ ಕೂಗಿ ಜೈಕಾರ ಹಾಕಿದ್ರು.
ಇದನ್ನೂ ಓದಿ: BS Yediyurappa Resigns: ಬಿ ಎಸ್ ಯಡಿಯೂರಪ್ಪ ರಾಜೀನಾಮೆ; 2 ವರ್ಷಗಳ ಹಾದಿಯ ಏಳು-ಬೀಳುಗಳು ಸಾಮಾನ್ಯದ್ದಲ್ಲ!
ಈ ಎಲ್ಲಾ ಬೆಳವಣಿಗೆ ಬಗ್ಗೆ ಗದಗದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಲ್ಲರಿಗೂ ಗೊತ್ತಿದ್ದ ವಿಚಾರ. ಯಡಿಯೂರಪ್ಪ ರಾಜೀನಾಮೆ ಕೊಡುವುದರಿಂದ ಅಥವಾ ಇನ್ನೊಬ್ಬ ಮುಖ್ಯಮಂತ್ರಿ ಬರೋದ್ರಿಂದ ರಾಜ್ಯಕ್ಕೆ ಒಳ್ಳೆದಾಗೋದಿಲ್ಲ. ಯಡಿಯೂರಪ್ಪ ಕರ್ನಾಟಕ ಕಂಡಂತ ಒಬ್ಬ ಭ್ರಷ್ಟ ಮುಖ್ಯಮಂತ್ರಿ ಯಾಗಿದ್ದರು, ಇನ್ನೊಬ್ಬ ಬಂದರೂ ಭ್ರಷ್ಟ ಮುಖ್ಯಮಂತ್ರಿಯೇ ಆಗಿರ್ತಾರೆ. ಬಿಜೆಪಿ ಪಕ್ಷವೇ ಭ್ರಷ್ಟ ಪಕ್ಷ, ಬಿಜೆಪಿ ತೊಲಗದೇ ಹೋದರೆ ಈ ರಾಜ್ಯಕ್ಕೆ ಮುಕ್ತಿಯಿಲ್ಲ. ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎನ್ನುವ ಪ್ರಶ್ನೆಗೆ, ನಾನೇನು ಬಿಜೆಪಿ ಅಧ್ಯಕ್ಷನೆ..? ಅದು ಅವರ ಪಕ್ಷಕ್ಕೆ ಸೀಮಿತ… ಮುಂದಿನ ಸಿಎಂ ಆಯ್ಕೆ ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ