ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕದ ಆಟೋ ಚಾಲಕರ ಸಂಘ (Auto Drivers Association) ಪ್ರತಿಭಟನೆಗೆ ಇಳಿದಿದೆ. ರಾಪಿಡೋ ಬೈಕ್ (Rapido Taxi) ಟ್ಯಾಕ್ಸಿ ವಿರುದ್ಧ ರೋಡ್‌ಗಿಳಿಯಲು ನಿರ್ಧರಿಸಿರುವ ಆಟೋ ಚಾಲಕರು (Auto Drivers) ಈಗಾಗಲೇ ಪ್ರತಿಭಟನೆ ಆರಂಭಿಸಿದ್ದು, ಇಂದು ಒಂದು ದಿನ ಸಂಪೂರ್ಣ ಆಟೋ ಸಂಚಾರ ಬಂದ್ ಮಾಡಲು ನಿರ್ಧಾರ ಮಾಡಿದ್ದರೂ ಬೆಂಗಳೂರಿನ (Bengaluru) ಹಲವು ಕಡೆಗಳಲ್ಲಿ ಪ್ರತಿಭಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಿನ್ನೆ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12 ರವರೆಗೆ ಈ ಮುಷ್ಕರ ನಡೆಯಲಿದ್ದು, ಇಂದು ಬೆಳಗ್ಗೆ 11-30ಕ್ಕೆ ಸರಿಯಾಗಿ ಸಿಎಂ ಅವರ ರೇಸ್ ಕೋರ್ಸ್ ನಿವಾಸಕ್ಕೆ ಆಟೋ ಚಾಲಕರು ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಡಲಿರುವ ಚಾಲಕರ ಜಾಥಾದಲ್ಲಿ ಸಾವಿರಾರು ಮಂದಿ ಆಟೋ ಚಾಲಕರು ಭಾಗಿಯಾಗಲಿದ್ದು, ನಗರದ ವಿವಿಧ ಭಾಗಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋ ಬಸ್ತ್‌ಗಳನ್ನು ಕೂಡ ಹೆಚ್ಚಿಸಲಾಗಿದೆ.
ಇದನ್ನೂ ಓದಿ: Autorickshaw Drivers Strike: ಬೆಂಗಳೂರಿಗರೇ ಇಂದು ಆಟೋ ಸಿಗಲ್ಲ ಎಚ್ಚರ ಎಚ್ಚರ! ಚಾಲಕರ ಮುಷ್ಕರಕ್ಕೆ ಮಣಿಯುತ್ತಾ ಸರ್ಕಾರ?
ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಬೆಂಗಳೂರಿನ 21 ಆಟೋ ಚಾಲಕರ ಸಂಘಟನೆಗಳು ಆಟೋ ಮುಷ್ಕರಕ್ಕೆ ನಿರ್ಧಾರ ಮಾಡಿದ್ದು, ಈ ಹಿಂದೆಯೇ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಆಟೋ ಸಂಘಟನೆ ಮುಖಂಡರು ಮೂರು ದಿನಗಳ ಗಡುವು ನೀಡಿದ್ದರು. ನಿನ್ನೆಗೆ ನೀಡಿದ್ದ ಗಡುವು ಕ್ಲೋಸ್ ಆದ ಹಿನ್ನೆಲೆಯಲ್ಲಿ, ಜೊತೆಗೆ ಸರ್ಕಾರ ತಮ್ಮ ಬೇಡಿಕೆಗೆ ಯಾವ ರೀತಿಯಲ್ಲೂ ಸ್ಪಂದಿಸದ ಹಿನ್ನೆಲೆ ಆಟೋ ಚಾಲಕರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಆಟೋ ಚಾಲಕರ ಸಂಘಟನೆಯ ಮುಖಂಡರು ಹೇಳುವ ಪ್ರಕಾರ, ಇಂದು 2 ಲಕ್ಷದ 10 ಸಾವಿರ ಆಟೋಗಳು ಸಂಚಾರ ಬಂದ್ ಮಾಡಲಿದೆ ಎನ್ನಲಾಗಿದೆ.
ಆಟೋ ಸಂಚಾರ ತಡೆದ ಆಟೋ ಚಾಲಕರು
ಇನ್ನು ಆಟೋ ಚಾಲಕರ ಒಳಿತಿಗಾಗಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಭಾಗಿಯಾಗದೆ ಎಂದಿನಂತೆ ಸಂಚಾರ ಮಾಡುತ್ತಿರುವ ಆಟೋ ಚಾಲಕರ ವಿರುದ್ಧ ಸ್ವತಃ ಆಟೋ ಚಾಲಕರೇ ಸಿಡಿದೆದ್ದ ಘಟನೆ ನಡೆದಿದೆ. ಪ್ರತಿಭಟನೆಗೆ ಸೊಪ್ಪು ಹಾಕದೆ ಪ್ರಯಾಣಿಕರನ್ನು ಕರೆದೊಯ್ಯೋ ಆಟೋಗಳ ವಿರುದ್ಧ ಆಟೋ ಸಂಘಟನೆ ಮುಖಂಡರು ಕಿಡಿಕಾರಿದ್ದು, ಹಲವೆಡೆ ಆಟೋ ಸಂಚಾರವನ್ನು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ. ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಆಟೋ ಸಂಚಾರ ನಡೆಸುತ್ತಿದ್ದು, ಇದನ್ನು ಸಂಘಟನೆ ಮುಖಂಡರು ತಡೆದು ಆಟೋ ಓಡಿಸಬೇಡಿ ಎಂದು ಮನವಿ ಮಾಡಿದ್ರು. ಈ ವೇಳೆ ‘ನನ್ನ ಮಗಳಿಗೆ ಇವತ್ತು 1200 ರೂ ಸ್ಕೂಲ್ ಫೀಸ್ ಕಟ್ಟಬೇಕು. ನಾನು ಆಟೋ ಓಡಿಸಲೇಬೇಕು. ಅಷ್ಟು ಬಾಡಿಗೆ ಆದ ಮೇಲೆ ನಾನು ಆಟೋ ಓಡಿಸೋದನ್ನು ನಿಲ್ಲಿಸುತ್ತೇನೆ’ ಎಂದು ಒಬ್ಬ ಆಟೋ ಚಾಲಕ ಹೇಳಿದರು.
ಇದನ್ನೂ ಓದಿ: Tumakuru: ಹಸುಗೂಸಿನ ಮೃತದೇಹ ರವಾನೆಗೆ ಕೊಡಲಿಲ್ಲ ಆ್ಯಂಬುಲೆನ್ಸ್; ಶವ ಕೈಯಲ್ಲಿ ಹಿಡಿದು ಬಸ್ ನಿಲ್ದಾಣದಲ್ಲಿ ತಾಯಿ ಕಣ್ಣೀರು!
ಆಟೋ ಬಂದ್ ಹೆಸರಿನಲ್ಲಿ ಪ್ರಯಾಣಿಕರ ಸುಲಿಗೆ!
ಒಂದೆಡೆ ಆಟೋ ಚಾಲಕರು ಬಂದ್ ನಡೆಸಿದ್ರೆ ಇನ್ನೊಂದೆಡೆ ಅದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಆಟೋ ಚಾಲಕರು ಪ್ರಯಾಣಿಕರ ಹಗಲು ದರೋಡೆಗೆ ಮುಂದಾಗಿದ್ದಾರೆ. ನಗರದ ಹಲವು ಕಡೆಗಳಲ್ಲಿ ಆಟೋಗಳ ಸಂಖ್ಯೆಯೂ ತೀರಾ ವಿರಳ ಆಗಿರೋದ್ರಿಂದ ಪ್ರಯಾಣಿಕರು ಸಂಚಾರಕ್ಕಾಗಿ ಪರದಾಟ ನಡೆಸಿದ್ದಾರೆ. ಹೀಗಾಗಿ ಇದನ್ನೇ ಬಂಡವಾಳವಾಗಿಸಿಕೊಂಡಿರುವ ಆಟೋ ಚಾಲಕರು ಪ್ರಯಾಣಿಕರಿಂದ ಡಬಲ್ ರೇಟ್ ಕೇಳಿ ಪೀಕುತ್ತಿದ್ದಾರೆ. ಪ್ರಯಾಣಿಕರು ದುಪ್ಪಟ್ಟು ದರ ಕೊಡೋಕೆ ಹಿಂದೇಟು ಹಾಕಿದರೂ, ಆಟೋಗಳು ಸಿಗದೆ ಇರೋ ಕಾರಣ ಅನಿವಾರ್ಯವಾಗಿ ಎರಡು ಪಟ್ಟು ಹೆಚ್ಚು ಹಣ ನೀಡಿ ಸಂಚಾರ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಸಾಮಾನ್ಯವಾಗಿ ಮೆಜೆಸ್ಟಿಕ್‌ನಿಂದ ಲಾಲ್‌ಬಾಗ್ 70-80 ರೂಪಾಯಿ ಸಾಮಾನ್ಯ ದಿನಗಳಲ್ಲಿ ಇರುತ್ತೆ. ಆದರೆ ಇಂದು ಕೆಲ ಆಟೋ ಚಾಲಕರು 150-200 ರೂಪಾಯಿ ತನಕ ಪೀಕುತ್ತಿದ್ದಾರೆ.
ಆಟೋ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ!
ನಿನ್ನೆ ರಾತ್ರಿಯಿಂದ ಇಂದು ಮಧ್ಯರಾತ್ರಿಯ ತನಕ ಆಟೋ ಬಂದ್ ಕರೆ ನೀಡಿದ್ದರೂ, ಸಂಪೂರ್ಣವಾಗಿ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ, ಅನೇಕ ಕಡೆ ನಿನ್ನೆ ರಾತ್ರಿಯಿಂದಲೇ ಆಟೋ ಸಂಚಾರ ನಡೆಯುತ್ತಿದೆ. ಎಂದಿನಂತೆ ಆಟೋ ಚಾಲಕರು ಬೆಳಗ್ಗೆ ತರಕಾರಿ, ದಿನಸಿ, ಶಾಲಾಮಕ್ಕಳು, ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ದೃಶ್ಯ ನಗರದ ಹಲವೆಡೆ ಕಂಡು ಬಂತು. ಇನ್ನೊಂದೆಡೆ ‘ಇಂದು ಆಟೋ ಸೇವೆ ನೀಡಿದ್ರೆ ಮುಂದಾಗುವ ಅನಾಹುತಕ್ಕೆ ನಾವು ಹೊಣೆ ಅಲ್ಲ’ ಎಂದು ಆಟೋ ಚಾಲಕರ ಸಂಘಟನೆ ಅಧ್ಯಕ್ಷ ಮಂಜುನಾಥ ಎಚ್ಚರಿಕೆ ನೀಡಿದ್ದರು. ಅದಾಗ್ಯೂ ಆಟೋ ಚಾಲಕರು ಆಟೋ ಓಡಿಸಿದ್ದಾರೆ.
ಬಂದ್‌ಗೆ ಓಲಾ, ಊಬರ್ ಬೆಂಬಲವಿಲ್ಲ!
ಈ ಮಧ್ಯೆ ಆಟೋ ಚಾಲಕರ ಮುಷ್ಕರಕ್ಕೆ ಓಲಾ ಮತ್ತು ಊಬರ್ ಸಂಸ್ಥೆ ಬೆಂಬಲ ನೀಡಿಲ್ಲ. ಈ ಬಗ್ಗೆ ಮಾತನಾಡಿರೋ ಓಲಾ, ಊಬರ್ ಅಸೊಶಿಯೇಶನ್ ಅಧ್ಯಕ್ಷ ತನ್ವೀರ್, ವಾಲೆಂಟೀಯರ್ ಆಗಿ ಮುಷ್ಕರ ಮಾಡೋದಾದ್ರೆ ಮಾಡ್ಲಿ, ಆದ್ರೆ ಯಾರೂ ಕೂಡ ಬಂದ್‌ನಲ್ಲಿ ಭಾಗಿಯಾಗಿಲ್ಲ. ಈಗಾಗಲೇ ಹಲವಾರು ಆಟೋ ಚಾಲಕರು ಲಾಗಿನ್ ಮಾಡಿಕೊಂಡಿದ್ದಾರೆ. ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ