• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಂಗಳೂರಿಗೆ ತೆರಳಲು ಮೂರು ದಿನಗಳಿಂದ ಬಾಣಂತಿ ಪರದಾಟ ; ಮಾನವೀಯತೆ ಮೆರೆದ ಆಟೋ ಚಾಲಕರು

ಬೆಂಗಳೂರಿಗೆ ತೆರಳಲು ಮೂರು ದಿನಗಳಿಂದ ಬಾಣಂತಿ ಪರದಾಟ ; ಮಾನವೀಯತೆ ಮೆರೆದ ಆಟೋ ಚಾಲಕರು

ಬಾಣಂತಿ ಮಹಿಳೆ

ಬಾಣಂತಿ ಮಹಿಳೆ

ಕಣ್ಣೀರು ಹಾಕುತ್ತಾ ಕುಳಿತ ಮಹಿಳೆಗೆ ಬಸ್ ನಿಲ್ದಾಣದ ಬಳಿಯ ಆಟೋ ಚಾಲಕರು ನೆರವಾಗಿದ್ದಾರೆ. ಆಟೋ ಚಾಲಕರು ತಮ್ಮಲ್ಲಿಯೇ ಹಣ ಸಂಗ್ರಹಿಸುವ ಜೊತೆಗೆ ಇತರರಿಂದಲೂ ಹಣ ಸಂಗ್ರಹಿಸಿದ್ದಾರೆ

  • Share this:

ಕಲಬುರ್ಗಿ(ಡಿಸೆಂಬರ್​. 13): ಸಾರಿಗೆ ನೌಕರರ ಮುಷ್ಕರ ಬಾಣಂತಿ ಮಹಿಳೆಗೂ ತಟ್ಟಿದೆ. ಬೆಂಗಳೂರಿಗೆ ತೆರಳಲು ಮಹಾರಾಷ್ಟ್ರದ ಲಾತೂರಿನ ಮಹಿಳೆ ಮೂರು ದಿನಗಳಿಂದ ಪರದಾಡುತ್ತಿದ್ದಾರೆ. 20 ದಿನದ ನವಜಾತ ಶಿಶು ಸೇರಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಕಣ್ಣೀರು ಹಾಕುತ್ತಾ ಕುಳಿತ ಮಹಿಳೆಗೆ ಆಟೋ ಚಾಲಕರು ನೆರವಾಗಿದ್ದಾರೆ. ಕಲಬುರ್ಗಿಯಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಮುಷ್ಕರದಿಂದಾಗಿ ಪ್ರಯಾಣಿಕರ ತೀವ್ರ ಪರದಾಟ ಮುಂದುವರೆದಿದೆ. ಬೆಂಗಳೂರಿಗೆ ತೆರಳಲೆಂದು ಮಹಾರಾಷ್ಟ್ರದ ಲಾತೂರ್ ನಿಂದ ಬಂದ ಬಾಣಂತಿ ಮಹಿಳೆಯೊಬ್ಬರು ಮೂರು ದಿನಗಳಿಂದಲೂ ಬಸ್ ನಿಲ್ದಾಣದಲ್ಲಿ ಪರದಾಡಿದ ಘಟನೆ ನಡೆದಿದೆ. ಕಲಬುರ್ಗಿ ಮೂಲಕ ಬೆಂಗಳೂರಿಗೆ ತೆರಳಲು ಮೊನ್ನೆ ಆಗಮಿಸಿದ್ದ ಸ್ವಾತಿ ಎಂಬ ಮಹಿಳೆ ದಿಢೀರ್ ಸಾರಿಗೆ ಮುಷ್ಕರದಿಂದಾಗಿ ಕಂಗಾಲಾಗಿದ್ದಾರೆ. ಇಪ್ಪತ್ತು ದಿನದ ನವಜಾತ ಶಿಶು ಮತ್ತು ಮೂರು ವರ್ಷದ ಮಗುವಿನೊಂದಿಗೆ ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆದಿದ್ದಾಳೆ. 


ಬಸ್ ಗಳನ್ನು ಇಂದು ಬಿಡಬಹುದು, ನಾಳೆ ಬಿಡಬಹುದೆಂದು ಬಾಣಂತಿ ಲೆಕ್ಕ ಹಾಕುತ್ತಲೇ ಕುಳಿತಿದ್ದಾಳೆ. ಕೈಯಲ್ಲಿದ್ದ ಹಣವೂ ಖರ್ಚಾಗಿ, ಮೂರು ದಿನಗಳಾದರೂ ಬಸ್ ಬಿಡದೇ ಇದ್ದುದರಿಂದ ತನ್ನ ಮಕ್ಕಳೊಂದಿಗೆ ಕಣ್ಣೀರು ಹಾಕುತ್ತಾ ಕುಳಿತಿದ್ದಾಳೆ.


ಗಂಡನ ಮನೆಯಿಂದ ತವರು ಮನೆಗೆ ಹೋಗಲೆಂದು ಕಲಬುರ್ಗಿಗೆ ಬಂದಿದ್ದೆ. ಲಾತೂರ್ ನಿಂದ ನೇರವಾಗಿ ಬೆಂಗಳೂರಿಗೆ ಬಸ್ ಗಳು ಇಲ್ಲದೇ ಇದ್ದುದರಿಂದ ಕಲಬುರ್ಗಿಗೆ ಬಂದಿದ್ದೆ. ಪುಟ್ಟ ಕೂಸಿನೊಂದಿಗೆ ಬಂದು ಕಲಬುರ್ಗಿಯಲ್ಲಿ ಸಿಲುಕಿಕೊಂಡಿದ್ದೇನೆ. ಬೆಂಗಳೂರಿಗೆ ಖಾಸಗಿ ಬಸ್ ಗಳು ಹೋಗುತ್ತಿದ್ದರೂ ದುಬಾರಿ ಟಿಕೇಟ್ ಕೊಟ್ಟು ಹೋಗಲಾರದ ಸ್ಥಿತಿಯಲ್ಲಿದ್ದೇನೆ ಎಂದು ಬಾಣಂತಿ ಅಲವತ್ತುಕೊಂಡಿದ್ದಾರೆ.


ಕಣ್ಣೀರು ಹಾಕುತ್ತಾ ಕುಳಿತ ಮಹಿಳೆಗೆ ಬಸ್ ನಿಲ್ದಾಣದ ಬಳಿಯ ಆಟೋ ಚಾಲಕರು ನೆರವಾಗಿದ್ದಾರೆ. ಆಟೋ ಚಾಲಕರು ತಮ್ಮಲ್ಲಿಯೇ ಹಣ ಸಂಗ್ರಹಿಸುವ ಜೊತೆಗೆ ಇತರರಿಂದಲೂ ಹಣ ಸಂಗ್ರಹಿಸಿದ್ದಾರೆ. ಬೆಂಗಳೂರಿಗೆ ಹೊರಟ ಖಾಸಗಿ ಬಸ್ ಗಳ ದರ ಮೂರು ಪಟ್ಟಾಗಿದ್ದು, ಟಿಕೆಟ್ ಗಾಗಿ ಹಣ ಹೊಂದಿಸಿ ಕೊಡುತ್ತಿದ್ದೇವೆ. ಬಾಣಂತಿಯನ್ನು ತವರೂರಿಗೆ ಕಳುಹಿಸಲು ಎಲ್ಲ ವ್ಯವಸ್ಥೆ ಮಾಡುತ್ತಿರುವುದಾಗಿ ಆಟೋ ಚಾಲಕರು ತಿಳಿಸಿದ್ದಾರೆ.


ಮಹಿಳೆ ಸಂಕಷ್ಟದಲ್ಲಿರುವುದನ್ನು ನೋಡಿ ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಎಂದು ಆಟೋ ಚಾಲಕ ಕುಮಾರ್ ಕಟ್ಟಿಮನಿ ತಿಳಿಸಿದ್ದಾನೆ.


ಇದನ್ನೂ ಓದಿ : ಒಡವೆಗಾಗಿ ಕೆರೆ ನೀರು ಖಾಲಿ ಮಾಡಲು ಮುಂದಾದ ಗ್ರಾಮಸ್ಥರು ; ಅದೇ ಗ್ರಾಮದ ಹೋರಾಟಗಾರನಿಂದ ಉಳಿಯಿತು ಕೆರೆ ನೀರು


ಬಂದ್, ಮುಷ್ಕಕರದಂತಹ ಸಂದರ್ಭದಲ್ಲಿ ಆಟೋ ಚಾಲರು ಸಂದರ್ಭದ ದುರ್ಲಾಭ ಮಾಡಿಕೊಳ್ಳುವುದು ಸಹಜ. ಎರಡು-ಮೂರು ಪಟ್ಟು ಹಣ ವಸೂಲಿ ಮಾಡುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವುದನ್ನು ನೋಡಿದ್ದೇವೆ. ಆದರೆ ಕಲಬುರ್ಗಿಯ ಆಟೋ ಚಾಲಕರು ಮಾತ್ರ ಬಾಣಂತಿಕ ಕಣ್ಣೀರಿಗೆ ಮರುಗಿದ್ದಾರೆ.


ಬಾಣಂತಿಗೆ ಮತ್ತು ಮಗುವಿಗೆ ಊಟದ ವ್ಯವಸ್ಥೆ ಮಾಡುವ ಜೊತೆಗೆ ಬೆಂಗಳೂರಿಗೆ ತೆರಳಲು ಬಸ್ ಟಿಕೆಟ್ ಗೆ ಹಣವನ್ನೂ ಹೊಂದಿಸಿಕೊಟ್ಟಿದ್ದಾರೆ. ಆಟೋ ಚಾಲಕರ ಸಹಕಾರಕ್ಕೆ ಸ್ವಾತಿ ಧನ್ಯವಾದ ತಳಿಸಿದ್ದಾರೆ. ಆಟೋ ಚಾಲಕರ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Published by:G Hareeshkumar
First published: