Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18-kannada
Updated:August 12, 2019, 6:18 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
Seema.R | news18-kannada
Updated: August 12, 2019, 6:18 PM IST
1. ರಾಜ್ಯದಲ್ಲಿ ಇನ್ನು ನಾಲ್ಕು ದಿನ ಮಳೆ

ಈಗಾಗಲೇ ಭಾರೀ ಮಳೆ, ಪ್ರವಾಹದಲ್ಲಿ ತತ್ತರಿಸಿರುವ ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನ ಕೂಡ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಮಲೆನಾಡು ಸೇರಿದಂತೆ ಹಲವು ಕಡೆ ಮಳೆಯಾಗಲಿದ್ದು, ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ರೆಡ್​ ಆಲರ್ಟ್​ ಘೋಷಣೆ ಮಾಡಲಾಗುವುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನೈರುತ್ಯ ಮಾರುತಗಳು ದಟ್ಟ ಮೋಡ ಸೃಷ್ಟಿಸಲಿದ್ದು, ಭಾರೀ ಗಾಳಿ ಉಂಟಾಗಲಿದೆ. ಈ ಮಳೆ ಮಾರುತಗಳು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ರಾಜ್ಯದ ಕೇಂದ್ರ ಭಾಗಗಳಲ್ಲಿ ಹಾನಿಯುಂಟು ಮಾಡಲಿದೆ ಎಂದಿದ್ದಾರೆ.

2. ಸಂತ್ರಸ್ತರ ನಿಧಿಗೆ 2 ಲಕ್ಷ ನೆರವು ನೀಡಿದ ದೇವೇಗೌಡ

ಹಿಂದೆಂದೂ ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ ಸಿಲುಕಿದ ಉತ್ತರ ಕರ್ನಾಟಕ ಅಕ್ಷರಶಃ ನಲುಗಿದೆ. ಇನ್ನೊಂದೆಡೆ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಅತೀವ ಮಳೆಯಾಗಿ ಪ್ರವಾಹ ಉಂಟಾಗಿದೆ. ಮನೆ-ಮಠ ಸಂಪೂರ್ಣ ನಾಶವಾಗಿದ್ದು, ನೆರೆಗೆ ಸಿಕ್ಕ ಜನರ ಬದುಕು ಈಗ ಬೀದಿಗೆ ಬಿದ್ದಿದೆ. ಪ್ರವಾಹಪೀಡಿತ ಜನ ಹಾಗೂ ಪ್ರದೇಶಗಳು ಚೇತರಿಸಿಕೊಳ್ಳಲು ಸಾಕಷ್ಟು ಸಮಯದ ಜೊತೆಗೆ ಅಗತ್ಯ ನೆರವು ಬೇಕಿದೆ. ಅನೇಕ ವ್ಯಕ್ತಿಗಳು, ಸಂಘ ಸಂಸ್ಥೆಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ಧಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು 2 ಲಕ್ಷ ರೂ ನೆರವು ನೀಡಿದ್ಧಾರೆ. ಇದೇ ವಿಷಯವಾಗಿ ಇಂದು ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್​.ಡಿ. ದೇವೇಗೌಡ,  "ನನಗೆ ಸದ್ಯ ಯಾವುದೇ ಸಂಬಳ ಬರುತ್ತಿಲ್ಲ. ನಾನು ಯಾವುದೇ ಪಿಂಚಣಿ ತೆಗೆದುಕೊಳ್ಳುತ್ತಿಲ್ಲ. ಸದ್ಯ ನನ್ನ ಬ್ಯಾಂಕ್ ಅಕೌಂಟ್​​ನಲ್ಲಿ 24 ಲಕ್ಷ ಇರಬಹುದು. ನನ್ನ ಬ್ಯಾಂಕ್ ಖಾತೆಯಿಂದ ಸಿಎಂ ಪರಿಹಾರ ನಿಧಿಗೆ ಎರಡು ಲಕ್ಷ ಕೊಟ್ಟಿದ್ದೇನೆ," ಎಂದರು.

3.ರಾಜ್ಯದಲ್ಲಿ ಪ್ರವಾಹಕ್ಕೆ 42 ಮಂದಿ ಸಾವು

ರಾಜ್ಯದಲ್ಲಿ ಈ ಬಾರಿಯಾದ ಅತಿವೃಷ್ಠಿಗೆ ಜನರು ನಲುಗಿ ಹೋಗಿದ್ದಾರೆ. ಕಂಡರಿಯದ ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ಮಂದಿ  ಬೆಚ್ಚಿಬಿದ್ದಿದ್ದಾರೆ. ಒಂದು ತಿಂಗಳ ಹಿಂದೆ ನೀರಿಲ್ಲದ ಸಂಕಟ ಪಟ್ಟವರು ಈಗ ನೀರಿನಿಂದಲೇ ಜೀವನ ಹೋಯಿತು ಎಂದು ಕಣ್ಣೀರಿಟ್ಟಿದ್ದಾರೆ. ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರವಾಹಕ್ಕೆ ಅಪಾರ ಸಾವು-ನೋವು ಸಂಭವಿಸಿದ್ದು, ಜನ-ಜಾನುವಾರುಗಳ ಸಾವಿನ ಸಂಖ್ಯೆ ಎರುತ್ತಲೆ ಇದೆ. ಪ್ರವಾಹದಿಂದ 42 ಮಂದಿ ಸಾವನ್ನಪ್ಪಿದ್ದು, 12 ಮಂದಿ ಕಣ್ಮರೆಯಾಗಿದ್ದಾರೆ. 548 ಜಾನುವಾರುಗಳು ಸಾವನ್ನಪ್ಪಿದ್ದು, 86 ತಾಲೂಕು ಪ್ರವಾಹಕ್ಕೆ ಒಳಗಾಗಿದ್ದು, 2694 ಗ್ರಾಮ ಕೊಚ್ಚಿ ಹೋಗಿದೆ.

4. ವಿಶ್ವವಿಖ್ಯಾತ ಹಂಪಿ ಜಲಾವೃತ
Loading...

ಒಂದೆಡೆ ಕೃಷ್ಣೆಯ ಒಡಲಲ್ಲಿ ಪ್ರವಾಹ ತಣ್ಣಗಾಗುತ್ತಿರುವ ಇದೇ ಸಂದರ್ಭದಲ್ಲಿ ತುಂಗಭದ್ರಾ ಬೋರ್ಗರೆಯುತ್ತಿದ್ದು, ವಿಶ್ವಪ್ರಸಿದ್ಧ ಹಂಪಿ ಸ್ಮಾರಕಗಳು ಹಾಗೂ ದೇವಾಲಯಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ. ಮಲೆನಾಡಿನಲ್ಲಿ ಕಳೆದ 10 ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ತುಂಗಾ ಹಾಗೂ ಭದ್ರಾ ಎರಡೂ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಹೊಸಪೇಟೆಯ ತುಂಗಭದ್ರಾ ಜಲಾಶಯ ಭಾನುವಾರವೇ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಹೆಚ್ಚುವರಿ ನೀರನ್ನು ನಿನ್ನೆ ಸಂಜೆಯಿಂದಲೆ ಅಣೆಕಟ್ಟೆಯ ಎಲ್ಲಾ ಗೇಟುಗಳನ್ನು ತೆಗೆದು ಹೊರಬಿಡಲಾಗುತ್ತಿದೆ. ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರನ್ನು ಹೊರಹರಿಸಲಾಗಿದ್ದು, ಪರಿಣಾಮ ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳು, ದೇವಾಲಯಗಳ ಜೊತೆಗೆ ಜನವಸತಿ ಪ್ರದೇಶಗಳು ಸಂಪೂರ್ಣವಾಗಿ ನೀರುಪಾಲಾಗಿವೆ.

5. ಸೆಪ್ಟೆಂಬರ್​ನಲ್ಲಿ ಜಿಯೋ ಫೈಬರ್​ ಲೋಕಾರ್ಪಣೆ

 ಭಾರತ ನವಭಾರತವಾಗಿ ಬದಲಾಗಿದೆ. ಹಾಗೆಯೇ ರಿಲಾಯನ್ಸ್​ ಕೂಡ ನವ ರಿಲಾಯನ್ಸ್​ ಆಗಿ ಬದಲಾಗಲಿದೆ ಎಂದು ರಿಲಾಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಅಧ್ಯಕ್ಷ ಮುಖೇಶ್​ ಅಂಬಾನಿ ಅವರು ಹೇಳಿದರು.ಮುಂಬೈನಲ್ಲಿ ಇಂದು ನಡೆದ ರಿಲಾಯನ್ಸ್​ ಇಂಡಸ್ಟ್ರಿಸ್​ ಲಿಮಿಟೆಡ್​ನ 42ನೇ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದ ಮುಖೇಶ್​ ಅಂಬಾನಿ, ನಮ್ಮ ಪ್ರಧಾನಿ ಅವರು 2022ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್​ ಡಾಲರ್​ಗೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಆದರೆ, ನಾನು ಭಾರತ 2030ರ ವೇಳೆಗೆ 10 ಟ್ರಿಲಿಯನ್​ ಡಾಲರ್​ ಆರ್ಥಿಕತೆ ತಲುಪಬೇಕು ಎಂಬುದನ್ನು ನಿರೀಕ್ಷಿಸುತ್ತೇನೆ. ರಿಲಾಯನ್ಸ್​ ಇಂಡಸ್ಟ್ರಿಸ್​ ಲಿಮಿಟೆಡ್ ಕಳೆದ ಆರ್ಥಿಕ ವರ್ಷದಲ್ಲಿ​ 67 ಸಾವಿರ ಕೋಟಿ ಜಿಎಸ್​ಟಿ ಪಾವತಿಸಿರುವ ಅತಿದೊಡ್ಡ ಸಂಸ್ಥೆಯಾಗಿದೆ. ಕೆಲವು ವಲಯಗಳಲ್ಲಿನ ಆರ್ಥಿಕತೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಕೇವಲ ತಾತ್ಕಾಲಿಕವಷ್ಟೇ. ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಹಳ ಪ್ರಬಲವಾಗಿವೆ. ಹೆಚ್ಚು ಹೆಚ್ಚು ವ್ಯವಹಾರಗಳಿಗೆ ಭದ್ರಬುನಾದಿ ಸ್ಥಿರ ಸರ್ಕಾರದಿಂದ ಸಾಧ್ಯವಾಗಲಿದೆ ಎಂದು ಹೇಳಿದರು

6. ಚೀನಾ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ ಸಚಿವ ಜೈ ಶಂಕರ್

ಇಡೀ ಜಗತ್ತು ಇಂದು ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುತ್ತಿರು ಸಮಯದಲ್ಲಿ ಭಾರತ-ಚೀನಾ ನಡುವಿನ ಸಂಬಂಧ ಸ್ಥಿರತೆಯನ್ನು ಕಾಯ್ದುಕೊಳ್ಳುವಂತಿರಬೇಕು ಎಂದು ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಭಾನುವಾರ ಚೀನಾಗೆ ತೆರಳಿದ್ದ ಜೈಶಂಕರ್ ಚೀನಾದ ಉನ್ನತ ನಾಯಕರು ವಾಸಿಸುವ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರ ವಸತಿ ಸಂಕೀರ್ಣದಲ್ಲಿ ಉಪಾಧ್ಯಕ್ಷ ವಾಂಗ್ ಕಿಶನ್ ಅವರನ್ನು ಭೇಟಿಯಾಗಿದ್ದರು. ನಂತರ ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ನಿಯೋಗ ಮಟ್ಟದ ಸಭೆ ನಡೆಸಿದ್ದರು. ಸಭೆಯಲ್ಲಿ ಮಾತನಾಡಿದ ಜೈಶಂಕರ್, “ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ವುಹಾನ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಹಾಗೂ ಚೀನಾ ಪ್ರಧಾನಿ ಪಾಲ್ಗೊಂಡು ಒಮ್ಮತದ ನಿಲುವು ತಳೆದ ನಂತರ ನಾನು ಚೀನಾ ಆಗಮಿಸಿದ್ದು ನನಗೆ ಸಂತೋಷವನ್ನುಂಟು ಮಾಡುತ್ತಿದೆ. ಎರಡು ವರ್ಷಗಳಿಂದ ಭಾರತ ಮತ್ತು ಚೀನಾ ಒಮ್ಮತದ ಅಭಿಪ್ರಾಯವನ್ನು ತಳೆಯುತ್ತಿದೆ. ಇಡೀ ಜಗತ್ತು ಅನಿಶ್ಚಿತವಾಗಿರುವ ಸಮಯದಲ್ಲಿ ನಮ್ಮ ಸಂಬಂಧಗಳು ಸ್ಥಿರತೆಯ ಅಂಶವಾಗಿರಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

7. ದೇಶದೆಲ್ಲೆಡೆ ಈದ್​ ಸಂಭ್ರಮ

ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್​ ​ಹಬ್ಬವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಜ್ಯದಲ್ಲು ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಪರಸ್ಪರ ಶುಭಾಶಯ ಕೋರಿದ್ದಾರೆ.ಈ ಪವಿತ್ರ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸೇರಿ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ. 'ಪ್ರೀತಿ, ಭ್ರಾತೃತ್ವ ಮತ್ತು ಮಾನವೀಯ ಸೇವೆಯನ್ನು ಈದ್‌ ಸಂಕೇತಿಸುತ್ತದೆ. ಈ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಸಾರ್ವತ್ರಿಕ ಮೌಲ್ಯಗಳಿಗೆ ನಾವು ಬದ್ಧರಾಗಿರೋಣ' ಎಂದು ರಾಷ್ಟ್ರಪತಿ ಕೋವಿಂದ್ ಶುಭ ಹಾರೈಸಿದ್ದಾರೆ.

8. ಕೇರಳ ಪ್ರವಾಹ: 78ಕ್ಕೇರಿದ ಸಾವಿನ ಸಂಖ್ಯೆ

ಕೇರಳದಲ್ಲಿನ ಪ್ರವಾಹಕ್ಕೆ ಸಾವಿನ ಸಂಖ್ಯೆ 78ಕ್ಕೆ ಏರಿದ್ದು, 58ಜನರು ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ಮನೆ ಮಠ ಕಳೆದುಕೊಂಡ 300,000 ಜನರು ಸಂತ್ರಸ್ತರ ಶಿಬಿರ ಸೇರಿದ್ದಾರೆ. ಕಳೆದ ಕೆಲವು ದಿನಗಳಿಂದ ಮಳೆ ರುದ್ರನರ್ತನ ತೋರಿದ್ದು, ಕಳೆದ ವರ್ಷದ ಪ್ರವಾಹದ ನೆನಪು ಮರುಕಳಿಸುವಂತೆ ಮಾಡಿತ್ತು. ಸೋಮವಾರ ರಾಜ್ಯದಲ್ಲಿ ಯಾವುದೇ ರೆಡ್​ ಆಲರ್ಟ್​ ಘೋಷಣೆಯಾಗಿಲ್ಲ. ಕೇಂದ್ರದಿಂದ ರಾಜ್ಯದ ಸಂತ್ರಸ್ತರಿಗೆ ಅವಶ್ಯಕವಾದ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ಗುಡ್ಡ ಕುಸಿತದಿಂದ ಸಂಪರ್ಕ ಕಳೆದುಕೊಂಡಿರುವ ರಸ್ತೆಯನ್ನು ಸರಿಪಡಿಸಲು ಇನ್ನು ಎರಡು ದಿನ ಸಮಯ ಬೇಕಾಗಲಿದೆ ಎನ್ನಲಾಗಿದೆ

9. ಒಂದೇ ಪಂದ್ಯದಲ್ಲಿ ದಾಖಲೆ ಬರೆದ ಕೊಹ್ಲಿ

ಕ್ವೀನ್ಸ್​ ಪಾರ್ಕ್​ ಓವಲ್ ಮೈದಾನದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನಾಯಕ ವಿರಾಟ್ ಕೊಹ್ಲಿ 42ನೇ ಶತಕ ಸಿಡಿಸಿ ಮಿಂಚಿದರು. ಇದರ ಜೊತೆಗೆ ಕೊಹ್ಲಿ ಒಂದದಿಷ್ಟು ದಾಖಲೆಯನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಒಟ್ಟು 11366 ರನ್ ಕಲೆಹಾಕುವ ಮೂಲಕ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ. ಗಂಗೂಲಿ ಏಕದಿನ ಕ್ರಿಕೆಟ್​ನಲ್ಲಿ 11363 ರನ್ ಬಾರಿಸಿದ್ದರು. ಸದ್ಯ ಕೊಹ್ಲಿ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಮೊದಲ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಇದ್ದು 18426 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಕೊಹ್ಲಿ 8ನೇ ಸ್ಥಾನಕ್ಕೇರಿದ್ದಾರೆ.

10. ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಾಕಿಂಗ್​ ಜೋಡಿ

ಸ್ಯಾಂಡಲ್​ವುಡ್​ನ ರಾಕಿಂಗ್​ ದಂಪತಿ ರಾಧಿಕಾ ಹಾಗೂ ಯಶ್​ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದು ಗೊತ್ತೇ ಇದೆ. ಯಶ್​ 'ಕೆ.ಜಿ.ಎಫ್​ ಚಾಪ್ಟರ್​ 2' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಕಿಂಗ್​ ಸ್ಟಾರ್​ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಹೆಂಡತಿ ಹಾಗೂ ಮಗುವಿನ ವಿಷಯ ಬಂದಾಗ ಅವರಿಗೂ ಸಮಯ ಕೊಡುತ್ತಾರೆ. ಯಶ್​-ರಾಧಿಕಾರ ನಿಶ್ಚಿತಾರ್ಥವಾಗಿ ಇಂದಿಗೆ ಬರೋಬ್ಬರಿಗೆ ಎರಡು ವರ್ಷ. ಈ ಖುಷಿಯನ್ನು ರಾಕಿಂಗ್​ ದಂಪತಿ ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಯಶ್​-ರಾಧಿಕಾ ಹಾಡೊಂದಕ್ಕೆ ಸಖತ್ ಸ್ಟೆಪ್​ ಹಾಕಿದ್ದು, ಆ ವಿಡಿಯೋ ಈಗ ವೈರಲ್​ ಆಗಿದೆ
First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...