Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:August 7, 2019, 6:45 PM IST
Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
G Hareeshkumar | news18
Updated: August 7, 2019, 6:45 PM IST
1.ಬಾರದ ಲೋಕದತ್ತ ಬಿಜೆಪಿ ಕಟ್ಟಾಳು; ಸರ್ಕಾರಿ ಗೌರವದೊಂದಿಗೆ ಸುಷ್ಮಾ ಸ್ವರಾಜ್​​ ಅಂತ್ಯಕ್ರಿಯೆ

ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ಶಾಂತ ರೀತಿಯಲ್ಲೇ ಮುಗಿದಿದೆ. ಇಂದು ನಗರದ ಲೋಧಿ ಚಿತಾಗಾರದಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಯನ್ನು ಸುಷ್ಮಾರ ಪತಿ ಸ್ವರಾಜ್ ಕೌಶಲ್ ನೆರವೇರಿಸಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ ಬಿಜೆಪಿ ಹಿರಿಯ ನಾಯಕಿಯ ಅಂತ್ಯಕ್ರಿಯೆ ನಡೆಸಲಾಗಿದೆ. ಅಂತ್ಯಕ್ರಿಯೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಕೇಂದ್ರ ಸಚಿವರು, ವಿರೋಧ ಪಕ್ಷದ ನಾಯಕರು, ಹಲವು ದೇಶಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇತ್ತೀಚೆಗೆ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಮಂಗಳವಾರ ರಾತ್ರಿಯೇ ಅವರ ಆರೋಗ್ಯ ದಿಢೀರ್‌ ಏರುಪೇರಾಗಿತ್ತು. ಹೀಗಾಗಿ ಸುಷ್ಮರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ(ಬುಧವಾರ) ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಉತ್ತಮ ಸಂಸದೀಯ ಪಟುವಾಗಿ ಉತ್ತಮ ಕೆಲಸ ಮಾಡುತ್ತಿದ್ದ ಇವರ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿದಿದೆ.

2.ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಿದಾಯ ಸಲ್ಲಿಸಿದ ಮಗಳು ಮತ್ತು ಪತಿ!

ಬುಧವಾರ ಬಿಜೆಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಅಕ್ಷರಶಃ ಕಣ್ಣೀರಿನ ಕೋಡಿ ಹರಿದಿತ್ತು. ಭಾರತ ಸರ್ಕಾರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಕಾಲಿಕ ಮರಣ ಎಲ್ಲರನ್ನೂ ಶೋಕ ಸಾಗರದಲ್ಲಿ ಮುಳುಗಿಸಿತ್ತು. ಭಾವೋದ್ರಿಕ್ತ ಸೆಲ್ಯೂಟ್ ಮಾಡುವ ಮೂಲಕ ಸುಷ್ಮಾ ಸ್ವರಾಜ್ ಅವರ ಮಗಳು ಬಾನ್ಸುರಿ ಸ್ವರಾಜ್ ಹಾಗೂ ಪತಿ ಸ್ವರಾಜ್ ಕುಶಾಲ್ ತಮ್ಮ ನೆಚ್ಚಿನ ವ್ಯಕ್ತಿತ್ವಕ್ಕೆ ಕೊನೆಯ ಹೃದಯಸ್ಪರ್ಶಿ ವಿದಾಯವನ್ನು ಸಲ್ಲಿಸಿದರು. ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಸುಷ್ಮಾ ಸ್ವರಾಜ್ ಕೊನೆಯುಸಿರೆಳೆದಿದ್ದರು. ಇಂದು ಅವರ ಪಾರ್ಥೀವ ಶರೀರವನ್ನು ದೀನ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇರಿಸಲಾಗಿತ್ತು. ಈ ವೇಳೆ ವಿವಿಧ ಪಕ್ಷದ ನಾಯಕರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಬಿಜೆಪಿ ನಾಯಕರು ತಮ್ಮ ನೆಚ್ಚಿನ ನಾಯಕಿಗೆ ಪಕ್ಷದ ಸಂಪ್ರದಾಯದಂತೆ ಕೊನೆಯ ವಿದಾಯ ಸಲ್ಲಿಸಿದರು. ಅಲ್ಲದೆ ಸರ್ಕಾರಿ ಗೌರವವನ್ನೂ ಸಲ್ಲಿಸಲಾಯಿತು.

3.Reserve Bank Of India: ಸತತ ನಾಲ್ಕನೇ ಬಾರಿ ರೆಪೋ ದರ ಇಳಿಸಿದ ಆರ್​ಬಿಐ

ಆರ್ಥಿಕ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು 35 ಮೂಲಾಂಕಗಳಷ್ಟು ಇಳಿಕೆ ಮಾಡಿದೆ. ಇದರೊಂದಿಗೆ ಆರ್​ಬಿಐನ ರೆಪೋ ದರ 5.40 ಪ್ರತಿಶತಕ್ಕೆ ಇಳಿಕೆಯಾಗಿದೆ. ಹಾಗೆಯೇ, ರಿವರ್ಸ್ ರೆಪೋ ದರವನ್ನು ಶೇ. 5.15ಕ್ಕೆ ನಿಗದಿ ಮಾಡಿದೆ. ಇವತ್ತು ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಆರ್​ಬಿಐ ಈ ನಿರ್ಧಾರ ತೆಗೆದುಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು ಇಳಿಕೆ ಮಾಡುತ್ತಿರುವುದು ಇದು ಸತತ ನಾಲ್ಕನೇ ಬಾರಿಯಾಗಿದೆ. ಒಟ್ಟಾರೆಯಾಗಿ 110 ಬೇಸಿಸ್ ಪಾಯಿಂಟ್​ಗಳಷ್ಟು ಇಳಿಕೆಯಾದಂತಾಗಿದೆ. ಕುಸಿಯುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಆರ್​ಬಿಐ ರೆಪೋ ದರ 25 ಬೇಸಿಸ್ ಪಾಯಿಂಟ್​ಗಳಷ್ಟು ಇಳಿಕೆ ಮಾಡಬಹುದೆಂಬ ನಿರೀಕ್ಷೆಗಳಿದ್ದವು. ಆರು ಸದಸ್ಯರಿರುವ ಎಂಪಿಸಿ ಕೂಡ ಇದೇ ಸಲಹೆ ನೀಡಿತ್ತು. ಆದರೆ, ಆರ್ಥಿಕತೆಗೆ ಪುಷ್ಟಿ ನೀಡಲು ಇದು ಸಾಕಾಗುವುದಿಲ್ಲವೆಂದು ಭಾವಿಸಿ 35 ಬೇಸಿಸ್ ಪಾಯಿಂಟ್​ನಷ್ಟು ಇಳಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ

4.ಪ್ರವಾಹ ಹಿನ್ನೆಲೆ ಸಿಎಂ ದೆಹಲಿ ಪ್ರವಾಸ ಮೊಟಕು; ನೆನೆಗುದಿಗೆ ಬಿದ್ದ ಸಂಪುಟ ರಚನೆ
Loading...

ಬಹುದಿನಗಳಿಂದ ನಿರೀಕ್ಷಿಸಿದ್ದ ಸಚಿವ ಸಂಪುಟ ರಚನೆಗೆ ಈ ವಾರದಲ್ಲಿ ಹೈ ಕಮಾಂಡ್​ನಿಂದ ಅಂಕಿತ ಸಿಗಬಹುದೆಂಬ ವಿಶ್ವಾಸ ಮತ್ತೆ ಹುಸಿಯಾಗಿದೆ. ಸುಷ್ಮಾ ಸ್ವರಾಜ್​ ಅಗಲಿಕೆ ಜೊತೆ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಹಿನ್ನೆಲೆ ಸಿಎಂ ಬಿಎಸ್​ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು, ಸಂಪುಟ ರಚನೆ ಕಸರತ್ತು ಇನ್ನೊಂದು ವಾರ ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಏಕವ್ಯಕ್ತಿ ಆಡಳಿತ ನಡೆಸುತ್ತಿರುವ ಸಿಎಂ ಬಿಎಸ್​ ಯಡಿಯೂರಪ್ಪ ನಡೆಗೆ ವಿಪಕ್ಷಗಳು ಅಕ್ಷೇಪ ವ್ಯಕ್ತಪಡಿಸಿವೆ. ಹೈ ಕಮಾಂಡ್​ ನಿರ್ಧಾರದ ಹೊರತಾಗಿ ಬಿಎಸ್​ವೈ ಸಂಪುಟ ವಿಸ್ತರಣೆ ಅಸಾಧ್ಯವಾಗಿದೆ.

5.ಕಾಶ್ಮೀರದಲ್ಲಿ ಭುಗಿಲೆದ್ದ ಪ್ರತಿಭಟನೆ; ಒಬ್ಬನ ಸಾವು; ಆರು ಮಂದಿಗೆ ಗಾಯ

ಜಮ್ಮು-ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಣಿವೆ ರಾಜ್ಯದಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿವೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಹಲವು ಕಾಶ್ಮೀರಿಗಳು ರಸ್ತೆಗಳಿಗೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಒಬ್ಬ ಪ್ರತಿಭಟನಾಕಾರ ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ಧಾರೆ ಎಂದು ಎಎಫ್​ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಶ್ರೀನಗರದಲ್ಲಿ ಬುಧವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸುವ ವೇಳೆ ಸಾವು ನೋವು ಘಟಿಸಿವೆ. ಕರ್ಫ್ಯೂ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಿದ ಜನರ ಗುಂಪನ್ನು ಚದುರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಪೊಲೀಸರ ಪ್ರಕಾರ, ತಪ್ಪಿಸಿಕೊಳ್ಳಲು ಹೋದ ಒಬ್ಬ ಪ್ರತಿಭಟನಾಕಾರ ಝೀಲಂ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆನ್ನಲಾಗಿದೆ.

6.ತುಮಕೂರಿನಲ್ಲಿ ನಾನು ಸೋತಿದ್ದು ಒಳ್ಳೆಯದೇ ಆಯಿತು: ದೇವೇಗೌಡ

ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ನಾನು ಯಾರನ್ನು ಹೊಣೆ ಮಾಡುವುದಿಲ್ಲ. ನಾನು ಸೋತಿದ್ದು ಒಳ್ಳೆಯದೇ ಆಯಿತು. ಮತ್ತೆ ಕೆಚ್ಚೆದೆಯಿಂದ ಹೋರಾಡಿ ಪಕ್ಷ ಸಂಘಟನೆ ಮಾಡುವೆ. ನನ್ನ ಸೋಲಿಸಿದ ಪುಣ್ಯಾತ್ಮರಿಗೆ ಒಳ್ಳೆಯದಾಗಲಿ ಎಂದು ಜೆಡಿಎಸ್​ ವರಿಷ್ಠ ದೇವೇಗೌಡ ಗುಡುಗಿದ್ದಾರೆ. ಮೈತ್ರಿ ಸರ್ಕಾರದ ಪತನದ ಬಳಿಕ ಪಕ್ಷ ಸಂಘಟನೆಗಾಗಿ ಮುಂದಾಗಿರುವ ಜೆಡಿಎಸ್  ಇಂದು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿತು. ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್​ ಜೊತೆ ಅಧಿಕಾರ ಹೋಗಲು ಯಾರೂ ಹೊಣೆ ಅಲ್ಲ. ತಪ್ಪು ನಮ್ಮಲ್ಲೇ ಇರಬಹುದು.  ಯಾವಾಗ ಚುನಾವಣೆ ಎದುರಾಗಲಿದೆ ಎಂಬುದು ನಮ್ಮ ಕೈಯಲ್ಲಿ ಇಲ್ಲ. ಸರ್ಕಾರ ಮೂರುವರೆ ವರ್ಷ ಅಧಿಕಾರ ಮಾಡಿದ್ರೂ ಚಿಂತೆಯಿಲ್ಲ. ನಾವು ಪಕ್ಷ ಸಂಘಟನೆ ಮಾಡಿ ಹೋರಾಟ ನಡೆಸಬೇಕಿದೆ ಎಂದರು.

7.ಪ್ರವಾಹಕ್ಕೆ ಉತ್ತರಕರ್ನಾಟಕ ತತ್ತರ: ಜಲಾಶಯಗಳು ಭರ್ತಿ; ಅಪಾರ ಪ್ರಮಾಣದ ನೀರು ಹೊರಕ್ಕೆ

ಮಹಾರಾಷ್ಟ್ರದ ಮಳೆಯಿಂದಾಗಿ  ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನದಿಗಳು ಉಕ್ಕಿಹರಿಯುತ್ತಿವೆ. ಜಲಾಶಯಗಳು ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ರಾಯಚೂರಿನಲ್ಲಿ  ಕೃಷ್ಣಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ದೇವದುರ್ಗದ ಕೊಪ್ಪರ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಮುಳುಗಡೆಯಾಗಿದೆ. ಗ್ರಾಮದ ಮನೆಗಳಿಗೂ ನೀರು ನುಗ್ಗುವ ಭೀತಿ ಎದುರಾಗಿದ್ದು, ಜನರು ಸುರಕ್ಷಿತ ಸ್ಥಳಕ್ಕೆ ಎನ್​ಡಿಆರ್​ಎಫ್​ ಸ್ಥಳಾಂತರ ಮಾಡುವ ಕಾರ್ಯ ನಡೆಸುತ್ತಿದ್ದಾರೆ. ಈಗಾಗಲೇ ನಾರಾಯಣಪುರ ಡ್ಯಾಂ ಭರ್ತಿಯಾಗಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಲೆ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ 4 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗಿದೆ.

8.ಇನ್ನೂ 3 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಮತ್ತೆ ಮರುಕಳಿಸುತ್ತಾ ಮಹಾಪ್ರವಾಹ?

ರಾಜ್ಯದಲ್ಲಿ ಕಳೆದ 2 ವಾರಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕೊಡಗಿನಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಬರದ ಜಿಲ್ಲೆಗಳಾದ ಬಾಗಲಕೋಟೆ, ರಾಯಚೂರು, ಬೆಳಗಾವಿ, ವಿಜಯಪುರ, ಗದಗದಲ್ಲಿ ಈ ಬಾರಿ ಅತಿಯಾದ ಮಳೆಯಾಗುತ್ತಿದ್ದು, ನೆರೆಯ ರಾಜ್ಯ ಮಹಾರಾಷ್ಟ್ರದಲ್ಲೂ ಮಳೆ ಹೆಚ್ಚುತ್ತಲೇ ಇರುವುದರಿಂದ ಕೃಷ್ಣಾ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿದೆ. ನಿನ್ನೆ ಬೆಳಗ್ಗೆಯಿಂದ ಇಂದು ಬೆಳಗ್ಗೆವರೆಗೆ ಅತ್ಯಧಿಕ 369.5 ಮಿ.ಮೀ. ಮಳೆ ದಾಖಲಾಗಿದೆ. ಎರಡು ದಿನಗಳಿಂದ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಇಂದು ಕೂಡ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ಮೂರು ದಿನಗಳ ಕಾಲ ಇದೇ ರೀತಿಯ ಮಳೆ ಉಂಟಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.

9.ಸೈನ್ಸ್​ ಫಿಕ್ಷನ್​ ಸಿನಿಮಾದಲ್ಲಿ ಹೃತಿಕ್​ ಜಾಗಕ್ಕೆ ಶಾರುಖ್​ ಖಾನ್​..!

ಬಾಲಿವುಡ್​ ಕಿಂಗ್ ಖಾನ್​ ಶಾರುಖ್​ ಅಭಿನಯದ ಕಡೆಯ ಸಿನಿಮಾ 'ಝೋರೊ' ಬಾಕ್ಸಾಫಿಸ್​ನಲ್ಲಿ ಸದ್ದಿಲ್ಲದೆ ಹೋಗಿತ್ತು. ಇದಾದ ನಂತರ ಶಾರುಖ್​ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಪ್ರಕಟಣೆ ಮಾಡಿಲ್ಲ. ಆದರೆ ಸದ್ಯ ಬಿ-ಟೌನ್​ ಅಂಗಳದಲ್ಲಿ ಕಿಂಗ್​ ಖಾನ್​ ಅಭಿನಯಿಸಲಿರುವ ಹೊಸ ಚಿತ್ರದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಹೌದು, ಪಿಂಕ್​ ವಿಲ್ಲ ಮಾಡಿರುವ ವರದಿ ಪ್ರಕಾರ ನಿರ್ದೇಶಕ ಎಸ್​. ಶಂಕರ್​ ಅವರ ಅಂಡರ್​ ವಾಟರ್​ ಸೈನ್ಸ್​ ಫಿಕ್ಷನ್​ ಸಿನಿಮಾದಲ್ಲಿ ಶಾರುಖ್​ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿಯದ್ದೇ ಗದ್ದಲ.

10.ಧೋನಿ ದಾಖಲೆ ಮುರಿದ ಪಂತ್; ದೀಪಕ್ ಚಹಾರ್ ನೂತನ ಸಾಧನೆ

ವೆಸ್ಟ್​ ಇಂಡೀಸ್ ವಿರುದ್ಧದ ಟಿ-20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ನಿನ್ನೆ ನಡೆದ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್​ರ ಅರ್ಧಶತಕ ಮತ್ತು ದೀಪಕ್ ಚಹಾರ್​ರ ಅತ್ಯುತ್ತಮ ಬೌಲಿಂಗ್ ದಾಳಿಯ ನೆರವಿನಿಂದ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸಿತು. ಈ ಮೂಲಕ ಕೆರಿಬಿಯನ್ ಪ್ರವಾಸವನ್ನು ಕೊಹ್ಲಿ ಪಡೆ ಭರ್ಜರಿ ಆಗಿ ಆರಂಭಿಸಿದೆ. ಅಂತೆಯೆ ಅಂತಿಮ ಟಿ-20 ಪಂದ್ಯದಲ್ಲಿ ಪ್ರಮುಖ ದಾಖಲೆಗಳು ನಿರ್ಮಾಣವಾಗಿದೆ. ದೀಪಕ್ ಚಹಾರ್ ಹಾಗೂ ರಿಷಭ್ ಪಂತ್ ತಮ್ಮ ಖಾತೆಗೆ ಹೊಸ ದಾಖಲೆಯನ್ನು ಸೇರ್ಪಡೆಗೊಳಿಸಿದ್ದಾರೆ. ತನ್ನ ಮೊದಲ ಓವರ್​ನಿಂದಲೇ ವಿಂಡೀಸ್​ಗೆ ಮಾರಕವಾಗಿ ಪರಿಣಮಿಸಿದ ದೀಪಕ್ ಚಹಾರ್ ಎವಿನ್ ಲೆವಿಸ್, ಸುನೀಲ್ ನರೈನ್ ಹಾಗೂ ಶಿಮ್ರೋನ್ ಹೆಟ್ಮೇರ್ ವಿಕೆಟ್ ಕಿತ್ತು ಮಿಂಚಿದರು.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...