ಬಾಗಲಕೋಟೆ(ಡಿಸೆಂಬರ್. 16): ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕಾವೇರುತ್ತಿದೆ. ಹಳ್ಳಿ ಪೊಲಿಟಿಕ್ಸ್ ನಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿದ್ದು. ಚುನಾವಣೆಯಲ್ಲಿ ಬೆಂಬಲಿಸುವ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆಯಾಗಿದೆ. ಜಿಲ್ಲೆಯ ಬೀಳಗಿ ಶಿರಗುಪ್ಪಿ ಗ್ರಾಮದಲ್ಲಿ ಯೋಧನ ಕುಟುಂಬದ ಮೇಲೆ ಹಲ್ಲೆಯಾಗಿರುವ ಘಟನೆ ನಡೆದಿದೆ. ದೇಶ ಕಾಯುವ ಯೋಧನ ಕುಟುಂಬಕ್ಕೆ ರಕ್ಷಣೆ ಇಲ್ಲವಾ ಎನ್ನುವ ಪ್ರಶ್ನೆ ಕುಟುಂಬಕ್ಕೆ ಕಾಡತೊಡಗಿದೆ. ಬೀಳಗಿ ತಾಲೂಕಿನ ಶಿರಗುಪ್ಪಿ ಗ್ರಾಮದ ಬರಗಾಲ ಹಾಗೂ ಜುಂಜುರ ಕುಟುಂಬಗಳ ಮಧ್ಯೆ ಮೊದಲಿನಿಂದಲೂ ರಾಜಕೀಯ ವೈಷಮ್ಯ ಇತ್ತು ಎನ್ನಲಾಗಿದೆ. ಈ ಎರಡು ಕುಟುಂಬಗಳು ಒಂದೇ ಕೋಮಿನವರು. ಮೊನ್ನೆ ಕಾತರಕಿ ಗ್ರಾಮ ಪಂಚಾಯಿತಿ ಕಚೇರಿಗೆ ನಾಮಪತ್ರ ಸಲ್ಲಿಸಲು ಗ್ರಾಮದ ಅಭ್ಯರ್ಥಿಗಳು ತೆರಳಿದ್ದಾರೆ. ಈ ವೇಳೆ ಒಂದು ಗುಂಪಿನ ಬೆಂಬಲವಾಗಿ ಯೋಧನ ಸಹೋದರ ರಮೇಶ್ ಬರಗಾಲ ಕೂಡಾ ಹೋಗಿದ್ದಾರೆ. ಆಗ ಮತ್ತೊಂದು ಗುಂಪಿನ ಜುಂಜುರ ಕುಟುಂಬದವರು ಐವರು ಜನ ರಮೇಶ್ ಬರಗಾಲನೊಂದಿಗೆ ಜಗಳಾಡಿದ್ದಾರೆ. ನಾವು ಒಂದೇ ಕೋಮಿನವರಾಗಿದ್ದು, ಒಂದೆ ಗುಂಪು ಬೆಂಬಲಿಸೋಣವೆಂದು ಜಗಳಾಡಿ, ಹಲ್ಲೆ ಮಾಡಿದ್ದಾರೆ.
ಅಷ್ಟೇ ಅಂದೇ ಸಾಯಂಕಾಲ ಶಿರಗುಪ್ಪಿ ಗ್ರಾಮದ ಸಿಂಧೂರ ಲಕ್ಷ್ಮಣ ಸರ್ಕಲ್ ಬಳಿ ಮತ್ತೆ ಜುಂಜುರ ಕುಟುಂಬದ ಐವರು ಜನ ಕಾರಿನಲ್ಲಿದ್ದ ಯೋಧನ ಸಹೋದರ ರಮೇಶ್ ನನ್ನು ಹೊರಗೆ ಎಳೆದು ಕಲ್ಲಿನಿಂದ ತಲೆಗೆ ಜಜ್ಜಿದ್ದಾರೆ. ಈ ವೇಳೆ ಬಿಡಿಸಲು ಬಂದಿದ್ದ ಯೋಧನ ತಂದೆ ರಂಗಪ್ಪ ತಾಯಿ ಲಕ್ಕವ್ವ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಯೋಧನ ಸಹೋದರ ರಮೇಶ್ ಹಿಡಿತ ಹೊಂದಿದ್ದು, ಈತನಿಗೆ ಬೆದರಿಸಿದರೆ ಮುಂದಿನ ಹಾದಿ ಸುಗಮವಾಗುತ್ತೆ ಎನ್ನುವುದು ಹಲ್ಲೆ ಮಾಡಿದವರ ಉದ್ದೇಶ ಎನ್ನುತ್ತಾರೆ ಯೋಧನ ಕುಟುಂಬಸ್ಥರು.
ಇದನ್ನೂ ಓದಿ : ಉಪಯೋಗಕ್ಕಿಲ್ಲದ ಸಿಸಿ ಟಿವಿ ಕ್ಯಾಮೆರಾಗಳು: ಅಪರಾಧ ಕೃತ್ಯಗಳ ಪತ್ತೆಗೆ ತೊಂದರೆ
ಛತ್ತಿಸಗಡದಲ್ಲಿ ಸಿಆರ್ ಪಿಎಫ್ ಯೋಧನಾಗಿ ಜಗದೀಶ್ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಕುಟುಂಬದ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗಬೇಕೆಂದು ನ್ಯೂಸ್ 18 ಕನ್ನಡನೊಂದಿಗೆ ಪ್ರತಿಕ್ರಿಯಿಸಿ, ನೋವು ತೋಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ