ಪ್ರತಿ ತಿಂಗಳು ATMನಿಂದ 5 ಬಾರಿ ಉಚಿತವಾಗಿ ಹಣ ತೆಗೆಯಲು ಅವಕಾಶ ನೀಡಲಾಗಿದೆ. ಉಚಿತ ಅವಕಾಶಗಳ ಬಳಿಕ ಹಣ ತೆಗೆದರೆ ಪ್ರತಿ ಬಾರಿಯೂ 21 ರೂಪಾಯಿಗಳು ನಿಮ್ಮ ಖಾತೆಯಿಂದ ಕಡಿತಗೊಳ್ಳುತ್ತದೆ. ಉಚಿತ ಆಯ್ಕೆಗಳ ಬಳಿಕ ಹಣ ತೆಗೆಯುವುದರ ಮೇಲಿನ ದರವನ್ನು ಆರ್ಬಿಐ ಏರಿಕೆ ಮಾಡಿದೆ. ಇಷ್ಟು ದಿನ 20 ರೂಪಾಯಿಗಳನ್ನು ಕಡಿತ ಮಾಡಲಾಗುತ್ತಿತ್ತು. ಈಗ 1 ರೂಪಾಯಿ ಏರಿಸಿ ಹೊಸ ಆದೇಶವನ್ನು ಹೊರಡಿಸಿದೆ. ಹೊಸ ಆದೇಶ 2022ರ ಜನವರಿ 1ರಿಂದ ಅನ್ವಯವಾಗಲಿದೆ ಎಂದು ಆರ್ಬಿಐ ತಿಳಿಸಿದೆ.
7 ವರ್ಷಗಳ ಬಳಿಕ ಎಟಿಎಮ್ನಿಂದ ಹಣ ತೆಗೆಯುವುರದ ಮೇಲಿನ ದರವನ್ನು ಆರ್ಬಿಐ ಏರಿಕೆ ಮಾಡಿದೆ. ಇತರೆ ಬ್ಯಾಂಕ್ಗಳಲ್ಲಿ ನಗರ ಪ್ರದೇಶದಲ್ಲಿ 3 ಉಚಿತ ಅವಕಾಶಗಳು, ನಾನ್ ಮೆಟ್ರೋ ನಗರಗಳಲ್ಲಿ 5 ಉಚಿತ ಅವಕಾಶಗಳನ್ನು ನೀಡಲಾಗಿದೆ. ಎಟಿಎಂಗಳ ನಿರ್ವಹಣೆ, ಆರ್ಥಿಕ ನೀತಿಗಳ ಕಾರಣದಿಂದ ದರ ಏರಿಕೆ ಮಾಡಲಾಗಿದೆ ಎಂದು ಆರ್ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. 2019ರಲ್ಲೇ ದರ ಏರಿಕೆಗೆ ಆರ್ಬಿಐ ಮುಂದಾಗಿತ್ತು. ಪ್ರಸ್ತಾವನೆಯನ್ನು ಪರಿಶೀಲಿಸಿದ ತಾಂತ್ರಿಕ ಸಲಹಾ ಸಮಿತಿ ಈಗ ದರ ಏರಿಕೆಗೆ ಅನುಮತಿ ನೀಡಿದೆ.
ಈಗಾಗಲೇ ಕೊರೊನಾ, ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಭಾರತೀಯರಿಗೆ ಈ ದರ ಏರಿಕೆಯೂ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಆರ್ಬಿಐ 2022ರ ಜನವರಿಯಿಂದ ಹೊಸ ದರವನ್ನು ಜಾರಿಗೆ ತರಲು ನಿರ್ಧರಿಸಿದೆ. ಪೆಟ್ರೋಲ್, ಡಿಸೇಲ್, ವಿದ್ಯುತ್ ದರ ಏರಿಕೆಯಿಂದ ಕಂಗಾಲಾಗಿದ್ದ ಮಧ್ಯಮ ವರ್ಗದ ಜನರಿಗೆ ಎಟಿಎಮ್ನಿಂದಲೂ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಇದನ್ನೂ ಓದಿ: EPFO ಸದಸ್ಯರಿಗೆ ಇಲ್ಲಿದೆ ಗುಡ್ನ್ಯೂಸ್: ಮುಂದಿನ ತಿಂಗಳು 6 ಕೋಟಿ ಮಂದಿಗೆ ಶೇ.8.5 ಬಡ್ಡಿ
ಇನ್ನು ಇದೇ ವರ್ಷ ಆಗಸ್ಟ್1ರಿಂದ ಅನ್ವಯವಾಗುವಂತೆ ವ್ಯವಹಾರಿಕ ಹಣ ವರ್ಗಾವಣೆ ಮೇಲಿನ ದರವನ್ನು 15 ರೂಪಾಯಿಯಿಂದ 17 ರೂಪಾಯಿಗೆ ಏರಿಸಲಾಗಿದೆ. ಇನ್ನು ವ್ಯವಹಾರಿಕವಲ್ಲದ ಹಣ ವರ್ಗಾವಣೆ ಮೇಲಿನ ದರವನ್ನು 5 ರೂಪಾಯಿಯಿಂದ 6 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರಿಂದ ಕ್ರೆಡಿಟ್ ಕಾರ್ಡ್ ಮೇಲಿನ ತೆರಿಗೆ ಮೊತ್ತ ಏರಿಕೆಯಾಗಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರಿಗೂ ದರ ಏರಿಕೆ ಬಿಸಿ ತಟ್ಟಲಿದೆ.
ಸಾಮಾನ್ಯ ಜನ ಅಗತ್ಯವಿರುವಷ್ಟು ಹಣವನ್ನು 5 ಉಚಿತ ಅವಕಾಶಗಳಲ್ಲೇ ಎಟಿಎಂನಿಂದ ತೆಗೆದುಕೊಳ್ಳುವುದು ಉತ್ತಮ. ವಿನಾಕಾರಣ ಉಚಿತ ಆಯ್ಕೆಗಳನ್ನು ಮೀರಿ ಹಣ ತೆಗೆಯುವುದರಿಂದ ಪ್ರತಿ ಬಾರಿಯೂ 21 ರೂಪಾಯಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ