ಚಿಕ್ಕೋಡಿ(ಸೆ.04): ಅಂತರರಾಜ್ಯ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 15 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಿದ್ದವು. ದಾಖಲೆ ಇಲ್ಲದ ಬೈಕ್ ಸವಾರನೊಬ್ಬನ ವಿಚಾರಣೆ ಮಾಡಿದ ವೇಳೆ ಕಡಿಮೆ ಹಣಕ್ಕೆ ಬೈಕ್ ಖರೀದಿ ಮಾಡಿರುವುದಾಗಿ ಹೇಳಿದ್ದ. ಈ ಮೂಲವನ್ನು ಹುಡುಕುತ್ತಾ ಹೊರಟ ಅಥಣಿ ಪೋಲಿಸರಿಗೆ ಬೆಳಗಾವಿ, ಬಾಗಲಕೋಟೆ ಮತ್ತು ಮಹಾರಾಷ್ಟ್ರದ ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯ ಸುಳಿವು ಸಿಕ್ಕಿತ್ತು.
ಶಿರಹಟ್ಟಿ ಗ್ರಾಮದ ಆರೋಪಿ ರಮಜಾನ್ ಹುಸೇನಸಾಬ್ ಐನಾಪೂರೆ ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಕಳೆದ ಎರಡು ಮೂರು ವರ್ಷಗಳಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬೈಕ್ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈತನ ಬಳಿ ಇದ್ದ ಹದಿನೈದು ಬೈಕಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
Coronavirus India Updates: ಗುರುವಾರ ದೇಶದಲ್ಲಿ 83,341 ಕೊರೋನಾ ಕೇಸು ಪತ್ತೆ; 39 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ಆರೋಪಿ ರಮಜಾನ್ ಹುಸೇನ್ ಐನಾಪೂರೆ ಕಳೆದ ಮೂರು ವರ್ಷಗಳಿಂದಲೂ ಬೈಕ್ ಗಳನ್ನ ಕಳ್ಳತನ ಮಾಡುತ್ತಲೇ ಬಂದಿದ್ದ. ಕಳ್ಳತನ ಮಾಡಿದ ಬೈಕ್ ಗಳನ್ನ ಅಥಣಿ ಕಾಗವಾಡ ಭಾಗದಲ್ಲಿ ಗ್ರಾಮೀಣ ಭಾಗದ ಜನರಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕಳ್ಳತನ ಮಾಡಿದ ಬೈಕ್ಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ಹತ್ತು-ಹದಿನೈದು ದಿನಗಳಲ್ಲಿ ಅವುಗಳ ದಾಖಲೆ ನೀಡುವದಾಗಿ ಹೇಳಿ ವಂಚಿಸುತ್ತಿದ್ದ ಎನ್ನಲಾಗಿದೆ.
ಕಳೆದ ಕೆಲ ದಿನಗಳಿಂದ ಕಾಗವಾಡ ಹಾಗೂ ಅಥಣಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಿದ ಹಿನ್ನಲೆಯಲ್ಲಿ, ಅಪರಾಧ ವಿಭಾಗದ ಪಿಎಸ್ಐ ಎಮ್ ಡಿ ಘೋರಿ ಅವರ ನೇತೃತ್ವದಲ್ಲಿ ಎಎಸ್ಐ ವ್ಹಿ ಜಿ ಆರೇರ್, ಸಿಬ್ಬಂದಿಗಳಾದ ಎ ಎ ಈರಕರ,ಪಿ ಬಿ ನಾಯಕ,ಎಮ್ ಬಿ ದೊಡಮನಿ,ಬಿ ಜೆ ತಳವಾರ,ಎಸ್ ಕೆ ನೇಮಗೌಡ ಇವರ ತಂಡವನ್ನು ರಚಿಸಲಾಗಿತ್ತು. ಸತತ ಕಾರ್ಯಾಚರಣೆಯ ನಂತರ ಆರೋಪಿಯನ್ನು ಪತ್ತೆ ಹಚ್ಚಿ ಅಂದಾಜು 5 ಲಕ್ಷ ಮೌಲ್ಯದ ಹದಿನೈದು ಬೈಕಗಳನ್ನು ಜಪ್ತಿ, ಮಾಡಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ