ಡಿಸಿಎಂ ಸವದಿ ಮತ್ತು ಶಾಸಕ ಕುಮಟಳ್ಳಿ ನಡುವೆ ತಿಕ್ಕಾಟ; ಅಥಣಿ ಕ್ಷೇತ್ರದ ಅಧಿಕಾರಿಗಳಿಗೆ ಪೀಕಲಾಟ

ತಮ್ಮದೇ ಸ್ವ ಪ್ರತಿಷ್ಠೆಗೆ ಬಿದ್ದ ಸವದಿ ಮತ್ತು ಮಹೇಶ್ ಕುಮಟಳ್ಳಿ ಇಬ್ಬರೂ ಕೂಡ ತಾವು ಹೇಳಿದ ಪಿಎಸ್​ಐಯೇ ಅಥಣಿ ಪಟ್ಟಣಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಲ್ಲಿಯರೆಗೂ ಪಿಎಸ್​ಐ ನೇಮಕವಾಗಿಲ್ಲ. ಪಿಎಸ್​ಐ ಇಲ್ಲದೆ ಇಲ್ಲಿನ ಪೊಲೀಸ್ ಠಾಣೆಗೆ ಬರುವ ಜನ ಪರದಾಡುವಂತಾಗಿದೆ. ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ ಅನ್ನೋದು ಸ್ಥಳೀಯರ ವಾದ.

news18
Updated:February 17, 2020, 2:36 PM IST
ಡಿಸಿಎಂ ಸವದಿ ಮತ್ತು ಶಾಸಕ ಕುಮಟಳ್ಳಿ ನಡುವೆ ತಿಕ್ಕಾಟ; ಅಥಣಿ ಕ್ಷೇತ್ರದ ಅಧಿಕಾರಿಗಳಿಗೆ ಪೀಕಲಾಟ
ಅಥಣಿ ಪೊಲೀಸ್ ಠಾಣೆ
  • News18
  • Last Updated: February 17, 2020, 2:36 PM IST
  • Share this:
ಬೆಳಗಾವಿ(ಫೆ. 17): ಮಹಾರಾಷ್ಟ್ರ ಗಡಿಭಾಗದಲ್ಲಿರುವ ಅಥಣಿ ಈಗ ರಾಜ್ಯ ರಾಜಕಾರಣದ ಕೇಂದ್ರ ಬಿಂದು ಕ್ಷೇತ್ರಗಳಲ್ಲೊಂದೆನಿಸಿದೆ. ಬೆಳಗಾವಿ ಜಿಲ್ಲೆಯಲ್ಲೇ ಅತಿ ದೊಡ್ಡ ತಾಲೂಕು ಕೇಂದ್ರ ಕೂಡ ಅಥಣಿ. ಅದರಂತೆಯೇ ಇಲ್ಲಿ ಕ್ರೈಂ ರೇಟ್ ಕೂಡ ಜಾಸ್ತಿಯೇ. ಗಡಿ ಸಮಸ್ಯೆ, ಗಡಿಯಲ್ಲಿ ಅಕ್ರಮ ಮದ್ಯ ಮಾರಾಟ, ಮಟ್ಕಾ ದಂಧೆ, ಇಸ್ಪೀಟ್ ಅಡ್ಡೆಗಳು, ಕೊಲೆ ಸುಲಿಗೆ ದರೋಡೆ ಸೇರಿದಂತೆ ಹಲವಾರು ಸಮಸ್ಯೆಗಳು ಗಡಿ ಕ್ಷೇತ್ರ ಅಥಣಿಯಲ್ಲಿ ತಲೆದೋರಿವೆ.‌ ಹೀಗಿದ್ದರೂ ಸಹ ಇಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಪೊಲೀಸ್ ಠಾಣೆಗೆ ಪಿಎಸ್​ಐ ನೇಮಕವಾಗಿಲ್ಲ. ಅಷ್ಟೇ ಅಲ್ಲ, ಕಳೆದ ಐದು ವರ್ಷಗಳಿಂದ ಇಲ್ಲಿ ಕ್ರೈಮ್ ಪಿಎಸ್​ಐ ಕೂಡ ಇಲ್ಲ.

ಮರಳು ಮಾಫಿಯಾ ದಂಧೆ ತಡೆಗಟ್ಟಲು ವಿಫಲವಾದ ಹಿನ್ನೆಲೆಯಲ್ಲಿ, ಈ ಹಿಂದೆ ಇದ್ದ ಮುಖ್ಯ ಪಿಎಸ್​ಐ ಅಮಾನತ್ತಾಗಿ ಒಂದೂವರೆ ತಿಂಗಳುಗಳೆ ಕಳೆದು ಹೋಗಿವೆ. ಆದ್ರೆ ಹೊಸ ಪಿಎಸ್ಐ ಬಾರದೆ ಇರಲು ಇಲಾಖೆ ಹೊಣೆಯಲ್ಲ. ಈ ಮತಕ್ಷೇತ್ರದ ರಾಜಕೀಯ ತಿಕ್ಕಾಟವೇ ಈ ಸಮಸ್ಯೆಗೆ ಕಾರಣವೆನ್ನಲಾಗಿದೆ. ಒಂದು ಕಾಲದ ವೈರಿಗಳಾಗಿ ಈಗ ಒಂದೇ ಪಕ್ಷದಲ್ಲಿರುವ ಲಕ್ಷ್ಮಣ ಸವದಿ ಮತ್ತು ಮಹೇಶ್ ಕುಮಟಳ್ಳಿ ನಡುವಿನ ವೈಮನಸ್ಸು ಈಗ ಅಥಣಿ ಪೊಲೀಸ್ ಠಾಣೆಯನ್ನು ಹೆಚ್ಚೂಕಡಿಮೆ ದುರ್ಬಲಗೊಳಿಸಿದೆ.

ಇದನ್ನೂ ಓದಿ: ಲಿಂಗ ಪೂಜೆ ಮಾಡುತ್ತಲೇ ಲಿಂಗೈಕ್ಯರಾದ ಶತಾಯುಷಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಡಿಸಿಎಂ ಲಕ್ಷ್ಮಣ ಸವದಿ ಮತ್ತು ಶಾಸಕ ಮಹೇಶ್ ಕುಮಟಳ್ಳಿ ಇಬ್ಬರೂ ಇದೇ ಮತಕ್ಷೇತ್ರಕ್ಕೆ ಸೇರಿದವರೇ. ಅಥಣಿ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲುಂಡಿದ್ದ ಲಕ್ಷ್ಮಣ ಸವದಿ ಉಪಚುನಾವಣೆಗೂ ಮುನ್ನ ಮಹೇಶ್ ಕುಮಟಳ್ಳಿಯನ್ನು ಬೈದುಕೊಂಡೇ ತಿರುಗುತ್ತಿದ್ದರು. ಉಪಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಗೆದ್ದು ಶಾಸಕ ಸ್ಥಾನದ ಅರ್ಹತೆ ಗಿಟ್ಟಿಸಿದ ಬಳಿಕ ಸವದಿ ಮತ್ತವರ ಮಧ್ಯೆ ಶೀತಲ ಸಮರ ಚಾಲನೆಯಲ್ಲಿದೆ. ಇವರಿಬ್ಬರ ಮುಸುಕಿನ ಗುದ್ದಾಟದಿಂದಾಗಿ ಕ್ಷೇತ್ರಕ್ಕೆ ಹಿನ್ನಡೆಯಾಗುವಂತಾಗಿದೆ. ಇದರಲ್ಲಿ ಅಥಣಿ ಪೊಲೀಸ್ ಠಾಣೆಯೂ ಕೂಡ ಅನಾಥವಾಗಿಬಿಟ್ಟಿದೆ.

ತಮ್ಮದೇ ಸ್ವ ಪ್ರತಿಷ್ಠೆಗೆ ಬಿದ್ದ ಸವದಿ ಮತ್ತು ಮಹೇಶ್ ಕುಮಟಳ್ಳಿ ಇಬ್ಬರೂ ಕೂಡ ತಾವು ಹೇಳಿದ ಪಿಎಸ್​ಐಯೇ ಅಥಣಿ ಪಟ್ಟಣಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಲ್ಲಿಯರೆಗೂ ಪಿಎಸ್​ಐ ನೇಮಕವಾಗಿಲ್ಲ. ಪಿಎಸ್​ಐ ಇಲ್ಲದೆ ಇಲ್ಲಿನ ಪೊಲೀಸ್ ಠಾಣೆಗೆ ಬರುವ ಜನ ಪರದಾಡುವಂತಾಗಿದೆ. ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ ಅನ್ನೋದು ಸ್ಥಳೀಯರ ವಾದ.

ಇದನ್ನೂ ಓದಿ: ಹುಬ್ಬಳ್ಳಿ ಕೋರ್ಟ್ ಆವರಣದಲ್ಲಿ ಕಲ್ಲು ತೂರಾಟ; ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಯತ್ನ

ಇನ್ನು ಇವರಿಬ್ಬರ ರಾಜಕೀಯ ಕಿತ್ತಾಟದ ಬರೀ ಪೊಲೀಸ್ ಠಾಣೆವರೆಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಬದಲಿಗೆ ಇನ್ನುಳಿದ ಇಲಾಖೆ ಅಧಿಕಾರಿಗಳಿಗೂ ತಲೆನೋವು ತಂದಿದೆ. ತಮ್ಮದೆ ಅಸ್ತಿತ್ವ ತೋರ್ಪಡಿಸಲು ಮುಂದಾಗಿರುವ ಇಬ್ಬರು ನಾಯಕರ ನಡುವೆ ಇಲ್ಲಿನ ಅಧಿಕಾರಿಗಳು ಬೆಸತ್ತು ಬೇರೆಡೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರೆ ಎಂದು ಇಲ್ಲಿನ ಸ್ಥಳಿಯರು ಆರೋಪಿಸಿದ್ದಾರೆ.ಒಟ್ಟಿನಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಹಾಗೆ ಕುಮಟಳ್ಳಿ ಮತ್ತು ಸವದಿ ಪ್ರತಿಷ್ಠೆಗೆ ಅಧಿಕಾರಿಗಳು ಮತ್ತು ಜನಸಾಮಾನ್ಯರು ಬಡವಾಗಿದ್ದಾರೆ. ಇನ್ನಾದರೂ ಶಾಸಕ ಮತ್ತು ಉಪ ಮುಖ್ಯಮಂತ್ರಿ ಇಬ್ಬರೂ ತಮ್ಮ ಸ್ವಪ್ರತಿಷ್ಠೆ ಬದಿಗೊತ್ತಿ ಕೂಡಲೇ ಹೊಸ ಪಿಎಸ್​ಐ ತರಲು ಗಮನ ಹರಿಸಬೇಕಿದೆ.

(ವರದಿ: ಲೋಹಿತ್ ಶಿರೋಳ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

 
First published: February 17, 2020, 1:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading