ಚಿಕ್ಕೋಡಿ (ಫೆ. 11): ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಶಾಸಕ ಮಹೇಶ್ ಕುಮಟಳ್ಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ, ಎಂಎಸ್ಐಎಲ್ ಅಧ್ಯಕ್ಷ ಸ್ಥಾನವನ್ನು ಕುಮಟಳ್ಳಿ ನಿರಾಕರಿಸಿದ್ದಾರೆ.
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ನನಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಮಾಧ್ಯಮಗಳ ಮೂಲಕ ವಿಷಯ ತಿಳಿಯಿತು. ನಿಗಮ ಮಂಡಳಿ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ.
ನಾನು ಒಬ್ಬ ಸಿವಿಲ್ ಇಂಜಿನಿಯರ್.ಬೇರೆ ನಿಗಮ ಕೊಟ್ಟರೆ ಮಾತ್ರ ಮಾಡುತ್ತೇನೆ. ಇಲ್ಲದಿದ್ದರೆ ನಾನು ಶಾಸಕನಾಗಿಯೇ ಇರುತ್ತೇನೆ. ಆದರೆ, ಎಂಎಸ್ಐಎಲ್ ನಿಗಮದ ಹುದ್ದೆ ಬೇಡ. ನನಗೆ ಹೊಂದುವ ಹುದ್ದೆ ಕೊಟ್ಟರೆ ಮಾತ್ರ ಸ್ವೀಕಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸೇರ್ಪಡೆಯಾಗಿರುವ 11 ಶಾಸಕರಲ್ಲಿ ನನ್ನನ್ನು ಮಾತ್ರ ಸಂಪುಟದಿಂದ ಕೈಬಿಟ್ಟಿದ್ದರೂ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇನೆ. ಮಾನಸಿಕವಾಗಿ ನಾನು ಎಂಎಸ್ಐಎಲ್ ನಿಗಮ ಮಂಡಳಿ ಹುದ್ದೆಗೆ ಸಿದ್ದನಿಲ್ಲ. ಹೀಗಾಗಿ, ವಿನಯದಿಂದಲೇ ಈ ಆಫರ್ ತಿರಸ್ಕಾರ ಮಾಡುತ್ತಿದ್ದೇನೆ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ಇದನ್ನೂ ಓದಿ: ಸಚಿವ ಸ್ಥಾನ ವಂಚಿತ ಮಹೇಶ್ ಕುಮಟಳ್ಳಿಗೆ ಎಂಎಸ್‍ಐಎಲ್ ಅಧ್ಯಕ್ಷ ಸ್ಥಾನ
ಸಂಪುಟ ವಿಸ್ತರಣೆಗೂ ಮುನ್ನ ಹೇಳೀಕೆ ನೀಡಿದ್ದ ಮಹೇಶ್ ಕುಮಟಳ್ಳಿ, ನನಗೆ ಸಚಿವ ಸ್ಥಾನ ನೀಡದಿದ್ದರೆ ಯಡಿಯೂರಪ್ಪ ನಂಬಿಕೆದ್ರೋಹ ಮಾಡಿದಂತೆ. ಯಡಿಯೂರಪ್ಪ ಪ್ರಾಣ ಬೇಕಾದರೂ ಬಿಟ್ಟಾರು ಆದರೆ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದು ವೀರಾವೇಶದಿಂದ ಹೇಳಿಕೆ ನೀಡಿದ್ದ ಮಹೇಶ್ ಕುಮಟಳ್ಳಿ ಬಳಿಕ ಸ್ವಲ್ಪ ಮೆತ್ತಗಾಗಿದ್ದರು. ನನಗೆ ಮಂತ್ರಿಗಿರಿ ಕೊಡದಿದ್ದರೂ ಪರವಾಗಿಲ್ಲ ಆದರೆ, ಎಚ್. ವಿಶ್ವನಾಥ್ ಅವರನ್ನು ಮಂತ್ರಿ ಮಾಡಿ ಎಂದು ಕುಮಟಳ್ಳಿ ಮನವಿ ಮಾಡಿದ್ದರು. ಹಾಗೇ, ನನಗೆ ಕ್ಷೇತ್ರ ಮುಖ್ಯ. ಮಂತ್ರಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ಮಂತ್ರಿ ಸ್ಥಾನವಿಲ್ಲದಿದ್ದರೆ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ; ಶಾಸಕ ಮಹೇಶ್ ಕುಮಟಳ್ಳಿ
ಆದರೆ, ಈ ಬಾರಿಯ ಸಂಪುಟದಲ್ಲಿ ಚುನಾವಣೆಯಲ್ಲಿ ಸೋತ ಎಚ್. ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ನೀಡಿಲ್ಲ. ಗೆದ್ದಿರುವ ಮಹೇಶ್ ಕುಮಟಳ್ಳಿಗೂ ಸಚಿವ ಸ್ಥಾನ ನೀಡಿಲ್ಲ. ಹೀಗಾಗಿ, ಕುಮಟಳ್ಳಿಯ ಮನವೊಲಿಕೆಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಿಲ್ಲ, ಬಿಜೆಪಿಯ ಕಚೇರಿಯಲ್ಲಿ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದಿದ್ದ ಮಹೇಶ್ ಕುಮಟಳ್ಳಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಫರ್ ನಿರಾಕರಿಸಿರುವುದು ಸಿಎಂ ಯಡಿಯೂರಪ್ಪನವರಿಗೆ ಮತ್ತೊಂದು ತಲೆನೋವಿಗೆ ಕಾರಣವಾಗಿದೆ.
(ವರದಿ: ಲೋಹಿತ್ ಶಿರೋಳ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ