ನನ್ನ ಭಾಷಣಕ್ಕೆ ತುಂಬಾ ಜನ ಸೇರ್ತಾರೆ; ಆದ್ರೆ ಮತಪೆಟ್ಟಿಗೆ ತೆರೆದ್ರೆ ವೋಟ್ ಇರೋದಿಲ್ಲ: ವಾಜಪೇಯಿ ಹಾಸ್ಯಚಟಾಕಿ


Updated:August 17, 2018, 5:22 PM IST
ನನ್ನ ಭಾಷಣಕ್ಕೆ ತುಂಬಾ ಜನ ಸೇರ್ತಾರೆ; ಆದ್ರೆ ಮತಪೆಟ್ಟಿಗೆ ತೆರೆದ್ರೆ ವೋಟ್ ಇರೋದಿಲ್ಲ: ವಾಜಪೇಯಿ ಹಾಸ್ಯಚಟಾಕಿ
  • Share this:
- ಶಿವರಾಮ ಅಸುಂಡಿ, ನ್ಯೂಸ್18 ಕನ್ನಡ

ಕಲಬುರ್ಗಿ(ಆ. 17): ಅಜಾತಶತ್ರು, ಕವಿ ಹೃದಯಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಮಾತಿನ ಮೋಡಿಯಿಂದಲೇ ಜನರ ಗಮನವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು. ಅವರು ಕಲಬುರ್ಗಿಗೆ ಮೂರು ಬಾರಿ ಭೇಟಿ ನೀಡಿದ್ದರು. ಮೂರು ಬಾರಿಯೂ ಅವರು ಭೇಟಿ ನೀಡಿದಾಗ ಭಾಷಣ ಕೇಳಲು ಜನ ಕಿಕ್ಕಿರಿದು ತುಂಬಿದ್ದರು. ಒಮ್ಮೆ ಸೂಪರ್ ಮಾರುಕಟ್ಟೆಯಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಾಗ, ನೆರೆದ ಜನಸ್ತೋಮ ಕಂಡು ಉತ್ಸಾಹದಿಂದ ಭಾಷಣ ಮಾಡಿದ್ದರು. ನನ್ನ ಭಾಷಣ ಕೇಳಲು ಬಂದವರು ಮತ ಹಾಕಿದರೂ ಸಾಕು ನಮ್ಮ ಪಕ್ಷ ಗೆಲ್ಲುತ್ತದೆ. ಭಾಷಣ ಕೇಳಲು ಸಾಕಷ್ಟು ಜನ ಸೇರುತ್ತಾರೆ, ಆದರೆ ಮತ ಪೆಟ್ಟಿಗೆ ತೆಗೆದಾಗ ಬಿಜೆಪಿಗೆ ಮತಗಳೇ ಬಿದ್ದಿರುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.

ಅಟಲ್ ಬಿಹಾರಿ ವಾಜಪೇಯಿ ಅವರ ಇಂಥ ಮೊನಚು ಮತ್ತು ಸ್ವಾರಸ್ಯಕರ ಮಾತುಗಳಿಂದಲೇ ಅವರ ಭಾಷಣಗಳು ಜನಪ್ರಿಯವಾಗುತ್ತಿದ್ದವು. ಮುಂಬೈನಲ್ಲಿ 1984ರಲ್ಲಿ ಅವರು ಮಾಡಿದ ಭಾಷಣವೊಂದನ್ನು ಈಗ ಸ್ಮರಿಸಬಹುದು. ಕಾಂಗ್ರೆಸ್​ನ ಭಾರೀ ಅಲೆ ಇದ್ದ ಆ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದದ್ದು ಕೇವಲ 2 ಸೀಟು ಮಾತ್ರ. ವಾಜಪೇಯಿ ಅವರೇ ಸ್ವತಃ ಸೋಲನುಭವಿಸಿದ್ದರು. ಆಗ ಮುಂಬೈನಲ್ಲಿ ಅವರು ಮಾಡಿದ ಭಾಷಣ ಕೇಳಲು ಲಕ್ಷಾಂತರ ಮಂದಿ ಆಗಮಿಸಿದ್ದರು. ಆಗ ಅವರು “ಸೋತವನ ಭಾಷಣ ಕೇಳಲು ಇಷ್ಟೊಂದು ಜನರು ಬಂದಿದ್ದಾರೆ,” ಎಂದು ಉದ್ಗರಿಸಿದ್ದರು. ಮತದಾನದ ಸಂದರ್ಭದಲ್ಲಿ ನೀವೆಲ್ಲಾ ಎಲ್ಲಿ ಹೋಗಿದ್ದಿರಿ ಎಂದು ಜನರನ್ನು ಅವರು ಕೇಳುತ್ತಾರೆ. ವಾಜಪೇಯಿ ಅವರ ಮಾತಿಗೆ ಜನರು ಸ್ತಂಬೀಭೂತರಾಗದೇ ಬೇರೆ ದಾರಿ ಇರಲಿಲ್ಲ.

ಕಲಬುರ್ಗಿಯೊಂದಿಗೆ ಅವಿನಾಭಾವ ಸಂಬಂಧ:
ಇನ್ನು, ಕಲಬುರ್ಗಿಗೂ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಅವಿನಾಭಾವ ಸಂಬಂಧವಿತ್ತು. ಪಕ್ಷ ಸಂಘಟನೆ ಚುನಾವಣೆ ಇತ್ಯಾದಿಗಳಿಗಾಗಿ ಮೂರು ಬಾರಿ ಕಲಬುರ್ಗಿ ನಗರಕ್ಕೆ ಆಗಮಿಸಿದ್ದ ವಾಜಪೇಯಿ ಅವರು, ಸೇಡಂ ಪಟ್ಟಣಕ್ಕೂ ಭೇಟಿ ನೀಡಿದ್ದ ಚುನಾವಣಾ ಪ್ರಚಾರ ಮಾಡಿದ್ದರು. 1972 ರಲ್ಲಿ ಪ್ರಥಮ ಬಾರಿಗೆ ನಗರಕ್ಕೆ ಭೇಟಿ ನೀಡಿದ್ದ ವಾಜಪೇಯಿ ಅವರು, 1980 ರಲ್ಲಿ ಎರಡನೇ ಬಾರಿಗೆ ಭೇಟಿ ನೀಡಿದ್ದರು. 1996 ಮೂರನೇ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಈ ವೇಳೆ ದಿವಂಗತ ಎಂ.ಆರ್.ತಂಗಾ ಮತ್ತು ದಿವಂಗತ ಚಂದ್ರಶೇಖರ ಪಾಟೀಲ್ ರೇವೂರ ಅವರು ವಾಜಪೇಯಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. 1996 ರಲ್ಲಿ ನೂತನ ವಿದ್ಯಾಲಯ ಮೈದಾನದಲ್ಲಿ ದಿ.ಚಂದ್ರಶೇಖರ್ ಪಾಟೀಲ್ ಅವರ ಪರವಾಗಿ ಪ್ರಚಾರ ನಡೆಸಿದ್ದರು. ಅವರ ಭೇಟಿಯ ಫಲಶೃತಿ ಎಂಬಂತೆ ಬಸವರಾಜ ಪಾಟೀಲ ಸೇಡಂ ಅವರು 1998 ರಲ್ಲಿ ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದರೆ, ನಂತರದಲ್ಲಿ 2004ರಲ್ಲಿ ದಿವಂಗತ ಚಂದ್ರಶೇಖರ ಪಾಟೀಲ ರೇವೂರ ಕಲಬುರ್ಗಿ ಶಾಸಕರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದರು.

ಸೇಡಂ ಪಟ್ಟಣಕ್ಕೂ ಭೇಟಿ ನೀಡಿದ್ದ ವಾಜಪೇಯಿ ಬಸವರಾಜ ಪಾಟೀಲ ಸೇಡಂ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದರು. ವಾಜಪೇಯಿ ಸರಳರಲ್ಲಿಯೇ ಸರಳ ವ್ಯಕ್ತಿಯಾಗಿದ್ದರು. ಯಾವುದೇ ಹಮ್ಮು ಬಿಮ್ಮಿಲ್ಲದೆ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಅವರ ಆ ಸ್ವಭಾವವೇ ದೇಶದಲ್ಲಿ ಬಿಜೆಪಿ ಬೆಳೆಯಲು ಸಹಕಾರಿಯಾಯಿತು. ಇಂತಹ ನಾಯಕರ ಅಗಲಿಕೆ ದೇಶಕ್ಕೆ ಅಲ್ಲದೆ, ವಿಶ್ವಕ್ಕೆ ತುಂಬಲಾರದ ನಷ್ಟ ಎಂದು ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ್ ಪಾಟೀಲ್ ಸೇಡಂ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಮತ್ತು ವಾಜಪೇಯಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.
First published:August 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading