30ನೇ ವಯಸ್ಸಿಗೆ ನಾನು ಮಾಜಿ ಮಂತ್ರಿಯಾಗಿದ್ದೆ, ಯಾವ ರಾಜಕಾರಣಿಗಳ ಕೇಸ್​ಗಳು ಏನಾಗಿವೆ ಎಂಬುದು ಗೊತ್ತು; ಡಿ.ಕೆ.ಶಿವಕುಮಾರ್

news18
Updated:September 10, 2018, 10:35 AM IST
30ನೇ ವಯಸ್ಸಿಗೆ ನಾನು ಮಾಜಿ ಮಂತ್ರಿಯಾಗಿದ್ದೆ, ಯಾವ ರಾಜಕಾರಣಿಗಳ ಕೇಸ್​ಗಳು ಏನಾಗಿವೆ ಎಂಬುದು ಗೊತ್ತು; ಡಿ.ಕೆ.ಶಿವಕುಮಾರ್
news18
Updated: September 10, 2018, 10:35 AM IST
ಧರಣೀಶ್ ಬೂಕನಕೆರೆ, ನ್ಯೂಸ್ 18 ಕನ್ನಡ

ನವದೆಹಲಿ (ಸೆ.10): "ನನಗೆ ದೆಹಲಿಯಲ್ಲಿ ಮೂರು ಮನೆಗಳು ಇವೆ. ಎಲ್ಲಿ ಬೇಕಾದರೂ ಉಳಿದುಕೊಳ್ಳುತ್ತೇನೆ. ನಾನೆಲ್ಲೂ ನಾಪತ್ತೆಯಾಗಿಲ್ಲ. ನನಗೆ ಬಂಧನದ ಭೀತಿ ಇಲ್ಲ," ಎಂದು ಸಚಿವ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಸೋಮವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ, "ಯಾರು ಯಾರನ್ನೂ ತಡೆಯಲು ಸಾಧ್ಯವಾಗುವುದಿಲ್ಲ. ಕಾನೂನು ಮುಖಾಂತರ ಏನು ಬೇಕಾದರೂ ಮಾಡಲಿ. 30ನೇ ವಯಸ್ಸಿಗೆ ನಾನು ಮಾಜಿ ಮಂತ್ರಿಯಾಗಿದ್ದೆ. ಎಷ್ಟೋ ವರ್ಷ ಮಾಜಿಯಾಗಿಯೇ ಇದ್ದೇ. ಯಾವ ಎಫ್​ಐಆರ್ ಬೇಕಾದರೂ ಹಾಕಿಕೊಳ್ಳಲಿ. ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ. ಇಡಿ-ಐಟಿ ಅಧಿಕಾರಿಗಳು ನನ್ನನ್ನಂತೂ ಗೌರವಯುತವಾಗಿ ನಡೆಸಿಕೊಂಡಿದ್ದಾರೆ," ಎಂದು ಹೇಳಿದರು.

"ಯಾವ ಮನಿ ಲಾಂಡ್ರಿಂಗ್ ಕೇಸು?, ನಾನ್ಯಾವ ಮನಿ ಲಾಂಡ್ರಿಂಗ್ ಮಾಡಿಲ್ಲ. ಯಾವ್ಯಾವ ರಾಜಕಾರಣಿಗಳ ಪ್ರಕರಣಗಳು ಏನಾಗಿವೆ ಅಂತಾ ನನಗೆ ಗೊತ್ತಿದೆ. ಹೆದರುವ ಪ್ರಮೇಯ ನನಗಿಲ್ಲ. 90 ಜನ ನನ್ನಿಂದ ಕಾನೂನು ತೊಂದರೆ ಅನುಭವಿಸುತ್ತಿದ್ದಾರೆ, ಮುಜುಗರ ಅನುಭವಿಸುತ್ತಿದ್ದಾರೆ. ನಾನು ಹಳೆಯ ರೋಗಿ, ವೈದ್ಯರಿಗಿಂತ ನುರಿತ. ಹಾಗಾಗಿ ವಕೀಲರನ್ನು ಸಂಪರ್ಕಿಸುವ ಅಗತ್ಯ ಇಲ್ಲ. ದೆಹಲಿಯಲ್ಲಿ ನಾನು ಯಾವುದೇ ವಕೀಲರನ್ನು ಭೇಟಿಯಾಗಿಲ್ಲ. ಬಿಜೆಪಿಯಲ್ಲಿ ನನಗೆ ಬಹಳ ಜನ ಸ್ನೇಹಿತರಾಗಿದ್ದಾರೆ. ನಾನು ಯಾವುದೇ ತನಿಖೆ ಎದುರಿಸಲು ಸಿದ್ದ," ಎಂದು ಡಿಕೆಶಿ ತಿಳಿಸಿದರು.

ದೆಹಲಿಯಲ್ಲಿ ಪತ್ತೆಯಾದ ಅಕ್ರಮ ಸಂಪತ್ತು ಪ್ರಕರಣ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್​ ಅವರ ಮೇಲೆ ಜಾರಿ ನಿರ್ದೇಶನಾಲಯದಿಂದ ಎಫ್​ಐಆರ್​ ದಾಖಲಾಗುವ ಸಾಧ್ಯತೆ ಇದ್ದು, ಡಿಕೆಶಿ ಬಂಧನವಾಗಲಿದೆ ಎಂಬ ಮಾತುಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಡಿಕೆಶಿ ದೆಹಲಿಗೆ ಆಗಮಿಸಿದ್ದು, ಕಾಂಗ್ರೆಸ್​ ಹಿರಿಯ ಮುಖಂಡ ಹಾಗೂ ಹಿರಿಯ ವಕೀಲ ಕಪಿಲ್ ಸಿಬಾಲ್ ಸೇರಿ ಹಲವು ಕಾನೂನು ಪಂಡಿತರನ್ನು ಸಂಪರ್ಕಿಸಲಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನು ಓದಿ: ಸರ್ಕಾರ ಉಳಿಸಿಕೊಳ್ಳಲು ದೇವೇಗೌಡ ಮಾಸ್ಟರ್​ಪ್ಲಾನ್​; ಡಿಕೆಶಿ ಜೊತೆ ಮೋದಿಯನ್ನು ಭೇಟಿ ಮಾಡಲಿದ್ದಾರಾ ಮಾಜಿ ಪ್ರಧಾನಿ?

ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಚಿವ ಡಿ.ಕೆ.ಶಿವಕುಮಾರ್​ ಭೇಟಿ ಮಾಡಿ, ಜಾರಿನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ತೊಂದರೆ ಆಗದಂತೆ ಮನವಿ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಡಿಕೆಶಿ ಮೇಲೆ ಪ್ರಕರಣ ದಾಖಲಾಗಿ, ಬಂಧನವಾದರೆ ರಾಜ್ಯದಲ್ಲಿರುವ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರಕ್ಕೆ ಕುತ್ತು ಗ್ಯಾರಂಟಿ ಎಂಬುದನ್ನು ಅರಿತಿರುವ ಜೆಡಿಎಸ್​ ವರಿಷ್ಠ ಎಚ್.ಡಿ.ದೇವೇಗೌಡ ಅವರು ಡಿಕೆಶಿ ಅವರನ್ನು ಪ್ರಧಾನಿ ಮೋದಿ ಬಳಿಗೆ ಕರೆದೊಯ್ದು ಮಾತುಕತೆ ನಡೆಸುವ ಸಾಧ್ಯತೆ ಇದೆ.

ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಂಸದರು ಮತ್ತು ಮಂತ್ರಿಗಳ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ರಾಜ್ಯದಲ್ಲಿ ಉಂಟಾದ ನೆರೆಗೆ ಪರಿಹಾರ ಕೋರಿ ಮನವಿ ಸಲ್ಲಿಸಲಿದೆ. ಈ ನಿಯೋಗದಲ್ಲಿ ಸಚಿವ ಡಿಕೆಶಿ ಅವರು ಹೋಗದೆ, ಪ್ರತ್ಯೇಕವಾಗಿ ಎಚ್​.ಡಿ.ದೇವೇಗೌಡ ಅವರೊಂದಿಗೆ ಪ್ರಧಾನಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
First published:September 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ