ಅಜ್ಜಿ ಇಂದಿರಾ ಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಜಿಲ್ಲೆಗೆ ರಾಹುಲ್ ಭೇಟಿ: ಮರುಕಳಿಸುತ್ತಾ ಇತಿಹಾಸ?


Updated:March 21, 2018, 5:42 PM IST
ಅಜ್ಜಿ ಇಂದಿರಾ ಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಜಿಲ್ಲೆಗೆ ರಾಹುಲ್ ಭೇಟಿ: ಮರುಕಳಿಸುತ್ತಾ ಇತಿಹಾಸ?
  • Share this:
ಡಿಪಿ ಸತೀಶ್, ನ್ಯೂಸ್ 18 ಕನ್ನಡ

ಚಿಕ್ಕಮಗಳೂರು(ಮಾ,21): ಚುನಾವಣಾ ಹೊಸ್ತಿಲಲ್ಲಿ ಕರುನಾಡಿನ ಮತದಾರರ ಮನವೊಲಿಸಲು ರಾಜಕೀಯ ಮುಖಂಡರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮುಖಂಡರೂ ಕರ್ನಾಟಕದತ್ತ ಮುಖ ಮಾಡಿದ್ದು ಇಡೀ ದೇಶದ ಚಿತ್ತ ಕನ್ನಡನಾಡಿನತ್ತ ಕೇಂದ್ರೀಕರಿಸಿದೆ. ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು 1300 ವರ್ಷಗಳ ಭವ್ಯ ಇತಿಹಾಸವುಳ್ಳ ಶೃಂಗೇರಿಯ ಶಾರದಾ ಪೀಠವನ್ನು ಪ್ರವೇಶಿಸಲಿದ್ದಾರೆ. ಆದರೆ ಎಐಸಿಸಿ ಅಧ್ಯಕ್ಷನ ಈ ಭೇಟಿ ಇತಿಹಾಸಕಾರರಿಗೆ 40 ವರ್ಷಗಳ ಹಿಂದೆ 1978 ರಲ್ಲಿ ಇಂದಿರಾ ಗಾಂಧಿ ಇದೇ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭವನ್ನು ನೆನಪಿಸುವಂತೆ ಮಾಡಿದೆ.

ಇಂದು ಕಾಂಗ್ರೆಸ್ ಯಾವ ಸ್ಥಿತಿಯಲ್ಲಿದೆಯೋ ಅಂದು(1978ರಲ್ಲಿ) ಕೂಡಾ ಈ ಪಕ್ಷಕ್ಕೆ ಭಾರೀ ಕುಸಿತ ಕಂಡಿತ್ತು. ತುರ್ತು ಪರಿಸ್ಥಿತಿ ಘೋಷಣೆಯು ಇಂದಿರಾ ಗಾಂಧಿಯವರಿಂದ ಪ್ರಧಾನ ಮಂತ್ರಿ ಸ್ಥಾನವನ್ನು ಕಸಿದುಕೊಂಡಿತ್ತು. ಇಷ್ಟೇ ಅಲ್ಲದೆ ಅವರು ಸಂಸತ್ತಿನ ಸದಸ್ಯತ್ವವನ್ನೂ ಕಳೆದುಕೊಂಡಿದ್ದರು.

ಇಂದಿರಾ ಗಾಂಧಿಯ ಕುಟುಂಬವು ಹಲವಾರು ವೈಯುಕ್ತಿಕ ಹಾಗೂ ರಾಜಕೀಯ ಸಮಸ್ಯೆಗಳನ್ನೆದುರಿಸುತ್ತಿತ್ತು. ಸಾಲದೆಂಬಂತೆ ಹಲವಾರು ಸುದ್ದಿ ಪತ್ರಿಕೆಗಳು ಕಾಂಗ್ರೆಸ್ ಪಕ್ಷದ ಶ್ರದ್ಧಾಂಜಲಿ ಬರೆದಿದ್ದರೆ, ಪಕ್ಷದ ಪ್ರಮುಖ ನಾಯಕರು ಮುಳುಗುವ ದೋಣಿಯಂತಿದ್ದ ಕಾಂಗ್ರೆಸ್ ಪಕ್ಷದಿಂದ ಬೇರೆಡೆಗೆ ಹಾರಿದ್ದರು.ಇಂತಹ ಕಠಿಣ ಪರಿಸ್ಥಿತಿಯಲ್ಲಿಯದ್ದ ಇಂದಿರಾ ಗಾಂಧಿ, ಲೋಕಸಭೆಗೆ ಪ್ರವೇಶಿಸುವ ನಿಟ್ಟಿನಲ್ಲಿ ಐತಿಹಾಸಿಕ ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವಾಗ, ಶಾರದಾ ಪೀಠಕ್ಕೆ ಭೇಟಿ ನೀಡಿ ಅಂದಿನ ಪೀಠಾಧಿಪತಿ ದಿವಂಗತ ಶ್ರೀ ಚಂದ್ರಶೇಖರ ಭಾರತಿ ತೀರ್ಥರ ಆಶೀರ್ವಾದ ಪಡೆದಿದ್ದರು, ಆದಿ ಶಂಕರಾಚಾರ್ಯರಿಂದ ಸ್ಥಾಪಿತಗೊಂಡ ಈ ಭವ್ಯ ಇತಿಹಾಸವುಳ್ಳ ಶಾರದಾ ಪೀಠವು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿದೆ.

ಅಂದು ಇಂದಿರಾ ಗಾಂಧಿಗಿದ್ದ ಏಕೈಕ ಆಶಾಕಿರಣವೆಂದರೆ, ಕಾಂಗ್ರೆಸ್ ಮತ್ತೆ ಎದ್ದು ನಿಲ್ಲಲಿದೆ ಎಂದು ಮಾತು ನೀಡಿದ್ದ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಮಾತ್ರ. ತದ ನಂತರ ಅರಸುರವರ ಮಾತಿನಂತೆ ಇಂದಿರಾ ಗಾಂಧಿ ಚಿಕ್ಕಮಗಳೂರು ಕ್ಷೇತ್ರದಲ್ಲಿ  ಗೆಲುವು ಸಾಧಿಸಿದ್ದು, ಕೇವಲ ಎರಡೇ ವರ್ಷಗಳಲ್ಲಿ ಮತ್ತೆ ಪ್ರಧಾನ ಮಂತ್ರಿ ಸ್ಥಾನ ಮರಳಿ ಪಡೆದುಕೊಂಡರು, ಬಳಿಕ ನಡೆದಿದ್ದೆಲ್ಲವೂ ಇಂದಿಗೂ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.ಸದ್ಯ ರಾಹುಲ್ ಗಾಧಿ ಕೂಡಾ ಅಂತಹುದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಭಾರೀ ಹಿನ್ನಡೆ ಕಾಣುತ್ತಿದ್ದು, ಅಂಧಾಕಾರದಲ್ಲಿರುವ ಪಕ್ಷಕ್ಕೀಗ ಕರ್ನಾಟಕವೊಂದೇ ಬೆಳಕಾಗಿದೆ. ಅಚ್ಚರಿ ಎಂಬಂತೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ದೇವರಾಜ್ ಅರಸುರವರಂತೆ ಮೈಸೂರಿನವರೇ ಆಗಿದ್ದಾರೆ. ಮಾತ್ರವಲ್ಲದೇ ಅರಸುರಂತೆ ಸಿದ್ದರಾಮಯ್ಯ ಕೂಡಾ ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತರ ನಾಯಕರೆನಿಸಿಕೊಂಡಿದ್ದಾರೆ. ಅಂದಿನ ಹಾಗೂ ಇಂದಿನ ಪರಿಸ್ಥಿತಿಗೆ ಅದೆಷ್ಟು ಹೊಂದಾಣಿಕೆ ಇದೆ ಎಂದರೆ ಬೆಂಬಲಿಗರೆಲ್ಲರೂ ಸಿದ್ದರಾಮಯ್ಯರನ್ನು ಆಧುನಿಕ ದೇವರಾಜ್ ಅರಸು ಎಂದೇ ಕರೆಯಲಾರಂಭಿಸಿದ್ದಾರೆ.

ಒಂದು ವೇಳೆ ಅಂದು ಇಂದಿರಾ ಗಾಂಧಿ ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಸೋಲನುಭವಿಸಿದ್ದರೆ, 1980 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಸ್ತಿತ್ವ ಪಡೆದುಕೊಳ್ಳಲು ಸಾಧ್ಯವಾಗುತ್ತಿಲಿಲ್ಲ. ಒಂದು ವೇಳೆ ಮೇ ತಿಂಗಳಿನಲ್ಲಿ ನಡೆಯಲಿರರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಸೋಲನುಭವಿಸಿದರೆ, 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಹೊತ್ತಿಗೆ ಪಕ್ಷಕ್ಕೆ ಮರುಜೀವ ತುಂಬಿ, ತಯಾರುಗೊಳಿಸಲು ರಾಹುಲ್ ಗಾಂಧಿ ಕಷ್ಟಗಳನ್ನೆದುರಿಸಲಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ.

1978ರಲ್ಲಿ RSS ಬೆಂಬಲಿತ ಜನತಾ ಪರಿವಾರದ ವಿರುದ್ಧ ಹೋರಾಡಿ ಇಂದಿರಾ ಗಾಂಧಿಯನ್ನು ಮತ್ತೆ ಅಧಿಕ್ಕಾರಕ್ಕೇರಿಸಲು ಅಂದು ದೇವರಾಜ್ ಅರಸು ಅವರಿಗೆ ಯಾವ ರೀತಿಯ ಒತ್ತಡವಿತ್ತೋ, ಅಂತಹುದೇ ಒತ್ತಡ ಇಂದು ಸಿದ್ದರಾಮಯ್ಯರಿಗಿದೆ. ಹಿರಿಯ ಪಕ್ಷವನ್ನು ಬಿಜೆಪಿಯಿಂದ ಪಾರು ಮಾಡುವ ಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ಅವರಿಗಿದೆ.ನಿನ್ನೆಯಷ್ಟೇ ಕೋಮು ಸೂಕ್ಷ್ಮ ಪ್ರದೇಶವೆಂದೇ ಕರೆಸಿಕೊಳ್ಳುವ ಕರ್ನಾಟಕದ ಕರಾವಳಿ ಪ್ರದೇಶ, ಮಂಗಳೂರಿನಲ್ಲಿ ಜನಾಶೀರ್ವಾದ ನೆರವೇರಿಸಿರುವ ರಾಹುಲ್ ಗಾಂಧಿ, ಇಂದು ಪ್ರಬಲವಾದ ಪಶ್ಚಿಮ ಘಟ್ಟವನ್ನೇರಿ ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ. ಇಲ್ಲಿ ಅವರು ಎಲ್ಲಕ್ಕಿಂತಲೂ ಮೊದಲು ತನ್ನ ಹಿರಿಯರಾದ ಕಾಶ್ಮೀರ ಬ್ರಾಹ್ಮಣರು ಹಾಗೂ ಶೈವ ಹಿಂದೂಗಳಿಗೆ ಪವಿತ್ರ ಸ್ಥಳವಾಗಿರುವ ಶೃಂಗೇರಿಗೆ ಭೇಟಿ ನೀಡಲಿದ್ದಾರೆ.

ರಾಹುಲ್ ಗಾಂಧಿಯವರ ತಂದೆ, ರಾಜೀವ್ ಗಾಂಧಿ ಕೂಡಾ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಶೃಂಗೇರಿಗೆ ಭೇಟಿ ನೀಡಿದ್ದರು. ಅಲ್ಲದೇ ಅವರ ಹತ್ಯೆಯಾಗುವ ಕೆಲ ದಿನಗಳ ಹಿಂದೆಯೂ ಅವರಿಲ್ಲಿಗೆ ಬೇಟಿ ನೀಡಿದ್ದರು.

ಪ್ರಶಾಂತವಾಗಿ ಹರಿಯುವ ತುಂಗಾ ನದಿ ತೀರದಲ್ಲಿರುವ ಈ ದೇವಸ್ಥಾನ ವೈಯುಕ್ತಿಕ ಹಾಗೂ ರಾಜಕೀಯ ಕಾರಣಗಳಿಂದ ಗಾಂಧಿ ಕುಟುಂಬಕ್ಕೆ ಬಹಳ ಆತ್ಮೀಯವಾಗಿದೆ. ಇದೀಗ ರಾಹುಲ್ ಗಾಂಧಿ ಕೂಡಾ ಶಾಂತಿ ಹಾಗೂ ಅಧಿಕಾರ ಮರು ಪಡೆಯುವ ನಿಟ್ಟಿನಲ್ಲಿ ಅಜ್ಜಿ ಹಾಗೂ ತಂದೆಯ ದಾರಿಯಲ್ಲಿ ಸಾಗುತ್ತಿರುವಂತೆ ಭಾಸವಾಗುತ್ತದೆ.

ಮಠಕ್ಕೆ ಹೋಗಲಿರುವ ರಾಹುಲ್ ಗಾಂಧಿ ಪೀಠಾಧಿಪತಿ ಶ್ರೀ ಭಾರತಿ ತೀರ್ಥ ಸ್ವಾಮೀಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ಇದಾದ ಬಳಿಕ ಶ್ರೀಗಳೊಂದಿಗೆ ಸಣ್ಣ ಮಾತುಕತೆ ನಡೆಸಿ, ಹತ್ತಿರದಲ್ಲೇ ಇರುವ ರಾಜೀವ್ ಗಾಂಧಿ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಶೃಂಗೇರಿಯಲ್ಲಿ ನಿರ್ಮಿಸಲಾಗಿರುವ ಪಕ್ಷದ ಸ್ಥಳೀಯ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸದ್ಯ ಕಾಂಗ್ರೆಸ್ ಪಕ್ಷದ ಪರಿಸ್ಥಿತಿಯು ಕೊಂಚ ಕಠಿಣವಾಗಿದೆ. 1991 ರಲ್ಲಿ ಕೊನೆಯ ಬಾರಿ ಇಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ್ದು, ಪ್ರಸ್ತುತ ಈ ಜಿಲ್ಲೆಯಲ್ಲಿ ಕೇವಲ ಓರ್ವ ಕಾಂಗ್ರೆಸ್ ಶಾಸಕರಿದ್ದಾರೆ.

RSS ಹಾಗೂ ಇತರ ಹಿಂದೂಪರ ಸಂಘಟನೆಗಳಿಂದ ಬೆಂಬಲ ಪಡೆದಿರುವ ಬಿಜೆಪಿ ಪಕ್ಷವು ಕಳೆದ ಎರಡು ದಶಕಗಳಿಂದ ಈ ಜಿಲ್ಲೆಯಲ್ಲಿ ಬಲಿಷ್ಟ ಪಕ್ಷವಾಗಿ ತನ್ನ ಹಿಡಿತ ಸಾಧಿಸಿದೆ.

ಇನ್ನು ಶೃಂಗೇರಿ ಭೇಟಿ ಬಳಿಕ ರಾಹುಲ್ ಗಾಂಧಿ ಚಿಕ್ಕಮಗಳೂರು ಜಿಲ್ಲೆಯ ಪ್ರಧಾನ ಕಚೇರಿಗೆ ತೆರಳಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಾದ ಬಳಿಕ ಅವರು ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್. ಡಿ. ದೇವೇಗೌಡರ ಕುಟುಂಬದ ಕ್ಷೇತ್ರವೆನಿಸಿರುವ ಹಾಸನ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ರಾಹುಲ್ ಗಾಂಧಿಯವರ ಚಿಕ್ಕಮಗಳೂರು ಪ್ರವಾಸ ಪಕ್ಷಕ್ಕೆ ಲಾಭ ತರಲಿದೆಯೇ? ಕೇವಲ ಕರ್ನಾಟಕ ಚುನಾವಣಾ ಫಲಿತಾಂಶ ಇದನ್ನು ಖಚಿತಪಡಿಸಲಿದೆ.

ಆದರೆ ಇತಿಹಾಸ ಯಾವತ್ತೂ ಮರುಕಳಿಸುತ್ತದೆ ಎಂಬುವುದು ಮಾತ್ರ ಸತ್ಯ.
First published:March 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading