Siddaramaiah: ಬಾದಾಮಿ ಬಿಟ್ಟು ಬೆಂಗಳೂರಲ್ಲಿ ಅಖಾಡಕ್ಕೆ ಸಿದ್ದರಾಮಯ್ಯ!? ನನ್ನ ತಂದೆ ಮತ್ತೆ ಸಿಎಂ ಆಗ್ತಾರೆ- ಯತೀಂದ್ರ

ತಂದೆಯವರಿಗೆ ಇದು ಕೊನೆಯ ಚುನಾವಣೆ. ವಯಸ್ಸಿನ ಸಮಸ್ಯೆ ಕಾರಣಕ್ಕೆ ಬಾದಾಮಿ ಕ್ಷೇತ್ರಕ್ಕೆ ಹೋಗಿ ಬರುವುದು ಅವರಿಗೆ ಕಷ್ಟವಾಗಲಿದೆ. ಹೀಗಾಗಿ, ಬೆಂಗಳೂರು ಸುತ್ತಮುತ್ತಲಿನ ಕ್ಷೇತ್ರವನ್ನು ಆರಿಸಿಕೊಳ್ಳುವ ಬಗ್ಗೆ ಅವರು ಆಲೋಚನೆ ಮಾಡ್ತಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಸಂಗ್ರಹ ಚಿತ್ರ

ಸಿದ್ದರಾಮಯ್ಯ ಸಂಗ್ರಹ ಚಿತ್ರ

  • Share this:
ಬೆಂಗಳೂರು (ಜೂ 28): 2023ರ ವಿಧಾನಸಭೆ ಚುನಾವಣೆಗೆ (Assembly Election) ಈಗಾಗಲೇ ಎಲ್ಲಾ ಪಕ್ಷಗಳು ಸಜ್ಜಾಗುತ್ತಿದೆ. ಘಟಾನುಘಟಿ ನಾಯಕರು ಯಾವ-ಯಾವ ಕ್ಷೇತ್ರಗಳಿಂದ ಅಖಾಡಕ್ಕಿಳಿಯೋದು ಅನ್ನೋ ಲೆಕ್ಕಾಚಾರ ಕೂಡ ಮಾಡ್ತಿದ್ದಾರೆ. ಕಾಂಗ್ರೆಸ್ (Congress) ಹಿರಿಯ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು 2023ರರ ಚುನಾವಣೆಯೇ ತನ್ನ ಕೊನೆಯ ಚುನಾವಣಾ ಸ್ಪರ್ಧೆ ಎಂದು ಅಧಿಕೃತವಾಗಿ ಹೇಳೋ ಮೂಲಕ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಕೊನೆಯ ಚುನಾವಣೆಯಲ್ಲಿ ಅವರು ಯಾವ  ಕ್ಷೇತ್ರದಿಂದ ಅಖಾಡಕ್ಕೆ ಇಳೀತಾರೆ ಅನ್ನೋದೇ ದೊಡ್ಡ ಕುತೂಹಲವಾಗಿದೆ. ಎಲ್ಲೂ ಗುಟ್ಟು ಬಿಟ್ಟು ಕೊಡದ ಸಿದ್ದರಾಮಯ್ಯ, ಬಾದಾಮಿ (Badami) ಕ್ಷೇತ್ರದಲ್ಲಿ ಹೆಚ್ಚಾಗಿ ಓಡಾಡ್ತಿದ್ದಾರೆ. ಆದ್ರೆ ತಂದೆ ಅವರು ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಅನ್ನೋ ಸಣ್ಣ ಸುಳಿವನ್ನು ಶಾಸಕ ಯತೀಂದ್ರ  (MLA Yathindra) ಬಿಟ್ಟುಕೊಟ್ಟಿದ್ದಾರೆ.

ಬೆಂಗಳೂರು ಸುತ್ತಮುತ್ತಲಿನ ಕ್ಷೇತ್ರದ ಆಯ್ಕೆ ಬಗ್ಗೆ ಚಿಂತನೆ

ಬೆಂಗಳೂರಿನಲ್ಲಿ ಮಾತಾಡಿದ ಶಾಸಕ ಯತೀಂದ್ರ ಅವರು ತಂದೆಯವರಿಗೆ (ಸಿದ್ದರಾಮಯ್ಯ) ಇದು ಕೊನೆಯ ಚುನಾವಣೆ. ವಯಸ್ಸಿನ ಸಮಸ್ಯೆ ಕಾರಣಕ್ಕೆ ಬಾದಾಮಿ ಕ್ಷೇತ್ರಕ್ಕೆ ಹೋಗಿ ಬರುವುದು ಅವರಿಗೆ ಕಷ್ಟವಾಗಲಿದೆ. ಹೀಗಾಗಿ, ಬೆಂಗಳೂರು ಸುತ್ತಮುತ್ತಲಿನ ಕ್ಷೇತ್ರವನ್ನು ಆರಿಸಿಕೊಳ್ಳುವ ಬಗ್ಗೆ ಅವರು ಆಲೋಚನೆ ಮಾಡ್ತಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ವರುಣಾ ಕ್ಷೇತ್ರ ಬಿಟ್ಟು ಕೊಡಲು ನಾನು ರೆಡಿ

ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಅಂತಿಮವಾಗಿಲ್ಲ. ರಾಜ್ಯದ ಎಲ್ಲ ಕ್ಷೇತ್ರಗಳ ಬಗ್ಗೆ ಅವರಿಗೆ ಸಂಪೂರ್ಣ ಅರಿವು ಇದೆ. ಯಾವ ಕ್ಷೇತ್ರ ಉತ್ತಮ ಎನ್ನುವುದೂ ಗೊತ್ತಿದೆ ಎಂದ ಯತೀಂದ್ರ ಅವರು, ತಮ್ಮ ತಂದೆ  ಬಯಸಿದರೆ ವರುಣಾ ಕ್ಷೇತ್ರ ಬಿಟ್ಟು ಕೊಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BBMP: ಮೋದಿ ಬಂದು ಹೋದ 1 ವಾರಕ್ಕೆ ಮತ್ತೊಂದು ಕಡೆ ಕಿತ್ತು ಹೋಗಿದೆ ರಸ್ತೆ ಡಾಂಬರು

ನನ್ನ ತಂದೆ ಮತ್ತೆ ಮುಖ್ಯಮಂತ್ರಿ ಆಗ್ತಾರೆ

ನನ್ನ ತಂದೆ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ನಾನು ಮನೆಯಲ್ಲಿ ತಂದೆಯವರ ಆಡಳಿತ ವೈಖರಿ ನೋಡಿಕೊಂಡು ಬೆಳೆದವನು. ಅವರ ಪ್ರಾಮಾಣಿಕತೆ, ಬದ್ಧತೆ ನನಗೆ ಸ್ಫೂರ್ತಿಯಾಗಿದೆ. ತತ್ವ, ಸಿದ್ದಾಂತದ ವಿಚಾರದಲ್ಲಿ ಅವರು ಎಂದೂ ರಾಜಿಯಾದವರಲ್ಲ. ವರುಣಾ ಕ್ಷೇತ್ರದ ಶಾಸಕನಾಗಿರುವ ಕಾರಣಕ್ಕೆ ವೃತ್ತಿಯಲ್ಲಿ ವೈದ್ಯನಾದರೂ ಸದ್ಯ ರಾಜಕೀಯಕ್ಕೆ ಆದ್ಯತೆ ನೀಡುತ್ತೇನೆ. ಈಗ ರಾಜಕೀಯ ಮಾಡುವುದು ಅಷ್ಟು ಸುಲಭವಲ್ಲ ಎಂದು ಯತೀಂದ್ರ ಹೇಳಿದ್ದಾರೆ.

ಬಾದಾಮಿ ಕ್ಷೇತ್ರ ನನಗೆ ದೂರ - ಸಿದ್ದರಾಮಯ್ಯ

ಈ ಹಿಂದೆ ಕೋಲಾರದಲ್ಲಿ ಮಾತಾಡಿದ್ದ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ನನಗೆ ದೂರವಾಗುತ್ತದೆ. ಹಾಗಾಗಿ ಹತ್ತಿರದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪಧಿಸಲು ನಿರ್ಧಾರ ಮಾಡಿರುವುದಾಗಿ ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಆದರೆ ಯಾವ ಕ್ಷೇತ್ರ ಎಂದು ಇನ್ನೂ ತೀರ್ಮಾನ ಮಾಡಿಲ್ಲ. ಸ್ವಲ್ಪ ದಿನಗಳ ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.ಅಭಿಮಾನಿಗಳು ಅಭಿಮಾನದಿಂದ ಕರೆಯುತ್ತಿದ್ದಾರೆ. ಯಾವುದಾದರೂ ಒಂದು‌ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಿಲ್ಲ ಎಂದು ಇದೇ ವೇಳೆ ಹೇಳಿದ್ದರು.

ಇದನ್ನೂ ಓದಿ: Shivamogga: ಆಸ್ಪತ್ರೆಯಲ್ಲಿ ಕೊಟ್ಟ ಇಂಜೆಕ್ಷನ್​ನಿಂದ 14 ಮಕ್ಕಳು ದಿಢೀರ್​ ಅಸ್ವಸ್ಥ; ಸ್ಥಳಕ್ಕೆ ಶಾಸಕರ ದೌಡು

ನನ್ನನ್ನು‌ ಸೋಲಿಸಲು ಕೆಲ‌ವು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹುನ್ನಾರ ಮಾಡುತ್ತಿದ್ದಾರೆ. ಅವರಿಗೆ ನನ್ನನ್ನು ನೋಡಿದರೆ ಭಯ, ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ, ಈಗಲೂ ಆ ಪಕ್ಷದ ಬಿಜೆಪಿ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದೆ. ನಾನು‌ ಹಿಂದು ವಿರೋಧಿ, ಜಾತ್ಯಾತೀತ ಪರವೆಂದು ಬಿಜೆಪಿಗೆ ಟಾಂಗ್ ನೀಡಿದರು. ಶಾಸಕ ಜಿ.ಟಿ.ದೇವೇಗೌಡ ಮತ್ತು ಅವರ ಮಗ ಟಿಕೆಟ್ ಕೇಳಿದ್ದಾರೆ. ಆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು.

Published by:Pavana HS
First published: