ರಾಜೀನಾಮೆ ಬಳಿಕವೂ ಪವರ್ ಸೆಂಟರ್ ಆದ ಬಿಎಸ್​ವೈ; ರಾಜಾಹುಲಿ ಸುತ್ತ ಮಂತ್ರಿ ಆಕಾಂಕ್ಷಿಗಳ ಪ್ರದಕ್ಷಿಣೆ

ಯಡಿಯೂರಪ್ಪ ಸರ್ಕಾರ ಬರಲು ಕಾರಣರಾಗಿದ್ದ ವಲಸಿಗರಿಗೂ ಸಂಪುಟದಿಂದ ಕೈಬಿಡುವ ಆತಂಕ ಆರಂಭವಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಮುಂದುವರಿಯಲೇಬೇಕೆಂದು ಸಾಕಷ್ಟು ಲಾಬಿ ಮಾಡುತ್ತಿದ್ದಾರೆ.

ಬಿಎಸ್​ವೈ

ಬಿಎಸ್​ವೈ

  • Share this:
ಬೆಂಗಳೂರು(ಜು.29): ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ  ರಾಜೀನಾಮೆ ನೀಡಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪದಗ್ರಹಣ ಮಾಡಿದ್ದಾರೆ. ಆದರೂ ಕೂಡ ಯಡಿಯೂರಪ್ಪ ರಾಜ್ಯ ಬಿಜೆಪಿಯ ಪವರ್ ಸೆಂಟರ್ ಆಗಿ ಹೊರಹೊಮ್ಮಿದ್ದಾರೆ. ಡಿಸಿಎಂ ಹುದ್ದೆ ಬಯಸಿ, ಮಂತ್ರಿಗಿರಿಯ ಪದವಿ ಅರಸಿ ಕಾವೇರಿ ನಿವಾಸಕ್ಕೆ ಶಾಸಕರು ಎಡತಾಕುತ್ತಿದ್ದಾರೆ.ಮಂತ್ರಿಯಾಗಬೇಕೆಂಬ ಮಹದಾಸೆ ಇಟ್ಟುಕೊಂಡ ಅನೇಕರು ಯಡಿಯೂರಪ್ಪ ಮೂಲಕ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ.

ಯಡಿಯೂರಪ್ಪ ಅವರ ಆಶೀರ್ವಾದದಿಂದಲೇ ಬಸವರಾಜ ಬೊಮ್ಮಾಯಿ ಸಿಎಂ‌ ಆಗಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ ಕೂಡ ಅದೇ ಮಾತನ್ನು ಹೇಳಿದ್ದರು.

ಬೆಳಗ್ಗೆಯಿಂದ ಸಂಜೆಯವರೆಗೂ ಸಚಿವ ಸ್ಥಾನಕ್ಕಾಗಿ ಹಲವಾರು ಶಾಸಕರು ಯಡಿಯೂರಪ್ಪ ದುಂಬಾಲು ಬಿದ್ದಿದ್ದಾರೆ. ಅದರಲ್ಲೂ ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ, ವಿರೂಪಾಕ್ಷಪ್ಪ ಬಳ್ಳಾರಿ, ಜೀವರಾಜ್, ಪ್ರೀತಂಗೌಡ ಸೇರಿ ಅನೇಕರು ಸಚಿವ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ:Raj Kundra ನನಗೆ ಬಲವಂತವಾಗಿ ಕಿಸ್ ಮಾಡೋಕೆ ಬಂದಿದ್ದ, ಹೆದರಿ ಬಾತ್​​ರೂಂನಲ್ಲಿ ಅಡಗಿಕೊಂಡಿದ್ದೆ; ಶಾಕಿಂಗ್ ಹೇಳಿಕೆ ನೀಡಿದ Sherlyn Chopra!

ಸಿಎಂ ರೇಸ್‌ನಲ್ಲಿದ್ದ ನಿರಾಣಿಗೆ ಸಿಗುತ್ತಾ ಸ್ಥಾನ?

ಸಿಎಂ ಸ್ಥಾನದ ಪ್ರಬಲ ಪೈಪೋಟಿಯಲ್ಲಿದ್ದ ಮುರುಗೇಶ್ ನಿರಾಣಿ, ಇದೀಗ ಸಚಿವ ಸ್ಥಾನ ಪಡೆಯಲು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬಸವರಾಜ ಬೊಮ್ಮಾಯಿಗಿಂತ ಮೊದಲು ಮುಖ್ಯಮಂತ್ರಿ ರೇಸ್‌ನಲ್ಲಿ ನಿರಾಣಿ ಹೆಸರೇ ಇತ್ತು ಎನ್ನಲಾಗಿದೆ. ಹೈಕಮಾಂಡ್ ಕೂಡ ನಿರಾಣಿ ಪರ ಒಲವು ವ್ಯಕ್ತಪಡಿಸಿತ್ತು. ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ತಪ್ಪಿದ್ದು ನಿರಾಣಿಗೆ ಶಾಕ್ ತಂದಿತ್ತು. ಸಿಎಂ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಿರುವುದರಿಂದ ಡಿಸಿಎಂ ಸ್ಥಾನ ಅದೇ ಸಮುದಾಯಕ್ಕೆ ನೀಡಲು ಸಾಧ್ಯವಿಲ್ಲ. ಇದನ್ನು ಅರಿತಿರುವ ನಿರಾಣಿ ಇದೀಗ ಮಂತ್ರಿಗಿರಿಗಾಗಿ ಗಿರಿಕಿ ಹೊಡೆಯುತ್ತಿದ್ದಾರೆ. ಯಡಿಯೂರಪ್ಪ ಅವರಿಗೂ ಹಲವು ಬಾರಿ ಮನವಿ ಮಾಡಿರುವ ಅವರು, ಬೊಮ್ಮಾಯಿಗೂ ಸಾಕಷ್ಟು ಬಾರಿ ಭೇಟಿಯಾಗಿದ್ದಾರೆ. ಮಾತ್ರವಲ್ಲ ಹೈಕಮಾಂಡ್‌ ಮೂಲಕವೂ ಒತ್ತಡ ಹೇರುತ್ತಿದ್ದಾರೆ.

ವಲಸಿಗರಲ್ಲೂ ಆತಂಕ:

ಯಡಿಯೂರಪ್ಪ ಸರ್ಕಾರ ಬರಲು ಕಾರಣರಾಗಿದ್ದ ವಲಸಿಗರಿಗೂ ಸಂಪುಟದಿಂದ ಕೈಬಿಡುವ ಆತಂಕ ಆರಂಭವಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಮುಂದುವರಿಯಲೇಬೇಕೆಂದು ಸಾಕಷ್ಟು ಲಾಬಿ ಮಾಡುತ್ತಿದ್ದಾರೆ. ಯಡಿಯೂರಪ್ಪ ನಿವಾಸ ಕಾವೇರಿಗೂ ಅನೇಕ ಬಾರಿ ಭೇಟಿ ಕೊಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ‌ ಮನವಿ ಮಾಡುತ್ತಿರುವ ವಲಸಿಗ ಶಾಸಕರು, ಸಂಪುಟದಲ್ಲಿ ಸ್ಥಾನ ಸಿಗುವಂತೆ ನೋಡಿಕೊಳ್ಳಿ, ನಿಮ್ಮ ಬೆಂಬಲಕ್ಕೆ ನಾವು ಬಂದಿದ್ದೇವೆ. ನಮ್ಮ ಬೆಂಬಲಕ್ಕೆ ನೀವು ನಿಂತುಕೊಳ್ಳಿ ಎಂದು ದುಂಬಾಲು ಬಿದ್ದಿದ್ದಾರೆ.

ಇದನ್ನೂ ಓದಿ:ಬಿಜೆಪಿ ಹೈಕಮಾಂಡ್​ ಮೊದಲ ಭೇಟಿಯಲ್ಲಿ ಸಂಪುಟ ರಚನೆ ಬಗ್ಗೆ ಚರ್ಚಿಸಲ್ಲ; ಸಿಎಂ ಬಸವರಾಜ ಬೊಮ್ಮಾಯಿ

ಸುಧಾಕರ್‌ಗೆ ಆರೋಗ್ಯ ಖಾತೆಯೇ ಬೇಕಂತೆ:

ಯಡಿಯೂರಪ್ಪ ಸರ್ಕಾರದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ಗೂ ಅದೇ ಭಯ ಕಾಡುತ್ತಿದೆ. ಸಚಿವ ಸ್ಥಾನ ನೀಡಬೇಕು. ಅದರಲ್ಲೂ ಹಿಂದೆ ನಿರ್ವಹಿಸುತ್ತಿದ್ದ ಆರೋಗ್ಯ ಖಾತೆಯನ್ನೇ ಕೊಡಬೇಕೆಂದು ಪ್ರಬಲವಾದ ಒತ್ತಡ ಹೇರುತ್ತಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಿಂದಲೂ ಬೊಮ್ಮಾಯಿಯವರ ಪಕ್ಕದಲ್ಲೇ ನಿರಂತರವಾಗಿ ಕಾಣಿಸುತ್ತಿದ್ದಾರೆ. ಯಡಿಯೂರಪ್ಪ ಅವರನ್ನೂ ಭೇಟಿ ಅದೇ ಮನವಿಯನ್ನ ಮಾಡಿಕೊಳ್ಳುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Latha CG
First published: