ಎಎಸ್ಐ ಮನೆಯ ಮಗಳಾದ ಅಂಜಲಿ ಎಂಬ ಕೋತಿ

news18
Updated:June 22, 2018, 5:49 PM IST
ಎಎಸ್ಐ ಮನೆಯ ಮಗಳಾದ ಅಂಜಲಿ ಎಂಬ ಕೋತಿ
news18
Updated: June 22, 2018, 5:49 PM IST
ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ ( ಜೂನ್ 22) :  ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆ ಕೆಲವೊಮ್ಮೆ ದರ್ಪದ ಕಾರಣಕ್ಕೂ ಸುದ್ದಿಗೆ ಗ್ರಾಸವಾಗಿರುತ್ತದೆ. ಇಂತಹ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಎಎಸ್‌ಐ ಓರ್ವರು ಕೋತಿಯೊಂದಕ್ಕೆ ಆಶ್ರಯ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕೆಳಗೆ ಬಿದ್ದು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ಕೋತಿಗೆ ಎಎಸ್ಐ ಯಶೋಧ ಕಟಕೆ ಚಿಕಿತ್ಸೆ ದೊರಕಿಸಿಕೊಟ್ಟು ಜೀವದಾನ ನೀಡಿದ್ದಾರೆ. ಆಕಸ್ಮಿಕವಾಗಿ ಸಿಕ್ಕ ಕೋತಿ ಈಗ ಯಶೋಧಾ ಮನೆಯ ಅತಿಥಿಯಾಗಿ ಮಾರ್ಪಟ್ಟಿದೆ. ಹೆಣ್ಣು ಕೋತಿಯಾಗಿರುವ ಇದಕ್ಕೆ ಅಂಜಲಿ ಎಂಬ ನಾಮಕರಣವನ್ನೂ ಮಾಡಲಾಗಿದ್ದು, ಎಎಸ್ಐ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ನಶಿಸಲಾರಂಭಿಸಿವೆ. ಏನಾದರೂ ಘಟನೆ ಸಂಭವಿಸಿದಾಗ ನೆರವಾಗುವ ಬದಲಿಗೆ ನೋಡುತ್ತಾ ನಿಲ್ಲುವವರ ಸಂಖ್ಯೆಯೇ ಹೆಚ್ಚು. ಏನಾದರೂ ಅಪಘಾತ ಸಂಭವಿಸಿ, ಸಾವು-ಬದುಕಿನ ಹೋರಾಟ ನಡೆಸುತ್ತಿದ್ದರೂ ಇಂತಹ ವೇಳೆಯಲ್ಲಿ ಗಾಯಾಳುಗಳಿಗೆ ನೆರವಾಗುವ ಬದಲಿಗೆ ವೀಡಿಯೋ ದೃಶ್ಯೀಕರಣದಲ್ಲಿ ತೊಡಗಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ ಎಂಬಂತಾಗಿದೆ.

ಗಾಯಗೊಂಡು ವಿಲ ವಿಲ ಒದ್ದಾಡುತ್ತಿರುವ ಮನುಷ್ಯನದ್ದೇ ಈ ಗತಿಯಾದರೆ, ಇನ್ನು ಆ ಸ್ಥಾನದಲ್ಲಿ ಪ್ರಾಣಿಗಳಿದ್ದರೆ ಅದರ ಪರಿಸ್ಥಿತಿ ಏನಾಗಬೇಡ. ಹೀಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಕೋತಿಯೊಂದ ತುತ್ತಾಗಿ, ಕೆಳಗೆ ಬಿದ್ದು ವಿಲವಿಲ ಒದ್ದಾಡುತ್ತಿದ್ದಾಗ ಅದನ್ನು ನೋಡುತ್ತಾ ನಿಂತವರೇ ಹೆಚ್ಚು. ಅಚಾನಕ್ಕಾಗಿ ಅಲ್ಲಿಗೆ ಬಂದಿದ್ದ ಮಹಿಳಾ ಎಎಸ್‌ಐ ಓರ್ವರನ್ನು ಈ ದೃಶ್ಯ ಮನಕಲುಕುವಂತೆ ಮಾಡಿದೆ.

ತಕ್ಷಣ ತೀವ್ರ ಗಾಯಗೊಂಡ ಕೋತಿಯನ್ನು ಹಿಡಿದುಕೊಂಡು ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ.  ಸದ್ಯ ಚಿಕಿತ್ಸೆ ಪಡೆಯುತ್ತಿರುವ ಆ ಕೋತಿ ಕಾಪಾಡಿದ ಎಎಸ್ಐ ಮನೆಯ ಅತಿಥಿಯಾಗಿ ಮಾರ್ಪಟ್ಟಿದೆ. ಕಲಬುರ್ಗಿಯಲ್ಲಿ ಕ್ರೈಂ ಬ್ರ್ಯಾಂಚ್ ನಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಯಶೋಧ ಕಟಕೆ ಕೆಲಸ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.

ಕಲಬುರ್ಗಿಯ ಯಲ್ಲಮ್ಮ ಮಂದಿರದ ಬಳಿ ಬಿದ್ದು ಒದ್ದಾಡುತ್ತಿದ್ದ ಕೋತಿಯನ್ನು ಹಿಡಿದುಕೊಂಡು ಹೋಗಿ, ಮೊದಲು ಮನೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿಕೊಟ್ಟಿದ್ದಾರೆ. ಗಾಯಗೊಂಡ ಕೋತಿಯನ್ನು ಮಗುವಿನ ರೀತಿಯಲ್ಲಿ ಮುದ್ದಿನಿಂದ ಆರೈಕೆ ಮಾಡಿದ್ದಾರೆ. ಗಾಯಗೊಂಡ ಕೋತಿ ಚೇತರಿಸಿಕೊಳ್ಳುತ್ತಿದ್ದು, ಯಶೋಧಾರ ಅಚ್ಚುಮೆಚ್ಚಿನ ಗೆಳೆಯನಾಗಿ ಮಾರ್ಪಟ್ಟಿದೆ.
Loading...

ಯಶೋಧ ಕೂಡೆಂದರೆ ಕೂಡುವು, ಮಲಗೆಂದರೆ ಮನಗುವ, ಕೊಟ್ಟ ಹಣ್ಣು-ಹಾಲನ್ನು ಗಪ ಗಪನೆ ಸೇವಿಸುವ ಕೋತಿ, ಕೆಲವೊಮ್ಮೆ ಯಶೋಧಾರ ಆರೈಕೆಯನ್ನು ಮಾಡುತ್ತದೆ. ತಲೆಯಲ್ಲಿ ಹೇನು ನೋಡುವ ಇತ್ಯಾದಿಯನ್ನು ಮಾಡುತ್ತದೆ. ಗುಣಮುಖ ಹೊಂದುತ್ತಿರುವ ಕೋತಿ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿ ಖುಷಿಪಡುವ, ಇತ್ಯಾದಿ ಮಾಡುವ ಮೂಲಕ ಭರಪೂರ ಮನರಂಜನೆ ನೀಡುತ್ತಿದೆ.

ಮಕ್ಕಳ ಇಲ್ಲದ ಮನೆಯಲ್ಲಿ ಆಕಸ್ಮಿಕವಾಗಿ ಸಿಕ್ಕ ಕೋತಿ ಖುಷಿ ತಂದುಕೊಟ್ಟಿದೆ. ಸದ್ಯ ಚಿಕಿತ್ಸೆ ಮುಂದುವರೆದಿದ್ದು, ಮನೆಯಲ್ಲಿ ಅದನ್ನು ಉಳಿಸಿಕೊಳ್ಳುವುದಾಗಿ ಎಎಸ್ಐ ಯಶೋಧಾ ಕಟಕೆ ತಿಳಿಸಿದ್ದಾರೆ. ಕೇವಲ ಕೋತಿಯೊಂದೇ ಅಲ್ಲ ಪ್ರಾಣಿಗಳೆಂದರೆ ಯಶೋಧಾ ಕಟಕೆಗೆ ಪ್ರಾಣ. ಸದ್ಯ ಮನೆಯಲ್ಲಿ ಮೂರು ನಾಯಿಗಳನ್ನು ಸಾಕಲಾಗಿದೆ. ಗಿಣಿ ಮತ್ತಿತರ ಪಕ್ಷಿಗಳನ್ನು ಸಾಕಿ, ಪಕ್ಷಿ ಪ್ರೇಮವನ್ನೂ ತೋರಿದ್ದಾರೆ.

ಸಾಕು ಪ್ರಾಣಿಗಳಿಗೆ ಏನಾದರೂ ಆಯಿತೆಂದರೆ ಸಾಕು ತನಗೆ ಏನೋ ಆಗಿದೆ ಎನ್ನುವ ರೀತಿಯಲ್ಲಿ ಕಂಗಾಲಾಗುವ ಯಶೋಧಾ, ತಮ್ಮ ಸಂಬಂಳದ ಒಂದು ಪಾಲನ್ನು ಪ್ರಾಣಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ. ಯಶೋಧಾ ಪ್ರಾಣಿ ಪ್ರೇಮಕ್ಕೆ ಮನೆಯವರೂ ನೆರವಾಗುತ್ತಿದ್ದು, ತಮ್ಮ ಮಕ್ಕಳ ರೀತಿಯಲ್ಲಿಯೇ ಪಾಲನೆ ಮಾಡುತ್ತಾ ಬಂದಿದ್ದಾರೆ. ಪ್ರಾಣಿಗಳಿಗೆ ಮಗಳು ತೋರಿಸುತ್ತಿರುವ ಮಮಕಾರಕ್ಕೆ ತಾಯಿ ಸೋನುಬಾಯಿಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಒಟ್ಟಾರೆ ದರ್ಪಕ್ಕೆ ಹೆಸರಾದ ಪೊಲೀಸ್ ಇಲಾಖೆಯಲ್ಲಿಯೂ ಮಾನವೀಯ ಮೌಲ್ಯವುಳ್ಳ, ಪ್ರಾಣಿಗಳಿಗೂ ಮನ ಮಿಡಿಯುವ ಅಧಿಕಾರಿಳಿದ್ದಾರೆ ಎನ್ನಲು ಕಲಬುರ್ಗಿಯ ಎಎಸ್ಐ ಮತ್ತು ಕೋತಿ ಪ್ರಕರಣ ಸಾಕ್ಷಿಯಾಗಿದೆ. ಕರ್ತವ್ಯ ಮುಗಿಸಿಕೊಂಡು ಬಂದ ಕೂಡಲೇ ಯಶೋಧಾ, ಹೆಚ್ಚು ಸಮಯವನ್ನು ಕೋತಿಗೆ ಮೀಸಲಿಡುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಯಶೋಧಾರ ಪ್ರಾಣಿ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಕಾರ್ಯಕ್ಕೆ ಪ್ರೋತ್ಸಾಹವನ್ನೂ ನೀಡುತ್ತಿದ್ದಾರೆ.  

 
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ