ಕಾಲೇಜು ಪುನರಾರಂಭ ಕುರಿತು ಇನ್ನೆರಡು ದಿನದಲ್ಲಿ ನಿರ್ಧಾರ; ಡಿಸಿಎಂ ಅಶ್ವತ್ಧ್​ ನಾರಾಯಣ

ಈಗಾಗಲೇ ಶೇ.75ರಷ್ಟು ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಗಿದೆ. ಸರಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ತೆಗೆದುಕೊಂಡರೆ ಶೇ.65ರಷ್ಟು ವಿದ್ಯಾರ್ಥಿಗಳು ವ್ಯಾಕ್ಸಿನ್‌ ಪಡೆದಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು(ಜು. 16): ಕಾಲೇಜು ಪುನರಾರಂಭದ ಕುರಿತು ಇನ್ನೆರಡು ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.  ಉನ್ನತ  ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಸಿ ಎನ್​ ಅಶ್ವತ್ಥ್​ ನಾರಾಯಣ ತಿಳಿಸಿದರು. ಈಗಾಗಲೇ ಶೇ.75ರಷ್ಟು ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಗಿದೆ. ಸರಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ತೆಗೆದುಕೊಂಡರೆ ಶೇ.65ರಷ್ಟು ವಿದ್ಯಾರ್ಥಿಗಳು ವ್ಯಾಕ್ಸಿನ್‌ ಪಡೆದಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಶೀಘ್ರವೇ ನೀಡಲಾಗುವುದು. ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಲಸಿಕೀಕರಣ ಭರದಿಂದ ಸಾಗುತ್ತಿದೆ ಎಂದರು.

  ಪರೀಕ್ಷೆಗಳನ್ನು ನಡೆಸುವ ಹಾಗೂ ಕಾಲೇಜುಗಳನ್ನು ತೆರೆಯುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಆಫ್‌ಲೈನ್‌ ಕ್ಲಾಸ್‌ ಕಡ್ಡಾಯ ಅಲ್ಲ. ಇಷ್ಟ ಇದ್ದವರು ಲಸಿಕೆ ಪಡೆದು ಬರಬಹುದು, ಇಲ್ಲದವರು ಆನ್‌ಲೈನ್‌ ಕ್ಲಾಸ್‌ನಲ್ಲಿ ಪಾಠ ಕೇಳಬಹುದು. ಆದರೆ, ಹಾಜರಿ ಮಾತ್ರ ಕಡ್ಡಾಯ. ಮೇ ತಿಂಗಳಿಂದಲೇ ಆನ್‌ಲೈನ್‌ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಜತೆಗೆ, ಸಂಪರ್ಕ ತರಗತಿಗಳೂ ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.

  ಪದವಿ ಮತ್ತು ಡಿಪ್ಲೊಮೊ ಸೆಮಿಸ್ಟರ್‌ಗಳ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಕ್ರಮವಾಗಿ ಅಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳ ಒಳಗಾಗಿ ಮುಗಿಸಬೇಕು ಎಂದು ಇದೇ ವೇಳೆ ಅವರು ಎಲ್ಲ ವಿಶ್ವವಿದ್ಯಾಲಯ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ. ಡಿಪ್ಲೊಮೊ ತರಗತಿಗಳ 1, 3 ಮತ್ತು 5ನೇ ಸೆಮಿಸ್ಟರ್‌ಗಳ ಪ್ರಾಯೋಗಿಕ ಪರೀಕ್ಷೆಗಳು ಹಾಗೂ ಬಾಕಿ ಉಳಿದಿರುವ ಥಿಯರಿ ಪರೀಕ್ಷೆಗಳನ್ನು ಅಗಸ್ಟ್‌ ಒಳಗೆ ಮುಗಿಸಬೇಕು ಹಾಗೂ ಪದವಿ ಪರೀಕ್ಷೆಗಳನ್ನು ಅಕ್ಟೋಬರ್‌ ತಿಂಗಳ ಒಳಗಾಗಿ ಮುಗಿಸಬೇಕು ಎಂದು ಸೂಚಿಸಲಾಗಿದೆ

  ಎಲ್ಲ ಪರೀಕ್ಷೆಗಳಲ್ಲೂ ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ. ದೈಹಿಕ ಅಂತರ, ಮಾಸ್ಕ್‌ ಧರಿಸುವುದನ್ನು ತಪ್ಪಿಸುವಂತಿಲ್ಲ. ಒಂದು ವೇಳೆ ಯಾವುದೇ ವಿದ್ಯಾರ್ಥಿಗೆ ಪಾಸಿಟೀವ್‌ ಬಂದಿದ್ದರೆ ಅಂಥರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು. ಬಹುತೇಕ ಎಲ್ಲ ವಿವಿಗಳು ಪರೀಕ್ಷೆಗಳನ್ನು ಮುಗಿಸಿದ್ದು, ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಕರ್ನಾಟಕ ವಿವಿ, ಕಲಬುರಗಿ ವಿವಿ, ಬೆಂಗಳೂರು ವಿವಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಅವರು ಕೂಡ ಈಗ ಪರೀಕ್ಷೆ ಗಳನ್ಜು ನಡೆಸಬಹುದು ಎಂದರು.

  ವೈದ್ಯಕೀಯ ಕಾಲೇಜು ಆರಂಭಕ್ಕೆ ಹಸಿರು ನಿಶಾನೆ.   ರಾಜ್ಯದಲ್ಲಿ ಕಾಲೇಜುಗಳ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್​, ನರ್ಸಿಂಗ್​ ಮತ್ತು ಹೆಲ್ತ್​ ಕೇರ್​ ಅಕಾಡೆಮಿಕ್​ ಕಾಲೇಜುಗಳನ್ನು ಭೌತಿಕವಾಗಿ ತೆರೆಯಲಿ ಸರ್ಕಾರ ಅನುಮತಿ ನೀಡಿದೆ. ಕಾಲೇಜಿಗೆ ಹಾಜರಾಗುವ ವಿದ್ಯಾರ್ಥಿಗಳು, ಶಿಕ್ಷಕರು ಕನಿಷ್ಟ ಒಂದು ಡೋಸ್​ ಲಸಿಕೆ ಪಡೆದಿರುವುದು ಕಡ್ಡಾಯ ಎಂದು ಸುತ್ತೋಲೆಯಲ್ಲಿ ತಿಳಿಸಿದೆ. ಅಲ್ಲದೇ ಕಾಲೇಜುಗಳು ಕೊರೋನಾ ನಿಯಮ ಪಾಲನೆ ಮಾಡುವುದು ಕಡ್ಡಾಯ ಎಂದು ತಿಳಿಸಿದೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: