ಸರ್ಕಾರದ ನಿರ್ಲಕ್ಷ್ಯ; ದಶಕ ಕಳೆದರೂ ಹಂಚಿಕೆಯಾಗದೇ ಪಾಳುಬಿದ್ದ ಆಶ್ರಯಮನೆಗಳು

ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ಬಗ್ಗೆ ಕಾಳಜಿ ತೋರುವ ಸರ್ಕಾರಗಳು ನೆರೆ ಇಳಿದ ಬಳಿಕ ಅವರ ಬಗ್ಗೆ ಮರೆತು ಬಿಡುತ್ತವೆ ಎಂಬುದಕ್ಕೆ ಸಾಕ್ಷಿ ಈ ಘಟನೆಯಾಗಿದೆ. 

news18-kannada
Updated:January 18, 2020, 1:52 PM IST
ಸರ್ಕಾರದ ನಿರ್ಲಕ್ಷ್ಯ; ದಶಕ ಕಳೆದರೂ ಹಂಚಿಕೆಯಾಗದೇ ಪಾಳುಬಿದ್ದ ಆಶ್ರಯಮನೆಗಳು
ಪಾಳುಬಿದ್ದ ಆಶ್ರಯಮನೆಗಳು
  • Share this:
ಬಳ್ಳಾರಿ (ಜ.18): 2009ರ ಭೀಕರ ಪ್ರವಾಹಕ್ಕೆ ತುತ್ತಾದ  ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮಸ್ಥರಿಗೆ ಹೊಸ ಜೀವನ ನೀಡಲು ಮುಂದಾಗಿದ್ದ ಸರ್ಕಾರ ಇದಕ್ಕಾಗಿ ಹೊಸ ಆಶ್ರಯ ಮನೆಗಳ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ದಶಕಗಳೆದರೂ ಸಂತ್ರಸ್ತರಿಗೆ ಈ ಮನೆಗಳು ಮರೀಚಿಕೆಯಾಗಿವೆ. 

ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ಬಗ್ಗೆ ಕಾಳಜಿ ತೋರುವ ಸರ್ಕಾರಗಳು ನೆರೆ ಇಳಿದ ಬಳಿಕ ಅವರ ಬಗ್ಗೆ ಮರೆತು ಬಿಡುತ್ತವೆ ಎಂಬುದಕ್ಕೆ ಸಾಕ್ಷಿ ಈ ಘಟನೆಯಾಗಿದೆ.

2009ರಲ್ಲಿ ಉಂಟಾಗಿದ್ದ ಭೀಕರ ಪ್ರವಾಹ ಉತ್ತರ ಕರ್ನಾಟಕವನ್ನು ತತ್ತರಿಸುವಂತೆ ಮಾಡಿತು. ಇಡೀ ಊರಿಗೆ ಊರೇ ನೆರೆಯಲ್ಲಿ ಕೊಚ್ಚಿ ಹೋದ ಪರಿಣಾಮ ಜನರು ಸಂತ್ರಸ್ತರ ಶಿಬಿರ ಸೇರಿದರು. ಸಿರಗುಪ್ಪದ ಸುತ್ತಮುತ್ತಲ ಗ್ರಾಮಸ್ಥರ ಸ್ಥಿತಿ ಕೂಡ ಇದೇ ಆಗಿತ್ತು. ಮೊದಲೇ ಗಣಿನಾಡು ಜೊತೆಗೆ ಮಳೆ ಅವಾಂತರಕ್ಕೆ ನಲುಗಿದ ಜನರಿಗೆ ಸಹಾಯ ಮಾಡಲು ಸರ್ಕಾರದ ಜೊತೆ ಗಣಿ ಕಂಪನಿ ಮಾಲೀಕರು ಮುಂದಾಗಿ ಮಾನವೀಯತೆ ಮೆರೆದರು.

ಇಲ್ಲಿನ ಭೂಮಿಗಳಿಂದ ಕೋಟಿ ಕೋಟಿ ಸಂಪಾದನೆ ಮಾಡಿದ ಗಣಿ ಮಾಲೀಕರು, ಸಂತ್ರಸ್ತರಿಗೆ ಸಾಲು ಸಾಲು ಆಶ್ರಯ ಮನೆ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಜನರು ಕೂಡ ಹರ್ಷ ವ್ಯಕ್ತಪಡಿಸಿದರು. ಆದರೆ, ಈ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಸರ್ಕಾರ 2011ರಲ್ಲಿ ಗಣಿಗಾರಿಕೆ ನಿಷೇಧ ಮಾಡುತ್ತಿದ್ದಂತೆ ಗಣಿ ಕಂಪನಿಗಳು ಕೂಡ ಮನೆ ನಿರ್ಮಾಣ ಕಾರ್ಯ ಅಪೂರ್ಣಗೊಳಿಸಿದವು. ಇದರಿಂದಾಗಿ ಹೊಸ ಸೂರಿನ ಆಸೆಯಲ್ಲಿದ್ದ ಜನರು ಮತ್ತೆ ನಿರಾಸೆಗೆ ಒಳಗಾದರು.

ಕಡೆಗೆ ಜಿಲ್ಲಾಡಳಿತ ಹಾಗೂ ಸ್ಲಂ ಬೋರ್ಡ್​ನಿಂದ 598 ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಯಿತಾದರೂ ಮನೆ ಹಂಚಿಕೆ ಕಾರ್ಯ ನೆನೆಗುದಿಗೆ ಬಿದ್ದಿತು. ಮನೆ ನಿರ್ಮಾಣ ಮಾಡಿದ ಸರ್ಕಾರ ಇದಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ವಿಫಲವಾದ ಹಿನ್ನೆಲೆ ಜನರು ಕೂಡ ಹೇಗೆ ವಾಸಿಸುವುದು ಎಂದು ಪ್ರಶ್ನಿಸಿದರು.

ಇದನ್ನು ಓದಿ: ಬೆಂಬಲ ಬೆಲೆಗೆ ತೊಗರಿ ಮಾರಬೇಕೆಂದರೆ ಅವಧಿಮೀರಿದ ಚಹಾ ಕೊಳ್ಳುವುದು ರೈತರಿಗೆ ಅನಿವಾರ್ಯ?

ಸಂತ್ರಸ್ತರು ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವಿದ್ಯುತ್​, ಒಳಚರಂಡಿಯಂತಹ ಸೌಲಭ್ಯ ಪಡೆಯದ ಹಿನ್ನೆಲೆಯಲ್ಲಿ ಜನರು ಕೂಡ ಮನೆಗಳಲ್ಲಿ ವಾಸಿಸುವ ಆಸೆ ಕೈಬಿಟ್ಟರು. ವರ್ಷಕಳೆದಂತೆ ಮನೆ ಸುತ್ತ ಗಿಡಗಂಟೆಗಳು ಬೆಳೆದು, ಮನೆಗಳು ವಾಸಕ್ಕೆ ಯೋಗ್ಯವಲ್ಲದಿರುವಂತೆ ಆಗಿದ್ದು ಪಾಳು ಬಿದ್ದಿದೆ.ದಶಕಕಳೆಯುತ್ತಿದ್ದಂತೆ ಮನೆಗಳು ಶಿಥಿಲವಾಸ್ಥೆ ತಲುಪಿದ್ದು, ಪ್ರಯೋಜನಕ್ಕೆ ಬಾರದಂತೆ ಆಗಿದೆ. ಕೋಟಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಿದ ಸರ್ಕಾರ ಅವುಗಳನ್ನು ಸೂಕ್ತವಾಗಿ ಹಂಚಿಕೆ ಮಾಡದ ಹಿನ್ನೆಲೆ ಯಾರಿಗೂ ಪ್ರಯೋಜನಕ್ಕೆ ಬಾರದಂತೆ ಆಗಿರುವುದು ದುರದೃಷ್ಟಕರ.
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ