ಸಿಎಂ ರೇಸ್​ನಲ್ಲಿ 9 ಮಂದಿ? ಅಶೋಕ್ ಕೂಡ ಲಾಬಿ? ಮಂತ್ರಿಪಟ್ಟ ಉಳಿಸಿಕೊಳ್ಳಲು ಈಶ್ವರಪ್ಪ ಕಸರತ್ತು

ಲಿಂಗಾಯತ ಸಮುದಾಯದ ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ಅರವಿಂದ್ ಬೆಲ್ಲದ್, ಹಾಗೂ ಒಕ್ಕಲಿಗ ಸಮುದಾಯದ ಸಿ.ಟಿ. ರವಿ, ಆರ್ ಅಶೋಕ್, ಡಾ. ಅಶ್ವಥ ನಾರಾಯಣ ಮತ್ತು ಬ್ರಾಹ್ಮಣ ಸಮುದಾಯದ ಇಬ್ಬರು, ಹಿಂದುಳಿದ ವರ್ಗಗಳ ಒಬ್ಬರು ಸಿಎಂ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದಾರೆ.

ಪ್ರಹ್ಲಾದ್ ಜೋಶಿ.

ಪ್ರಹ್ಲಾದ್ ಜೋಶಿ.

  • Share this:
ಬೆಂಗಳೂರು (ಜುಲೈ 23): ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರು ಕೆಳಗಿಳಿಯುವ ಸಾಧ್ಯತೆ ದಟ್ಟವಾಗುತ್ತಿರುವಂತೆಯೇ ಸಿಎಂ ರೇಸ್​ನಲ್ಲಿ ಹಲವು ಹೆಸರುಗಳು ಚಾಲನೆಗೆ ಬರುತ್ತಿವೆ. ಪ್ರಲ್ಹಾದ್ ಜೋಷಿ ಹೆಸರು ಪ್ರಧಾನವಾಗಿ ಮೂಡಿಬರುತ್ತಿದ್ದರೂ ಸಿ.ಟಿ. ರವಿ, ಬಿಎಲ್ ಸಂತೋಷ್ ಮತ್ತು ಮುರುಗೇಶ್ ನಿರಾಣಿ ಅವರ ಹೆಸರೂ ಸಿಎಂ ಸ್ಥಾನಕ್ಕೆ ಪರಿಗಣಿತವಾಗಿದೆ ಎಂಬಂತಹ ಮಾತುಗಳು ಬಿಜೆಪಿಯ ಉನ್ನತ ಮಟ್ಟದಲ್ಲಿ ಕೇಳಿಬರುತ್ತಿವೆ. ಇವರ ಜೊತೆಗೆ ಉಪ ಮುಖ್ಯಮಂತ್ರಿ ಡಾ. ಸಿಎನ್ ಅಶ್ವಥ ನಾರಾಯಣ ಅವರ ಹೆಸರೂ ಸಿಎಂ ರೇಸ್​ನಲ್ಲಿದೆ. ಸರ್​ಪ್ರೈಸ್ ಎಲಿಮೆಂಟ್ ಆಗುವ ಸನ್ನಾಹದಲ್ಲಿರುವ ಅರವಿಂದ್ ಬೆಲ್ಲದ್ ಅವರು ದೆಹಲಿಯಲ್ಲಿ ಲಾಬಿ ಮಾಡುತ್ತಿರುವ ಸುದ್ದಿ ಖಚಿತವಾಗಿದೆ. ಆರ್ ಅಶೋಕ್ ಕೂಡ ದೆಹಲಿಯಲ್ಲಿರುವ ತಮ್ಮ ಸ್ನೇಹಿತರನ್ನ ಸಂಪರ್ಕಿಸಿ ಲಾಬಿ ಮಾಡಲು ಯತ್ನಿಸುತ್ತಿರುವುದು ತಿಳಿದುಬಂದಿದೆ. ಬಸವರಾಜ ಬೊಮ್ಮಾಯಿ ಅವರನ್ನ ಸಿಎಂ ಮಾಡುವಂತೆ ಸ್ವತಃ ಯಡಿಯೂರಪ್ಪ ಅವರೇ ಶಿಫಾರಸು ಮಾಡುತ್ತಿದ್ದಾರೆನ್ನಲಾಗಿದೆ. ಇನ್ನು ಕೆಎಸ್ ಈಶ್ವರಪ್ಪ ಅವರು ತಮ್ಮದೇ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.

ರಾಜಕೀಯಕ್ಕೆ ಹೆಚ್ಚು ಪರಿಚಿತರಲ್ಲದ ಅರವಿಂದ್ ಬೆಲ್ಲದ್ ಅವರು ಸಾಕಷ್ಟು ದಿನಗಳಿಂದಲೂ ಸಿಎಂ ಸ್ಥಾನಕ್ಕೆ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ. ಇತ್ತೀಚೆಗಷ್ಟೇ ಕಾಶಿಗೆ ಭೇಟಿ ನೀಡಿದ್ದ ಅರವಿಂದ್ ಬೆಲ್ಲದ್ ಅಲ್ಲಿಂದ ರಾಜಧಾನಿ ದೆಹಲಿಗೆ ಹೋಗಿ ಠಿಕಾಣಿ ಹೂಡಿದ್ಧಾರೆ. ಅಲ್ಲಿ ಅವರು ಪ್ರಮುಖ ನಾಯಕರನ್ನ ಭೇಟಿ ಮಾಡಿ ಲಾಬಿಗೆ ಪ್ರಯತ್ನಿಸುತ್ತಿದ್ದಾರೆ. ಭೂಪೇಂದ್ರ ಯಾದವ್ ಅವರನ್ನ ಬೆಲ್ಲದ್ ಈಗಾಗಲೇ ಭೇಟಿ ಮಾಡಿದ್ದಾರೆ. ಕೇಂದ್ರದಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿರುವ ಭೂಪೇಂದ್ರ ಯಾದವ್ ಮೂಲಕ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗಿ ಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಸಲು ಬೆಲ್ಲದ್ ಪ್ರಯತ್ನಿಸುತ್ತಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Karnataka Dams Water Level: ಕದ್ರಾಂ ಡ್ಯಾಂನಿಂದ ಕಾಳಿ ನದಿಗೆ 40 ಸಾವಿರ ಕ್ಯೂಸೆಕ್ಸ್​ ನೀರು; ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ಸಿಎಂ ರೇಸ್​ನಲ್ಲಿರುವ ಹೆಸರುಗಳು:  
1) ಪ್ರಲ್ಹಾದ್ ಜೋಷಿ
2) ಸಿ.ಟಿ. ರವಿ
3) ಬಿ.ಎಲ್. ಸಂತೋಷ್
4) ಮುರುಗೇಶ್ ನಿರಾಣಿ
5) ಅರವಿಂದ್ ಬೆಲ್ಲದ್
6) ಬಸವರಾಜ ಬೊಮ್ಮಾಯಿ
7) ಆರ್ ಅಶೋಕ್
8) ಡಾ. ಅಶ್ವಥ ನಾರಾಯಣ
9) ಕೆಎಸ್ ಈಶ್ವರಪ್ಪ

ಇನ್ನು, ಆರ್ ಅಶೋಕ್ ಅವರೂ ಇಂದು ಸಿಎಂ ರೇಸ್​ಗೆ ಧುಮುಕಿದಂತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನ ಸಂಪರ್ಕಿಸಿರುವ ಅಶೋಕ್ ಅವರು ಸಿಎಂ ಸ್ಥಾನಕ್ಕೆ ಇರುವ ಸ್ಪರ್ಧೆಗಳ ಮಾಹಿತಿ ಪಡೆದುಕೊಂಡರೆನ್ನಲಾಗಿದೆ. ಇನ್ನು, ಮುರುಗೇಶ್ ನಿರಾಣಿ ಅವರ ಹೆಸರು ಸಿಎಂ ರೇಸ್​ನಲ್ಲಿ ಗಂಭೀರವಾಗಿ ಪರಿಗಣಿತವಾಗಿದೆ. ಆದರೆ, ನಿರಾಣಿ ಅವರನ್ನ ಮುಖ್ಯಮಂತ್ರಿ ಮಾಡಲು ಸಾಕಷ್ಟು ಅಡೆತಡೆಗಳಿವೆ. ಸ್ವತಃ ಯಡಿಯೂರಪ್ಪ ಅವರೇ ನಿರಾಣಿ ಮುನ್ನಡೆಗೆ ತಡೆಗಾಲು ಹಾಕುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಹಾಗೆಯೇ, ಬಹುತೇಕ ವಲಸಿಗ ಸಚಿವರು ಮತ್ತು ಶಾಸಕರೂ ಕೂಡ ನಿರಾಣಿ ಬಗ್ಗೆ ಅಸಮಾಧಾನಗೊಂಡಿದ್ದಾರೆ. ನಿರಾಣಿಯನ್ನ ಸಿಎಂ ಮಾಡಬೇಡಿ ಎಂದು ಅವರೂ ಕೂಡ ಯಡಿಯೂರಪ್ಪಗೆ ಸಲಹೆ ನೀಡುತ್ತಿದ್ದಾರೆ. ಇದೇ ವೇಳೆ, ಯಡಿಯೂರಪ್ಪ ಅವರು ತಮ್ಮ ಪರಮಾಪ್ತ ಹಾಗೂ ನಂಬಿಕಸ್ಥರೆನಿಸಿರುವ ಬಸವರಾಜ ಬೊಮ್ಮಾಯಿ ಅವರನ್ನೇ ಸಿಎಂ ಮಾಡಬೇಕೆಂದು ವರಿಷ್ಠರ ಮೇಲೆ ಒತ್ತಡ ಹೇರುತ್ತಿರುವುದು ಅವರ ಆಪ್ತವಲಯದ ಮೂಲಗಳಿಂದ ತಿಳಿದುಬಂದಿದೆ.

ಇದೇ ವೇಳೆ, ಕುರುಬ ಸಂಘಟನೆಯ ನಾಯಕರುಗಳು ಪತ್ರಿಕಾಗೋಷ್ಠಿ ನಡೆಸಿ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಲಿಂಗಾಯತ, ಒಕ್ಕಲಿಗರಿಗೆ ಸಾಕಷ್ಟು ಬಾರಿ ಸಿಎಂ ಸ್ಥಾನ ಸಿಕ್ಕಿದೆ. ಆದರೆ, ಹಿಂದುಳಿದ ವರ್ಗಗಳಿಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಈ ವರ್ಗಗಳ ಮುಖಂಡರನ್ನ ಮುಖ್ಯಮಂತ್ರಿ ಮಾಡಬೇಕೆಂದು ಕುರುಬ ಮುಖಂಡರು ಆಗ್ರಹಿಸುತ್ತಿದ್ದಾರೆ. ಯಡಿಯೂರಪ್ಪಗೆ ಸರಿಸಮಾನವಾಗಿ ಬಿಜೆಪಿಯನ್ನ ಕಟ್ಟಿಬೆಳೆಸುವಲ್ಲಿ ಕೆಲಸ ಮಾಡಿರುವ ಈಶ್ವರಪ್ಪ ಅವರನ್ನೇ ಮುಖ್ಯಮಂತ್ರಿ ಮಾಡಬೇಕೆಂಬುದು ಇವರ ಕೂಗು. ಈ ಬೆಳವಣಿಗೆ ಹಿಂದೆ ಸಚಿವ ಕೆಎಸ್ ಈಶ್ವರಪ್ಪ ಇದ್ದಾರೆ. ಈಶ್ವರಪ್ಪ ಮತ್ತೊಮ್ಮೆ ಕುರುಬ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ರಾಯಣ್ಣ ಬ್ರಿಗೇಡ್ ಸಂಘಟನೆಯಲ್ಲಿ ಅವರು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಅವರದೇ ಸೂಚನೆ ಮೇರೆಗೆ ಕುರುಬ ಮುಖಂಡರುಗಳು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆನ್ನಲಾಗಿದೆ.

ಇದೆಲ್ಲದರ ಮಧ್ಯೆ ಬಿಜೆಪಿ ಹೈಕಮಾಂಡ್ ಸಿಎಂ ಸ್ಥಾನಕ್ಕೆ ಅಂತಿಮವಾಗಿ ಯಾರಿಗೆ ಅವಕಾಶ ಕೊಡುತ್ತದೆ ಎಂಬುದು ಯಾರಿಗೂ ಊಹಿಸಲು ಕಷ್ಟದ ಕಾರ್ಯ. ಪ್ರಲ್ಹಾದ್ ಜೋಷಿ ಕೇಂದ್ರ ಸಚಿವರಾಗಿ ಮೋದಿ ಮತ್ತು ಶಾಗೆ ಇಷ್ಟವಾಗಿರುವುದರಿಂದ ಅವರನ್ನ ಈಗಲೇ ರಾಜ್ಯ ರಾಜಕಾರಣಕ್ಕೆ ಕಳುಹಿಸುವುದು ಅನುಮಾನ. ಜೊತೆಗೆ, ಜೋಷಿ ಅವರು ಎರಡು ವರ್ಷ ಮಟ್ಟಿಗೆ ಸಿಎಂ ಆಗಲು ಆಸಕ್ತಿ ತೋರುತ್ತಿಲ್ಲ. ಸಿ.ಟಿ. ರವಿ ಮೇಲೆ ಪಕ್ಷ ಸಂಘಟನೆಯ ಗುರುತರ ಜವಾಬ್ದಾರಿ ಇದೆ. ಬಿ.ಎಲ್. ಸಂತೋಷ್ ಕೂಡ ಪಕ್ಷ ಸಂಘಟನೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ ಅವರನ್ನೂ ಸಿಎಂ ಮಾಡಲುವುದು ಅನುಮಾನ ಎಂಬಂತಹ ವಿಶ್ಲೇಷಣೆಗಳು ನಡೆಯುತ್ತಿವೆ. ಹಾಗಾದರೆ, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಸಿಎಂ ಪಟ್ಟ ಕಟ್ಟುತ್ತದೆ ಎಂಬುದು ಕುತೂಹಲ ಮೂಡಿಸಿದೆ.
Published by:Vijayasarthy SN
First published: