ಬೇಡಿಕೆ ಈಡೇರುವ ಭರವಸೆಯೊಂದಿಗೆ ಒಂದೇ ದಿನಕ್ಕೆ ಪ್ರತಿಭಟನೆ ಹಿಂಪಡೆದ ಆಶಾ ಕಾರ್ಯಕರ್ತೆಯರು

ಇಷ್ಟು ದಿನವೇ ಕಾದಿದ್ದೇವೆ, ಬೇಡಿಕೆ ಈಡೇರಿಕೆಯ ಭರವಸೆ ಕೊಟ್ಟಿದ್ದಾರೆ. ಇನ್ನೊಂದೆರಡು ದಿನ ತಾನೇ. ಕಾಯೋಣ ಎಂದು ಸಮಾಧಾನದಿಂದಲೇ ಪ್ರತಿಭಟನೆ ಕೈಬಿಟ್ಟು ತಂತಮ್ಮ ಮನೆಗಳಿಗೆ ತೆರಳಿದರು ಈ ತಾಯಂದಿರು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಸೆ.24): ರಾಜ್ಯದ ನಾನಾ ಭಾಗಗಳಿಂದ ರಾಜಧಾನಿಗೆ ಬಂದು ಪ್ರತಿಭಟನೆ ನಡೆಸಿದ್ದ ಆಶಾ ಕಾರ್ಯಕರ್ತೆಯರು ಬುಧವಾರ ಭರವಸೆಯೊಂದಿಗೆ ಮರಳಿದರು. ವೇತನ ಹೆಚ್ಚಳದ ಬೇಡಿಕೆಯ ಈಡೇರಿಕೆ ಮಾಡುವ ಸಚಿವರ ಭರವಸೆಯ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಮುಗಿಯಿತು.  ಇವರದ್ದು ಇಂದು ನಿನ್ನೆಯ ಹೋರಾಟವಲ್ಲ. ಮಾಸಿಕ 12 ಸಾವಿರ ವೇತನವನ್ನು ನಿಗದಿ ಮಾಡುವಂತೆ ಬೇಡಿಕೆ ಮುಂದಿಟ್ಟುಕೊಂಡು ಆಶಾ ಕಾರ್ಯಕರ್ತೆಯರು ಕಳೆದ 9 ತಿಂಗಳಿಂದ ನಿರಂತರವಾಗಿ ಹೋರಾಡುತ್ತಲೇ ಇದ್ದಾರೆ. ಈ ಹಿಂದೆಯೂ ಈ ಕುರಿತು ಬೃಹತ್ ಪ್ರತಿಭಟನೆ ಮಾಡಿದ್ದಾಗ ಆದಷ್ಟು ಬೇಗ ವೇತನ ಪರಿಷ್ಕರಣೆ ಮಾಡುವ ಭರವಸೆ ನೀಡಿತ್ತು ಸರ್ಕಾರ. ಆದರೆ 6 ತಿಂಗಳು ಕಳೆದರೂ ಇದ್ಯಾವುದೂ ಆಗಿಲ್ಲ. ಹಾಗಾಗಿ ಮತ್ತೊಮ್ಮೆ ಸದನ ನಡೆಯುವ ಸಂದರ್ಭದಲ್ಲಿ ತಮ್ಮ ದನಿ ಮುಟ್ಟಿಸಲು ಆಶಾ ಕಾರ್ಯಕರ್ತೆಯರು ಬುಧವಾರ  ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸೇರಿ ಪ್ರತಿಭಟನೆ ನಡೆಸಿದರು.

Arati saha: ಭಾರತೀಯ ಈಜುಗಾರ್ತಿ ಆರತಿ ಸಹಾ ಅವರ 80ನೇ ಜನ್ಮದಿನವನ್ನು ಸ್ಮರಿಸಿದ ಗೂಗಲ್ ಡೂಡಲ್

ಬೇರೆ ಬೇರೆ ಊರುಗಳಿಂದ ಹೊರಟಿದ್ದ ಅನೇಕ ಕಾರ್ಯಕರ್ತೆಯರನ್ನು ಅಲ್ಲಲ್ಲೇ ಪೋಲೀಸರು ಬಂಧಿಸಿ ಇಲ್ಲಿ ಹೆಚ್ಚಿನ ಜನ ಸೇರದಂತೆ ತಡೆಯುವ ಪ್ರಯತ್ನ ನಡೆಸಿದರು. ಆದ್ರೆ ಇದ್ಯಾವುದಕ್ಕೂ ಬಗ್ಗದೆ ಇದ್ದಷ್ಟೇ ಜನರಲ್ಲಿ ಹೋರಾಟ ಮುಂದುವರೆಸಲಾಯಿತು. ಮಧ್ಯಾಹ್ನದ ವೇಳೆಗೆ ಆರೋಗ್ಯ ಸಚಿವ ಶ್ರೀರಾಮುಲುರನ್ನು ಭೇಟಿ ಮಾಡಲು ತೆರಳಿದ ಆಶಾ ಕಾರ್ಯಕರ್ತೆಯರ ಮುಖಂಡರಿಗೆ ಬೇಗನೇ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದೆ.

ಅಲ್ಲದೇ ಇನ್ನು ಎರಡು ದಿನಗಳಲ್ಲಿ ಖುದ್ದು ಮುಖ್ಯಮಂತ್ರಿಗಳನ್ನೇ ಭೇಟಿಯಾಗಿ ಈ ಬಗ್ಗೆ ಚರ್ಚಿಸಲು ಆಹ್ವಾನ ನೀಡಲಾಗಿದೆ. ಇಷ್ಟು ದಿನವೇ ಕಾದಿದ್ದೇವೆ, ಬೇಡಿಕೆ ಈಡೇರಿಕೆಯ ಭರವಸೆ ಕೊಟ್ಟಿದ್ದಾರೆ. ಇನ್ನೊಂದೆರಡು ದಿನ ತಾನೇ. ಕಾಯೋಣ ಎಂದು ಸಮಾಧಾನದಿಂದಲೇ ಪ್ರತಿಭಟನೆ ಕೈಬಿಟ್ಟು ತಂತಮ್ಮ ಮನೆಗಳಿಗೆ ತೆರಳಿದರು ಈ ತಾಯಂದಿರು.

ಇದರೊಂದಿಗೆ ಕಳೆದ ತಿಂಗಳ ವೇತನವೂ ಬಾಕಿ ಇರುವ ಬಗ್ಗೆ ಸಚಿವರ ಗಮನ ಸೆಳೆದಿದ್ದಾರೆ ಮುಖಂಡರು.‌ ಕೂಡಲೇ ಈ ಬಗ್ಗೆ ಆಯುಕ್ತರ ಬಳಿ ಚರ್ಚಿಸಿದ ಸಚಿವರು ಒಂದೆರಡು ದಿನಗಳಲ್ಲೇ ವೇತನ ನೀಡುವ ವಾಗ್ದಾನ ಮಾಡಿದ್ದಾರೆ. ಹಾಗಾಗಿ ತಮ್ಮ ಬೇಡಿಕೆ ಈಡೇರಿಸುವ ಆಸಕ್ತಿ ಸರ್ಕಾರಕ್ಕೂ ಇದೆ ಎನ್ನುವ ನಂಬಿಕೆ ಆಶಾ ಕಾರ್ಯಕರ್ತೆಯರದ್ದು. ಎಷ್ಟರಮಟ್ಟಿಗೆ ಇದು ಸತ್ಯ ವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಷ್ಟೇ.
Published by:Latha CG
First published: