ಇನ್ನೂ ಬಿಡುಗಡೆಯಾಗದ ಆಶಾ ಕಾರ್ಯಕರ್ತೆಯರ ಗೌರವಧನ, ಈಡೇರದ ಬೇಡಿಕೆ; ಆನ್ಲೈನ್ನಲ್ಲಿ ಪ್ರತಿಭಟನೆ ದಾಖಲು!
ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ಕೊರೋನಾ ಸಾಂಕ್ರಾಮಿಕ ಹಬ್ಬುತ್ತಿರುವ ಸಂದರ್ಭದಲ್ಲಿ ಜನತೆಗೆ ಭರವಸೆಯ ಆತ್ಮವಿಶ್ವಾಸವನ್ನು, ಮುನ್ನೆಚ್ಚರಿಕೆಯನ್ನು, ಜಾಗೃತಿಯನ್ನು ಆಶಾ ಕಾರ್ಯಕರ್ತೆಯರು ಮೂಡಿಸುತ್ತಿದ್ದಾರೆ.
ಆನ್ಲೈನ್ನಲ್ಲಿ ಪ್ರತಿಭಟನೆ ದಾಖಲಿಸಿದ ಆಶಾ ಕಾರ್ಯಕರ್ತರು.
ಬೆಂಗಳೂರು: ಕೊರೋನಾ ಮೊದಲ ಅಲೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ಸರ್ಕಾರ ಆಶಾ ಕಾರ್ಯಕರ್ತರನ್ನೂ ಕೋವಿಡ್ ವಾರಿಯರ್ ಎಂದು ಘೋಷಿಸಿತ್ತು. ಕೊರೋನಾ ಕೆಲಸದ ವೇಳೆ ಮೃತಪಟ್ಟರೆ 50 ಲಕ್ಷ ಪರಿಹಾರ ಮತ್ತು ಕೂಡಲೇ ಎಲ್ಲರ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ಕೊರೋನಾದಿಂದ ಈವರೆಗೆ 16 ಜನ ಆಶಾ ಕಾರ್ಯಕರ್ತರು ಮೃತಪಟ್ಟಿದ್ದು, ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಅಲ್ಲದೆ, ಸಾವಿರಾರು ಆಶಾ ಕಾರ್ಯ ಕರ್ತರಿಗೆ ನೀಡಬೇಕಾದ ಗೌರವಧನವನ್ನೂ ಸರ್ಕಾರ ಈವರೆಗೆ ನೀಡಲು ಮುಂದಾಗಿಲ್ಲ. ಹೀಗಾಗಿ ಬಾಕಿ ಇರುವ ವೇತನ, ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸೋಮವಾರ ಆಶಾ ಕಾರ್ಯಕರ್ತೆಯರು ರಾಜ್ಯ ವ್ಯಾಪಿ ಆನ್ಲೈನ್ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಕೆಲಸದ ಸ್ಥಳಗಳಿಂದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ರಾಜ್ಯ ವ್ಯಾಪಿ ನಡೆಸಿದ ಪ್ರತಿಭಟನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟು ರಾಜ್ಯ ಸರ್ಕಾರಕ್ಕೆ ಮತ್ತು ಆರೋಗ್ಯ ಇಲಾಖೆಗೆ ತಮ್ಮ ಹಕ್ಕೊತ್ತಾಯಗಳಿಗೆ ತಕ್ಷಣ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷರಾದ ಕೆ. ಸೋಮಶೇಖರ ಯಾದಗಿರಿ, ರಾಜ್ಯ ಕಾರ್ಯದರ್ಶಿ ಶ್ರೀಮತಿ ಡಿ. ನಾಗಲಕ್ಷ್ಮಿ, ರಾಜ್ಯ ಉಪಾಧ್ಯಕ್ಷೆ ರಮಾ.ಟಿ.ಸಿ ಸೇರಿದಂತೆ ಅನೇಕ ಆಶಾ ಕಾರ್ಯಕರ್ತೆಯರು ತಮ್ಮ ಸ್ಥಳಗಳಿಂದಲೇ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟಿಸಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ಕೊರೋನಾ ಸಾಂಕ್ರಾಮಿಕ ಹಬ್ಬುತ್ತಿರುವ ಸಂದರ್ಭದಲ್ಲಿ ಜನತೆಗೆ ಭರವಸೆಯ ಆತ್ಮವಿಶ್ವಾಸವನ್ನು, ಮುನ್ನೆಚ್ಚ ರಿಕೆಯನ್ನು, ಜಾಗೃತಿಯನ್ನು ಆಶಾ ಕಾರ್ಯಕರ್ತೆಯರು ಮೂಡಿಸುತ್ತಿದ್ದಾರೆ. ಇವರಿಗೆ ಮೇ ತಿಂಗಳು ಸೇರಿ 3 ತಿಂಗಳಿಂದ ವೇತನ ಕೂಡ ನೀಡಿಲ್ಲ ಎಂದು ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಹೀಗಿವೆ.
ಲಾಕ್ಡೌನ್ ಸಂದರ್ಭದಲ್ಲಿ ಕಳೆದ 2 ತಿಂಗಳ ಮತ್ತು ಮೇ ತಿಂಗಳು ಸೇರಿದರೆ 3 ತಿಂಗಳಿಂದ ವೇತನ
ಕಾರ್ಯಕರ್ತೆಯರಿಗೆ ಕೆಲಸ ಮಾಡುವುದಕ್ಕೆ ಅಗತ್ಯವಿರುವಷು ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ನೀಡಬೇಕು.
ಪ್ರತಿ ಜಿಲ್ಲೆಯಲಿ 20 ರಿಂದ 40 ಮಂದಿ ಆಶಾ ಕಾರ್ಯಕರ್ತೆಯರು ಸೋಂಕಿಕೆ ಒಳಗಾಗಿರುವ ಹಿನ್ನೆಲೆಯಲ್ಲಿ, ಅವರ ಕುಟುಂಬವನ್ನು ಸಶಕ್ತಗೊಳಿಸಲು ಪ್ರತಿ ಆಶಾ ಕಾರ್ಯಕರ್ತೆಯರಿಗೆ ರೂ. 25,000 ಪರಿಹಾರ ನೀಡಬೇಕು.
ಕೊರೊನಾ ಸಂದರ್ಭದಲ್ಲಿನ ವಿಶೇಷ ಸೇವೆಗೆಂದು ಇತರ ಕೊರೊನಾ ವಾರಿಯರ್ಸ್ಗಳಿಗೆ ಆರೋಗ್ಯ ಇಲಾಖೆಯಲ್ಲಿ ನೀಡಲಾಗುವ ಮಾಸಿಕ 5000 ರೂಪಾಯಿ ವಿಶೇಷ ಭತ್ಯೆ(ರಿಸ್ಕ್ ಅಲೋಯನ್ )ಯನ್ನು ಆಶಾ ಕಾರ್ಯಕರ್ತೆರಿಗೂ ನೀಡಬೇಕು.
ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ಮತ್ತು ಈಗ ಕೋವಿಡ್ಯಿಂದ ಸಾವಿಗೀಡಾದ ಕುಟುಂಬಕ್ಕೆ ಘೋಷಣೆಯಾದ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು.
ಈ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಟ್ವೀಟ್ ಮಾಡಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರೂ ಸಹ ಆಶಾ ಕಾರ್ಯಕರ್ತರಿಗೆ ನೀಡಬೇಕಾದ ಗೌರವ ಧನ ಹಾಗೂ ಕೊರೋನಾದಿಂದ ಮೃತಪಟ್ಟವರಿಗೆ ನೀಡಬೇಕಾದ ಪರಿಹಾರ ಹಣ ಎಲ್ಲಿ? ಎಂದು ಪ್ರಶ್ನೆ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ, ಕೂಡಲೇ ಆಶಾ ಕಾರ್ಯಕರ್ತರ ಸಮಸ್ಯೆಯನ್ನು ಬಗೆಹರಿಸಿ ಅವರೂ ಸಹ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಿದ್ದರು.
ಆದರೆ, ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಈ ನಡುವೆ ಆಶಾ ಕಾರ್ಯಕರ್ತರು ಮತ್ತೊಮ್ಮೆ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ಅಸುರಕ್ಷತೆ ಮಧ್ಯೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಇನ್ನಾದರೂ ಪೂರೈಸುತ್ತದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ