ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ನಿಲ್ಲದ ಹೋರಾಟ; ಸಿಎಂ ಮನೆ ಮುತ್ತಿಗೆಗೆ ಯತ್ನ
ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದು, ಕೋವಿಡ್ ಸಮಯದಲ್ಲಿಯೂ ದುಡಿಯುತ್ತಿದ್ದಾರೆ. ಆದರೆ ಸರ್ಕಾರ ಅವರಿಗೆ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿದಂತೆ ಅವಶ್ಯಕ ಆರೋಗ್ಯ ರಕ್ಷಾಣ ಸಲಕರಣೆಗಳು ಸರ್ಕಾರ ನೀಡುತ್ತಿಲ್ಲ, ಮಾಸಿಕ ವೇತನ ನಿಗಧಿ ಮಾಡಿಲ್ಲ ಎಂದು ದೂರಲಾಗುತ್ತಿದೆ.
ಈ ಮೊದಲು ಬೆಂಗಳೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದ ಆಶಾ ಕಾರ್ಯಕರ್ತೆಯರು.
ಬೆಂಗಳೂರು (ಜುಲೈ 29); ಕೆಲಸ ಖಾಯಂಗೊಳಿಸುವುದು, ಗೌರವಯುತ ಜೀವನ ನಡೆಸಲು ಮಾಸಿಕ 12,000 ಗೌರವಧನ ಹಾಗೂ ಕೊರೋನಾ ರಕ್ಷಣಾ ಪರಿಕರಗಳನ್ನು ತಮಗೂ ಸೂಕ್ತ ರೀತಿಯಲ್ಲಿ ಒದಗಿಸಬೇಕು ಎಂದು ಜುಲೈ 10 ರಿಂದ ಅನಿರ್ದಿಷ್ಟಾವದಿ ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕೆ ಮುಂದಾಗಿರುವ ಆಶಾ ಕಾರ್ಯಕರ್ತೆಯರು ಇಂದು ಬೆಂಗಳೂರಿಗೆ ಆಗಮಿಸಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಕಳೆದ ನಾಲ್ಕು ತಿಂಗಳುಗಳಿಂದ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿದ್ದರೂ ಸರ್ಕಾರ ನಮ್ಮ ಹಕ್ಕೊತ್ತಾಯಗಳಿಗೆ ಸ್ಪಂದಿಸಿಲ್ಲ. ಈಗ ಸಿಗುತ್ತಿರುವ ಪ್ರೋತ್ಸಾಹಧನ ಯಾವುದಕ್ಕೂ ಸಾಲುತ್ತಿಲ್ಲ. ಹಾಗಾಗಿ 12,000 ಮಾಸಿಕ ವೇತನ ಮತ್ತು ಕೆಲಸ ಮಾಡುವ ವೇಳೆ ಸೂಕ್ತ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸಬೇಕೆಂದು ಆಶಾ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಲವು ಜಿಲ್ಲೆಗಳಿಂದಾ ನೂರಾರು ಆಶಾ ಕಾರ್ಯಕರ್ತರು ಪ್ರತಿಭಟನೆಗೆ ಆಗಮಿಸಿದ್ದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪೊಲೀಸರು ನಗರದ ಮೌರ್ಯ ಸರ್ಕಲ್ ಬಳಿ ಪ್ರತಿಭಟನಾಕಾರರನ್ನು ತಡೆದಿದ್ದು ಅಲ್ಲಿಯೇ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮುಂದುವರೆದಿದೆ.
ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದು, ಕೋವಿಡ್ ಸಮಯದಲ್ಲಿಯೂ ದುಡಿಯುತ್ತಿದ್ದಾರೆ. ಆದರೆ ಸರ್ಕಾರ ಅವರಿಗೆ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿದಂತೆ ಅವಶ್ಯಕ ಆರೋಗ್ಯ ರಕ್ಷಾಣ ಸಲಕರಣೆಗಳು ಸರ್ಕಾರ ನೀಡುತ್ತಿಲ್ಲ, ಮಾಸಿಕ ವೇತನ ನಿಗಧಿ ಮಾಡಿಲ್ಲ ಎಂದು ದೂರಲಾಗುತ್ತಿದೆ.
ಈ ಹಿಂದೆ ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಹತ್ತಾರು ಭಾರಿ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಗಿದೆ. ಆದರೆ ಸರ್ಕಾರ ಕೇವಲ ಭರವಸೆಗಳಲ್ಲೇ ಕೈತೊಳೆದುಕೊಂಡಿದೆ. ಆದರೆ ಈ ಬಾರಿ ನಮ್ಮ ಹಕ್ಕೊತ್ತಾಯಗಳು ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೆಲ್ಲಾ ಆಶಾ ಕಾರ್ಯಕರ್ತರ ಪ್ರತಿಭಟನೆ ಎಂದರೆ ಬೆಂಗಳೂರು ಗುಲಾಬಿ ನಗರವಾಗಿ ಪರಿವರ್ತನೆಯಾಗುತ್ತಿತ್ತು. ಎಲ್ಲಿ ನೋಡಿದರು ಗುಲಾಬಿ ಬಣ್ಣದ ಸೀರೆಯುಟ್ಟ ಆಶಾ ಕಾರ್ಯಕರ್ತರ ದಂಡು ಕಂಡುಬರುತ್ತಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಕಾರಣವಾಗಿ ಎಲ್ಲಾ ಆಶಾ ಕಾರ್ಯಕರ್ತರು ಈ ಬಾರಿ ಬೆಂಗಳೂರಿಗೆ ಬಂದಿಲ್ಲ. ತಾವಿರುವ ಜಿಲ್ಲೆಗಳಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಪ್ರತಿಭಟನೆಯಲ್ಲಿಯೂ ಸಹ ಸಾಮಾಜಿಕ ಅಂತರ ಕಾಯ್ದುಕೊಂಡು, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ