ಬೆಂಗಳೂರಲ್ಲಿ ಬಸವಧರ್ಮ ಅಲೆ; ಅಸಂಖ್ಯ ಪ್ರಮಥರ ಗಣಮೇಳದಲ್ಲಿ ಹೊಸ ದಾಖಲೆ

ಬಸವಣ್ಣನವರ ಕಾಲದಲ್ಲಿ ಸರ್ವ ಶರಣರ ಸಮಾವೇಶ ನಡೆದಿತ್ತು. ಈಗ 21ನೇ ಶತಮಾನದಲ್ಲಿ ಮುರುಘಾ ಶರಣರು ಈ ಕೆಲಸ ಮಾಡಿದ್ದಾರೆ. ಜಗತತಿನ ಸಾಮಾಜಿಕ ಪರಿವರ್ತನೆಗೆ ಇಂಥ ಸಮಾವೇಶಗಳು ಅಗತ್ಯವಾಗಿವೆ. ಈ ಗಣಮೇಳ ಆಯೋಜಿಸಿರುವ ಮುರುಘಾ ಶರಣರು ಇಡೀ ಸಮಾಜದ ಶ್ಲಾಘನೆಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಸಂಖ್ಯ ಪ್ರಮಥರ ಗಣಮೇಳ

ಅಸಂಖ್ಯ ಪ್ರಮಥರ ಗಣಮೇಳ

 • Share this:
  ಬೆಂಗಳೂರು(ಫೆ. 16): ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಮಾಡಿದ್ದ ಗಣಮೇಳವನ್ನು ನೆನಪಿಸುವಂತೆ ಮುರುಘಾ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅಸಂಖ್ಯ ಪ್ರಮಥರ ಗಣಮೇಳ ಆಯೋಜನೆಗೊಂಡಿದೆ. ನೆಲಮಂಗಲ ಬಳಿಯ ನಂದಿ ಮೈದಾನ(ಬಿಐಇಸಿ)ದಲ್ಲಿ ನಡೆದ ಸರ್ವ ಶರಣರ ಸಮ್ಮೇಳನ ಮತ್ತು ಪ್ರಮಥರ ಗಣಮೇಳ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಮುರುಘಾ ಮಠದ ಶ್ರೀಗಳು, ಸಿದ್ದಗಂಗಾ ಮಠದ ಶ್ರೀಗಳು, ಆರ್ಟ್ ಆಫ್ ಲಿಂಗ್ ಕೇಂದ್ರದ ರವಿಶಂಕರ್ ಗುರೂಜಿ ಸೇರಿದಂತೆ 500ಕ್ಕೂ ಹೆಚ್ಚು ಧರ್ಮಗುರುಗಳ ಸಮ್ಮಿಳನವಾಗಿದೆ. ಡಿಸಿಎಂ ಗೋವಿಂದ ಕಾರಜೋಳ, ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ವಿ. ಸೋಮಣ್ಣ ಸೇರಿದಂತೆ ವಿವಿಧ ರಾಜಕೀಯ ಮುಖಂಡರೂ ಈ ಐತಿಹಾಸಿಕ ಸಮ್ಮೇಳನದಲ್ಲಿ ಭಾಗವಹಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಬಿ.ವಿ. ವಿಜಯೇಂದ್ರ ಅವರು ಈ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷತೆ ವಹಿಸಿದರು.

  ಜಾಗತಿಕ ಶಾಂತಿ ಹಾಗೂ ನೆಮ್ಮದಿಗಾಗಿ ಬಸವಮಂಟಪದ ಮರು ಕಲ್ಪನೆಯಲ್ಲಿ ಈ ಗಣಮೇಳ ಕಾರ್ಯಕ್ರಮ ನಡೆದಿದೆ. 21ನೇ ಶತಮಾನವನ್ನು 12ನೇ ಶತಮಾನವನ್ನಾಗಿ ಪರಿವರ್ತಿಸುವ ಪ್ರಯತ್ನದ ಆದಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಗಣಮೇಳದ ಅಧ್ಯಕ್ಷತೆ ವಹಿಸಿಕೊಂಡ ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾಶರಣರು ತಿಳಿಸಿದರು. ಶ್ರೀಗಳು ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  ದಾಖಲೆ: ಈ ಕಾರ್ಯಕ್ರಮದಲ್ಲಿ 24 ಸಾವಿರ ಜನರು ಒಮ್ಮೆಗೇ ಶಿವಯೋಗ ಮಾಡಿ ಹೊಸ ಲಿಂಕಾ ದಾಖಲೆ ನಿರ್ಮಿಸಿದರು. ಕಾರ್ಯಕ್ರಮಕ್ಕೆ ಬಂದಿದ್ದ ಇಂಡಿಯಾ ಬುಕ್ ಆಫ್ ರೆಕಾರ್ಡ್​ನ ಪ್ರತಿನಿಧಿಗಳು ಈ ಸಂಬಂಧ ಪ್ರಮಾಣ ಪತ್ರವನ್ನು ಕಾರ್ಯಕ್ರಮ ಸಂಘಟಕರಿಗೆ ನೀಡಿದರು.

  ಗಣಮೇಳದ ನೇತೃತ್ವ ವಹಿಸಿದ್ದ ಮುರುಘಾ ಶರಣರ ಕಾರ್ಯಕ್ಕೆ ವೇದಿಕೆಯಲ್ಲಿದ್ದ ಶ್ರೀಗಳೆಲ್ಲರೂ ಶ್ಲಾಘಿಸಿದರು. ಮನುಷ್ಯ ಮನುಷ್ಯನಾಗಿ ಬದುಕಿನ ಕಲೆ ಕಲಿಸಿಕೊಟ್ಟ ಬಸವಣ್ಣನವರ ಪಥದಲ್ಲಿ ನಡೆದರೆ ಬದುಕು ಸಾರ್ಥಕವಾಗುತ್ತದೆ. ರಾಜ್ಯದಲ್ಲಿ ಶಾಂತಿ ಇರುವುದು ಬಸವ ತತ್ವದಿಂದ ಮಾತ್ರ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿಶಂಕರ್ ಗುರೂಜಿ ಮಾತನಾಡಿ, ಜಾತಿ ಜಾತಿಗಳ ನಡುವೆ ಧ್ವೇಷ ಭಿತ್ತುವ ಕೆಲಸವಾಗುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಶರಣರು ಪ್ರತಿಯೊಬ್ಬರನ್ನೂ ಒಗ್ಗೂಡಿಸುವ ಕೆಲಸ ಮಾಡಬೇಕು. ಜಗತ್ತಿನೆಲ್ಲೆಡೆ ಬಸವಣ್ಣನವರ ಸಂದೇಶ ಸಾರುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕರೆ ನೀಡಿದರು. ಇದೇ ವೇಳೆ, ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಆಶೀರ್ವಚನ ಮಾಡಿದರು.

  ಇದನ್ನೂ ಓದಿ: ಮೈಸೂರಿನ ಮಹಿಳಾ ಕ್ರೀಡಾ ವಸತಿ ನಿಲಯದ ಪರಿಶೀಲನೆ ನಡೆಸಿದ ಸಚಿವ ಸಿಟಿ ರವಿ; ಅನೈರ್ಮಲ್ಯ ಕಂಡು ಕೆಂಡಾಮಂಡಲ!

  ನಾನು ಬಸವಣ್ಣನ ಅನುಯಾಯಿ ಎಂದ ಸಿದ್ದರಾಮಯ್ಯ:

  ಬಸವಣ್ಣನವರ ಕಾಲದಲ್ಲಿ ಸರ್ವ ಶರಣರ ಸಮಾವೇಶ ನಡೆದಿತ್ತು. ಈಗ 21ನೇ ಶತಮಾನದಲ್ಲಿ ಮುರುಘಾ ಶರಣರು ಈ ಕೆಲಸ ಮಾಡಿದ್ದಾರೆ. ಜಗತತಿನ ಸಾಮಾಜಿಕ ಪರಿವರ್ತನೆಗೆ ಇಂಥ ಸಮಾವೇಶಗಳು ಅಗತ್ಯವಾಗಿವೆ. ಈ ಗಣಮೇಳ ಆಯೋಜಿಸಿರುವ ಮುರುಘಾ ಶರಣರು ಇಡೀ ಸಮಾಜದ ಶ್ಲಾಘನೆಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  ನಾನು ಬಸವಣ್ಣನವರ ಅನುಯಾಯಿ. ಬಸವ ಜಯಂತಿಯಂದೇ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ. ನನಗೆ ನೈತಿಕ ಬಲ ಕೊಟ್ಟವರಲ್ಲಿ ಮುರುಘಾ ಶರಣರು ಮೊದಲಿಗರು. ನನ್ನ  ಹೋರಾಟಗಳಲ್ಲಿ ನನಗೆ ಆಶೀರ್ವಾದ ಮಾಡಿದ್ದು ಮುರುಘಾ ಶರಣರು. ಕಾಯಕ ಮತ್ತು ದಾಸೋಹದ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಹೊಗಳಿದರು.

  ಇಷ್ಟು ವರ್ಷ ಆದರೂ ಸಮಾಜದಲ್ಲಿ ಸಮಾನತೆ ಬಂದಿಲ್ಲ ಎಂದರೆ ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲವೆಂದೇ ಅರ್ಥ. ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಚಲನೆ ಕೊಟ್ಟರೆ ಮಾತ್ರ ಅಭಿವೃದ್ಧಿ ಆಗುತ್ತದೆ. ಧರ್ಮ, ಜಾತಿ ಭೇದ ಭಾವ ಮಾಡದೇ ಸರ್ವರಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಮಾನತೆ ನೀಡಬೇಕು. ಅಸಮಾನತೆ ಇರುವ ಕಡೆ ಸಾಮರಸ್ಯ ಇರೋಕೆ ಸಾಧ್ಯವಿಲ್ಲ. ದೇಶದಲ್ಲಿ ಆಗುವ ಉತ್ಪಾದನೆಯನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡು ತಿನ್ನಬೇಕು. ಶೂದ್ರ ವರ್ಗದ ಜನ ಕಾಯಕ ಜೀವಿಗಳು. ಆದರೆ, ಅನುಭವಿಸುವುದು ಮತ್ತೊಂದು ವರ್ಗ. ಅಂತರ್ಜಾತಿ ವಿವಾಹವಾಗದಿದ್ದರೆ ಈ ಜಾತಿ ವ್ಯವಸ್ಥೆ ತೊಡೆಯಲು ಸಾಧ್ಯವಿಲ್ಲ. ಅನೇಕ ಸಮಾಜ ಸುಧಾರಕರು, ದಾರ್ಶನಿಕರು, ಸಂತ ಶರಣರು, ಸೂಫಿಗಳು ಈ ಸಮಾಜದ ಪರಿವರ್ತನೆಗಾಗಿ ಮಾನವೀಯ ಮೌಲ್ಯಗಳ ಸ್ಥಾಪನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. 2,500 ವರ್ಷಗಳ ಹಿಂದೆ ಬುದ್ಧ, 900 ವರ್ಷಗಳ ಹಿಂದೆ ಬಸವರ ಆದಿಯಾಗಿ ಅಂಬೇಡ್ಕರ್, ಗಾಂಧಿಜಿ ಅವರೆಲ್ಲರೂ ಶ್ರಮಿಸಿದ್ದಾರೆ. ನುಡಿದಂತೆ ನಡೆದ ಬಸವಾದಿ ಶರಣರ ಹಾದಿಯಲ್ಲಿ ನಾವೂ ನಡೆಯುತ್ತಿದ್ದೇವಾ ಎಂದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

  ಇದನ್ನೂ ಓದಿ: ಭಯಾನಕ ರೋಗ ಬರುತ್ತೆ ಎಂದು 2019ರಲ್ಲೇ ಕಾರ್ಣಿಕ ನುಡಿದಿದ್ದ ಕತ್ನಳ್ಳಿ ಶಿವಯ್ಯ ಹಿರೇಮಠ; ಅದೇನಾ ಕೊರೊನಾ ವೈರಸ್​?

  ಅನುಭವ ಮಂಟಪ ಹೋಲಿಸಿದ ಡಿಸಿಎಂ ಕಾರಜೋಳ:

  ಈ ಗಣಮೇಳ ಕಾರ್ಯಕ್ರಮವು 12ನೇ ಶತಮಾನದ ಅನುಭವ ಮಂಟಪವನ್ನು ನೆನಪಿಸುತ್ತದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. 900 ವರ್ಷದ ಹಿಂದೆ ಅಲ್ಲಮಪ್ರಭು ನೇತೃತ್ವದಲ್ಲಿ ಸರ್ವ ಶರಣರ ಸಮ್ಮೇಳನ ನಡೆದಿತ್ತು. ಈಗ ಮತ್ತೆ ಇದು ನಡೆದಿದೆ. ವಿಶ್ವ ಗುರು ಬಸವಣ್ಣ ಮಾನವರೆಲ್ಲರೂ ಒಂದೇ ಎಂಬ ತೇರನ್ನು ಬಿಟ್ಟು ಹೋಗಿದ್ಧಾರೆ. ಅದನ್ನು ಎಳೆಯುವ ಕೆಲಸ ಮಾಡಬೇಕಿದೆ. ಇಡೀ ಜಗತ್ತಿನಲ್ಲಿ ಯಾವುದಾದರೂ ಶ್ರೇಷ್ಠ ಧರ್ಮ ಇದ್ದರೆ ಅದು ಬಸವಣ್ಣನ ಲಿಂಗಾಯತ ಧರ್ಮ. ಇದು ಮಾನವ ಧರ್ಮ ಆಗಬೇಕು ಎಂದು ಕಾರಜೋಳ ಆಶಿಸಿದರು.

  ಮತ್ತೊಬ್ಬ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಮನುಷ್ಯ ಹುಟ್ಟು, ಸಾವು ಮತ್ತು ಬದಕು ಈ ಮೂರು ವಿಚಾರಗಳನ್ನು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆದರೆ, ನಾವು ಈ ಹುಟ್ಟು ಸಾವಿನ ಮಧ್ಯೆ ಸರಿಯಾದ ಜೀವನ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

  ಸಚಿವ ವಿ. ಸೋಮಣ್ಣ ಮಾತನಾಡಿ ಸಿದ್ದರಾಮಯ್ಯರ ಕಾಲೆಳೆಯುವ ಕೆಲಸ ಮಾಡಿದರು. ನಾನು ಸಿದ್ದರಾಮಯ್ಯರ ಜೊತೆ ಇದ್ದು ಕೆಲಸ ಮಾಡಿದವನು. ರಾಜ್ಯಕ್ಕೆ ಸಿದ್ದರಾಮಯ್ಯನವರ ಕೊಡುಗೆ ಮಹತ್ವದ್ದು. ಅವರ ಅಭಿವೃದ್ಧಿಪರ ಯೋಜನೆಗಳನ್ನ ಯಡಿಯೂರಪ್ಪ ಮುಂದುವರಿಸಿಕೊಂಡು ಹೋಗುತ್ತಿದ್ಧಾರೆ. ಸಿದ್ದರಾಮಯ್ಯ ಎಲ್ಲವನ್ನೂ ಮಾಡಿ ಕೊನೆಗೆ ಸಮಾಜವನ್ನು ಸ್ವಲ್ಪ ಕೆಣಕಿದರು. ಅದರಿಂದಾಗಿಯೇ ಯಡಿಯೂರಪ್ಪಗೆ ಅಧಿಕಾರ ಸಿಕ್ಕಿತು ಎಂದು ವಿ. ಸೋಮಣ್ಣ ತಿಳಿಸಿದರು.

  ಇನ್ನು, ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ಗಣಮೇಳವನ್ನ ಐತಿಹಾಸಿಕ ಕಾರ್ಯಕ್ರಮವೆಂದು ಬಣ್ಣಿಸಿದರು. ಅಣ್ಣ ಬಸವಣ್ಣನವರ ಹಾದಿಯಲ್ಲಿ ನಾವು ನಡೆಯಬೇಕಿದೆ. ಸಮಾಜದಲ್ಲಿ ಧ್ವೇಷ ಮತ್ತು ಅಸೂಹೆಗಳನ್ನ ಹೋಗಲಾಡಿಸಿ ಶಾಂತಿ ನೆಲಸುವಂತೆ ಮಾಡಬೇಕಿದೆ ಎಂದರು.

  ಇದೇ ವೇಳೆ, ಮುರುಘಾ ಮಠದ ಶ್ರೀಗಳು ಬರೆದಿರುವ “ಮಹಾ ಬರೆಗು” ಪುಸ್ತಕ ಬಿಡುಗಡೆಯಾಯಿತು. ಡಿಸಿಎಂ ಕಾರಜೋಳ ಸೇರಿದಂತೆ ವಿವಿಧ ಮಠಾಧೀಶರು ಈ ಪುಸ್ತಕ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮ ಹಲವು ಲಘು ಪ್ರಸಂಗಗಳಿಗೂ ಸಾಕ್ಷಿಯಾಯಿತು. ಬಿ.ವೈ. ವಿಜಯೇಂದ್ರ, ಡಿಸಿಎಂ ಲಕ್ಷ್ಮಣ ಸವದಿ ಮೊದಲಾದ ರಾಜಕೀಯ ಪ್ರತಿಸ್ಪರ್ಧಿಗಳ ಜೊತೆ ಸಿದ್ದರಾಮಯ್ಯ ಆಪ್ಯಾಯಮಾನವಾಗಿ ಮಾತನಾಡುತ್ತಿದ್ದ ದೃಶ್ಯ ಕಂಡುಬಂದಿತು.

  (ವರದಿ: ಅಭಿಷೇಕ್ ಡಿ.ಆರ್.)

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: