• Home
  • »
  • News
  • »
  • state
  • »
  • ನಾ ಕಂಡ ಹರ್ಷಗುಪ್ತ! ಖಡಕ್​ ಐಎಎಸ್ ಅಧಿಕಾರಿಗೆ ನೆಲೆಯೇ ಇಲ್ಲ!

ನಾ ಕಂಡ ಹರ್ಷಗುಪ್ತ! ಖಡಕ್​ ಐಎಎಸ್ ಅಧಿಕಾರಿಗೆ ನೆಲೆಯೇ ಇಲ್ಲ!

ಐಎಎಸ್ ಅಧಿಕಾರಿ ಹರ್ಷಗುಪ್ತ.

ಐಎಎಸ್ ಅಧಿಕಾರಿ ಹರ್ಷಗುಪ್ತ.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಉದ್ಯಮಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದನ್ನು ಸ್ಥಳದಲ್ಲೇ ನಿಂತು ತೆರವು ಮಾಡಿಸಿದ್ರು. ಅದೇ ದಿನ ಪ್ರಭಾವಿಯೊಬ್ಬರ ಒತ್ತುವರಿ ತೆರವಿಗೆ ಭಾರೀ ಪ್ಲಾನ್ ಮಾಡಿದ್ದರು. ಸೂಕ್ತ ಬಂದೋಬಸ್ತ್​ ಕೂಡ ಆಗಿತ್ತು. ಅಷ್ಟೊತ್ತಿಗಾಗಾಲೇ ಹರ್ಷಗುಪ್ತ ಪ್ಲಾನ್​ ವಿಧಾನಸೌಧದ ಮಹಡಿ ಮುಟ್ಟಿತ್ತು. ಪರಿಣಾಮ, ರಾತ್ರೋರಾತ್ರಿ ಹರ್ಷಗುಪ್ತರನ್ನು ವರ್ಗಾವಣೆ ಮಾಡಲಾಗಿತ್ತು.

ಮುಂದೆ ಓದಿ ...
  • Share this:

ಐಎಎಸ್​ ಅಧಿಕಾರಿ ಹರ್ಷಗುಪ್ತ. ಕರ್ನಾಟಕ ಸರ್ಕಾರ ಕಂಡ ಖಡಕ್ ಆಫೀಸರ್. 1997ನೇ ಬ್ಯಾಚ್​ನ ಈ ಅಧಿಕಾರಿ ಕಂಡರೆ ಎಲ್ಲಾ ಸರ್ಕಾರಗಳಿಗೂ ನಡುಕ. ಅದರ ಪರಿಣಾಮವೇ ವರ್ಗಾವಣೆ ಮೇಲೆ ವರ್ಗಾವಣೆ. ವರ್ಷದಲ್ಲಿ ಮೂರು ಮೂರು ಬಾರಿ ಗಂಟುಮೂಟೆ ಕಟ್ಟೋ ಕೆಲಸ. ಪ್ರಾಮಾಣಿಕ ಅಧಿಕಾರಿ ಆಗಿರುವ ಕಾರಣಕ್ಕೇ ಪದೇ ಪದೇ ವರ್ಗಾವಣೆಯಾಗುವ ಕಿರಿಕಿರಿ ತಪ್ಪಿದ್ದಲ್ಲ.


ಈಗ ಹರ್ಷಗುಪ್ತ ಅವರನ್ನು ನೆಲೆಯೇ ಇಲ್ಲದ ಐಎಂಎ ಹಗರಣದ ತನಿಖೆಯ ವಿಶೇಷಾಧಿಕಾರಿ ಮಾಡಿ ವರ್ಗಾವಣೆ ಮಾಡಲಾಗಿದೆ. ಅಲ್ಲಿ ಹರ್ಷಗುಪ್ತಗೆ ಕೆಲಸವೇ ಇಲ್ವಂತೆ. ಹಾಗಂತಾ ಹರ್ಷಗುಪ್ತರೇ ಸರ್ಕಾರಕ್ಕೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಹರ್ಷಗುಪ್ತ ಕೇವಲ ಸಂಬಳಕ್ಕಾಗಿ ಐಎಎಸ್ ಮಾಡಿಕೊಂಡು ಬಂದವರಲ್ಲ. ಆರ್ಥಿಕವಾಗಿ ಸದೃಢವಾದ ಕುಟುಂಬದಿಂದಲೇ ಬಂದವರು. ನಾವೆಲ್ಲಾ ಅಂದುಕೊಳ್ಳುವ ಥರ ಚಿನ್ನದ ಸ್ಪೂನ್​ನಲ್ಲೇ ತಿಂದು ಬೆಳೆದವರು. ಆದರೂ, ಜನಸೇವೆ ಮಾಡಬೇಕೆಂಬುದೇ ಅವರ ಆಶಯ, ಗುರಿ. ಅದಕ್ಕಾಗೇ ಐಎಎಸ್​ ಮಾಡಿಕೊಂಡು ಕರ್ನಾಟಕಕ್ಕೆ ಬಂದರು. ಬೀದರ್ ಡಿಸಿಯಾಗಿ, ಮೈಸೂರು ಡಿಸಿಯಾಗಿ, ಆಹಾರ ಇಲಾಖೆ ಆಯುಕ್ತರಾಗಿ, ಪ್ರಾದೇಶಿಕ ಆಯುಕ್ತರಾಗಿ ಹಾಗೂ ಹೋದ ಎಲ್ಲಾ ಇಲಾಖೆಗಳಲ್ಲೂ ಸುಧಾರಣೆ, ಜನಸೇವೆಗೆ ಆದ್ಯತೆ ಕೊಟ್ಟವರು ಹರ್ಷಗುಪ್ತ.


ನಾ ಕಂಡ ಹರ್ಷಗುಪ್ತ!


ಅದು 2011, ಮೈಸೂರು. ಬೆಳ್ಳಂಬೆಳಗ್ಗೆಯೇ ಮೈಸೂರು ನಗರಕ್ಕೆ ಕಾಡಾನೆಗಳು ಬಂದಿದ್ದವು.  ಮೈಸೂರಿನ ಸಬ್​ ಅರ್ಬನ್ ಬಸ್​ಸ್ಟ್ಯಾಂಡ್​​, ದೇವರಾಜ ಅರಸು ರಸ್ತೆ, ಯೂನಿವರ್ಸಿಟಿ ಸುತ್ತಮುತ್ತ ಮಾಡಿದ್ದ ಅನಾಹುತ ಅಷ್ಟಿಷ್ಟಲ್ಲ. ಅರಣ್ಯ ಅಧಿಕಾರಿಗಳ ತವರೂರು, ಆನೆ ತಜ್ಞರೇ ಇದ್ದರೂ ಆ ಆನೆಗೆ ಕಡಿವಾಣ ಹಾಕಲು ಸಾಕಾಗಿ ಹೋಯ್ತು. ಆಗ ಅಖಾಡಕ್ಕೆ ಇಳಿದಿದ್ದೇ ಆಗಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ. ಎಲ್ಲಾ ಅರಣ್ಯಾಧಿಕಾರಿಗಳ ಸಮನ್ವಯತೆಯೊಂದಿಗೆ ಆನೆಗೆ ಲಗಾಮು ಹಾಕಿ ಮಧ್ಯಾಹ್ನದ ಹೊತ್ತಿಗೆ ಇಡೀ ಮೈಸೂರು ನಿಟ್ಟುಸಿರುವ ಬಿಡುವಂತೆ ಮಾಡಿದ್ದರು. ದಸರಾದಂಥಾ ವಿಶ್ವವ್ಯಾಪಿ ಆಚರಣೆಗಳನ್ನೂ ಯಾವುದೇ ವಿಘ್ನಗಳಿಲ್ಲದಂತೆ ಸುಸೂತ್ರವಾಗೇ ಮಾಡಿದ್ದವರು.


ಹರ್ಷಗುಪ್ತ ಎಷ್ಟು ಖಡಕ್ ಅಂದರೆ, ಡಿಸಿ ಕಚೇರಿಗೆ ಬಂದರೆ ಸಾಕು, ಭ್ರಷ್ಟರೆಲ್ಲರೂ ಕೈ ಕೈ ಹಿಸುಕಿಕೊಳ್ಳುತ್ತಿದ್ದರು. ಭ್ರಷ್ಟರ ಹೆಜ್ಜೆ ಹೆಜ್ಜೆ ಮೇಲೂ ನಿಗಾ ಇಟ್ಟಿದ್ದರು ಹರ್ಷಗುಪ್ತ. ಕೇವಲ ಭ್ರಷ್ಟರಷ್ಟೇ ಅಲ್ಲ, ಅಕ್ರಮ ಭೂ ಒತ್ತುವರಿದಾರರ ಪಾಲಿಗೆ ದು:ಸ್ವಪ್ನರಾಗಿದ್ದರು ಹರ್ಷಗುಪ್ತ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಉದ್ಯಮಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದನ್ನು ಸ್ಥಳದಲ್ಲೇ ನಿಂತು ತೆರವು ಮಾಡಿಸಿದ್ರು. ಅದೇ ದಿನ ಪ್ರಭಾವಿಯೊಬ್ಬರ ಒತ್ತುವರಿ ತೆರವಿಗೆ ಭಾರೀ ಪ್ಲಾನ್ ಮಾಡಿದ್ದರು. ಸೂಕ್ತ ಬಂದೋಬಸ್ತ್​ ಕೂಡ ಆಗಿತ್ತು. ಅಷ್ಟೊತ್ತಿಗಾಗಾಲೇ ಹರ್ಷಗುಪ್ತ ಪ್ಲಾನ್​ ವಿಧಾನಸೌಧದ ಮಹಡಿ ಮುಟ್ಟಿತ್ತು. ಪರಿಣಾಮ, ರಾತ್ರೋರಾತ್ರಿ ವರ್ಗಾವಣೆ. ಆವರೆಗೆ ಯಾರೂ ಮಾಡಲಾಗದ ಕೆಲಸಕ್ಕೆ ಕೈ ಹಾಕಿದ್ದರು ಹರ್ಷಗುಪ್ತ. ಆದರೆ, ಅದಕ್ಕೂ ಪ್ರಭಾವಿಗಳ ಮಧ್ಯಪ್ರವೇಶದಿಂದ ಬ್ರೇಕ್​ ಬಿತ್ತು.


ಇಂಥಾ ಖಡಕ್ ಅಧಿಕಾರಿಗೆ ಎಲ್ಲಿ ಹೋದರೂ ಕಿರುಕುಳ ತಪ್ಪಲೇ ಇಲ್ಲ. ವ್ಯವಸ್ಥೆ ಹದಗೆಡಿಸೋದು, ಸುಧಾರಿಸಲು ಆಗದೇ ಇರುವ ಇಲಾಖೆ ಕೊಡೋದು, ಕಿಮ್ಮತ್ತೇ ಇಲ್ಲದ ಪೋಸ್ಟ್​ಗಳಿಗೆ ನೇಮಕ ಮಾಡುವ ಕೆಲಸ ಆಗುತ್ತಿತ್ತು. ಯಾವ ಸರ್ಕಾರಗಳೂ ಸೂಕ್ತ ಸ್ಥಾನಮಾನ ನೀಡಲೇ ಇಲ್ಲ. ಒಳ್ಳೇ ಕೆಲಸ ಮಾಡೋರಿಗೆ ಸಹಕಾರ ಕೊಡಲೇ ಇಲ್ಲ. ಈ ಬಗ್ಗೆ ಕೆಲ ಐಎಎಸ್ ಅಧಿಕಾರಿಗಳೇ ಸರ್ಕಾರಗಳ ಮೇಲೆ ಅಸಮಾಧಾನಗೊಂಡರು. ಮೌಖಿಕವಾಗಿ ಮನವಿಯನ್ನೂ ಮಾಡಿಕೊಂಡರು. ಆದರೆ, ಹರ್ಷಗುಪ್ತರಂಥ ಖಡಕ್ ಅಧಿಕಾರಿಗಳನ್ನು ಸದುಪಯೋಗ ಮಾಡಿಕೊಳ್ಳುವ ಸರ್ಕಾರಗಳು ಬರಲೇ ಇಲ್ಲ.


ಇದನ್ನು ಓದಿ: ಬಾಂಬ್ ಇಟ್ಟ ಆದಿತ್ಯರಾವ್ ಮಾನಸಿಕ ಅಸ್ವಸ್ಥ ಎಂದು ನಾನು ಹೇಳಿಲ್ಲ; ಗೃಹ ಸಚಿವ ಬಸವರಾಜ ಬೊಮ್ಮಾಯಿ


ಈಗಲೂ ಅಂಥಾದ್ದೇ ಕಥೆ. ಆದರೆ, ಜನಸೇವೆ, ಜನರೇ ಮುಖ್ಯ ಅಂತಾ ಅಧಿಕಾರಕ್ಕೆ ಬರೋ ಸರ್ಕಾರಗಳಿಗೆ ಇಂಥಾ ಪ್ರಾಮಾಣಿಕ, ದಷ್ಟ, ಖಡಕ್​ ಅಧಿಕಾರಿಗಳ ಸದುಪಯೋಗ ಮಾಡಿಕೊಳ್ಳುವ ಮನಸ್ಸೇ ಆಗ್ತಿಲ್ಲ. ಅದು ಆಗದೇ ಇರೋದು ದುರದೃಷ್ಟಕರ.


ಲೇಖಕರು; ಬಿ.ಎಸ್. ಬೈರಹನುಮಯ್ಯ  (ಈ ಲೇಖನ ಲೇಖಕರ ಅಭಿಪ್ರಾಯ)

Published by:HR Ramesh
First published: