ಇಲ್ಲಿ ಶಿವ-ಏಸು ಭಾಯಿ ಭಾಯಿ; ಸರ್ವಧರ್ಮ ಸಹಿಷ್ಣುತೆಗೆ ಈ ಗ್ರಾಮ ಮಾದರಿ

news18
Updated:July 24, 2018, 4:20 PM IST
ಇಲ್ಲಿ ಶಿವ-ಏಸು ಭಾಯಿ ಭಾಯಿ; ಸರ್ವಧರ್ಮ ಸಹಿಷ್ಣುತೆಗೆ ಈ ಗ್ರಾಮ ಮಾದರಿ
news18
Updated: July 24, 2018, 4:20 PM IST
 -ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ದೇಶದ ಮೂಲೆ ಮೂಲೆಯಲ್ಲೂ ಧರ್ಮದ ಹೆಸರಿನಲ್ಲಿ ನಡೆಯುವ ಕೋಮುಗಲಭೆಗಳೇ ಇತ್ತೀಚಿನ ದಿನಗಳ ದೊಡ್ಡ ಸುದ್ದಿಗಳು. ಇದರಿಂದ ಬೇಸತ್ತು ಎಲ್ಲ ಧರ್ಮದ ದೇವರಿಗೆ ಒಂದೇ ದೇವಾಲಯ ಯಾಕೆ ಇರಬಾರದು ಎಂಬ ಕಲ್ಪನೆಯು ನಿಮಗೂ ಬಂದಿರಬಹುದು. ಇಂತಹ ಕಲ್ಪನೆಯೊಂದು ದೇಶದ ಎಲ್ಲಿ ಸಾಕಾರ ಆಗಿದಿಯೋ ಇಲ್ಲವೊ ಗೊತ್ತಿಲ್ಲ. ಆದರೇ ಬೆಳಗಾವಿ ಜಿಲ್ಲೆಯಲ್ಲಿ ಇಂತಹದೊಂದು ಕಲ್ಪನೆ ಅಕ್ಷರಶಃ ಸಾಕಾರಗೊಂಡಿದೆ.

ಬೆಳಗಾವಿಯ ದೇಸನೂರು ಗ್ರಾಮದಲ್ಲಿ ಶಿವ ಮತ್ತು ಏಸು ದೇವರನ್ನು ಒಂದೇ ಸೂರಿನಲ್ಲಿ ಪೂಜಿಸಲಾಗುತ್ತಿದೆ. ದೂರದಿಂದ ನೋಡಿದ್ರೆ ಚರ್ಚ್ ರೀತಿ ಕಾಣುವ ಈ ಕಟ್ಟಡ ದೇಶದಲ್ಲಿ ಹೊಸ ಭಾವೈಕ್ಯತೆಯ ಕೊಂಡಿಯಾಗಿದೆ. ಕಟ್ಟಡದ ಒಳಗೆ ಪ್ರವೇಶಿಸಿಸುತ್ತಿದ್ದಂತೆ ದೇವಸ್ಥಾನ ಕಾಣಸಿಗುತ್ತದೆ. ಇದೇನಪ್ಪ ಚರ್ಚ್ ಮತ್ತು ದೇವಸ್ಥಾನ ಎರಡು ಒಂದೇ ಕಡೆ ಇದೆ ಅಂತ ಅಚ್ಚರಿ ಪಟ್ಟುಕೊಳ್ಳುವುದಂತು ಸತ್ಯ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಸನೂರು ಗ್ರಾಮದ ಈ ಕಟ್ಟಡ ಧರ್ಮ ಸಹಿಷ್ಣುತೆಯ ಸಂಕೇತವಾಗಿ ಇಂದು ಇಡೀ ದೇಶದ ಗಮನ ಸೆಳೆಯುತ್ತಿದೆ.ಒಂದೇ ಕಟ್ಟಡದಲ್ಲಿ ಒಂದು ಭಾಗದಲ್ಲಿ ಶಿವಲಿಂಗ ಮತ್ತೊಂದು ಭಾಗದಲ್ಲಿ ಏಸು ಕ್ರೀಸ್ತನ ಪ್ರತಿಮೆ ಇದೆ. ಸುಮಾರು 16ನೇ ಶತಮಾನದಿಂದ ಇಲ್ಲಿ ಶಿವನ ಆರಾಧನೆಯ ಜತೆಗೆ ಏಸುವಿನ ಪ್ರಾರ್ಥನೆ ನಿತ್ಯವು ಒಟ್ಟೊಟ್ಟಿಗೆ ನಡೆಯುತ್ತಿದೆ. ಖಾವಿಧಾರಿಯಾದ ಫಾದರ್ ಇಲ್ಲಿ ನಿತ್ಯ ಗಂಟೆ ಭಾರಿಸಿ, ಆರತಿ ಎತ್ತಿ ಹಿಂದೂ ಸಂಪ್ರದಾಯದಂತೆ ಶಿವಲಿಂಗಕ್ಕೂ ಹಾಗೂ ಏಸು ಕ್ರಿಸ್ತ ದೇವನಿಗೂ ಪೂಜೆ ಸಲ್ಲಿಸುತ್ತಾರೆ. ವಿಚಿತ್ರ ಅಂದರೇ ಇಲ್ಲಿನ ಫಾದರ್ ಕಾವಿ ಬಟ್ಟೆ, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹಣೆಗೆ ವಿಭೂತಿ ಧರಿಸಿರುವುದು ವಿಶೇಷ. ಹಿಂದೂ ಸಂಪ್ರದಾಯಂತೆ ಇಲ್ಲಿ ಪೂಜೆ ನಡೆಯುತ್ತದೆ ಅಂತ ಇಲ್ಲಿನ ಫಾದರ್ ಸ್ವಾಮಿ ಮೆನಿನೋ ಹೇಳುತ್ತಾರೆ.


ಇಲ್ಲಿ ವಿರಕ್ತ ಮಠದ ಪರಂಪರೆಯ ವ್ಯಕ್ತಿಗಳೆ ಇಲ್ಲಿ ಸ್ವಾಮಿಜಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲಾ ಜಾತಿ, ಧರ್ಮದವರಿಗೆ ಇಲ್ಲಿ ಅವಕಾಶವಿದ್ದು, ಯಾರು ಬೇಕಾದ್ರು ಪೂಜೆ ಸಲ್ಲಿಸಬಹುದು. ಇದರ ಜತೆಗೆ ಇಲ್ಲಿ ಪ್ರಾಥಮಿಕ ಶಾಲೆ, ಅನಾಥಾಲಯ, ರೋಗಿಗಳಿಗೆ ಉಚಿತ ಗಿಡಮೂಲಿಕೆ ಔಷಧಿ ನೀಡಿ ಉಪಚರಿಸುವ ಸಂಪ್ರದಾಯ ಸಹ ಬೆಳೆದು ಬಂದಿದೆ. ಈ ಕಟ್ಟಡವನ್ನು 16ನೇ ಶತಮಾನದಲ್ಲಿ ಸೆಂಟ್ ಜಾನ್ ಪಿಂಟೋ ಎನ್ನುವವರು ನಿರ್ಮಿಸಿದ್ರು. ನಂತರ ಅನೇಕ ಸ್ವಾಮಿಜಿಗಳು ಹಿಂದು ಮತ್ತು ಕ್ರಿಶ್ಚಿಯನ್ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಇಲ್ಲಿ ಭಾರತೀಯ ಸಂಸ್ಕೃತಿಯನ್ನು ಹರಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ವಿಚಿತ್ರ ಅಂದರೆ ಈ ದೇಶನೂರು ಗ್ರಾಮದಲ್ಲಿ ಒಬ್ಬರೇ ಒಬ್ಬರು ಕ್ರಿಶ್ಚಿಯನ್ ಸಮುದಾಯದವರು ಇಲ್ಲ. ಆದರೂ ಇಲ್ಲಿರುವ ಹಿಂದುಗಳೆ ಶಿವಲಿಂಗದ ಜತೆಗೆ ಏಸು ಕ್ರಿಸ್ತನಿಗೂ ಸಹ ಪೂಜೆ, ಪ್ರಾರ್ಥನೆ ಸಲ್ಲಿಸುವ ಪರಂಪರೆಯನ್ನು ಮುಂದುವರೆಸಿದ್ದಾರೆ. ದಿನ ಬೆಳಗಾದ್ರೆ ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿಕಟ್ಟಿ ಕಚ್ಚಾಡುವ ಇಂದಿನ ದಿನಗಳಲ್ಲಿ ಈ ಚರ್ಚ್ ಎಲ್ಲರಿಗೂ ಮಾದರಿಯಾಗಿ ನಿಂತಿದೆ.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...