News18 India World Cup 2019

ಗೌರಿ ನೆನಪು: ಕನ್ನಡ ಸಾರಸ್ವತ ಕ್ಷೇತ್ರಕ್ಕೆ ಲಂಕೇಶ್ ಕುಟುಂಬದ ಕೊಡುಗೆ

ಮೇರು ವ್ಯಕ್ತಿತ್ವದ ಲಂಕೇಶ್ ಕುಟುಂಬ ಇಂದು ಕೊಲೆಗಡುಕ ಸಂಸ್ಕೃತಿಯ ಅನಾಗರಿಕರ ಕೆಂಗಣ್ಣಿಗೆ ಗುರಿಯಾಗಿ ಗೌರಿಯನ್ನು ಕಳೆದುಕೊಂಡಿದೆ. ಪಿ. ಲಂಕೆಶ್ ಮತ್ತು ಅವರ ಕುಟುಂಬ ನಮ್ಮ ನಾಡಿಗೆ ನೀಡಿದ ಕೊಡುಗೆಗಳಿಂದ ಅವರು ನಮ್ಮೊಳಗೆ ಸದಾ ಜೀವಂತವಿರಲಿದ್ದಾರೆ.

Ganesh Nachikethu
Updated:September 5, 2018, 7:24 AM IST
ಗೌರಿ ನೆನಪು: ಕನ್ನಡ ಸಾರಸ್ವತ ಕ್ಷೇತ್ರಕ್ಕೆ ಲಂಕೇಶ್ ಕುಟುಂಬದ ಕೊಡುಗೆ
ಮೇರು ವ್ಯಕ್ತಿತ್ವದ ಲಂಕೇಶ್ ಕುಟುಂಬ ಇಂದು ಕೊಲೆಗಡುಕ ಸಂಸ್ಕೃತಿಯ ಅನಾಗರಿಕರ ಕೆಂಗಣ್ಣಿಗೆ ಗುರಿಯಾಗಿ ಗೌರಿಯನ್ನು ಕಳೆದುಕೊಂಡಿದೆ. ಪಿ. ಲಂಕೆಶ್ ಮತ್ತು ಅವರ ಕುಟುಂಬ ನಮ್ಮ ನಾಡಿಗೆ ನೀಡಿದ ಕೊಡುಗೆಗಳಿಂದ ಅವರು ನಮ್ಮೊಳಗೆ ಸದಾ ಜೀವಂತವಿರಲಿದ್ದಾರೆ.
Ganesh Nachikethu
Updated: September 5, 2018, 7:24 AM IST
- ಡಾ. ಜೆ.ಎಸ್. ಪಾಟೀಲ, ಸಾಹಿತಿ

ಎಪ್ಪತ್ತು ಮತ್ತು ಎಂಬತ್ತರ ದಶಕದ ಮಧ್ಯದ ಅವಧಿ ಕನ್ನಡ ನಾಡಿನ ಪಾಲಿಗೆ ಎಲ್ಲ ರಂಗಗಳಲ್ಲೂ ಘಟಿಸಿದ ಬೆಳವಣಿಗೆಗಳು ರೋಮಾಂಚನಗೊಳಿಸುವ ಅವಿಸ್ಮರಣೀಯ ಕಾಲಘಟ್ಟ. ರೈತಪರ ಚಳುವಳಿ, ಕನ್ನಡಪರ ಗೋಕಾಕ ಚಳುವಳಿ, ದಲಿತಪರ ಚಳುವಳಿ, ಮುಂತಾದ ಜನಪರ ಚಳುವಳಿಗಳು ರೂಪುಗೊಂಡು ಉಚ್ಛ್ರಾಯ ಪಡೆದ ಕಾಲವದು. ಈ ಅವಧಿಯಲ್ಲಿ ಎಲೆಮರೆಯ ಕಾಯಿಯಂತಿದ್ದ ಅದೆಷ್ಟೋ ಜನ ಚಿಂತಕರು, ವಿಚಾರವಾದಿಗಳು, ಲೇಖಕ/ಕವಿ/ಸಾಹಿತಿಗಳು, ಹೋರಾಟಗಾರರು, ನವ ರಾಜಕಾರಣಿಗಳು ಮುನ್ನೆಲೆಗೆ ಬಂದ ವಿಶೇಷ ಸನ್ನಿವೇಶವಿದು.

ರೈತಪರ ಚಳುವಳಿಯ ನೇತಾರ ಪ್ರೊ. ನಂಜುಂಡಸ್ವಾಮಿಯವರ ಪ್ರಭಾವದಿಂದ ಅನೇಕ ಪ್ರತಿಭಾವಂತ ಹೋರಾಟಗಾರರು ರೈತಪರ, ಜನಪರ ಕಾಳಜಿಯನ್ನು ರೂಪಿಸಿಕೊಂಡು ನಾಯಕತ್ವ ಬೆಳೆಸಿಕೊಂಡವರು ಅನೇಕ. ಅಂಥವರ ಸಾಲಿನಲ್ಲಿ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಮುಖರು. ಈ ಕಾಲಘಟ್ಟದಲ್ಲಿ ಕನ್ನಡ ಚಿತ್ರರಂಗದಲ್ಲೂ ಗುಣಾತ್ಮಕ ಬೆಳವಣಿಗೆಗಳು ನಡೆದು, ಆಗ ಹೊಸ ಅಲೆಯ ಕಲಾತ್ಮಕ ಚಿತ್ರಗಳ ನಿರ್ಮಾಣವು ವೇಗಪಡೆದು ಭಾರತೀಯ ಚಿತ್ರಜಗತ್ತಿನ ಗಮನ ಸೆಳೆಯಿತು.

ಸಾಹಿತ್ಯ ವಲಯದಲ್ಲಿ ಅದಾಗಲೇ ಅನೇಕ ಜನ ಬರಹಗಾರರು ತಮ್ಮ ಪ್ರಗತಿಪರ ನಿಲುವುಗಳಿಂದ ಪ್ರವರ್ಧಮಾನಕ್ಕೆ ಬಂದ ಚಂಪಾ, ಕಾರ್ನಾಡ, ಕಂಬಾರ, ಅನಂತಮೂರ್ತಿ ಮುಂತಾದವರು ತಮ್ಮ ಚಿಂತನಶೀಲ ಬರಹಗಳ ಮೂಲಕ ಹೆಸರು ಮಾಡುತ್ತಿರುವಾಗಲೇ ಅವರೆಲ್ಲರ ಅತ್ಯಂತ ಸಮಕಾಲಿನ ಸಹವರ್ತಿಯಾದ ಪಿ.ಲಂಕೇಶ್ ಕೂಡ ಇದೇ ಅವಧಿಯಲ್ಲಿ ಮುನ್ನೆಲೆಗೆ ಬಂದ ಕನ್ನಡದ ಅಪ್ಪಟ ಗ್ರಾಮೀಣ ಹಿನ್ನೆಲೆಯ ದೈತ್ಯ ಪ್ರತಿಭೆ.

ಪಿ.ಲಂಕೇಶ್: ಸಂಕ್ಷಿಪ್ತ ಪರಿಚಯ

ಪಿ.ಲಂಕೇಶ್ ಹುಟ್ಟಿದ್ದು 1935ನೇ ವರ್ಷ, ಶಿವಮೊಗ್ಗೆಯ ಹತ್ತಿರದ ಅರೆಮಲೆನಾಡಿನ ಕೊನಗವಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ. ತಂದೆ ನಂದಿಬಸಪ್ಪ, ತಾಯಿ ದೇವೀರಮ್ಮವರಿಗೆ ಐದನೇ ಮತ್ತು ಕೊನೆಯ ಮಗುವಾಗಿ. ಓದಿದ್ದು ಶಿವಮೊಗ್ಗೆ, ಬೆಂಗಳೂರು ಮತ್ತು ಮೈಸೂರಿನಲ್ಲಿ. ಲಂಕೇಶ್ ಪಡೆದ ಉನ್ನತ ಪದವಿ ಇಂಗ್ಲಿಷ್ ಎಂ.ಎ.; ಆಯ್ಕೆಮಾಡಿಕೊಂಡ ಕ್ಷೇತ್ರ ಅಧ್ಯಾಪನ ವೃತ್ತಿ.
Loading...

ಆರಂಭದ ಮೂರು ವರ್ಷ (1959-62) ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜು, ನಂತರ ಮೂರು ವರ್ಷ ಬೆಂಗಳೂರಿನ ಸೆಂಟ್ರಲ್ ಕಾಲೇಜು, ಆನಂತರ ಒಂದು ವರ್ಷ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕೊನೆಯ ಹನ್ನೆರಡು ವರ್ಷ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿ ಕೆಲಸ.

1978ರಲ್ಲಿ ಅಧ್ಯಾಪಕ ಸ್ಥಾನವನ್ನು ತ್ಯಜಿಸಿ, 1980ರಲ್ಲಿ ಕನ್ನಡ ಪತ್ರಿಕಾರಂಗದಲ್ಲಿ ಪ್ರಪ್ರಥಮ ಟ್ಯಾಬ್ಲಾಯ್ಡ್ ಮಾದರಿಯ ಲಂಕೇಶ್ ಪತ್ರಿಕೆ ಎಂಬ ವಾರಪತ್ರಿಕೆ ಸ್ಥಾಪಿಸಿ ಅದರ ಸಂಪಾದಕರಾಗಿ ಹೊಸ ಕೆಲಸ ಆರಂಭಿಸಿದರು. ಪತ್ರಿಕಾ ವ್ಯವಸಾಯದ ಅನುಭವವೇ ಇಲ್ಲದೆ ಒಂದು ಪತ್ರಿಕೆಗೆ ಇರಬೇಕಾದ ಜನಪರ ಕಾಳಜಿ ಮತ್ತು ಪತ್ರಿಕಾ ಧರ್ಮವನ್ನು ಪಾಲಿಸಿದ ಲಂಕೇಶ್ ಪತ್ರಕರ್ತರಿಗೆ ಮಾದರಿಯಾದರು.

1977ರಲ್ಲಿ ಲಂಕೇಶ್ `ಪಲ್ಲವಿ’ ಚಲನಚಿತ್ರ ನಿರ್ದೇಶಿಸಿದರೆ, 1980ರಲ್ಲಿ ಅವರ ನಾಲ್ಕನೇ ಚಿತ್ರ ಎಲ್ಲಿಂದಲೋ ಬಂದವರು ಬಿಡುಗಡೆಯಾಯಿತು. 1963ರಿಂದ 1997ರ ವರೆಗೆ ಲಂಕೇಶ್ ಅವರು ಐದು ಕಥಾ ಸಂಕಲಗಳು, ಮೂರು ಕಾದಂಬರಿಗಳು, ಒಂದು ಕವನ ಸಂಕಲನ, ಐದು ನಾಟಕಗಳು, ಎರಡು ಅನುವಾದಗಳು ಮತ್ತು ಎರಡು ಗದ್ಯಬರಹಗಳು ಹಾಗೂ ಒಂದು ಆತ್ಮಕಥನ ಬರೆದರು. ಪಲ್ಲವಿ ಚಲನಚಿತ್ರ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಪಡೆದರೆ, ಸಾಹಿತ್ಯಕ್ಕಾಗಿ ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಪಡೆದಿದ್ದಾರೆ.

ಲಂಕೇಶ್ ಕನ್ನಡ ಸಾರಸ್ವತ ಲೋಕದ ಜನರ ನಡುವೆ ಕಂಡುಬರುವ ಅತ್ಯಂತ ವಿಶಿಷ್ಠ ಪ್ರತಿಭೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಕಾರಣ ಸಹಜವಾದ ಒರಟುತನ, ನಿಷ್ಕಪಟ ಭಾವ, ನೇರನುಡಿಯ ಸ್ವಭಾವದವರಾಗಿದ್ದ ಲಂಕೇಶ್ ಜೀವನವನ್ನು ಯಾವಾಗಲೂ ಬಂದಂತೆ ಸ್ವೀಕರಿಸಿ ಸುರಕ್ಷಿತ ವಲಯದಲ್ಲಿ ಬದುಕಿದವರಲ್ಲ. ಇಲ್ಲದ ಸವಾಲುಗಳನ್ನು ಮೈಮೇಲೆ ಎಳೆದುಕೊಂಡು, ಘಟಾನುಘಟಿಗಳನ್ನು ಎದುರುಹಾಕಿಕೊಂಡು, ಸತ್ಯದ ಮಾರ್ಗ ದುರ್ಗಮವಾದರೂ ಸೈ ತನಗೆ ಸರಿ ಅನ್ನಿಸಿದ್ದನ್ನು ಮಾಡಿ ಜಯಸಿದ ಸಾಹಸಿಗ.

ಲಂಕೇಶರ ವ್ಯಕ್ತಿತ್ವವನ್ನು ವಿಶಿಷ್ಠ ಎಂದು ನಾನು ಹೇಳಿದ್ದರ ಹಿಂದೆ ಒಂದು ಬಲವಾದ ಕಾರಣವಿದೆ. ಅದೇನೆಂದರೆ, ಗ್ರಾಮೀಣ ಹಿನ್ನೆಲೆಯ ಕನ್ನಡ ಮಾಧ್ಯಮದಲ್ಲಿ ಓದಿ ಇಂಗ್ಲಿಷ್ ವಿಷಯದ ಬೋಧನಾ ವೃತ್ತಿಯ ಆಯ್ಕೆ, ಚಲನಚಿತ್ರರಂಗದ ಹಿನ್ನೆಲೆ, ಅನುಭವ ಏನೂ ಇಲ್ಲದೆ ನಟನಾಗಿ, ನಿರ್ದೇಶಕನಾಗಿ ಮೊದಲ ಪ್ರಯತ್ನದಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆಯುವುದು ಹಾಗೂ ಪತ್ರಿಕೋದ್ಯಮದ ಪದವಿಯಾಗಲಿ, ಅನುಭವವಾಗಲಿ ಇಲ್ಲದೆ ಪತ್ರಿಕೆ ಆರಂಭಿಸಿ ಅಭೂತಪೂರ್ವ ಯಶಸ್ಸುಗಳಿಸುವುದು.

ಸಮಾಜವಾದಿಗಳ ನೆಲದಲ್ಲಿ ಹುಟ್ಟಿ, ಹಿರಿಯ ಮತ್ತು ಸಮಕಾಲಿನ ಸಮಾಜವಾದಿಗಳ ಸಹವಾಸದಲ್ಲಿ ಬೆಳೆದು ಸಮಾಜವಾದ ಮತ್ತು ಜನಪರ ತುಡಿತಗಳು ಮೈಗೂಡಿಸಿಕೊಂಡಿದ್ದ ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ಸಾಮಾನ್ಯ ಜನರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡುತ್ತಿದ್ದುದ್ದನ್ನು ನಾವೆಲ್ಲ ನೋಡುತ್ತ ಬೆಳೆದಿದ್ದೇವೆ.

ಲಂಕೇಶ್ ಪತ್ರಿಕೆ ಎಂದರೆ ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಭ್ರಷ್ಟ ಅಧಿಕಾರಿಗಳ ಮತ್ತು ರಾಜಕಾರಣಿಗಳ ಎದೆ ನಡುಗುತ್ತಿತ್ತು. ಲಂಕೇಶ್ ಅಂದು ಎಷ್ಟೊಂದು ಪ್ರಭಾವಶಾಲಿ ಪತ್ರಕರ್ತವರಾಗಿದ್ದರೆಂದರೆ ಕೆಲವು ಮುಖ್ಯಮಂತ್ರಿಗಳು ತಮ್ಮ ಸಂಪುಟಕ್ಕೆ ಮಂತ್ರಿಗಳನ್ನು ಸೇರಿಸಿಕೊಳ್ಳಲು ಇವರ ಸಲಹೆ ಕೇಳುತ್ತಿದ್ದುದುಂಟು.

ಕರ್ನಾಟಕದಲ್ಲಿ ಅವ್ಯಾಹತ ಮೂವತ್ತೈದು ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಕೊನೆಗಾಣಿಸಿ ಪ್ರಥಮ ಕಾಂಗ್ರೆಸೇತರ ಸರಕಾರದ ಆಯ್ಕೆಯಲ್ಲಿ ಲಂಕೇಶ್ ಪತ್ರಿಕೆ ವಹಿಸಿದ ಪಾತ್ರ ಮತ್ತು ಲಂಕೇಶರ ಪ್ರಭಾವ ನಾವ್ಯಾರೂ ಮರೆಯುವಂತಿಲ್ಲ. ತಮ್ಮ ಪತ್ರಿಕೆ ಮತ್ತು ಬರಹಗಳ ಮುಖೇನ ಒಂದು ಕಡೆ ನಾಡಿನ ಸಾಮಾನ್ಯ ಜನರಿಗೆ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿದ್ದ ಲಂಕೇಶ್ ಮತ್ತೊಂದು ಕಡೆ ನಾಡಿನ ಯುವ ಜನಾಂಗದಲ್ಲಿ ವೈಚಾರಿಕ ಪ್ರಜ್ಞೆಯನ್ನು ಬಿತ್ತಿ ಅದನ್ನು ಗಟ್ಟಿಗೊಳಿಸುತ್ತ ಸಾಗಿದ್ದು ಅನನ್ಯ. ನಾವೆಲ್ಲ ಲಂಕೇಶರ ಪ್ರಭಾವದಿಂದಲೇ ನೇರ ನುಡಿ, ನಿರ್ಭೀಡೆ ಮತ್ತು ವೈಚಾರಿಕತೆಯನ್ನು ರೂಢಿಸಿಕೊಂಡವರು. ತಮ್ಮ ಪತ್ರಿಕೆಯ ಮೂಲಕ ಅನೇಕ ಪ್ರತಿಭೆಗಳಿಗೆ ಬರೆಯುವ ಅವಕಾಶ ಮಾಡಿಕೊಡುವ ಮೂಲಕ ಲಂಕೇಶ್ ಒಂದು ವೈಚಾರಿಕ ಬರಹಗಾರರ ಸಮೂಹವನ್ನೇ ಹುಟ್ಟುಹಾಕಿದರು.

ತಮ್ಮ ಜಾತ್ಯಾತೀತ ನಿಲುವು ಮತ್ತು ಮಾತೃ ಸದೃಶ ಅಂತಃಕರಣದ ಮೂಲಕ ನಾಡಿನಾದ್ಯಂತ ಯುವಕರನ್ನು ವೈಚಾರಿಕ ಚಿಂತನೆಗೆ ಹಚ್ಚಿದ್ದರು. ಅವರ ಗರಡಿಯಲ್ಲಿ ಬೆಳೆದ ಟಿ.ಎನ್.ಸೀತಾರಾಮ್, ಸಿ.ಎಸ್. ದ್ವಾರಕಾನಾಥ್, ನಟರಾಜ್ ಹುಳಿಯಾರ್, ಟಿ.ಕೆ. ತ್ಯಾಗರಾಜ್, ರವೀಂದ್ರ ರೇಷ್ಮೆ, ಸಾರಾ ಅಬೂಬಕರ್, ದಿ. ಪುಂಡಲೀಕ್ ಶೇಟ್ ಮುಂತಾದವರಲ್ಲದೆ ಇತ್ತೀಚಿಗೆ ನಿಧನರಾದ ಪ್ರೊ. ಬಿ.ವಿ.ವೀರಭದ್ರಪ್ಪನವರೂ ಒಬ್ಬರು.

ತದನಂತರ ಲಂಕೇಶ್ ಕಾಲವಾದ ಮೇಲೆ ಅವರ ಶಿಷ್ಯರಲ್ಲಿ ಕೆಲವರು ಲಂಕೇಶ್ ನಂಬಿದ್ದ ಸಿದ್ಧಾಂತಗಳಿಗೆ ವ್ಯತಿರಿಕ್ತವಾದ ಹಾದಿ ತುಳಿದು ಹಣ, ಅಧಿಕಾರದ ಹಿಂದೆ ಹೋದರು ಎನ್ನುವುದನ್ನು ಹೊರತುಪಡಿಸಿದರೆ ಲಂಕೇಶರ ವೈಚಾರಿಕ ಹಾದಿಯಲ್ಲಿ ಬಹಳಷ್ಟು ಅವರ ಅನುಯಾಯಿಗಳು ಬದುಕನ್ನು ಕಟ್ಟಿಕೊಂಡರೆನ್ನುವುದೂ ಅಷ್ಟೇ ಸತ್ಯ. ಪತ್ರಿಕೆಯಾಚೆಗಿನ ಅವರ ಕಾರ್ಯಕ್ಷೇತ್ರಗಳೆಂದರೆ ಕಥೆ, ಕವನ, ಕಾದಂಬರಿ ಮತ್ತು ನಾಟಕಗಳ ಬರವಣಿಗೆ. ಅವರೆಂದಿಗೂ ಪ್ರಶಸ್ತಿಗಾಗಿ ಬರೆಯಲಿಲ್ಲ ಮತ್ತು ಬರೆದ ಮೇಲೆ ಪ್ರಶಸ್ತಿಗಳಿಗಾಗಿ ಆಳುವವರನ್ನು ಓಲೈಸಲಿಲ್ಲ.

ಕಲುಷಿತವಾಗುತ್ತಿರುವ ರಾಜಕೀಯ ಕ್ಷೇತ್ರವನ್ನು ಗಮನದಲ್ಲಿರಿಸಿಕೊಂಡು ಒಂದು ಕ್ಷಣ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಒಂದು ವಿಫಲ ಯತ್ನಕ್ಕೂ ಲಂಕೇಶ್ ಕೈ ಹಾಕಿದ್ದರು. "ಪ್ರಗತಿರಂಗ" ಕಟ್ಟಿಕೊಂಡು ಅವರ ನೆಚ್ಚಿನ ಗೆಳೆಯ, ಒಡನಾಡಿ ರಾಮದಾಸ್, ತೇಜಸ್ವಿ ಮುಂತಾದವರು ಕೂಡಿಕೊಂಡು ನಾಡಿನಾದ್ಯಂತ ಸಂಚರಿಸಿದ್ದರು. ಆ ಪ್ರಯತ್ನದಲ್ಲಿ ಯಶಸ್ಸಿಲ್ಲ ಎನ್ನುವುದನ್ನು ಬಹು ಬೇಗ ಅರಿತುಕೊಂಡು ಅದನ್ನು ಅಲ್ಲಿಗೇ ಕೈಬಿಟ್ಟು, ಯಥಾಸ್ಥಿತಿ ಪತ್ರಿಕೋದ್ಯಮದಲ್ಲಿ ನಿರತರಾಗಿದ್ದರು.

ಲಂಕೇಶ್ ಮನಸ್ಸು ಮಾಡಿದರೆ ಸಮಾಜಸೇವೆ, ಪತ್ರಿಕಾ ಸೇವೆ ಮುಂತಾದ ಕೋಟಾಗಳಲ್ಲಿ ವಿಧಾನ ಪರಿಷತ್ತು ಅಥವಾ ರಾಜ್ಯಸಭೆಯ ಸದಸ್ಯರಾಗಿ ಅಧಿಕಾರ ಅನುಭವಿಸಬಹುದಿತ್ತು. ಆದರೆ ಅವರು ಇಂಥದ್ದರಿಂದ ಸದಾ ಅಂತರ ಕಾಯ್ದುಕೊಂಡು, ಯಾರ ಮುಲಾಜಿನಲ್ಲೂ ಸಿಲುಕದೆ ಸ್ವಾಭಿಮಾನದಿಂದಲೇ ಬದುಕಿದರು.

ಗೌರಿ ಲಂಕೇಶ್: ಗೌರಿ ಲಂಕೇಶ್ ಎನ್ನುವ ಹೆಸರು ಹೋರಾಟ ಮನೋಭಾವದ ಯುವಕರಿಗೆ ಅದೊಂದು ಪ್ರೇರಕ ಶಕ್ತಿ. ತಂದೆಯ ಸೈದ್ಧಾಂತಿಕ ಪ್ರಖರತೆ, ಹೋರಾಟದ ಕೆಚ್ಚು ಮುಂತಾದ ಗುಣಗಳ ಕಲಸುಮೇಲೋಗರವಾಗಿದ್ದ ಗೌರಿಯದು ಒಂದರ್ಥದಲ್ಲಿ ಸಂಕೀರ್ಣ ವ್ಯಕ್ತಿತ್ವ. ಪತ್ರಿಕಾ ವ್ಯವಸಾಯಕ್ಕೆ ಜನಪರ ಹೋರಾಟದ ಮುಖವಾಡ ತೊಡಿಸಿದ ಧೀರ ಹೆಣ್ಣುಮಗಳು ಗೌರಿ.

ಕವಿತಾ ಲಂಕೇಶ್:  ಪಿ.ಲಂಕೇಶ್ ಅವರ ಕಿರಿಯ ಮಗಳು ಕವಿತಾ ಲಂಕೇಶ್. ಇಂಗ್ಲಿಷ್ ಸಾಹಿತ್ಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಧರೆ. ಆಮೇಲೆ ಜಾಹಿರಾತು ವಿಷಯದಲ್ಲಿ ಡಿಪ್ಲೋಮಾ ಪದವಿ ಪಡೆದ ಭಾರತದ ಖ್ಯಾತ ಸಾಕ್ಷ್ಯಚಿತ್ರಗಳ ನಿರ್ಮಾಪಕಿ, ನಿರ್ದೇಶಕಿ ಮತ್ತು ಚಿತ್ರಕಥಾ ಲೇಖಕಿ. ಕವಿತಾ ಕನ್ನಡದಲ್ಲಿ ಕೆಲವೇ ಕೆಲವು ಅತ್ಯುತ್ತಮ ಗುಣಮಟ್ಟದ ಚಲನ ಚಿತ್ರಗಳನ್ನು ನಿರ್ದೇಶಿಸಿ ಅನೇಕ ಪ್ರಶಸ್ತಿಗಳು ಪಡೆದವರು.

ತಂದೆಯಂತೆ ಸಾಮಾಜಿಕ ಸಂವೇದನೆ ಹೊಂದಿರುವ ಕವಿತಾ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಸಿದ್ಧಿ ಬುಡಕಟ್ಟು ಮತ್ತು ನೀನಾಸಂ ಕುರಿತು ಸಾಕ್ಷ್ಯಚಿತ್ರ ನಿರ್ದೇಶಿಸಿದ್ದಾರೆ. ಸುಮಾರು ಐವತ್ತು ಸಾಕ್ಷ್ಯಚಿತ್ರಗಳು, ಐದಾರು ಚಲನಚಿತ್ರಗಳು ನಿರ್ದೇಶಿಸಿರುವ ಕವಿತಾ ಅವರು ಆಸ್ಕರ್ ಮೊದಲುಗೊಂಡು ಅನೇಕ ಪ್ರತಿಷ್ಠಿತ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಆಯ್ಕೆಗಾರ್ತಿ ಮತ್ತು ಜ್ಯೂರಿಯಾಗಿ ಕೆಲಸ ಮಾಡಿದ್ದಾರೆ.

ನಮ್ಮ ಶಾಲಾ ಮಕ್ಕಳಿಗೆ ಕೃಷಿ ಹಾಗೂ ಗ್ರಾಮಿಣ ಬದುಕಿನ ಪರಿಚಯ ಮಾಡಿಸಲೋಸುಗ "ಗ್ರಾಮೀಣ ಕ್ಯಾಂಪ್" ಹೆಸರಿನ ರೆಸಾರ್ಟ್ ಕೂಡಾ ಇವರು ನಡೆಸುತ್ತಾರೆ. ಕವಿತಾರದು ತಂದೆಯಂತೆ ಬಹುಮುಖ ಪ್ರತಿಭೆ. ತನ್ನ ಸ್ವಂತದ ದಾರಿಯಲ್ಲಿ ಸಾಗಿ ಕನ್ನಡ ಸಾಂಸ್ಕ್ರತಿಕ ಜಗತ್ತಿಗೆ ಅನುಪಮ ಕೊಡುಗೆಯನ್ನು ನೀಡುತ್ತಿದ್ದಾರೆ.

ಇಂದ್ರಜೀತ್ ಲಂಕೇಶ್: ಇಂದ್ರಜೀತ್ ಲಂಕೇಶ್ ಪಿ.ಲಂಕೇಶ್ ಅವರ ಮಕ್ಕಳಲ್ಲಿ ಕೊನೆಯ ಮತ್ತು ಏಕೈಕ ಮಗ. ಕ್ರಿಕೆಟ್ ಆಟಗಾರನಾಗಿ ವೃತ್ತಿ ಆರಂಭಿಸಿದ ಇಂದ್ರಜೀತ್ ತಂದೆ ಬದುಕಿರುವಾಗಲೇ ಕನ್ನಡದಲ್ಲಿ ಪ್ರಪ್ರಥಮ "ಆಲ್ರೌಂಡರ್" ಎಂಬ ಕ್ರೀಡಾ ಪತ್ರಿಕೆ ಆರಂಭಿಸಿದರು. ನಂತರ 1992ರಲ್ಲಿ ತಂದೆಯವರ ಲಂಕೇಶ್ ಪತ್ರಿಕೆಗೆ ಉಪಸಂಪಾದಕನಾಗಿ ಸೇರಿಕೊಂಡು ಇಂದಿಗೂ ಆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಮತ್ತು ಪ್ರಕಾಶಕ.

ತಂದೆಯ ಸಿದ್ಧಾಂತಗಳ ಪ್ರಭಾವವಿಲ್ಲದಿದ್ದರೂ ಇಂದ್ರಜೀತನದ್ದು ಬಹುಮುಖ ಪ್ರತಿಭೆ. ಕ್ರೀಡೆ, ಪತ್ರಿಕೆ, ಚಲನಚಿತ್ರ ಇತ್ಯಾದಿ ರಂಗಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ನಾವು ಕಾಣುತ್ತೇವೆ. ಕನ್ನಡದಲ್ಲಿ ಆರೇಳು ಚಲನಚಿತ್ರಗಳು ನಿರ್ದೇಶಿಸಿ ಅನೇಕ ಪ್ರಶಸ್ತಿಗಳು ಪಡೆದಿರುವ ಇಂದ್ರಜೀತ್ ತನ್ನನ್ನು ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾತ. ತನ್ನ ತಂದೆ, ಇಬ್ಬರು ಅಕ್ಕಂದಿರಕ್ಕಿಂತ ಅನೇಕ ವಿಷಯಗಳಲ್ಲಿ ಭಿನ್ನ ನಿಲುವು, ವೈರುಧ್ಯಗಳು ಹೊಂದಿದ್ದರೂ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದುಡಿಯುತ್ತಿರುವುದು ಅಲ್ಲಗಳೆಯಲಾಗದು.

ಪಿ.ಲಂಕೇಶ್ ಅತ್ಯಂತ ಸಾಮಾನ್ಯ ಗ್ರಾಮೀಣ ಹಿನ್ನೆಲೆಯ ಕುಟುಂಬದಿಂದ ಬಂದು ಕನ್ನಡ ಸಾರಸ್ವತ ಮತ್ತು ಪತ್ರಿಕಾರಂಗಗಳು ವೈದಿಕರ ಕೈ ವಶದಲ್ಲಿರುವ ಕಾಲಘಟ್ಟದಲ್ಲಿ ಅವರಿಗೆ ಸೆಡ್ಡು ಹೊಡೆದು ಹೆಮ್ಮರವಾಗಿ ಬೆಳೆದು ನಿಂತರು. ತಾವು ಬೆಳೆಯುವುದಲ್ಲದೆ ತಮ್ಮೊಂದಿಗೆ ಅನೇಕ ಶೂದ್ರಪ್ರತಿಭೆಗಳನ್ನು ಬೆಳೆಸುತ್ತ, ನಾಡಿನಾದ್ಯಂತ ಯುವಜನತೆಯಲ್ಲಿ ಶೂದ್ರಪ್ರಜ್ಞೆಯನ್ನು ಜಾಗೃತೆಗೊಳಿಸಿದರು.

ಗೌರಿ ನೆನಪು: ಇಂಥ ಮೇರು ವ್ಯಕ್ತಿತ್ವದ ಲಂಕೇಶ್ ಕುಟುಂಬ ಇಂದು ಕೊಲೆಗಡುಕ ಸಂಸ್ಕೃತಿಯ ಅನಾಗರಿಕರ ಕೆಂಗಣ್ಣಿಗೆ ಗುರಿಯಾಗಿ ಗೌರಿಯನ್ನು ಕಳೆದುಕೊಂಡಿದೆ. ಪಿ. ಲಂಕೆಶ್ ಮತ್ತು ಅವರ ಕುಟುಂಬ ನಮ್ಮ ನಾಡಿಗೆ ನೀಡಿದ ಕೊಡುಗೆಗಳಿಂದ ಅವರು ನಮ್ಮೊಳಗೆ ಸದಾ ಜೀವಂತವಿರಲಿದ್ದಾರೆ. ಅಷ್ಟೇ ಅಲ್ಲದೆ ಕೊಲೆಗಡುಕ ಸಂಸ್ಕ್ರತಿಯ ಸಂತತಿಗಳಿಗೆ ಸದಾ ಸವಾಲೊಡ್ಡುವ ಶಕ್ತಿಯಾಗಿ ತಮ್ಮ ವೈಚಾರಿಕ ವಿಚಾರಗಳಿಂದ ನಮ್ಮಂಥ ಅನೇಕರಿಗೆ ಸ್ಫೂರ್ತಿಯಾಗಿ ಮುಂದೆಯೂ ನಮ್ಮೊಂದಿಗಿರಲಿದ್ದಾರೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...