ಸೋಂಕಿತರ ಶವಗಳ ಗೌರವಯುತ ಅಂತ್ಯ ಸಂಸ್ಕಾರಕ್ಕಾದರೂ ವ್ಯವಸ್ಥೆ ಮಾಡಿ; ಕುಮಾರಸ್ವಾಮಿ ಒತ್ತಾಯ

ಜನರ ಹಿಡಿಶಾಪ ಸರಕಾರಕ್ಕೆ ತಗಲುವುದರಲ್ಲಿ ಸಂಶಯವೇ ಬೇಡ. ಸಾವನ್ನಪ್ಪಿದ ಕೊರೋನಾ ಸೋಂಕಿತರ ಬಂಧು ಬಳಗದವರು ಪಡುತ್ತಿರುವ ಬವಣೆಯನ್ನು ಕಂಡರೆ, ಹೃದಯ ಕಿವುಚಿದಂತಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.

 • Share this:
  ಬೆಂಗಳೂರು (ಏಪ್ರಿಲ್ 23); ಭಾರತದಲ್ಲಿ ಕೊರೋನಾ ಎರಡನೇ ಅಲೆ ಮಿತಿ ಮೀರಿದೆ. ಇಂದು ಒಂದೇ ದಿನ ಕನಿಷ್ಟ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಎಲ್ಲಾ ಹಳೆಯ ದಾಖಲೆಗಳೂ ಮೀರಿ ಕೊರೋನಾ ಕೈಮೀರುತ್ತಿದೆ. ಇನ್ನೂ ಕರ್ನಾಟಕದಲ್ಲೂ ಸಹ ಪರಿಸ್ಥಿತಿ ಭಿನ್ನವಾಗೇನು ಇಲ್ಲ. ರಾಜ್ಯದಲ್ಲೂ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದು, ಅವರಗೆ ಆಸ್ಪತ್ರೆ ಬೆಡ್​ ಒದಗಿಸುವುದು ಸಹ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಕೊರೋನಾದಿಂದ ಸಾಯುವವರಿಗಿಂತ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಮತ್ತು ಆಕ್ಸಿಜನ್​ ಸಿಗದೆ ಸಾಯುವವರ ಸಂಖ್ಯೆ ಅಧಿಕವಾಗುತ್ತಿದೆ. ಇನ್ನೂ ಮೃತರ ಅಂತ್ಯಕ್ರಿಯೆಯೂ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ರಾಜ್ಯದ ಬಹುತೇಕ ಸ್ಮಶಾನಗಳಲ್ಲಿ ಜನ ತಮ್ಮವರ ಅಂತ್ಯಕ್ರಿಯೆಗಾಗಿ ಸಾಲುಗಟ್ಟಿ ನಿಲ್ಲುವ ಸ್ಥಿತಿ ಎದುರಾಗಿದೆ. ಹೀಗಾಗಿ ಸೋಂಕಿತರ ಶವಗಳಿಗೆ ಕನಿಷ್ಟ ಗೌರವಯುತ ಅಂತ್ಯಸಂಸ್ಕಾರವನ್ನಾದರೂ ಒದಗಿಸಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.  ಇಂದು ಸರಣಿ ಟ್ವೀಟ್​ ಮೂಲಕ ರಾಜ್ಯ ಸರ್ಕಾರದ ಮೇಲೆ ದಾಳಿ ನಡೆಸಿರುವ ಹೆಚ್​.ಡಿ. ಕುಮಾರಸ್ವಾಮಿ, "ಚಿಕಿತ್ಸೆ ದಕ್ಕದೆ ಅತ್ಯಂತ ಅಮಾನವೀಯವಾಗಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಶವಗಳ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಕನಿಷ್ಠ ವ್ಯವಸ್ಥೆಯನ್ನು ಮಾಡುವಲ್ಲಿ ಕೈ ಚೆಲ್ಲಿ ಕುಳಿತಿರುವ ರಾಜ್ಯ ಸರ್ಕಾರದ ವೈಫಲ್ಯ ಅತ್ಯಂತ ಬೇಜವ್ದಾರಿತನದ ನಿರ್ದಯಿ ವರ್ತನೆ.

  ಇಲ್ಲದಿದ್ದರೆ, ಜನರ ಹಿಡಿಶಾಪ ಸರಕಾರಕ್ಕೆ ತಗಲುವುದರಲ್ಲಿ ಸಂಶಯವೇ ಬೇಡ. ಸಾವನ್ನಪ್ಪಿದ ಕೊರೊನಾ ಸೋಂಕಿತರ ಬಂಧು ಬಳಗದವರು ಪಡುತ್ತಿರುವ ಬವಣೆಯನ್ನು ಕಂಡರೆ, ಹೃದಯ ಕಿವುಚಿದಂತಾಗುತ್ತದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಮತ್ತೊಂದು ಟ್ವೀಟ್​ನಲ್ಲಿ, "ಕೊರೊನಾ ಮಹಾಮಾರಿಯಿಂದ ಜೀವ ತೆತ್ತ ವ್ಯಕ್ತಿಗಳ ಶವಸಂಸ್ಕಾರಕ್ಕೆ ಬೆಂಗಳೂರಿನ ಅಷ್ಟ ದಿಕ್ಕುಗಳಲ್ಲಿನ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ದಿನವೊಂದಕ್ಕೆ ಸುಮಾರು 25 ಶವಗಳನ್ನು ಅಂತ್ಯಸಂಸ್ಕಾರ ಮಾಡಲು ಸರಕಾರ ತಕ್ಷಣವೇ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ" ಎಂದಿದ್ದಾರೆ.

  ಅಂತ್ಯಕ್ರಿಗೆ ಸಂಬಂಧಿಸಿದಂತೆ ಕೆಲವು ಕಿವಿಮಾತು ಹೇಳಿರುವ ಕುಮಾರಸ್ವಾಮಿ, "ಬೆಂಗಳೂರಿನ ಎಂಟೂ ದಿಕ್ಕುಗಳಲ್ಲೂ ಮರಗಳಿಲ್ಲದ ಬೆಂಗಾಡು ಅರಣ್ಯ ಭೂಮಿಯಿದೆ.ಇಲ್ಲಿ ಪ್ರತಿದಿನ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆ ಕೂಡಲೇ ವ್ಯವಸ್ಥೆ ಮಾಡಬೇಕು. ಸರಕಾರ ಇದನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು.

  ಕೊರೊನಾ ಸೋಂಕಿತರಿಗೆ ಬೆಡ್ ಗಳನ್ನು, ಆಕ್ಸಿಜನ್, ವೆಂಟಿಲೇಟರ್, ಹಾಗೂ ಲಭ್ಯವಿರುವ ಉಪಶಮನದ ಔಷಧಿಗಳನ್ನು ಸರಕಾರ ಕೊಡಲಿಲ್ಲ. ಕನಿಷ್ಟ ಅವರ ಅಂತ್ಯಸಂಸ್ಕಾರ ವನ್ನಾದರೂ ಗೌರವಯುತವಾಗಿ ನಡೆಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಅತ್ಯಂತ ನೋವಿನಿಂದ ಕೈ ಮುಗಿದು ಕೇಳಿಕೊಳ್ಳುತ್ತೇನೆ.

  ಕೊರೊನಾ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ ಮಾಡುವಲ್ಲಿ ಮುಗ್ಗರಿಸಿ ಬಿದ್ದ ಸರಕಾರ ಅಂತ್ಯಸಂಸ್ಕಾರಕ್ಕಾದರೂ ಜಾಗದ ವ್ಯವಸ್ಥೆ ಮಾಡುವಲ್ಲಿ ಇನ್ನೂ ತಡಮಾಡದೆ ಕೈ ಕಟ್ಟಿ ಕೂರಬಾರದು" ಎಂದು ಒತ್ತಾಯಿಸಿದ್ದಾರೆ.

  ಇದನ್ನೂ ಓದಿ: ಪ್ರಧಾನಿ ಮೋದಿ ಮುಂದೆ ಆಮ್ಲಜನಕ, ರೆಮ್​ಡೆಸಿವಿರ್​ಗೆ ಬೇಡಿಕೆ ಇಟ್ಟ ರಾಜ್ಯ ಸರ್ಕಾರ

  2019ರ ಡಿಸೆಂಬರ್​ನಲ್ಲಿ ಚೀನಾದ ವೂಹನ್​ನಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಸ್​ ಸೋಂಕು ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ತಳ್ಳಿತು. ಚೀನಾ ಬಳಿಕ ಅಮೆರಿಕ, ಬ್ರಿಟನ್​, ಪಾಕಿಸ್ತಾನ, ಯುರೋಪ್​ ರಾಷ್ಟ್ರಗಳು ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಈ ಸೋಂಕಿನಿಂದ ಬಳಲಿತು. ಭಾರತ ಕೂಡ ಈ ಸೋಂಕು ಹರಡದಂತೆ ಕಳೆದ ವರ್ಷ ಬಿಗಿ ಕಟ್ಟೆಚ್ಚರ ನಡೆಸಿತು. ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಿ, ವಿದೇಶ ಸಂಚಾರ ನಿರ್ಬಂಧಿಸಿ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿತ್ತು.

  ದೇಶದಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಎರಡನೇ ಅಲೆ ಸೋಂಕಿಗೆ ಭಾರತ ತುತ್ತಾಗಿದೆ. ಲಸಿಕೆಯ ಲಭ್ಯತೆ ನಡುವೆಯೂ ರೂಪಾಂತರಿ ತಳಿಯ ಸೋಂಕು ಭಾರತವನ್ನು ಹೈರಾಣಾಗಿಸುತ್ತಿದೆ.
  Published by:MAshok Kumar
  First published: