ರಾಮನಗರ : ಎಡೆಬಿಡದೇ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಅರ್ಕಾವತಿ ನದಿ (Arkavathi River) ಸುಮಾರು 52 ವರ್ಷಗಳ ಬಳಿಕ ಪ್ರವಾಹೋಪಾದಿಯಲ್ಲಿ (Flood) ಹರಿದಿದೆ. ಇದುವರೆಗೆ ಕುರುಹು ಇಲ್ಲದಂತಿದ್ದ ನದಿಯಲ್ಲಿ ಪ್ರವಾಹ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಸುಮಾರು ಐದು ದಶಕಗಳ ಬಳಿಕ ಕಂಡು ಬಂದ ಪ್ರವಾಹದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಮಳೆಯ ಕಾರಣ ಮಂಚನಬೆಲೆ ಜಲಾಶಯದಿಂದ (Manchanabele Dam) ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಬಿಡುತ್ತಿರುವುದರಿಂದ ಅರ್ಕಾವತಿ ನದಿ ಪಾತ್ರದ ಜಮೀನುಗಳು ಮುಳುಗಡೆಯಾಗಿ (Agriculture Submerge) ಜನ ಪರದಾಡುವಂತಾಗಿದೆ. ಹಾಗೆ ನೋಡಿದರೆ ದಶಕಗಳಿಂದ ಚರಂಡಿ ನೀರಿನ (Drainage Water) ಹರಿವಿಗೆ ಸೀಮಿತವಾಗಿದ್ದ ಅರ್ಕಾವತಿ ನದಿಯು ನಿರಂತರ ಮಳೆಯಿಂದ ಇದೀಗ ಹಿಂದಿನ ವೈಭವದೊಂದಿಗೆ ಮೈದುಂಬಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿದೆ.
ಬೆಂಗಳೂರಿಗೆ ಕುಡಿಯುವ ನೀರು
ಒಂದು ಕಾಲಕ್ಕೆ ಬೆಂಗಳೂರು ಮಹಾನಗರದ ಜನತೆಗೆ ನೀರು ಉಣಿಸುತ್ತಿದ್ದ ಅರ್ಕಾವತಿ ನದಿ ಬಳಿಕ ಮಳೆಯ ಕೊರತೆಯಿಂದ ಬತ್ತಿಹೋಗಿ ಕೊಳಚೆ ನೀರು ಹರಿಯುವ ಚರಂಡಿಯಂತಾಗಿತ್ತು.
ಈ ಬಾರಿಯ ಮುಂಗಾರು ಮಳೆ ಈ ಭಾಗದ ಕೆರೆಕಟ್ಟೆಗಳನ್ನೆಲ್ಲ ಭರ್ತಿ ಮಾಡಿದ್ದಲ್ಲದೇ ಬತ್ತಿ ಹೋಗಿದ್ದ ಅರ್ಕಾವತಿ ನದಿಗೂ ಜೀವ ತುಂಬಿದೆ. ನಿರೀಕ್ಷೆ ಮಾಡದಂತೆ ಬಾರಿಯ ಮುಂಗಾರು ಮಳೆ ರಾಮನಗರ, ಮಾಗಡಿ ತಾಲೂಕಿನಲ್ಲಿ ಸುರಿದಿದೆ. ಹೀಗಾಗಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದು ಮಂಚನಬೆಲೆ ಜಲಾಶಯ ಸೇರಿದ್ದು ಜಲಾಶಯ ಭರ್ತಿಯಾಗಿದೆ.
ಇದನ್ನೂ ಓದಿ: Chikkamagaluru: ಮೂರು ವರ್ಷ ಕಳೆದ್ರೂ ಸಿಗದ ಪರಿಹಾರ; ಸರ್ಕಾರದ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ
ಮತ್ತೆ ನದಿಯಲ್ಲಿ 1962ರ ಪ್ರವಾಹ
ಇದರಿಂದ ಅರ್ಕಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಒಂದು ಕಾಲದಲ್ಲಿ ಎಲ್ಲ ನದಿಗಳಂತೆ ತುಂಬಿ ಹರಿಯುತ್ತಿತ್ತು. ಜತೆಗೆ ಶುದ್ಧವಾಗಿಯೂ ಇತ್ತು. ಆದರೆ ಮಂಚನಬೆಲೆ ಜಲಾಶಯ ನಿರ್ಮಾಣವಾದ ಬಳಿಕ ನದಿಯ ಆರ್ಭಟ ಕುಂದಿತಲ್ಲದೆ, ಬರಗಾಲದಿಂದಾಗಿ ಬತ್ತಿ ಹೋಗಿ ಕೊಳಚೆ ನೀರು ಹರಿಯುವ ಚರಂಡಿಯಂತೆ ಗೋಚರಿಸಲಾರಂಭಿಸಿತು. ಈ ಹಿಂದೆ 2017ರಲ್ಲಿ ಹಿಂಗಾರು ಮಳೆ ಅಬ್ಬರಿಸಿದಾಗ ನದಿಯಲ್ಲಿ ನೀರು ಉಕ್ಕಿ ಹರಿದಿತ್ತು. ಇದೀಗ ಮತ್ತೆ 1962ರಲ್ಲಿ ಕಂಡು ಬಂದ ಪ್ರವಾಹವೇ ಕಾಣಿಸುತ್ತಿದೆ.
ಇನ್ನು ಹಿಂದಿನ ಅಂದರೆ 52 ವರ್ಷಗಳ ಹಿಂದೆ 1962 ಅಕ್ಟೋಬರ್ 2 ರಂದು ಅರ್ಕಾವತಿ ನದಿಯಲ್ಲಿ ಉಂಟಾಗಿದ್ದ ಪ್ರವಾಹವನ್ನು ನೆನಪಿಸಿಕೊಳ್ಳುವ ಹಿರಿಯರು ಅಂದು ಮಂಚನಬೆಲೆಯಿಂದ ರಾಮನಗರದವರೆಗೆ ಸುಮಾರು 2 ಸಾವಿರ ಎಕರೆ ಜಮೀನು ಜಲಾವೃತವಾಗಿತ್ತು. ಇದೇ ವೇಳೆ ಕಣ್ವ ನದಿಯಲ್ಲೂ ಪ್ರವಾಹ ಉಂಟಾಗಿ ಕೂಟಗಲ್ ಗ್ರಾಮದ ಸುತ್ತಮುತ್ತ ಸುಮಾರು ಒಂದು ಸಾವಿರ ಎಕರೆ ಬೆಳೆ ನಷ್ಟವಾಗಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಮಂಚನಬೆಲೆ ಜಲಾಶಯ ನಿರ್ಮಾಣ
ಈ ಪ್ರವಾಹದ ಬಳಿಕ 1969ರಲ್ಲಿ ಮಂಚನಬೆಲೆ ಜಲಾಶಯ ನಿರ್ಮಿಸಲು ಸರ್ಕಾರ ತೀರ್ಮಾನಿಸಿತು. ಪ್ರಾಥಮಿಕ ಹಂತದ ಕಾಮಗಾರಿಯು 1970ರಲ್ಲಿ ಆರಂಭವಾಯಿತು. ಮುಖ್ಯ ಜಲಾಶಯ ನಿರ್ಮಾಣದ ಕಾಮಗಾರಿ 1976ರಲ್ಲಿ ಪ್ರಾರಂಭವಾಗಿ 1989ರ ವೇಳೆಗೆ ಕಾಮಗಾರಿ ಪೂರ್ಣಗೊಂಡಿತು.
ಜಲಾಶಯ ನಿರ್ಮಾಣದ ಬಳಿಕ ನದಿಯಲ್ಲಿ ನೀರು ಹರಿಯುವುದೇ ಕಡಿಮೆಯಾಗಿತ್ತು. ಹೀಗಾಗಿ ನದಿ ಪಾತ್ರಗಳಲ್ಲಿ ವಾಸಿಸುತ್ತಿದ್ದ ಜನರು ನದಿಯಿದೆ ಎಂಬುದನ್ನೇ ಮರೆತು ಬಿಟ್ಟಿದ್ದರು. ಈ ಬಾರಿ ಮತ್ತೆ ಪ್ರವಾಹ ಬಂದಿದೆ. ನದಿ ಮೈದುಂಬಿ ನೋಡಿ ಸಂತಸ ಪಡುತ್ತಿದ್ದಾರೆ. ಜತೆಗೆ ನದಿಪಾತ್ರದ ಜನರು ಭಯಪಡುತ್ತಿದ್ದಾರೆ.
ಚರಂಡಿ ನೀರು ಹರಿಯಲು ಸೀಮಿತವಾಗಿತ್ತು
ಇದುವರೆಗೆ ಕೊಳಚೆ ನೀರು ಹರಿಯಲಷ್ಟೆ ಸೀಮಿತವಾಗಿದ್ದ ಅರ್ಕಾವತಿ ನದಿ ಮೈದುಂಬಿ ಹರಿಯುತ್ತಿದೆ. ಈ ನದಿಯ ಮೂಲವನ್ನು ಹುಡುಕುತ್ತಾ ಹೋದರೆ ಇದು ನಂದಿ ಬೆಟ್ಟದಲ್ಲಿ ಹುಟ್ಟುತ್ತದೆ. ಬಳಿಕ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ರಾಮನಗರ, ಕನಕಪುರ ಮೂಲಕ ತಮಿಳುನಾಡಿನ ಗಡಿ ಸಂಗಮದದಲ್ಲಿ (ಮೇಕೆದಾಟು) ಬಳಿ ಕಾವೇರಿ ನದಿಯಲ್ಲಿ ವಿಲೀನವಾಗುತ್ತದೆ. ಬೆಂಗಳೂರು ನಗರದ ಮೂರನೇ ಒಂದು ಭಾಗದಷ್ಟು ಜನವಸತಿ ಪ್ರದೇಶವು ಅರ್ಕಾವತಿ ಜಲಾನಯನಕ್ಕೆ ಒಳಪಡುವುದು ವಿಶೇಷವಾಗಿದೆ.
60 ಕಿ.ಮೀ. ವ್ಯಾಪ್ತಿಯಲ್ಲಿ ಹರಿಯುವ ನದಿ
ಇನ್ನು ಅರ್ಕಾವತಿ ನದಿಗೆ ಉಪನದಿಗಳಾಗಿ ಕುಮುದ್ವತಿ, ವೃಷಭಾವತಿ, ಸುವರ್ಣಮುಖಿ, ಕುಟ್ಟೆ ಹೊಳೆ ಸೇರುತ್ತವೆ. ಅರ್ಕಾವತಿ ನದಿಪಾತ್ರ ನಂದಿ ಬೆಟ್ಟದ ತಪ್ಪಲು ಪ್ರದೇಶದಿಂದ ದೇವನಹಳ್ಳಿ ದೊಡ್ಡಬಳ್ಳಾಪುರ, ಹೆಸರಘಟ್ಟದ ಮಾರ್ಗವಾಗಿ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೂ ಸುಮಾರು 60ಕಿ.ಮೀ ವ್ಯಾಪ್ತಿಯಲ್ಲಿದೆ.
ಅದು ಏನೇ ಇರಲಿ ಇವತ್ತು ನದಿ ಮೈದುಂಬಿ ಹರಿಯುತ್ತಿದ್ದು, ನದಿಯಲ್ಲಿ ತುಂಬಿದ್ದ ಕೊಳಚೆ ಹರಿದು ಹೋಗಿ ನದಿ ಶುದ್ಧವಾಗುತ್ತಿದೆ. ಸುತ್ತಮುತ್ತಲಿನ ಜನ ಬಹಳಷ್ಟು ವರ್ಷಗಳ ಬಳಿಕ ನದಿ ತುಂಬಿ ಹರಿಯುವುದನ್ನು ನೋಡಿ ಅಚ್ಚರಿ ಪಡುತ್ತಿದ್ದಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ