ಮಂಗಳೂರು (ಫೆ. 12): ಅಡಿಕೆ ಬೆಳೆಗಾರರ ಮುಖದಲ್ಲಿ ಈ ವರ್ಷ ಸಂತಸದ ಕಳೆ ಹೆಚ್ಚಾಗಿದ್ದು, ಅಡಿಕೆಗೆ ಬಂಗಾರದ ಬೆಲೆ ಬಂದಿದೆ. ಅದರಲ್ಲೂ ಕರಾವಳಿ ಮತ್ತು ಕೇರಳದ ಗಡಿ ಭಾಗದ ಕಾಸರಗೋಡಿನಲ್ಲಿ ಬೆಳೆಯುವ ಬಿಳಿ ಅಡಿಕೆಯ ಬೆಲೆ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ. ಈ ಬಾರಿ 1 ಕ್ವಿಂಟಾಲ್ ಅಡಿಕೆಗೆ 50 ಸಾವಿರ ರೂ. ಆಗಿದೆ. ಪ್ರತಿ ಕೆಜಿ ಅಡಿಕೆಗೆ 505ರಿಂದ520ಕ್ಕೆ ಏರಿಕೆಯಾಗಿದೆ. ಮಲೆನಾಡಿನಲ್ಲೂ ಕೆಂಪು ಅಡಿಕೆಯ ಜೊತೆ ಈ ಬಿಳಿ ಅಡಿಕೆಯನ್ನುಮಾಡಲಾಗುತ್ತದೆ. ಆದರೆ, ಕರಾವಳಿಯಲ್ಲಿ ಇದರ ಬೆಳೆ ಹೆಚ್ಚು. ಬಿಳಿ ಅಡಿಕೆಯ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಮಲೆನಾಡು ಭಾಗದಲ್ಲಿ ಹಸಿ ಅಡಿಕೆಯನ್ನು ಬೇಯಿಸಿ, ಕೆಂಪು ಅಡಿಕೆ ಮಾಡಲಾಗುತ್ತದೆ. ಆದರೆ, ಕರಾವಳಿ ಭಾಗದಲ್ಲಿ ಹಣ್ಣಾದ ಅಡಿಕೆಯನ್ನು ಬೇಯಿಸಿ, ಬಿಳಿ ಅಡಿಕೆಯನ್ನೇ ಮಾರಾಟ ಮಾಡಲಾಗುತ್ತದೆ. ಈ ಬಿಳಿ ಅಡಿಕೆಗೆ ದಾಖಲೆಯ ಬೆಲೆ ಬಂದಿದ್ದು, ಹಳೇ ಅಡಿಕೆಗೆ 1 ಕೆಜಿಗೆ 505ರಿಂದ 520 ರೂ. ಆಗಿದೆ. ಹೊಸ ಅಡಿಕೆಗೆ 1 ಕೆಜಿಗೆ 425ರಿಂದ 440 ರೂ. ಆಗಿದೆ. ಆದರೆ, ಕಳೆದ ವರ್ಷಕ್ಕಿಂತ ಈ ವರ್ಷ ಅಡಿಕೆ ಫಸಲು ಕಡಿಮೆಯಾಗಿದೆ. ಇದರಿಂದ ಹಳೇ ಅಡಿಕೆಯನ್ನು ಮಾರಾಟ ಮಾಡದೆ ಇಟ್ಟುಕೊಂಡವರಿಗೆ ಈ ವರ್ಷ ಭಾರೀ ಲಾಭ ಸಿಗುವ ನಿರೀಕ್ಷೆಯಿದೆ.
ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ, ಕೊರೋನಾ ನಿಯಮಾವಳಿಯಿಂದಾಗಿ ವಿದೇಶಗಳಿಂದ ಆಮದಾಗುತ್ತಿದ್ದ ಅಡಿಕೆಗೆ ನಿರ್ಬಂಧ ಹೇರಲಾಗಿದೆ. ಇದರಿಂದ ಬಿಳಿ ಅಡಿಕೆಗೆ ಬಂಗಾರದ ಬೆಲೆ ಬಂದಿದೆ. ಅದರಲ್ಲೂ ಹಳೇ ಅಡಿಕೆ ಇಟ್ಟುಕೊಂಡವರಿಗೆ ಈ ವರ್ಷ ಭಾರೀ ಲಾಭ ಸಿಗುವುದು ಗ್ಯಾರಂಟಿ. ಇದೇ ಮೊದಲ ಬಾರಿಗೆ ಅಡಿಕೆಗೆ ಇಷ್ಟು ಬೆಲೆ ಸಿಕ್ಕಿದ್ದು, ಅಡಿಕೆ ಬೆಳೆಗಾರರು ಬಹಳ ಖುಷಿಯಾಗಿದ್ದಾರೆ. ಮಿಜೋರಾಂ, ಮಣಿಪುರ ಸಹಿತ ಈಶಾನ್ಯ ರಾಜ್ಯಗಳ ಮೂಲಕ ಮಯನ್ಮಾರ್ ದೇಶದಿಂದ ಅಕ್ರಮವಾಗಿ ಭಾರತ ಪ್ರವೇಶಿಸುತ್ತಿದ್ದ ಕಳಪೆ ಗುಣಮಟ್ಟದ, ಅಗ್ಗದ ಅಡಕೆ ಸಾಗಾಟಕ್ಕೆ ಬ್ರೇಕ್ ಹಾಕಿದ್ದರಿಂದ ಅಡಿಕೆ ಬೆಳೆ ಭಾರೀ ಏರಿಕೆಯಾಗಿದೆ.
ಇದನ್ನೂ ಓದಿ: Petrol Price: ಫೆಬ್ರವರಿಯಲ್ಲಿ ಸತತವಾಗಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ; ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆಯೆಷ್ಟು?
ಮಯನ್ಮಾರ್ (ಬರ್ಮಾ), ನೇಪಾಳ ಮತ್ತು ಶ್ರೀಲಂಕಾಗಳಿಂದ ಅಡಿಕೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿದೆ. ಅಡಿಕೆ ಅಧಿಕೃತ ಆಮದು ದುಬಾರಿಯಾದ ಹಿನ್ನೆಲೆಯಲ್ಲಿ ವಿದೇಶಗಳಿಂದ ಕಳ್ಳದಾರಿ ಮೂಲಕ ಬರುತ್ತಿರುವ ಪ್ರಮಾಣ ಹೆಚ್ಚಿತ್ತು. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ನೂರಾರು ಟ್ರಕ್‌ಗಳನ್ನು ವಶಕ್ಕೆ ಪಡೆಯುತ್ತಿವೆ. ಅಡಿಕೆ ಐತಿಹಾಸಿಕ ಧಾರಣೆ ಕಾಣಲು ಇದೇ ಪ್ರಮುಖ ಕಾರಣ.
ಮಯನ್ಮಾರ್ ಭಾರತದ ನಾಲ್ಕು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ (215 ಕಿ.ಮೀ.), ಮಿಜೋರಾಂ (510 ಕಿ.ಮೀ.), ಮಣಿಪುರ (398 ಕಿ.ಮೀ.), ಅರುಣಾಚಲ ಪ್ರದೇಶ (520 ಕಿ.ಮೀ.) ಜತೆಗೆ 1,643 ಕಿ.ಮೀ. ಬೇಲಿ ರಹಿತ ಮುಕ್ತ ಗಡಿ ಹೊಂದಿದೆ. ಈ ಪೈಕಿ ಮಿಜೋರಾಂನ ಚಂಪಾಯಿ ಮತ್ತು ಕಮಜಂಗ್, ಮಣಿಪುರದ ಚುರಚಂದಾಪುರ ಮತ್ತು ತೆಗ್ನುಪಾಲ್ ಜಿಲ್ಲೆಗಳ ಮೂಲಕ ಅತಿ ಹೆಚ್ಚು ಅಕ್ರಮ ಸಾಗಾಟ ನಡೆಯುತ್ತಿದ್ದು, ಇಲ್ಲೇ ಅಸ್ಸಾಂ ರೈಫಲ್ಸ್ ಹೆಚ್ಚಿನ ಕಾರ್ಯಾಚರಣೆ ನಡೆಸುತ್ತಿದೆ.
ಇದನ್ನೂ ಓದಿ: Areca nut Price: ಅಡಕೆ ಬೆಲೆಯಲ್ಲಿ ದಾಖಲೆಯ ಏರಿಕೆ; ಅಡಕೆ ದರ ಹೆಚ್ಚಳಕ್ಕೆ ಕಾರಣವೇನು ಗೊತ್ತಾ?
ಕೇಂದ್ರ ಸರ್ಕಾರ ಅಡಿಕೆ ಆಮದು ಕನಿಷ್ಠ ದರವನ್ನು 251 ರೂ.ಗಳಿಗೆ 2018ರಲ್ಲಿ ನಿಗದಿ ಮಾಡಿದೆ. ಹಾಗಾಗಿ, ಅದಕ್ಕಿಂತ ಕಡಿಮೆ ಮೊತ್ತದಲ್ಲಿ ವಿದೇಶಗಳಿಂದ ಅಡಕೆ ಆಮದು ಸಾಧ್ಯವಿಲ್ಲ. ಇದರಿಂದಾಗಿ ಕಳ್ಳದಾರಿಗಳ ಮೂಲಕ ತೆರಿಗೆ ವಂಚಿಸಿ ಭಾರತಕ್ಕೆ ಅಡಕೆ ಸಾಗಾಟ ನಡೆಯುತ್ತಿತ್ತು. ಭಾರತದ ಉದ್ಯಮಿಗಳು ಕಡಿಮೆ ದರದಲ್ಲಿ ಇಂಡೋನೇಷ್ಯಾ ಮತ್ತು ಥಾಯ್ಲೆಂಡ್‌ಗಳಿಂದ ಅಡಿಕೆ ಖರೀದಿಸಿ ಮಯನ್ಮಾರ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅದಕ್ಕೂ ತಡೆಯಾಗಿದ್ದರಿಂದ ಸಹಜವಾಗಿ ಸ್ಥಳೀಯ ಅಡಿಕೆಗೆ ಬೇಡಿಕೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ