• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Areca nut Price: ಅಡಕೆ ಬೆಲೆಯಲ್ಲಿ ದಾಖಲೆಯ ಏರಿಕೆ; ಅಡಕೆ ದರ ಹೆಚ್ಚಳಕ್ಕೆ ಕಾರಣವೇನು ಗೊತ್ತಾ?

Areca nut Price: ಅಡಕೆ ಬೆಲೆಯಲ್ಲಿ ದಾಖಲೆಯ ಏರಿಕೆ; ಅಡಕೆ ದರ ಹೆಚ್ಚಳಕ್ಕೆ ಕಾರಣವೇನು ಗೊತ್ತಾ?

ಅಡಕೆ

ಅಡಕೆ

Areca nut Price Today: ಮಿಜೋರಾಂ, ಮಣಿಪುರ ಸಹಿತ ಈಶಾನ್ಯ ರಾಜ್ಯಗಳ ಮೂಲಕ ಮಯನ್ಮಾರ್ ದೇಶದಿಂದ ಅಕ್ರಮವಾಗಿ ಭಾರತ ಪ್ರವೇಶಿಸುತ್ತಿದ್ದ ಕಳಪೆ ಗುಣಮಟ್ಟದ, ಅಗ್ಗದ ಅಡಕೆ ಸಾಗಾಟಕ್ಕೆ ಬ್ರೇಕ್ ಹಾಕಿದ್ದರಿಂದ ಅಡಕೆ ಬೆಲೆ ದಾಖಲೆಯ ಮಟ್ಟಕ್ಕೇರಿದೆ.

  • Share this:

ಪುತ್ತೂರು (ಫೆ. 11): ಅಡಕೆ ಬೆಲೆ ಕಂಡು ಕೇಳರಿಯದ ರೀತಿಯಲ್ಲಿ ಏರಿಕೆಯಾಗುತ್ತಿದೆ. ಈ  ಧಾರಣೆ ದಾಖಲೆಯಾಗಲು ಪ್ರಮುಖ ಕಾರಣವಾಗಿರುವುದು ಅಸ್ಸಾಂ ರೈಫಲ್ಸ್ ಎಂಬ ಅರೆ ಸೇನಾ ಪಡೆ ಎನ್ನುವ ಮಾಹಿತಿ ಇದೀಗ ಹೊರ ಬಿದ್ದಿದೆ. ಮಿಜೋರಾಂ, ಮಣಿಪುರ ಸಹಿತ ಈಶಾನ್ಯ ರಾಜ್ಯಗಳ ಮೂಲಕ ಮಯನ್ಮಾರ್ ದೇಶದಿಂದ ಅಕ್ರಮವಾಗಿ ಭಾರತ ಪ್ರವೇಶಿಸುತ್ತಿದ್ದ ಕಳಪೆ ಗುಣಮಟ್ಟದ, ಅಗ್ಗದ ಅಡಕೆ ಸಾಗಾಟಕ್ಕೆ ಬ್ರೇಕ್ ಹಾಕಿದ್ದರಿಂದ ಅಡಕೆ ಬೆಳೆಗಾರರ ಮುಖದಲ್ಲಿ ನಗುವಿನ ಗೆರೆಗಳು ಮೂಡಿವೆ.


ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಶಸ್ತ್ರ ಪೊಲೀಸ್ ಪಡೆಯಾಗಿರುವ ಅಸ್ಸಾಂ ರೈಫಲ್ಸ್ ಭಾರತೀಯ ಸೇನೆಯೊಂದಿಗೆ ಈಶಾನ್ಯ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಭಾರತ-ಮಯನ್ಮಾರ್ ಗಡಿ ಕಾಯುವ ಜವಾಬ್ದಾರಿ ಹೊಂದಿದೆ. ಕೊರೊನಾ ಲಾಕ್‌ಡೌನ್ ಬಳಿಕ ಈ ಪಡೆಯು ಅಂತಾರಾಷ್ಟ್ರೀಯ ಗಡಿಯ ಮೂಲಕ ದೇಶಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿರುವ ವಸ್ತುಗಳ ಪತ್ತೆ ಹಚ್ಚಿ ಕಸ್ಟಮ್ಸ್ ಮತ್ತು ಪೊಲೀಸ್ ಇಲಾಖೆಗೆ ಹಸ್ತಾಂತರಿಸುವಲ್ಲಿ ಮಹತ್ವದ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಇದರಲ್ಲಿ ಅಡಕೆ ಮಾತ್ರವಲ್ಲ, ಹೆರಾಯಿನ್, ಬ್ರೌನ್ ‌ಶುಗರ್ ಸಹಿತ ಡ್ರಗ್ಸ್, ತೆರಿಗೆ ವಂಚಿಸಿ ವಿದೇಶಗಳಿಂದ ಬರುವ ಅಮೂಲ್ಯ ವಸ್ತುಗಳು ಸೇರಿವೆ.


ಮಯನ್ಮಾರ್ (ಬರ್ಮಾ), ನೇಪಾಳ ಮತ್ತು ಶ್ರೀಲಂಕಾಗಳಿಂದ ಅಡಕೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿದೆ. ಅಡಕೆ ಅಧಿಕೃತ ಆಮದು ದುಬಾರಿಯಾದ ಹಿನ್ನೆಲೆಯಲ್ಲಿ ವಿದೇಶಗಳಿಂದ ಕಳ್ಳದಾರಿ ಮೂಲಕ ಬರುತ್ತಿರುವ ಪ್ರಮಾಣ ಹೆಚ್ಚಿತ್ತು. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ನೂರಾರು ಟ್ರಕ್‌ಗಳನ್ನು ವಶಕ್ಕೆ ಪಡೆಯುತ್ತಿವೆ. ಅಡಕೆ ಐತಿಹಾಸಿಕ ಧಾರಣೆ ಕಾಣಲು ಇದೇ ಪ್ರಮುಖ ಕಾರಣ.


ಇದನ್ನೂ ಓದಿ: ಸಾಗರದ ಸುಬ್ಬಣ್ಣ ಹೆಗಡೆ ತೋಟದಲ್ಲಿದೆ 100ಕ್ಕೂ ಹೆಚ್ಚು ವಿಧದ ಅಪ್ಪೆ ಮಿಡಿ ಮಾವಿನ ಮರಗಳು!


ಮಯನ್ಮಾರ್ ಭಾರತದ ನಾಲ್ಕು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ (215 ಕಿ.ಮೀ.), ಮಿಜೋರಾಂ (510 ಕಿ.ಮೀ.), ಮಣಿಪುರ (398 ಕಿ.ಮೀ.), ಅರುಣಾಚಲ ಪ್ರದೇಶ (520 ಕಿ.ಮೀ.) ಜತೆಗೆ 1,643 ಕಿ.ಮೀ. ಬೇಲಿ ರಹಿತ ಮುಕ್ತ ಗಡಿ ಹೊಂದಿದೆ. ಈ ಪೈಕಿ ಮಿಜೋರಾಂನ ಚಂಪಾಯಿ ಮತ್ತು ಕಮಜಂಗ್, ಮಣಿಪುರದ ಚುರಚಂದಾಪುರ ಮತ್ತು ತೆಗ್ನುಪಾಲ್ ಜಿಲ್ಲೆಗಳ ಮೂಲಕ ಅತಿ ಹೆಚ್ಚು ಅಕ್ರಮ ಸಾಗಾಟ ನಡೆಯುತ್ತಿದ್ದು, ಇಲ್ಲೇ ಅಸ್ಸಾಂ ರೈಫಲ್ಸ್ ಹೆಚ್ಚಿನ ಕಾರ್ಯಾಚರಣೆ ನಡೆಸುತ್ತಿದೆ.


Areca nut Price | Arecanut Price Raises to All Time High here is the Reason Areca nut Rate Today.
ಅಡಕೆ ಮರ


ಅಸ್ಸಾಂ ರೈಫಲ್ಸ್ ಪಡೆಯು ಹತ್ತಾರು ಕೋಟಿ ರೂ. ಮೌಲ್ಯದ ಅಡಕೆಯನ್ನು  ವಶಪಡಿಸಿಕೊಂಡಿದ್ದು, ಅವುಗಳಲ್ಲಿ ಕೆಲವು ಉದಾಹರಣೆಗಳು ಹೀಗಿವೆ. ಡಿ.24ರಂದು ಮಣಿಪುರದಲ್ಲಿ 39 ಲಕ್ಷ ರೂ. ಮೌಲ್ಯದ 6 ಟನ್, 26ರಂದು 24 ಲಕ್ಷ ರೂ. ಮೌಲ್ಯದ 4 ಟನ್, 30ರಂದು ಚಂಪಾಯಿಯಲ್ಲಿ 11 ಲಕ್ಷ ರೂ, ಜ.6ರಂದು ಚಂಪಾಯಿಯಲ್ಲಿ 97 ಲಕ್ಷ ರೂ. ಮೌಲ್ಯದ 34 ಟನ್, 7ರಂದು ಚಂಪಾಯಿಯಲ್ಲಿ 22 ಲಕ್ಷ ರೂಪಾಯಿ, 13ರಂದು ಚಂಪಾಯಿ ಮತ್ತು ಚುರಚಂದಾಪುರದಲ್ಲಿ 3.8 ಕೋಟಿ ರೂ, 15ರಂದು ಚಂಪಾಯಿಯ ಒಂದು ಕಡೆ 21 ಲಕ್ಷ, ಇನ್ನೊಂದು ಕಡೆ 3.52 ಕೋಟಿ ರೂ. ಮೌಲ್ಯದ 2,100 ಚೀಲ ಅಡಕೆ, 16ರಂದು ಚುರಚಂದಾಪುರದಲ್ಲಿ 31 ಲಕ್ಷ, 22ರಂದು 6.35 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಹಿತ 260 ಅಡಕೆ ಚೀಲ, 23ರಂದು 6.72 ಲಕ್ಷ ರೂ. ಮೌಲ್ಯದ 40 ಬ್ಯಾಗ್, 23ರಂದು 26.4 ಲಕ್ಷ ರೂ. ಮೌಲ್ಯದ 4,400 ಕೆ.ಜಿ, 29ರಂದು 40.32 ಲಕ್ಷ ರೂ. ಮೌಲ್ಯದ 240 ಚೀಲ, 29ರಂದು 69 ಲಕ್ಷ ರೂ. ಮೌಲ್ಯದ ಅಡಕೆ, 31ರಂದು ಚಂಪಾಯಿಯಲ್ಲಿ 13.44 ಲಕ್ಷ ರೂ. ಮೌಲ್ಯದ 80 ಬ್ಯಾಗ್, ಫೆ.2ರಂದು ಕಮಜಾಂಗ್ ಜಿಲ್ಲೆಯಲ್ಲಿ 57.6 ಲಕ್ಷ, ಚಂಪಾಯಿಯಲ್ಲಿ 5ರಂದು 85.17 ಲಕ್ಷ ರೂ. ಮೌಲ್ಯದ 390 ಚೀಲ, 6ರಂದು 46.20 ಲಕ್ಷ ರೂ. ಮೌಲ್ಯದ 220 ಚೀಲ, 7ರಂದು ಅಡಕೆ ವಶಪಡಿಸಿಕೊಳ್ಳಲಾಗಿದೆ.


ಅಡಕೆ ಆಮದು ಕನಿಷ್ಠ ದರವನ್ನು 251 ರೂ.ಗಳಿಗೆ ಕೇಂದ್ರ ಸರ್ಕಾರವು 2018ರಲ್ಲಿ ನಿಗದಿ ಮಾಡಿದೆ. ಹಾಗಾಗಿ, ಅದಕ್ಕಿಂತ ಕಡಿಮೆ ಮೊತ್ತದಲ್ಲಿ ವಿದೇಶಗಳಿಂದ ಅಡಕೆ ಆಮದು ಸಾಧ್ಯವಿಲ್ಲ. ಇದರಿಂದಾಗಿ ಕಳ್ಳದಾರಿಗಳ ಮೂಲಕ ತೆರಿಗೆ ವಂಚಿಸಿ ಭಾರತಕ್ಕೆ ಅಡಕೆ ಸಾಗಾಟ ನಡೆಯುತ್ತಿತ್ತು. ಇದೊಂದು ಉದಾಹರಣೆ ಗಮನಿಸಿ. ಮಯನ್ಮಾರ್‌ನಲ್ಲಿ ಬೆಳೆಯುವ ಅಡಕೆ 10 ಸಾವಿರ ಟನ್ ಮಾತ್ರ. ಆದರೆ ಅದು ಭಾರತಕ್ಕೆ 40 ಸಾವಿರ ಟನ್ ರಫ್ತು ಮಾಡುತ್ತಿತ್ತು.


ಭಾರತದ ಉದ್ಯಮಿಗಳು ಕಡಿಮೆ ದರದಲ್ಲಿ ಇಂಡೋನೇಷ್ಯಾ ಮತ್ತು ಥಾಯ್ಲೆಂಡ್‌ಗಳಿಂದ ಅಡಕೆ ಖರೀದಿಸಿ ಮಯನ್ಮಾರ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅದಕ್ಕೂ ತಡೆಯಾದಾಗ ಸಹಜವಾಗಿ ಸ್ಥಳೀಯ ಅಡಕೆಗೆ ಬೇಡಿಕೆ ಬಂದಿದೆ. ಬೇಡಿಕೆಯನ್ನು ಪೂರೈಕೆ ಸರಿಗಟ್ಟಲು ಸಾಧ್ಯವಾಗದೆ ಇರುವುದರಿಂದ ಧಾರಣೆ ಏರುಗತಿಯಲ್ಲೇ ಸಾಗುತ್ತಿದೆ. ಈ ಧಾರಣೆ ಮುಂದಿನ ದಿನಗಳಲ್ಲಿ ಇನ್ನಷ್ಟು  ಹೆಚ್ಚಾಗುವ ಸಾಧ್ಯತೆಯಿದೆ.

Published by:Sushma Chakre
First published: