Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R
Updated:April 9, 2019, 5:57 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1. ರಾಜ್ಯದಲ್ಲಿ ಮೋದಿ ಅಬ್ಬರ

ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಕರ್ನಾಟಕದ ಮುಖ್ಯಮಂತ್ರಿಗೆ ಯಾಕೆ ನೋವಾಗುತ್ತದೆ? ನಾನು ಆತಂಕವಾದಿಗಳಿಗೆ ಬ್ರೇಕ್ ಹಾಕಿದಾಗ ಪಾಕಿಸ್ತಾನಕ್ಕೆ ನೋವಾಯ್ತು. ಆದರೆ ಕಣ್ಣೀರು ಬಂದಿದ್ದು ಮಾತ್ರ ಕಾಂಗ್ರೆಸ್​- ಜೆಡಿಎಸ್​ ನಾಯಕರಿಗೆ ಎಂದು ಚಿತ್ರದುರ್ಗದ ಸಮಾವೇಶದಲ್ಲಿ ರಾಜ್ಯ ಸರ್ಕಾರವನ್ನು ಕುಟುಕಿದರು. ನಿಮ್ಮ ಮುಖ್ಯಮಂತ್ರಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋದರು.  ಆತಂಕವಾದಿಗಳನ್ನು ಶಿಕ್ಷಿಸಿದ್ರೆ ಇವರ ಸರ್ಕಾರಕ್ಕೇನು ಸಮಸ್ಯೆ? ಆತಂಕವಾದಿಗಳ ವೋಟು ಇಲ್ಲಿದೆಯೋ? ಅಥವಾ ಪಾಕಿಸ್ತಾನದಲ್ಲಿದೆಯೋ? ಎಂದು ಸಿಎಂ ಎಚ್​ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. ಮುಂದುವರೆದು, ಭಾರತದ ಮಾನ-ಸನ್ಮಾನ ಇವರಿಗೆ ಬೇಕಾಗಿಲ್ಲ. ಮೋದಿಯನ್ನು ಸೋಲಿಸೋದೇ ಇವರ ಗುರಿ. ಈ ಚುನಾವಣೆಯಲ್ಲಿ ನೀವು ಸಂಸದರನ್ನು ಆಯ್ಕೆ ಮಾಡುತ್ತಿಲ್ಲ. ಸದೃಢ ಭಾರತಕ್ಕಾಗಿ ಸದೃಢ ಸರ್ಕಾರ ಆಯ್ಕೆ ಮಾಡುತ್ತಿದ್ದೀರಿ. ಪ್ರತಿದಿನ ಕಿತ್ತಾಡಿಕೊಂಡು ಆಡಳಿತ ನಡೆಸುವ ಅತಂತ್ರ ಸರ್ಕಾರಕ್ಕಿಂತ ಸದೃಢ ಸರ್ಕಾರ ರಚನೆಗೆ ಅವಕಾಶ ನೀಡಿ ಎಂದು ಮೋದಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

2. ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಸಂಸತ್​ ಹೊರಗೆ ಹುಲಿ, ಒಳಗೆ ಇಲಿ. ಮೋದಿ ಸಂಸತ್​ನಲ್ಲಿ ಮಾತನಾಡುವುದನ್ನು ಬಿಟ್ಟು ಹೊರಗಡೆ ಬೊಗಳೆ ಬಿಡ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ. ದೇಶದ ಚೌಕಿದಾರ ನಿದ್ದೆ ಮಾಡುತ್ತಿದ್ದಾನೆ. ದೇಶ ಕೊಳ್ಳೆ ಹೊಡೆಯುತ್ತಿದ್ದರೂ ಚೌಕಿದಾರ ಎಚ್ಚೆತ್ತಿಲ್ಲ. ಭಾಷಣದಲ್ಲಿ ಮಾತ್ರ ತಮ್ಮ ಅಟ್ಟಹಾಸ ತೋರುತ್ತಿದ್ದಾರೆ ಎಂದು ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.  ದೇಶ ಕೊಳ್ಳೆ ಹೊಡೆದವರೆಲ್ಲರೂ ಪರದೇಶಗಳಗಳಿಗೆ ಹಾರಿದಾಗ ಈ ಚೌಕಿದಾರ ಏನು ಮಾಡುತ್ತಿದ್ದ? ಎಂದು ಕಲ್ಬುರ್ಗಿಯ ಲೋಕಸಭಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

3. ನನ್ನ ವಿರುದ್ದ ಹೇಳಿಕೆ ನೀಡಲು ಅಂಬಿ ಆಪ್ತರಿಗೆ ಸೈಟು, ಹಣದ ಆಫರ್​; ಸುಮಲತಾ

ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿವೆ. ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಷ್  ಬಗ್ಗೆ ಹಾಗೂ ಅವರ ಪರ ಪ್ರಚಾರಕ್ಕೆ ಬರುತ್ತಿರುವ ಯಶ್​-ದರ್ಶನ್ ವಿರುದ್ಧ ಮೈತ್ರಿ ಪಕ್ಷಗಳ ನಾಯಕರು ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳ ವಿಚಾರವಾಗಿ ಮಾತನಾಡಿರುವ ಸುಮಲತಾ ಅವರು, ಯಶ್‌ ವಿರುದ್ಧ ನಿಖಿಲ್ ಹೀಗೆ ಹೇಳಿಕೆ ನೀಡಬೇಕಿರಲಿಲ್ಲ. ನಿಖಿಲ್​ಗೆ ಇನ್ನು ಚಿಕ್ಕ ವಯಸ್ಸು. ಸಿನೆಮಾದಲ್ಲಿ ಸಾಧನೆ‌ ಮಾಡಿರುವ ಸ್ಟಾರ್ ಬಗ್ಗೆ ಗೌರವ ಇಲ್ಲದೆ‌ ಮಾತನಾಡಿದ್ದಾರೆ. ಅವರ ಸಾಧನೆಯನ್ನು‌ ಗೌರವಿಸಬೇಕು ವೈಯಕ್ತಿಕ ಟೀಕೆ ಸರಿಯಲ್ಲ ಎಂದು ನಿಖಿಲ್​ಗೆ ಬುದ್ಧಿಮಾತು ಹೇಳಿದರು.

4. ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ನಾನು ಆರೋಪಿ ಅಲ್ಲ; ವಿನಯ್​ ಕುಲಕರ್ಣಿಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರು ಮನೆಯನ್ನು ಇಬ್ಭಾಗ ಮಾಡುವಂಥ ಕುತಂತ್ರಿ. ಮಾಜಿ ಜಿ.ಪಂ. ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನಾನು ಆರೋಪಿಯೂ ಅಲ್ಲ. ಎಫ್‌ಐಆರ್‌, ಚಾರ್ಜ್‌ಶೀಟ್‌ನಲ್ಲಿಯೂ ನನ್ನ ಹೆಸರೂ ಇಲ್ಲ. ಈಗ ಚುನಾವಣೆ ಬಂದಿದೆ, ಹೀಗಾಗಿ ಪ್ರಹ್ಲಾದ್ ಜೋಶಿ ಇಂಥ ಕುತಂತ್ರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ಅಭ್ಯರ್ಥಿ ವಿನಯ್ ಕುಲಕರ್ಣಿ ಹೇಳಿದ್ದಾರೆ. ಮಾಜಿ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯನಾಶ ಆರೋಪದಡಿ ಕೇಸು ದಾಖಲಿಸಲು ನಿನ್ನೆ ಧಾರವಾಡ ಜೆಎಂಎಫ್​ಸಿ ಕೋರ್ಟ್ ಸೂಚನೆ ನೀಡಿದೆ.  ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ. ಅದು ಯಾವತ್ತೋ ಆಗಿರುವ ಯೋಗೇಶ್ ಗೌಡ ಕೊಲೆ ಕೇಸ್ ಈಗ ಚುನಾವಣೆಯಲ್ಲಿಯೇ ಮುನ್ನೆಲೆಗೆ ಬಂದಿದ್ದು ಏಕೆ?  ಇಷ್ಟು ದಿನ ಇವರು ಮಲಗಿಕೊಂಡಿದ್ದರೇನು? ಕೇಸ್ ಆಗಿ 3 ವರ್ಷ ಆಗಿದೆ. ಇದೆಲ್ಲವೂ ಪ್ರಹ್ಲಾದ್ ಜೋಶಿ ಕುತಂತ್ರ. ಜನ ಇದನ್ನೆಲ್ಲ ನೋಡುತ್ತಿದ್ದಾರೆ ಎಂದು ತಿಳಿಸಿದರು.

5. ನಾಳೆ ಸುಪ್ರೀಂ ಅಂಗಳದಲ್ಲಿ ಲಾಲೂ ಜಾಮೀನು ಅರ್ಜಿ ವಿಚಾರಣೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುವುದಕ್ಕಾಗಿ ಲಾಲೂ ಪ್ರಸಾದ್ ಯಾದವ್ ವೈದ್ಯಕೀಯ ನೆಪವೊಡ್ಡಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಅವರು ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿರುವ ಸಿಬಿಐ ಅವರಿಗೆ ಜಾಮೀನು ನೀಡಿದಂತೆ ಸುಪ್ರೀಂಗೆ ಮನವಿ ಮಾಡಿದೆ. ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಯಾದವ್  ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ಅವರು ಸುಪ್ರೀಂ ಮೆಟ್ಟಿಲೇರಿದ್ದರು. ಈ ಕುರಿತು ಏಪ್ರಿಲ್ 6 ರಂದು ಪ್ರಕಟಣೆ ಹೊರಡಿಸಿದ್ದ ಸುಪ್ರೀಂ, ಏಪ್ರಿಲ್.10 ರಂದು ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತ್ತು. ಅಲ್ಲದೆ ಏಪ್ರಿಲ್. 09ರ ಒಳಗಾಗಿ ಆಕ್ಷೇಪಣೆ ಅಥವಾ ಉತ್ತರ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು

6. ಮಹಾಘಟ್​ ಬಂಧನ್​ನಿಂದ ಚಂದ್ರಬಾಬು ನಾಯ್ಡು ಸಮರ್ಥ ಪ್ರಧಾನಿ ಅಭ್ಯರ್ಥಿ; ದೇವೇಗೌಡ

ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಹಾಘಟ್​ಬಂಧನ್​ನಿಂದ ದೇಶದ ಮುಂದಿನ ಪ್ರಧಾನಿ  ಅಭ್ಯರ್ಥಿ ಎಂದು ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಸೋಮವಾರ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಟಿಡಿಪಿ ಪಕ್ಷದ ಅಭ್ಯರ್ಥಿ ಪರವಾಗಿ ಚಂದ್ರಬಾಬು ನಾಯ್ಡು ಜೊತೆ ಜಂಟಿ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, “ಚಂದ್ರಬಾಬು ನಾಯ್ಡು ಅವರು ಈ ಸವಾಲನ್ನು ಒಪ್ಪಿಕೊಳ್ಳಬೇಕು ಮತ್ತು ಅವರು ಏಕೆ ಈ ದೇಶದ ಪ್ರಧಾನಿಯಾಗಬಾರದು," ಎಂದು ಕೇಳಿದರು. ಆದರೆ, ರ್ಯಾಲಿಯಲ್ಲಿ ಹಾಜರಿದ್ದ ಚಂದ್ರಬಾಬು ನಾಯ್ಡು ಅವರು, ತಾವು ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

7. ಬಿಜೆಪಿ ಪ್ರಣಾಳಿಕೆ ಮುಚ್ಚಿದ ಕೋಣೆಯಲ್ಲಿ ತಯಾರಿಸಿದ ಏಕವ್ಯಕ್ತಿ ಪ್ರಣಾಳಿಕೆ

ಬಿಜೆಪಿ ಪ್ರಣಾಳಿಕೆ ಏಕ ವ್ಯಕ್ತಿಯ ಧ್ವನಿಯಾಗಿದ್ದು, ದೂರದೃಷ್ಟಿ ಕೊರತೆಯ ದುರಹಂಕಾರಿ ಪ್ರಣಾಳಿಕೆಯಾಗಿದೆ ಎಂದು ರಾಹುಲ್​ ಗಾಂಧಿ ಟೀಕಿಸಿದ್ದಾರೆ.ಬಿಜೆಪಿ ಪ್ರಣಾಳಿಕೆ ಮುಚ್ಚಿದ ಕೋಣೆಯಲ್ಲಿ ತಯಾರಿಸಿದ ಪ್ರಣಾಳಿಕೆ ಇದಾಗಿದೆ. ಇದು ವಂಚನೆಯ ದಾಖಲೆ ಎಂದು ಜರಿದಿದ್ದಾರೆ. ಇದೇ ವೇಳೆ ತಮ್ಮ ಪಕ್ಷದ ಪ್ರಣಾಳಿಕೆ ಕುರಿತು ಮಾತನಾಡಿದ ಅವರು ಇದು ಭಾರತದ ಲಕ್ಷಾಂತರ ಜನರ ಧ್ವನಿಯಾಗಿದೆ. ಚರ್ಚೆ ನಡೆಸಿ, ನಮ್ಮ ಪ್ರಣಾಳಿಕೆ ತಯಾರಿಸಿದ್ದೇವೆ ಎಂದರು.

8. ಶೀಘ್ರದಲ್ಲೇ ಗಣೇಶ್​ ಜಿಲ್ಲೆಗೆ ವಾಪಸ್ಸಾಗಲಿದ್ದಾರೆ; ವಿಎಸ್​ ಉಗ್ರಪ್ಪ

ಈಗಲ್ಟನ್​ ರೆಸಾರ್ಟ್​ನಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಜೈಲು ಸೇರಿರುವ  ಶಾಸಕ ಗಣೇಶ್,​ ಸಮಸ್ಯೆ ಕೆಲವೇ ದಿನಗಳಲ್ಲಿ ಬಗೆಹರಿಯಲಿದೆ. ಅವರು ಕೂಡಾ ನಮ್ಮ ಜೊತೆ ಬಂದು ಕೆಲಸ ಮಾಡಲಿದ್ದಾರೆ ಎಂದು ಕಂಪ್ಲಿ ಜನರಿಗೆ ಬಳ್ಳಾರಿ ಕಾಂಗ್ರೆಸ್​ ಅಭ್ಯರ್ಥಿ ವಿ.ಎಸ್​.ಉಗ್ರಪ್ಪ ಭರವಸೆ ನೀಡಿದರು. ಈ ಹಿಂದೆ ಕಂಪ್ಲಿ ಕ್ಷೇತ್ರದ ಜನರು, ಗಣೇಶ್​ರನ್ನು ಜಾಮೀನು ಮೇಲೆ ಹೊರ ತನ್ನಿ. ಪಕ್ಷ ಮಾಡಿದ ಅಮಾನತು ಆದೇಶ ಹಿಂಪಡೆಯಿರಿ. ಆಮೇಲೆ ನಿಮ್ಮನ್ನು ಬೆಂಬಲಿಸುತ್ತೇವೆ. ಅಲ್ಲಿಯವರೆಗೆ ನಿಮ್ಮ ಪರ ಪ್ರಚಾರಕ್ಕೆ ಬರೋದಿಲ್ಲ ಎಂದು ಉಗ್ರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವರ ಕ್ಷೇತ್ರದ ಜನರಿಗೆ ಉಗ್ರಪ್ಪ ಈ ಭರವಸೆ ನೀಡಿದರು.ಶಾಸಕ ಗಣೇಶ್ ಜೈಲಿನಲ್ಲಿದ್ದು, ಜಾಮೀನು ಸಿಗದ ಕಾರಣ ಹೊರಬರಲಾಗಿಲ್ಲ. ಇದು ಕಂಪ್ಲಿ ಕ್ಷೇತ್ರದಲ್ಲಿ ಮತ ಗಳಿಕೆಗೆ ಹಿನ್ನಡೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಉಗ್ರಪ್ಪ ಅವರು ಅಲ್ಲಿನ ಮತದಾರರ ಮನವೊಲಿಸಲು ಈ ಸಮಸ್ಯೆ ಶೀಘ್ರದಲ್ಲಿಯೇ ಮುಕ್ತಾಯವಾಗಲಿದೆ. ಶಾಸಕರು ತವರಿಗೆ ಮರಳಲಿದ್ದಾರೆ ಎಂಬ ಆಶ್ವಾಸನೆ ನೀಡಿದರು

9. ಕಾಂಗ್ರೆಸ್​ ಸೇರಿದ ಬಿಜೆಪಿ ಮಾಜಿ ಶಾಸಕ

ಲೋಕಸಭಾ ಚುನಾವಣೆಯ ಮತದಾನದ ದಿನಾಂಕ ಇನ್ನೇನು ಹತ್ತಿರವಾಗ್ತಿದ್ದಂತೆ, ಗದಗ ಜಿಲ್ಲಾ ಬಿಜೆಪಿಗೆ ಬಿಗ್ ಶಾಕ್ ವೊಂದು ಎದುರಾಗಿದೆ. ಗದಗನ  ಬಿಜೆಪಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಜನತಾ ಪರಿವಾರದಲ್ಲಿದ್ದ ಬಿದರೂರ ನಂತರ ಬಿಜೆಪಿ ಸೇರಿದ್ದರು. ಇದೀಗ ಹಳೆಯ ಗೆಳೆಯರಾದ ಶ್ರೀಶೈಲಪ್ಪ ಬಿದರೂರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಒಂದಾಗಿದ್ದಾರೆ. ಬೆಂಗಳೂರಿನಲ್ಲಿ ಸೇರ್ಪಡೆಯಾದ ಶ್ರೀಶೈಲಪ್ಪ ಬಿದರೂರು ಅವರನ್ನು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು. ವಿಧಾನಸಭಾ ಚುನಾವಣೆಯಲ್ಲಿ ತಮಗೆ ಬಿಜೆಪಿ ಟಿಕೆಟ್ ನೀಡಿಲ್ಲ ಅಂತ ಮುನಿಸಿಕೊಂಡಿದ್ದ ಬಿದರೂರು, ಆಗ ಪ್ರಚಾರದಿಂದ ದೂರ ಉಳಿದಿದ್ದರು.

10. ಚೆನ್ನೈ-ಕೋಲ್ಕತ್ತಾ ಮಧ್ಯೆ ಹೈವೋಲ್ಟೇಜ್ ಪಂದ್ಯ!

ಐಪಿಎಲ್​​ನಲ್ಲಿ ಇಂದು ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಡ್ ರೈಡರ್ಸ್ ತಂಡ ಮುಖಾಮುಖಿ ಆಗುತ್ತಿದೆ. ರಸೆಲ್ ಅಬ್ಬರ ಮತ್ತು ಧೋನಿ ನಾಯಕತ್ವದ ಹೈವೋಲ್ಟೇಜ್ ಪಂದ್ಯಕ್ಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತುಕಾಯುತ್ತಿದ್ದಾರೆ. ಮೇಲ್ನೋಟಕ್ಕೆ ಉಭಯ ತಂಡಗಳು ಬಲಿಷ್ಠವಾಗಿದ್ದು, ಗೆಲುವು ಯಾರಕಡೆ ವಾಲಲಿದೆ ಎಂಬುದು ಕುತೂಹಲ ಕೆರಳಿಸಿದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೆ ಆತಂಕ ಶುರುವಾಗಿದೆ. ಬೆಳಗಿನ ಜಾವದಿಂದ ಚೆನ್ನೈನಾದ್ಯಂತ ಮಳೆ ಸುರಿಯಿತ್ತಿದ್ದು ಪಂದ್ಯಕ್ಕೆ ವರುಣ ಅಡ್ಡಿ ಪಡಿಸುವ ಸಂಭವವಿದೆ.
First published:April 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ