Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 8, 2019, 6:13 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 8, 2019, 6:13 PM IST
  • Share this:
1.  ಪ್ರಣಾಳಿಕೆ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 'ಸಂಕಲ್ಪ ಪತ್ರ' ಎಂಬ ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಯನ್ನೇ ಮೂಲವನ್ನಾಗಿ ಆಧರಿಸಿ ಬಿಜೆಪಿ ತನ್ನ ಪ್ರಣಾಳಿಕೆ ತಯಾರಿಸಿದೆ. ಚುನಾವಣೆಯ ದೃಷ್ಟಿಯಿಂದ ಮತದಾರನಿಗೆ ಒಳ್ಳೆಯ ಭರವಸೆಗಳನ್ನು ನೀಡಲಾಗಿದೆ. ದೇಶದ ಭದ್ರತೆ, ಆರ್ಥಿಕತೆ ಮತ್ತು ಇತರ ಕಲ್ಯಾಣ ಯೋಜನೆಗಳ ಭರವಸೆ ಬಿಜೆಪಿ ನೀಡಿದೆ. 'ಫಿರ್ ಏಕ್ ಬಾರ್ ಮೋದಿ ಸರ್ಕಾರ್' ಎಂಬ ಟ್ಯಾಗ್‌ಲೈನ್ ಅನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಬಳಸಲಾಗಿದೆ. ಈ ಬಿಜೆಪಿ ಪ್ರಣಾಳಿಕೆಯಲ್ಲಿ 75 ಅಂಶಗಳಿಗೆ ಒತ್ತು ನೀಡಲಾಗಿದೆ. 6 ಕೋಟಿ ಜನರ ಅಭಿಮತ ಸಂಗ್ರಹಿಸಿ ಪ್ರಣಾಳಿಕೆ ತಯಾರಿ ಮಾಡಲಾಗಿದೆ. ಎಲ್ಲಾ ಕ್ಷೇತ್ರ, ಪ್ರದೇಶ, ಸಮುದಾಯಗಳನ್ನು ಅಭಿವೃದ್ದಿ ಮಾಡುವ ಬಗ್ಗೆ ಯೋಜನೆಗಳನ್ನು ನೀಡುವುದಾಗಿ ತಿಳಿಸಲಾಗಿದೆ. ನವಭಾರತ ನಿರ್ಮಾಣಕ್ಕೆ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ. ಜತೆಗೆ ವಿಧಿ 370, 35 ಎ ರದ್ದುಗೊಳಿಸುವ ಭರವಸೆ, ಕಾಶ್ಮೀರಕ್ಕೆ ವಿಶೇಷ ಸವಲತ್ತುಕೊಡುವ ವಿಧಿ ರದ್ದು, ಕಿಸಾನ್​ ಕ್ರೆಡಿಟ್​ ಕಾರ್ಡ್​ ಮೂಲಕ ಕೃಷಿ ಸಾಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರವಸೆ ಕೊಟ್ಟಿದ್ದಾರೆ.

2. ವಿವಿ ಪ್ಯಾಟ್​ ಸಂಖ್ಯೆ ಹೆಚ್ಚಳಕ್ಕೆ ಸುಪ್ರೀಂ ಆದೇಶ

ಮತ ಚಲಾವಣೆ ದೃಢೀಕರಿಸುವ ವಿವಿಪ್ಯಾಟ್​ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸೋಮವಾರ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಸುಪ್ರೀಂಕೋರ್ಟ್​ನ ಈ ತೀರ್ಪು ಮತದಾರರಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ನಿರಾಳ ತಂದಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಇವಿಎಂಗೆ ವಿವಿ ಪ್ಯಾಟ್​ಗಳ ಸಂಖ್ಯೆಯನ್ನು ಐದಕ್ಕೆ ಏರಿಸುವಂತೆ ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ರಂಜನ್​ ಗೋಗೊಯ್​ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.

3. ಚುನಾವಣಾ ಸಮೀಕ್ಷೆ ಬಿಡುಗಡೆ ಮಾಡಿದ ಇಂಡಿಯಾ ಟಿವಿ-ಸಿಎನ್​ಎಕ್ಸ್​

ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕೇಂದ್ರದಲ್ಲಿ ಈ ಬಾರಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ. ಈ ಬೆನ್ನಲ್ಲೀಗ 'ಇಂಡಿಯಾ ಟಿವಿ-ಸಿಎನ್‌ಎಕ್ಸ್‌' ಚುನಾವಣಾ ಪೂರ್ವ ಸಮೀಕ್ಷೆ  ನಡೆಸಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಪ್ರಯಾಸದ ಬಹುಮತ ಸಿಗಲಿದೆ ಎಂದು ಹೇಳಿದೆ. ಕಳೆದ ಬಾರಿಗಿಂತ ಈ ಸಲ ಎನ್​​ಡಿಎ ಕಡಿಮೆ ಸೀಟು ಗೆಲ್ಲಲಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಸ್ಥಾಪಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಈ ಬಾರಿ ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್​​ಡಿಎಗೆ 275, ಕಾಂಗ್ರೆಸ್​​ ನೇತೃತ್ವದ ಯುಪಿಎಗೆ 147, ತೃತೀಯ ರಂಗದ ಪ್ರಾದೇಶಿಕ ಪಕ್ಷಗಳಿಗೆ 121 ಸೀಟುಗಳು ಲಭ್ಯವಾಗಲಿದೆ ಎನ್ನಲಾಗಿದೆ. ಇನ್ನು ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮಹಾಘಟಬಂಧನ್, ಎಸ್‍ಪಿ-ಬಿಎಸ್‍ಪಿ ಮೈತ್ರಿ ಲೆಕ್ಕಕ್ಕೆ ಇಲ್ಲ ಎನ್ನುವಂತೆ ಮಾತನಾಡುತ್ತಿರಬಹುದು. ಚುನಾವಣಾ ಪೂರ್ವ ಸಮೀಕ್ಷೆಗಳು ಮಾತ್ರ ಬೇರೆಯದನ್ನೇ ಹೇಳುತ್ತಿವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾದಿ ಸುಲಭವಲ್ಲ. ಇವತ್ತು ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗಿದ್ದು, ಅದರಲ್ಲಿ ಮೋದಿ ಪಾಲಿಗೆ ಈ ಬಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ ಎಂಬ ಸೂಚನೆ ಸಿಕ್ಕಿದೆ.

4. ಹಣದಾಸೆಗೆ ಬಿಜೆಪಿ ಬಲಿಯಾಗಲ್ಲಕಾಂಗ್ರೆಸ್ ಅಭ್ಯರ್ಥಿ ಕೆಎಚ್ ಮುನಿಯಪ್ಪ ಏಳು ಬಾರಿ ಸಂಸದರು ಮತ್ತು ಎರಡು ಬಾರಿ ಮಂತ್ರಿ ಆದರೂ ಕೋಲಾರಕ್ಕೆ ಅವರ ಕೊಡುಗೆ ಏನೂ ಇಲ್ಲ. ಈ ಹಿಂದೆಯೇ ಮುನಿಯಪ್ಪ ಸೋಲಬೇಕಿತ್ತು. ಕಳೆದ ಬಾರಿ ಅಭ್ಯರ್ಥಿ ಹಿಂದೆ ಸರಿಯಲು ಕೋಟಿಗಟ್ಟಲೆ ಹಣ ಕೊಟ್ಟಿದ್ದರು. ಈ ಬಾರಿ ಅದು ಆಗಲ್ಲ, ಮುನಿಸ್ವಾಮಿ ಅದಕ್ಕೆಲ್ಲಾ ಬಗ್ಗಲ್ಲ. ಕೆಎಚ್ ಮುನಿಯಪ್ಪ ಆಟ ಈ ಬಾರಿ ನಡೆಯಲ್ಲ ಎಂದು ಬಿಎಸ್​ ಯಡಿಯೂರಪ್ಪ ತಿಳಿಸಿದರು. ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ, ಗೋದಾವರಿ ನದಿ ಜೋಡಣೆ ವಿಚಾರವಾಗಿ ನಿತಿನ್ ಗಡ್ಕರಿ ಬಳಿ ಮಾತನಾಡಿದ್ದೇನೆ. ಎತ್ತಿನ ಹೊಳೆ ಯೋಜನೆಗೆ ಮುನಿಯಪ್ಪರಿಂದ ಪ್ರಮಾಣಿಕ ಪ್ರಯತ್ನ ಇಲ್ಲದಿರುವುದರಿಂದ ಅದು ನನೆಗುದಿಗೆ ಬಿದ್ದಿದೆ. ಮನೆ ಇಲ್ಲದವರಿಗೆ ಎಲ್ಲಾ ಜನಕ್ಕೂ ನಾನು ಮತ್ತು ಮುನಿಸ್ವಾಮಿ ಜೊತೆಯಲ್ಲಿ ಇದ್ದು ಮಾಡ್ತೇವೆ ಎಂದು ಭರವಸೆ ನೀಡಿದರು

5. ಆರ್​ಸಿಬಿ ಮ್ಯಾಚ್ ವೇಳೆ ನಲಪಾಡ್​ ಪುಂಡಾಟ

ಹಲ್ಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ನಲಪಾಡ್​ ಕೆಲವು ದಿನಗಳ ಕಾಲ ನಾಪತ್ತೆಯಾಗಿದ್ದರು. ನಿನ್ನೆ ನಡೆದ ಆರ್​ಸಿಬಿ ಮ್ಯಾಚ್​ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರತ್ಯಕ್ಷರಾಗಿರುವ ಅವರು ಮಾಡಿರುವ ಕೆಲಸ ಈಗ ಮತ್ತೊಮ್ಮೆ ವೈರಲ್​ ಆಗಿದ್ದು, ಎಲ್ಲರ ಗಮನಸೆಳೆದಿದೆ. ಸೆರೆವಾಸ ಅನುಭವಿಸಿ ಹೊರ ಬಂದಿರುವ ನಲಪಾಡ್​ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಅಬ್ಬರಿಸಿದ್ದಾರೆ. ಅದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಭಾನುವಾರ ನಡೆದ ಐಪಿಎಲ್​ ಮ್ಯಾಚ್​ ವೇಳೆ ತಂಡವನ್ನು ಹುರಿದುಂಬಿಸುವ ಬದಲು, ಚೌಕೀದಾರ್​ ಚೋರ್​ ಹೈ ಎಂದು ಪ್ರಧಾನಿ ವಿರುದ್ಧ ಘೋಷಣೆ ಕೂಗಿದ್ದಾರೆ.

6.ನಾವ್ಯಾಕೆ ಕಾಂಗ್ರೆಸ್​ ಕಚೇರಿ ಹತ್ತಿರ ಬರಬೇಕು

ಈ ಹಿಂದೆ ಚುನಾವಣೆಗಳಲ್ಲಿ ಕಾಂಗ್ರೆಸ್​ ಜೊತೆ ಜಿದ್ದಾಜಿದ್ದಿ ಚುನಾವಣೆ ಮಾಡಿದ್ದೇವೆ. ಅವರೊಂದಿಗೆ ನಾವು ಜಗಳ ಮಾಡಿಕೊಂಡಿದ್ದೇವೆ. ಈಗ ಮೈತ್ರಿ ಮೂಲಕ ಚುನಾವಣೆ ಎದುರಿಸಲು ಮುಂದಾಗಿದ್ದರೂ ಯಾರು ನಮ್ಮನ್ನು ಕರೆದಿಲ್ಲ, ಮಾತನಾಡಿಸಿಲ್ಲ. ಮೈತ್ರಿಗೆ ನಮ್ಮ ವಿರೋದವಿದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​  ಅವರಿಗೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಹುಣಸೂರಿನಲ್ಲಿ  ಜಿಟಿ ದೇವೇಗೌಡ ಅವರ ನಿವಾಸದಲ್ಲಿ ಆಯೋಜಿಸಿದ್ದ ಕಾಂಗ್ರೆಸ್​-ಜೆಡಿಎಸ್​ ಸಭೆಯಲ್ಲಿ ನಡೆದ ಜೆಡಿಎಸ್​ ಕಾರ್ಯಕರ್ತರು ಪಕ್ಷದ ಅಧ್ಯಕ್ಷರ ವಿರುದ್ಧ ಗರಂ ಆಗಿದ್ದು, ಮೈತ್ರಿಗೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ  ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಕಾರ್ಯಕರ್ತರು, ನಮಗೇನು ಮಾನ, ಮರ್ಯಾದೆ ಇಲ್ವಾ,  ಕ್ಷೇತ್ರದಲ್ಲಿ ಕಾಂಗ್ರೆಸ್​ ಜೆಡಿಎಸ್​ ನಾಯಕರ ನಡುವೆ ಉತ್ತಮ ಸಂಬಂಧವಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ನಾವೇಕೆ ಕಾಂಗ್ರೆಸ್ ಆಫೀಸ್ ಹತ್ತಿರ ಬರೋಣ ಎಂದು ಸಚಿವ ಜಿಟಿ ದೇವೇಗೌಡ ಎದುರೇ ಕೂಗಾಡಿದರು.

7. ಕಮಲ ಕೈನಲ್ಲಿ ಕಾಣದ ವೆಂಕಟೇಶ್​ ಪ್ರಸಾದ್​ ಮುಂದಿನ ನಡೆಯೇನು?

ಲೋಕಸಭೆ ಚುನಾವಣೆ ಘೋಷಣೆಯಾಗಿ ಬಿಜೆಪಿ ಪರವಾಗಿ ನಾಮಪತ್ರ ಸಲ್ಲಿಸಿ ಕಮಲ ನಾಯಕರು ಪ್ರಚಾರವನ್ನು ಭರ್ಜರಿಯಾಗಿ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಕೆಯಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭಾಗಿಯಾಗಿದ್ದರು. ಆದರೆ ಬೇಷರತ್ ಆಗಿ ಬಿಜೆಪಿ ಪಕ್ಷ ಸೇರಿದ್ದೇನೆ ಎಂದೇಳಿದ್ದ ವೆಂಕಟೇಶ್ ಪ್ರಸಾದ್ ಇದುವರೆಗೂ ಎಲ್ಲೂ ಬಿಜೆಪಿ ಪಕ್ಷದ ವೇದಿಕೆಯಲ್ಲಾಗಲೀ, ಪ್ರಚಾರದ ವೇಳೆಯಲ್ಲಾಗಲೀ ಕಾಣಲಿಲ್ಲ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುತ್ತೆ ಎನ್ನುವಷ್ಟರಲ್ಲಿ ಉಗ್ರಪ್ಪ ಅವರಿಗೆ ಅದು ದಕ್ಕಿತು. ಈ ಬಾರಿ ಲೋಕಸಭೆಯಲ್ಲಿ ಇನ್ನೇನು ಬಿಜೆಪಿ ಟಿಕೆಟ್ ಸಿಕ್ಕಿತು ಎನ್ನುವಷ್ಟರಲ್ಲಿಯೇ ಅದು ವೈ. ದೇವೇಂದ್ರಪ್ಪ ಅವರ ಪಾಲಾಯಿತು. ಬಳ್ಳಾರಿಯಲ್ಲಿ ಕಮಲ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ವೆಂಕಟೇಶ್ ಪ್ರಸಾದ್ ಅಧಿಕೃತವಾಗಿ ಸೇರ್ಪಡೆಯಾದರು. ಆದರೆ, ಇವರ ದುರದೃಷ್ಟಕ್ಕೆ ಇದಾದ 48 ಗಂಟೆಯಲ್ಲಿ ಬಿಜೆಪಿ ಟಿಕೆಟ್ ಜಾರಕಿಹೊಳಿ ಸಹೋದರರ ಸಂಬಂಧಿ ವೈ. ದೇವೇಂದ್ರಪ್ಪ ಅವರ ಪಾಲಾಯಿತು. ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಸಂದರ್ಭದಲ್ಲಿ ಬೇಷರತ್ ಆಗಿ ನಾನು ಬಿಜೆಪಿ ಸೇರುತ್ತಿದ್ದು, ಟಿಕೆಟ್ ಸಿಗದೆ ಹೋದರೂ ಪಕ್ಷದ ಪರ ಪ್ರಚಾರ ಮಾಡುವುದಾಗಿ ಹೇಳಿದ್ದರು

8. ಅಯೋಗ್ಯ ಸಿಎಂ ಅಲ್ಲ ಯೋಗ್ಯತೆ ಇಲ್ಲದ ಸಿಎಂ; ಈಶ್ವರಪ್ಪ

"ಸಿಎಂ ಎಚ್​​​.ಡಿ ಕುಮಾರಸ್ವಾಮಿಗೆ ಅಯೋಗ್ಯ ಅನ್ನೋ ಪದ ಬೇಸರ ತಂದಿರಬಹುದು. ಹೀಗಾಗಿ ಅಯೋಗ್ಯ ಅನ್ನೋ ಪದ ಬಿಟ್ಟು ಯೋಗ್ಯತೆ ಇಲ್ಲದ ಸಿಎಂ ಅಂತೀನಿ. ನಾಳೆ ಐಟಿ ರೇಡ್ ಮಾಡ್ತಾರೆ ಅಂತ ಸಿಎಂ ಹೇಳಿದಾರೆ. ಇದು ಕಳ್ಳರನ್ನ ತಪ್ಪಿಸಿಕೊಳ್ಳಿ ಅಂತ ಬಾಯ್ಬಿಟ್ಟು ಹೇಳಿದಾಗೇ. ನಿಮ್ಮಲ್ಲಿರೋ ಅಕ್ರಮ ಸಂಪತ್ತು ಮುಚ್ಚಿ ಹಾಕಿಕೊಳ್ಳಿ ಅಂದಹಾಗೇ" ಎಂದು ಮುಖ್ಯಮಂತ್ರಿಗಳು ವಿರುದ್ಧ ಬಿಜೆಪಿ ಹಿರಿಯ ನಾಯಕ ಕೆ.ಎಸ್​​​ ಈಶ್ವರಪ್ಪ ಕಿಡಿಕಾರಿದ್ಧಾರೆ. ನಗರದಲ್ಲಿ ಸುದ್ದಿಗಾರರ ಜತೆಗೆ ಮಾತಾಡಿದ ಇವರು, ಸಿಎಂ ಹೇಳಿಕೆ ನೀಡಿದ  ಮಾರನೆ ದಿನವೇ ಐಟಿ  ದಾಳಿ ಮಾಡಿದಂಗಾಯ್ತು. ಆದರೂ, ಬರೀ ಸಿಕ್ಕಿದ್ದು ಕೇವಲ 36 ಸಾವಿರ ಅಂತೇಳಿದ್ರು. ಸಿಎಂ ಐಟಿ ದಾಳಿ ಸೂಚನೆ ನೀಡದ ಕೂಡಲೇ ತಮ್ಮ ಶಿಷ್ಯಂದಿರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ರು. ಐಟಿ ರೇಡ್​ನಲ್ಲಿ ಮತ್ತೇ ಹಣ ಸಿಕ್ಕಿದೆ. ಅಧಿಕಾರಿಗಳು ಮತ್ತು ಗುತ್ತಿದಾರರಿಗೆ ದಾಳಿಯಿಂದ ತಪ್ಪಿಸಿಕೊಳ್ಳಿ ಎಂದು ಸೂಚನೆ ನೀಡಿದರು. ಹಾಗಾಗಿ ಸಿಎಂ ಒಬ್ಬ ಅಯೋಗ್ಯ ಅನ್ನೋ ಬದಲು ಯೋಗ್ಯತೆ ಇಲ್ಲದ ಮುಖ್ಯಮಂತ್ರಿ ಸಿಎಂ ಎಂದರು.

9 .ಅಡ್ವಾಣಿ-ಜೋಷಿ ಜೊತೆ ಅಮಿತ್​ ಷಾ ಮಾತುಕತೆ

ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾದ ಬೆನ್ನಿಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಸಮಾಧಾನಿತ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿಯನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪಕ್ಷದಲ್ಲಿನ ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವ ಕುರಿತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಗುರುಗಳನ್ನು ಭೇಟಿ ಮಾಡಿ ಮನವೋಲಸಿ ಮತ್ತೆ ಪಕ್ಷದ ಪರ ಪ್ರಚಾರಕ್ಕೆ ಕರೆತರುವ ನಿರೀಕ್ಷೆ ಹೊಂದಿದ್ದಾರೆ ಎಂದು ಬಿಜೆಪಿ ಪಕ್ಷದ ಮೂಲಗಳು ಖಚಿತಪಡಿಸಿವೆ. ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಬಿಜೆಪಿ ಪಕ್ಷದ ಸಂಸ್ಥಾಪಕರಲ್ಲೊಬ್ಬರಾಗಿದ್ದು ಪಕ್ಷವನ್ನು ಕಟ್ಟಿ ಬೆಳೆಸಿದ ಪ್ರಮುಖ ನಾಯಕರು. ಆದರೆ, ಇತ್ತೀಚಿಗೆ ಈ ಇಬ್ಬರೂ ನಾಯಕರಿಗೂ ಪಕ್ಷ ಚುನಾವಣಾ ಟಿಕೆಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಪಕ್ಷದ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

10. ಐಪಿಎಲ್​ ಇಂದು ಪಂಜಾಬ್- ಹೈದರಾಬಾದ್ ಮುಖಾಮುಖಿ

ಐಪಿಎಲ್​​ನಲ್ಲಿಂದು ಕಿಂಗ್ಸ್​ ಇಲೆವೆನ್ ಪಂಜಾಬ್ ಹಾಗೂ ಸನ್​ರೈಸರ್ಸ್​​ ಹೈದರಾಬಾದ್ ತಂಡಗಳು ಮುಖಾಮುಖಿ ಆಗುತ್ತಿದೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ಪಂಜಾಬ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಅಶ್ವಿನ್ ಪಡೆಗೆ ತವರಿನ ಬೆಂಬಲವಿದ್ದು, ಬ್ಯಾಟಿಂಗ್ ವಿಭಾಗದಲ್ಲೂ ಬಲಿಷ್ಠವಾಗಿದೆ. ಕೆಎಲ್ ರಾಹುಲ್ ಫಾರ್ಮ್​ಗೆ ಮರಳಿರುವುದು ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಕ್ರಿಸ್ ಗೇಲ್ ಜೊತೆ ಪವರ್ ಪ್ಲೇ ನಲ್ಲಿ ರನ್ ಮಳೆ ಸುರಿಯುವುದರಲ್ಲಿ ಅನುಮಾನವಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್ ಹಾಗೂ ಮಂದೀಪ್ ಸಿಂಗ್ ಹೀಗೆ ಸ್ಫೋಟಕ ಆಟಗಾರರ ದಂಡಿದೆ. ಇತ್ತ ಹೈದರಾಬಾದ್ ತಂಡದ ಆಸ್ತಿ ಓಪನರ್​​ಗಳು. ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​ಸ್ಟೋ ಆರಂಭದಲ್ಲಿ ಅಬ್ಬರಿಸುತ್ತಿರುವುದು ತಂಡ ಗೆಲುವಿನ ಕಡೆ ವಾಲಲು ಸಹಾಯವಾಗುತ್ತಿದೆ. ಇವರ ಜೊತೆ ವಿಜಯ್ ಶಂಕರ್, ಮನೀಶ್ ಪಾಂಡೆ, ದೀಪಕ್ ಹೂಡ ಹಾಗೂ ಯೂಸುಫ್ ಪಠಾಣ್ ಬ್ಯಾಟ್ ಬೀಸಿದರೆ ಎದುರಾಳಿ ಪರದಾಡುವುದು ಖಚಿತ. ಬೌಲಿಂಗ್​​ನಲ್ಲಿ ನಾಯಕ ಭುವನೇಶ್ವರ್ ಕುಮಾರ್ ಹಾಗೂ ಸಿದ್ಧಾರ್ಥ್​ ಕೌಲ್ ಉತ್ತಮ ಲಯದಲ್ಲಿದ್ದಾರೆ. ಅಂತೆಯೆ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಜೋಡಿ ಮೋಡಿ ಮಾಡುವ ನಿರೀಕ್ಷೆಯಿದೆ.
First published:April 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ