Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 4, 2019, 5:54 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 4, 2019, 5:54 PM IST
  • Share this:
1. ವಯನಾಡಿನಿಂದ ರಾಹುಲ್​ ನಾಮಪತ್ರ

ಕೇರಳದ ವಯನಾಡ್​ ಲೋಕಸಭಾ ಕ್ಷೇತ್ರದಿಂದ ಇಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ತಂದಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಜೊತೆಯಾಗಿದ್ದರು. ನಾಮಪತ್ರ ಸಲ್ಲಿಕೆಗಾಗಿ ನಿನ್ನೆ ರಾತ್ರಿಯೇ ಕೊಚ್ಚಿಗೆ ಬಂದಿಳಿದಿ ರಾಹುಲ್​ಗೆ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್​ ಶೋವನ್ನು ಅವರು ನಡೆಸಿದರು. ಈ ವೆಳೆ ಸಾವಿರಾರು ಕಾರ್ಯಕರ್ತರು, ಕಾಂಗ್ರೆಸ್​ ಬಾವುಟ ಹಿಡಿದು ಅವರಿಗೆ ಬೆಂಬಲಿಸಿದರು. ಇದಾದ ಬಳಿಕ ನಡೆದ ಬೃಹತ್​ ರೋಡ್​ ಶೋನಲ್ಲಿ ಗಾಯಗೊಂಡ ಪತ್ರಕರ್ತರನ್ನು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಉಪಚರಿಸಿ, ಕಾರ್ಯಕ್ರಮದ ಸ್ಥಳದಿಂದ  ಆ್ಯಂಬುಲೆನ್ಸ್​ವರೆಗೂ ತಾವೇ ಸ್ವತಃ ಕರೆತರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

2. ಸಿದ್ದರಾಮಯ್ಯ ಸೋಲಿಗೆ ಜನ ಕಾರಣ- ದೇವೇಗೌಡ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಸೋಲಿಗೆ ಅಲ್ಲಿನ ಜನರು ಕಾರಣವೇ ಹೊರತು ನಮ್ಮ ಪಕ್ಷ ಜಿ.ಟಿ. ದೇವೇಗೌಡರಲ್ಲ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಸ್ಪಷ್ಟಪಡಿಸಿದರು. ನಾನು ಕೂಡ ಚುನಾವಣೆಯಲ್ಲಿ ಸೋತಿದ್ದೇನೆ. ಸಿದ್ದರಾಮಯ್ಯನವರಿಗೆ ತಮ್ಮನ್ನು ಸಿಎಂ ಮಾಡಿಲ್ಲ ಎಂದು ಸಿಟ್ಟಿರಬಹುದು. ನಾನು ದೆಹಲಿಗೆ ಹೋದಾಗ ಸಿದ್ದರಾಮಯ್ಯನವರನ್ನು  ಸಿಎಂ ಮಾಡಲು ಒಪ್ಪಲಿಲ್ಲ. ಅವರನ್ನು ಮೈಸೂರಿನ ಮತದಾರರು ಸೋಲಿಸಿದ್ದಾರೆಯೇ ವಿನಃ ಎದುರಾಳಿಯಲ್ಲ ಎಂದು ಹಾಸನದಲ್ಲಿ ಇಂದು ಹೇಳಿದ್ದಾರೆ. ಮೈತ್ರಿ ಪಕ್ಷದಲ್ಲಿ ಒಡಕಿಲ್ಲವೇ? ಎಂದು ನೀವು ಪ್ರಶ್ನಿಸಬಹುದು. ಈಗಾಗಲೇ ಸಿದ್ದರಾಮಯ್ಯನವರೇ ಒಡಕು ಸರಿ ಮಾಡುತ್ತೇವೆ ಅಂತ ಹೇಳಿದ್ದಾರೆ. ಸದ್ಯಕ್ಕೆ ಲೋಕಸಭಾ ಚುನಾವಣೆಯತ್ತ ನಮ್ಮೆಲ್ಲರ ಗಮನವಿದೆ. ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ ಎಂದಿದ್ದಾರೆ.

3. ರಾಜಕೀಯ ಮಾಡಲು ಮಂಡ್ಯಕ್ಕೆ ಬರಲಿಲ್ಲ; ಸುಮಲತಾ

ಸಿನಿಮಾದಂತೆ ರಾಜಕೀಯ ಸಹ ಆಕಸ್ಮಿಕ ಎಂಟ್ರಿ. ಚಿಕ್ಕ ವಯಸ್ಸಿಗೆ ತಂದೆಯನ್ನು ಕಳೆದುಕೊಂಡೆ. ಇಂದು ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ನಿರೀಕ್ಷೆ  ಮಾಡಿರಲಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದರು. ಪ್ರೆಸ್​ಕ್ಲಬ್​ನಲ್ಲಿ ಇಂದು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಅಂಬಿ ಅವರಿಗೆ ಇದ್ದ ಇಮೇಜ್​ಗೆ, ಕ್ಯಾಲಿಬರ್​ಗೆ ತಕ್ಕಂತೆ ಹೆಜ್ಜೆ ಹಾಕಿದಿದ್ದರೆ ಅಂಬಿ ಮುಖ್ಯಮಂತ್ರಿ ಆಗ್ತಾ ಇದ್ರು ಅಂತ ಜನರು ಹೇಳುತ್ತಿದ್ದಾರೆ. ಅಂಬಿ‌ ಇಲ್ಲ ಅಂದಾಗಲೂ ಮಂಡ್ಯ ಜನರು ಅದೇ ರೀತಿಯ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಮಂಡ್ಯ ಜನರ ಪ್ರೀತಿ ಕಂಡು, ಅವರು ಯಾಕೆ ನಾನು ಸಂಸದೆಯಾಗಬೇಕು ಎಂದು ಬಯಸುತ್ತಿದ್ದಾರೆ ಅಂತ ಗೊತ್ತಾಯ್ತು. ಹೆಚ್ಚು ಜನರನ್ನು ಭೇಟಿಯಾದಷ್ಟು ನಮ್ಮ ಮೇಲಿನ ಭಾವಾನಾತ್ಮಕ ಸಂಬಂಧ ಕಾಣಿಸಿತು. ಮಂಡ್ಯದ ಜನರು ಯಾವುದನ್ನೂ ರೆಗ್ಯೂಲರ್ ಆಗಿ ನೋಡಲ್ಲ. ಎಲ್ಲವನ್ನೂ ಭಾವಾನಾತ್ಮಕವಾಗಿ ತೆಗೆದುಕೊಂಡು ನೋಡುತ್ತಾರೆ ಎಂದರು

4. ರೆಪೋ ದರ ಇಳಿಕೆ ಮಾಡಿದ ಆರ್​ಬಿಐಭಾರತೀಯ ರಿಸರ್ವ್​ ಬ್ಯಾಂಕಿನ ಹಣಕಾಸು ನೀತಿ ಸಮಿತಿ ಗುರುವಾರ ರೆಪೋ ದರವನ್ನು 25 ಬೇಸ್​ ಪಾಯಿಂಟ್​ ಅಥವಾ ಶೇ. 025ನಷ್ಟು ಇಳಿಕೆ ಮಾಡಿದೆ. ಇದರಿಂದ ಶೇ.6.25 ರಷ್ಟಿದ್ದ ರೆಪೋ ದರ ಶೇ.6ಕ್ಕೆ ಇಳಿಕೆಯಾಗಿದೆ. ಆರ್​ಬಿಐ ಗೌವರ್ನರ್ ಶಕ್ತಿಕಾಂತ್ ದಾಸ್​ ನೇತೃತ್ವದಲ್ಲಿ  ನಡೆದ 2019-20ರ ಹಣಕಾಸು ವರ್ಷದ ಮೊದಲ ಸಭೆಯಲ್ಲಿ ಹಣಕಾಸು ನೀತಿ ಸಮಿತಿಯು ಈ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಫೆಬ್ರವರಿಯಲ್ಲಿ ಆರ್​ಬಿಐ ತನ್ನ ರೆಪೋ ದರವನ್ನು 25 ಮೂಲ ಅಂಕಿ ಕಡಿತಗೊಳಿಸುವ ಮೂಲಕ ಶೇ.6.55ರಿಂದ ಶೇ.6.25ಕ್ಕೆ ಇಳಿಕೆ ಮಾಡಿತ್ತು. ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ದ್ವೈ ಮಾಸಿಕ ಸಭೆ ಇಂದು ನಡೆದಿದ್ದು, ರೆಪೋ ದರವನ್ನು ಶೇ.6.25ರಿಂದ ಶೇ.6ಕ್ಕೆ ಇಳಿಕೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಹಕ ದರ ಸೂಚಿಯು ಕಳೆದ ಆರು ತಿಂಗಳಿನಿಂದ ಶೇ.4ರ ಒಳಗಿದ್ದು, ಮುಂದಿನ ಕೆಲ ತಿಂಗಳುಗಳವರೆಗೆ ಮುಂದುವರೆಯುವ ಸಾಧ್ಯತೆ ಇದೆ. ಹೀಗಾಗಿ ಆರ್​ಬಿಐ ರೆಪೋ ದರವನ್ನು ಕಡಿತ ಮಾಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

5. ಬಿಜೆಪಿಯವರು ಗಾಂಧೀಜಿ ಕೊಂದ ಗೋಡ್ಸೆ ವಂಶಸ್ಥರು; ಸಿದ್ದರಾಮಯ್ಯ

ಬಿಜೆಪಿಯವರೆಲ್ಲಾ ಗಾಂಧೀಜಿ ಕೊಂದ ಗೋಡ್ಸೆ ವಂಶಸ್ಥರು...  ಬಿಜೆಪಿಯವರ ಮೂಲ ಆರ್​ಎಸ್​ಎಸ್..​. ಹಿಂದುಳಿದ ವರ್ಗದ ಯಾರಿಗಾದರೂ ಬಿಜೆಪಿಯವರು ಸೀಟು ಕೊಟ್ಟಿದ್ದಾರಾ..? ಬಿಜೆಪಿಯಲ್ಲಿ ಎಲ್ಲಿದೆ ಸಾಮಾಜಿಕ ನ್ಯಾಯ? ಎಂದು ಬಿಜೆಪಿ ವಿರುದ್ಧ  ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ನಡೆಸಿದ ಪ್ರಚಾರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕೊಲೆಗಡುಕ ಎನ್ನುವ ಈಶ್ವರಪ್ಪ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ಗಾಂಧಿಯನ್ನು ಕೊಂದವರ ಬಾಯಲ್ಲಿ ಈ ರೀತಿ ಮಾತುಗಳು ಬರುತ್ತವೆ. ಆತ ಒಬ್ಬ ಪೆದ್ದ, ಮೆದುಳಿಗೂ ನಾಲಿಗೆ ಸಂಪರ್ಕವಿಲ್ಲದೇ ಮಾತನಾಡುತ್ತಾರೆ ಎಂದು ವ್ಯಂಗ್ಯ ಮಾಡಿದರು.ಬಿಜೆಪಿ ಪಕ್ಷ ಚುನಾವಣೆಯಲ್ಲಿ ಒಬ್ಬ ಹಿಂದುಳಿದ ಅಭ್ಯರ್ಥಿಗೆ ಟಿಕೆಟ್​ ನೀಡಿದ್ದಾರಾ. ಈಶ್ವರಪ್ಪ ಹಿಂದುಳಿದ ನಾಯಕರಲ್ವಾ? ಕುರುಬ ಸಮಾಜದ ನಾಯಕರಲ್ಲವಾ ಅವರು?  ಹಿಂದುಳಿದವರಿಗೆ ಟಿಕೆಟ್ ಕೊಡಿಸಲು ಅವರಿಂದ ಆಗಿದೆಯಾ? ಈಶ್ವರಪ್ಪ ಅವರಿಗೆ ಸ್ವಾಭಿಮಾನವಿದ್ದರೆ ಪಕ್ಷ ಬಿಟ್ಟು ಹೊರಬರಬೇಕು ಎಂದು ಸಿದ್ದರಾಮಯ್ಯ ಸವಾಲು ಹಾಕಿದರು

6. ಚುನಾವಣೆ ಹೊತ್ತಲ್ಲಿ ದಿಢೀರ್​ ವರ್ಗಾವಣೆಯಾದ ಹಾಸನ ಎಸ್​ಪಿ

ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಸರ್ಕಾರಹಾಸನ ಎಸ್​ಪಿ ಡಾ. ಎ.ಎನ್​​. ಪ್ರಕಾಶ್ ಗೌಡ ಅವರನ್ನು ವರ್ಗಾವಣೆ ಮಾಡಿದೆ. ನೂತನ ಎಸ್​ ಪಿ ಯಾಗಿಚೇತನ್ ಸಿಂಗ್ ರಾಥೋರ್ ಅವರನ್ನು ನೇಮಕ ಮಾಡಲಾಗಿದೆ. ಚೇತನ್ ಸಿಂಗ್ ರಾಥೋರ್ ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಿರ್ದೇಶಕರಾಗಿದ್ದರು. ಜೆಡಿಎಸ್ ಪಕ್ಷದ ಪರವಾಗಿ ಎಸ್​ಪಿ ಪ್ರಕಾಶ್ ಗೌಡ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರು ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದರು ಎನ್ನಲಾಗಿದೆ. ಈ ದೂರಿನ ಮೇರೆಗೆ ಪ್ರಕಾಶ್ ಗೌಡ ಅವರನ್ನು ವರ್ಗಾವಣೆ ಮಾಡಿರುವ ಸಾಧ್ಯತೆ ಇದೆ. ಆದರೆ  ಡಾ.ಎ.ಎನ್​​.ಪ್ರಕಾಶ್ ಗೌಡ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸದೇ ಸರ್ಕಾರ ವರ್ಗಾವಣೆ ಮಾಡಿದೆ ಎನ್ನಲಾಗಿದೆ. ಏಳು ತಿಂಗಳ ಹಿಂದೆ ಹಾಸನ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದರು.  ಈ ಮೊದಲು ಮೈಸೂರಿನಲ್ಲಿ ಎಸಿಪಿಯಾಗಿ ಕೆಲಸ ಮಾಡುತ್ತಿದ್ದರು.

7. ಸಿಎಂ ತಂಗಿದ್ದ ಹೋಟೆಲ್​ ಮೇಲೆ ಐಟಿ ದಾಳಿ

ಮಂಡ್ಯದಲ್ಲೀಗ ಮತ್ತೆ ಐಟಿ ದಾಳಿ ಮುಂದುವರೆದಿದೆ. ಕಾಂಗ್ರೆಸ್​​-ಜೆಡಿಎಸ್​​​ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪುತ್ರ ನಿಖಿಲ್​​ನನ್ನು ಗೆಲ್ಲಿಸಲು ಸಿಎಂ ಎಚ್​​​.ಡಿ ಕುಮಾರಸ್ವಾಮಿ ಹೋಟೆಲ್​​ವೊಂದರಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮಂಡ್ಯದ ಶಾಸಕ ಮತ್ತು ಸಚಿವರು ಭಾಗಿಯಾಗಿದ್ದರು. ಬಳಿಕ ಅದೇ ಹೋಟೆಲ್​​ನಲ್ಲಿ ಸಿಎಂ ಉಳಿದುಕೊಂಡಿದ್ದರು. ಇದೀಗ ಸಿಎಂ ಕುಮಾರಸ್ವಾಮಿ ಅವರು ರಾತ್ರಿ ಉಳಿದುಕೊಂಡಿದ ಖಾಸಗಿ ಹೋಟೆಲ್​​ ಮೇಲೆಯೂ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ ಹೋಟೆಲ್ ಸಿಬ್ಬಂದಿಯನ್ನು ಐಟಿ ತಂಡ ವಿಚಾರಣೆ ನಡೆಸುತ್ತಿದೆ. ಜತೆಗೆ ಸಭೆ ನಡೆದ ದಿನದ ಸಿಸಿಟಿವಿ ದೃಶ್ಯಗಳು ಸೇರಿ ಹಲವು ದಾಖಲೆಗಳು ವಶಕ್ಕೆ ಪಡೆದು ಹೋಟೆಲ್​​​ ತಪಾಸಣೆ ನಡೆಸಲಾಗುತ್ತಿದೆ. ಇನ್ನೊಂದೆಡೆ ನಿಖಿಲ್​​ ಕುಮಾರಸ್ವಾಮಿ ಉಳಿದುಕೊಂಡಿದ್ದ ಖಾಸಗಿ ಹೋಟೆಲ್​​ ಮೇಲೂ ಐಟಿ ದಾಳಿ ಮುಂದುವರೆದಿದೆ ಎನ್ನಲಾಗಿದೆ.

8. ನಿಖಿಲ್​ ಸೋಲಿಸಲು ಕೆಲವರು ಪಣತೊಟ್ಟಿದ್ದಾರೆ; ದೇವೇಗೌಡ

ನಿಖಿಲ್​ ಸೋಲಿಸುವ ಮೂಲಕ ಕುಮಾರಸ್ವಾಮಿಗೆ ಮುಖಭಂಗ ಮಾಡಲು ಮಂಡ್ಯದಲ್ಲಿ ಪಕ್ಷಾತೀತವಾಗಿ ಕೆಲವರು ಪಣ ತೊಟ್ಟಿದ್ದಾರೆ. ಮಂಡ್ಯದಲ್ಲಿ ಕೆಲ ಕಾಂಗ್ರೆಸ್​ನಾಯಕರು ಈಗಾಗಲೇ ಬಹಳ ದೂರ ಹೋಗಿದ್ದಾರೆ. ಸಿದ್ದರಾಮಯ್ಯ ಅವರೇ ಖುದ್ದು ಬಂದರೂ ಫಲಕಾರಿಯಾಗುವುದಿಲ್ಲ ಎನ್ನುವ ಹಂತಕ್ಕೆ ಸ್ಥಿತಿ ತಲುಪಿದೆ ಎಂದು ಜೆಡಿಎಸ್​ ವರಿಷ್ಠ ಎಚ್​. ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಕಾಂಗ್ರೆಸ್​ ನಾಯಕರು ಮೈತ್ರಿ ಅಭ್ಯರ್ಥಿಗೆ ಬೆಂಬಲಿಸದಿರುವ ಕುರಿತು ಮಾತನಾಡಿದ ಅವರು, ನನ್ನ ಗೆಲುವಿಗೆ ಪರಮೇಶ್ವರ್​ ಹಾಗೂ ನಿಖಿಲ್​ ಗೆಲುವಿಗೆ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಇರುವ ಭಿನ್ನಮತ ಶಮನಕ್ಕೆ ಇಬ್ಬರೂ ಮುಂದಾಗಿದ್ದಾರೆ. ಆದರೆ, ಸಿದ್ದರಾಮಯ್ಯ ಹೋದರೂ ಮಂಡ್ಯದಲ್ಲಿ ಯಾವುದೇ ಪ್ರಯೋಜನವಿಲ್ಲ. ಆ ರೀತಿಯ ಪರಿಸ್ಥಿತಿ ಮಂಡ್ಯದಲ್ಲಿ ಏರ್ಪಟ್ಟಿದೆ. ಅಲ್ಲಿ ಬಂಡಾಯ ಶಮನವಾಗುವ ಲಕ್ಷಣಗಳಿಲ್ಲ ಎಂದರು.

9. ಟಿಕ್​ಟ್ಯಾಕ್​ ಆ್ಯಪ್​ಗೆ ನಿಷೇಧ ಹೇರಿದ ಮದ್ರಾಸ್​ ಹೈ ಕೋರ್ಟ್​

ವಾಟ್ಸಾಪ್​, ಫೇಸ್​ಬುಕ್​ಗಳಂತೆಯೇ ಡಬ್​ಸ್ಮಾಶ್​, ಟಿಕ್​ಟಾಕ್​ ವಿಡಿಯೋ ಆ್ಯಪ್​ಗಳು ಕೂಡ ಈಗ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲಿ ಜಾಗ ಪಡೆಯುತ್ತಿವೆ. ಈ ವಿಡಿಯೋ ಆ್ಯಪ್​ಗಳಿಗೆ ಕೆಲವರು ಅಡಿಕ್ಟ್​ ಆಗಿಬಿಟ್ಟಿರುತ್ತಾರೆ. ಟಿಕ್​ಟಾಕ್​ ಆ್ಯಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಚೈನೀಸ್ ಆ್ಯಪ್ ಅಶ್ಲೀಲತೆಯನ್ನು ಪ್ರಚೋದಿಸುವುದರಿಂದ ಟಿಕ್​ಟಾಕ್​ ಆ್ಯಪ್​ ಅನ್ನು ಬ್ಯಾನ್​ ಮಾಡಲು ಮದ್ರಾಸ್​ ಹೈಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿದೆ. ಟಿಕ್​ಟಾಕ್​ ಆ್ಯಪ್​ನಲ್ಲಿ ವಿಭಿನ್ನ ಎಫೆಕ್ಟ್​ಗಳೊಂದಿಗೆ ವಿಡಿಯೋ ಚಿತ್ರೀಕರಿಸಬಹುದು ಮತ್ತು ಶಾರ್ಟ್​ ವಿಡಿಯೋಗಳನ್ನು ಶೇರ್​ ಮಾಡಬಹುದು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವ ಟಿಕ್​ಟಾಕ್​ ಟೈಂಪಾಸ್​ಗೆ ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಭಾರತದ 130 ಕೋಟಿ ಜನರು ಟಿಕ್​ಟಾಕ್​ ಬಳಸುತ್ತಿದ್ದಾರೆ.

10 ಹೈದರಾಬಾದ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲಿದೆಯಾ ಡೆಲ್ಲಿ?

ಐಪಿಎಲ್​​​ನಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್​​ ತಂಡ ಸನ್​ರೈಸರ್ಸ್​​ ಹೈದರಾಬಾದ್ ತಂಡಕ್ಕೆ ಸವಾಲ್ ಹಾಕಲಿದೆ. ಈ ಹೈವೋಲ್ಟೇಜ್ ಪಂದ್ಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿದ್ದು, ಭುವಿ ಪಡೆಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಶ್ರೇಯಸ್ ಪಡೆ ಕಾತುರದಲ್ಲಿದೆ. ಹೈದರಾಬಾದ್ ಈಗಾಗಲೇ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಡೆಲ್ಲಿ ಐದನೇ ಸ್ಥಾನದಲ್ಲಿದೆ. ಅದರಲ್ಲು ಸನ್​ರೈಸರ್ಸ್​​ ಪರ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​​ಸ್ಟೋ ಭರ್ಜರಿ ಫಾರ್ಮ್​​ನಲ್ಲಿದ್ದಾರೆ. ಇವರ ಜೊತೆ ವಿಜಯ್ ಶಂಕರ್ ಕೂಡ ಬ್ಯಾಟ್ ಬೀಸುತ್ತಿರುವುದು ತಂಡಕ್ಕೆ ಮತ್ತಷ್ಟು ಸಹಾಯವಾಗುತ್ತಿದೆ. ಆದರೆ, ಮನೀಶ್ ಪಾಂಡೆ, ಯೂಸುಫ್ ಪಠಾಣ್ ತಂಡಕ್ಕೆ ಆಸರೆಯಾಗುತ್ತಿಲ್ಲ.
First published:April 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ