Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 23, 2019, 6:35 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 23, 2019, 6:35 PM IST
  • Share this:
1.ಮೂರನೇ ಹಂತದ ಮತದಾನ ಮುಕ್ತಾಯ

ದೇಶದ ಏಳು ಹಂತಗಳ ಲೋಕಸಭೆ ಚುನಾವಣೆಯಲ್ಲಿ ಮೂರನೇ ಹಂತದ ಮತದಾನ ಇಂದು ನಡೆಯಿತು ಒಟ್ಟು 13 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶದ 117 ಕ್ಷೇತ್ರಗಳಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ಧಾರೆ. ಇದರಲ್ಲಿ ಕರ್ನಾಟಕದ  14 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ಮತದಾನದ ವೇಳೆ ಪಶ್ಚಿಮ ಬಂಗಾಳ. ಒಡಿಶಾ, ಕೇರಳ ಹಾಗೂ ಜಮ್ಮ-ಕಾಶ್ಮೀರದಲ್ಲಿ ಹಿಂಸಾಚಾರ  ನಡೆದ ಘಟನೆ ದಾಖಲಾಗಿದೆ. ಇನ್ನು ಕರ್ನಾಟಕದಲ್ಲಿ ಶೇ  65 ರಷ್ಟು ಮತದಾನವಾಗಿದ್ದು ದೇಶದಲ್ಲಿ  ಶೇ. 61 ರಷ್ಟು ಮತದಾನ ದಾಖಲಾಗಿದೆ.

2.ಶ್ರೀಲಂಕಾ ಬಾಂಬ್​ ಸ್ಪೋಟ ಹೊಣೆಹೊತ್ತುಕೊಂಡ ಐಸಿಸಿ

ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಕಳೆದ ಭಾನುವಾರ ನಡೆದ ಸರಣಿ ಬಾಂಬ್​ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ಸ್​​ (ಐಸಿಸ್)​ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಸರಣಿ ಬಾಂಬ್ ಸ್ಫೋಟದಲ್ಲಿ 321 ಜನರು ಅಸುನೀಗಿ, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಐಸಿಎಸ್​ ಉಗ್ರ ಸಂಘಟನೆಯ ಈ ಸ್ಪೋಟ ನಡೆಸಿದೆ ಎಂದು ಸಂಘಟನೆ ಹೇಳಿಕೊಂಡಿದೆ ಎಂದು ಅಮಾಖ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ, ದಾಳಿ ನಡೆಸಿದ್ದಕ್ಕೆ ಸಂಘಟನೆ ಯಾವುದೇ ಸಾಕ್ಷ್ಯವನ್ನು ಒದಗಿಸಿಲ್ಲ.
3.ಶೀಘ್ರವೇ ರಾಜೀನಾಮೆ ದೋಸ್ತಿ ಸರ್ಕಾರಕ್ಕೆ ಶಾಕ್​ ನೀಡಿದ ರಮೇಶ್​ ಜಾರಕಿಹೊಳಿ

ಹೈ ವೋಲ್ಟೇಜ್​ ಕ್ಷೇತ್ರ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸಹೋದರರ ಫೈಟ್​ ಶುರುವಾಗಿದೆ. ಗೋಕಾಕ್​ ಮಾಜಿ ಶಾಸಕ ರಮೇಶ್​ ಜಾರಕಿಹೊಳಿ ತನ್ನ ಸಹೋದರ ಸತೀಶ್​ ಜಾರಕಿಹೊಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಕಾಂಗ್ರೆಸ್​ ನಾಯಕರ ವಿರುದ್ದವೂ ಬಹಿರಂಗವಾಗಿ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ. ಇಷ್ಟೇ ಅಲ್ಲದೇ, ರಮೇಶ್​ ಜಾರಕಿಹೊಳಿ ಕಾಂಗ್ರೆಸ್​​ಗೆ ರಾಜೀನಾಮೆ ನೀಡುವುದಾಗಿ ತಿಳಿಸಿ ಮೈತ್ರಿ ಸರ್ಕಾರಕ್ಕೆ ಶಾಕ್​ ಕೊಟ್ಟಿದ್ದಾರೆ. ಇಂದು ಬೆಳಗಾವಿಯಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ರಮೇಶ್​ ಜಾರಕಿಹೊಳಿ, ತಮ್ಮ ಸಹೋದರ 'ಸತೀಶ್​ ಜಾರಕಿಹೊಳಿಗೆ ತಲೆ ಕೆಟ್ಟಿದೆ' ಎಂದು ಕಿಡಿಕಾರಿದ್ದಾರೆ. ಅಲ್ಲದೇ ಕಾಂಗ್ರೆಸ್​ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಅವರು, ಚುನಾವಣೆ ಬಳಿಕ ರಾಜೀನಾಮೆ ಕೊಡುವುದು ಖಚಿತ ಎಂದರು. ಕಾಂಗ್ರೆಸ್​​ಗೆ ರಾಜೀನಾಮೆ ನೀಡುವುದು ಪಕ್ಕಾ. ಶೀಘ್ರದಲ್ಲೇ ರಾಜೀನಾಮೆ ದಿನಾಂಕ ತಿಳಿಸುತ್ತೇನೆ ಎಂದು ಹೇಳಿದರು.

4.ರಾಹುಲ್​ ಗಾಂಧಿಗೆ ಮತ್ತೆ ನೋಟೀಸ್​ ನೀಡಿದ ಸುಪ್ರೀಂಕೋರ್ಟ್​ರಫೇಲ್ ಹಗರಣದಲ್ಲಿ ನರೇಂದ್ರ ಮೋದಿ ವಿರುದ್ಧದ ಚೌಕಿದಾರ್ ಚೋರ್ ಹೈ ಟೀಕೆ ಜೊತೆ ಸುಪ್ರೀಂ ಕೋರ್ಟನ್ನೂ ತಳುಕು ಹಾಕಿದ ಆರೋಪ ಎದುರಿಸುತ್ತಿರುವ ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆಯ ನೋಟೀಸ್ ಜಾರಿ ಮಾಡಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಪೀಠವು ಏಪ್ರಿಲ್ 30ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ. ರಫೇಲ್ ವಿಮಾನ ಖರೀದಿ ಒಪ್ಪಂದ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನೂ ಇದರ ಜೊತೆಗೇ ನಡೆಸಲಾಗುತ್ತದೆ. ರಾಹುಲ್ ಗಾಂಧಿ ಅವರು ಸುಪ್ರೀಂಕೋರ್ಟ್​ಗೆ ಅಗೌರವ ತೋರಿದ್ದಾರೆ, ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಬಿಜೆಪಿಯ ಮೀನಾಕ್ಷಿ ಲೇಖಿ ಅವರು ಸಲ್ಲಿಸಿದ್ದ ದೂರನ್ನು ಪರಿಗಣಿಸಿದ್ದ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಂದ ವಿವರಣೆ ಕೋರಿತ್ತು. ಆದರೆ, ನಿನ್ನೆ ರಾಹುಲ್ ಗಾಂಧಿ ಅವರು ತಾವು ಆಡಿದ ಮಾತು ತಪ್ಪು ಎಂದು ಒಪ್ಪಿಕೊಂಡರಾದರೂ ಕೋರ್ಟ್​ಗೆ ಕ್ಷಮೆ ಯಾಚಿಸಿರಲಿಲ್ಲ

 

5.ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಬಿಗ್​ ರಿಲೀಫ್​

ದೆಹಲಿ ಮೂಲದ ಮಹಿಳೆಯೊಬ್ಬರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ತೇಜಸ್ವಿ ಸೂರ್ಯ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಿಸಿಕೊಂಡು ನೋಟಿಸ್​ ಜಾರಿ ಮಾಡಿದ್ದ ಮಹಿಳಾ ಆಯೋಗ ಈ ಪ್ರಕರಣವನ್ನು  ಕೈಬಿಟ್ಟಿದೆ. ಈ ಮೂಲಕ ಬಿಜೆಪಿ ಯುವ ಅಭ್ಯರ್ಥಿಗೆ ದೊಡ್ಡ ರಿಲೀಫ್​ ಸಿಕ್ಕಂತೆ ಆಗಿದೆ. ತೇಜಸ್ವಿ ಸೂರ್ಯ ಯುವತಿ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ನೀಡಿದ್ದ ದೂರಿನ ಕುರಿತು ಸರಿಯಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ ಪ್ರಕರಣವನ್ನು ಮಹಿಳಾ ಆಯೋಗ ಕೈ ಬಿಟ್ಟಿದೆ.

6.ರಮೇಶ್​ ಚಲನವಲದ ಮೇಲೆ ಸರ್ಕಾರದ ನಿಗಾ

ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುವ ದಿನದಂದೇ ಕಾಂಗ್ರೆಸ್ ರೆಬೆಲ್​ ಶಾಸಕ ರಮೇಶ್​ ಜಾರಕಿಹೊಳಿ ರಾಜೀನಾಮೆ ಹೇಳಿಕೆ ಮೈತ್ರಿ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಈ ಮೂಲಕ ಸರ್ಕಾರದ ಬುಡಕ್ಕೆ ಕೊಡಲಿ ಪೆಟ್ಟು ನೀಡಲು ಮತ್ತೊಮ್ಮೆ ಅಣಿಯಾಗಿದ್ದಾರೆ. ಸತತ ಪ್ರಚಾರದಿಂದ ಬಸವಳಿದಿದ್ದ ಸಿಎಂ ಕುಮಾರಸ್ವಾಮಿ ಉಡುಪಿಯ ಕಾಪು ಬಳಿ ಪಂಚಕರ್ಮ ಚಿಕಿತ್ಸೆ ಪಡೆಯುವ ಮೂಲಕ ವಿಶ್ರಾಂತಿ​ ತೆಗೆದುಕೊಳ್ಳುತ್ತಿದ್ದರು. ಆದರೆ, ರಮೇಶ್ ಜಾರಕಿಹೊಳಿ ಹೇಳಿಕೆ‌ ನೀಡಿದ ನಂತರ ಅವರಿಗೆ ಆತಂಕ ಕಾಡಲು ಆರಂಭವಾಗಿದೆ. ರಮೇಶ್ ಜಾರಕಿಹೊಳಿ ಹೇಳಿಕೆ, ಅತೃಪ್ತ ಶಾಸಕರ ಚಟುವಟಿಕೆ ಹಾಗೂ ದೋಸ್ತಿ‌ ಒಳಗಿನ ರಹಸ್ಯ ವಿದ್ಯಮಾನಗಳ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಯಿಂದ ಸಿಎಂ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಅತೃಪ್ತರೆಂದು ಗುರುತಿಸಿಕೊಂಡವರ ಚಲನವಲನಗಳ ಬಗ್ಗೆ ನಿಗಾ ಇಟ್ಟು, ಮಾಹಿತಿ ನೀಡುತ್ತಿರುವಂತೆ ಸೂಚನೆ ನೀಡಿದ್ದಾರೆ.

7.ಬಿಲ್ಕಿಸ್​ ಬನೊಗೆ ಪರಿಹಾರ ನೀಡುವಂತೆ ಗುಜರಾತ್​ ಸರ್ಕಾರಕ್ಕೆ ಸುಪ್ರೀಂ ಆದೇಶ

2002ರ ಗುಜರಾತ್​ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಿಲ್ಕಿಸ್​ ಬನೊ ಅವರಿಗೆ 50 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್​ ಮಂಗಳವಾರ ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೇ, ಆಕೆಗೆ ಸರ್ಕಾರಿ ಉದ್ಯೋಗ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸುವಂತೆ ನಿರ್ದೇಶನ ನೀಡಿದೆ. 17 ವರ್ಷಗಳ ನಿರಂತರ ಹೋರಾಟದ ಬಳಿಕ ಬಿಲ್ಕಿಸ್ ಬಾನು ಅವರಿಗೆ ನ್ಯಾಯಾಲಯ ಈ ಪರಿಹಾರ ಕಲ್ಪಿಸಿದೆ. ಅಹಮದಾಬಾದ್​ ಸಮೀಪವಿರುವ ರಂದೀಕ್​ಪುರ್​ ಹಳ್ಳಿಯಲ್ಲಿ ಬನೊ 21 ವರ್ಷದವರಿದ್ದಾಗ 2002ರ ಮಾರ್ಚ್​ 3ರಂದು ಗುಂಪೊಂದು ಅವರ ಕುಟುಂಬದ ಮೇಲೆ ದಾಳಿ ನಡೆಸಿ, ಕುಟುಂಬದ 14 ಮಂದಿಯನ್ನು ಹತ್ಯೆ ಮಾಡಿತ್ತು. ಬಿಲ್ಕಿಸ್​ ಬನೊ ಅವರ ಮೂರು ವರ್ಷದ ಮಗಳಾದ ಶಾಲಿಹಾನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ವೇಳೆ ಗರ್ಭಿಣಿಯಾಗಿದ್ದ ಬಿಲ್ಕಿಸ್​ ಅವರ ಮೇಲೆ ಸಾಮೂಹಿಕ ಅತ್ಯಾಚಾರವನ್ನೂ ಎಸಗಲಾಯಿತು. ಪ್ರಜ್ಞೆ ತಪ್ಪಿದ್ದ ಬಿಲ್ಕಿಸ್​ ಬನೊ ಸತ್ತಿದ್ದಾಳೆ ಎಂದು ಭಾವಿಸಿ ದಾಳಿಕೋರರು ಜಾಗ ಖಾಲಿ ಮಾಡಿದ್ದರು.

8.ಬಿಜೆಪಿ ಸೇರಿದ ಸನ್ನಿ ಡಿಯೋಲ್​

ದೇಶದೆಲ್ಲೆಡೆ ಇಂದು ಮೂರನೇ ಹಂತದ ಮತದಾನ ನಡೆಯುತ್ತಿರುವ ವೇಳೆ ಬಾಲಿವುಡ್​ ನಟ ಸನ್ನಿ ಡಿಯೋಲ್​ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶುಕ್ರವಾರ ಪುಣೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾರನ್ನು ಭೇಟಿಯಾಗಿದ್ದ ಸನ್ನಿ ಇಂದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್​ ಹಾಗೂ ಪಿಯೂಶ್​ ಗೋಯೆಲ್​ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅವರು ಪಂಜಾಬಿನ ಗುರುದಾಸ್​ಪುರದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಕಮಲ ಪಾಳಯ ಸೇರಿದ ಬಳಿಕ ಮಾತನಾಡಿದ ಅವರು, "ನನ್ನ ತಂದೆ (ಧರ್ಮೆಂದ್ರ) ರೀತಿಯಲ್ಲಿಯೇ ನಾನು ಬಿಜೆಪಿ ಸೇರಿದ್ದೇನೆ. ಅವರು ಅಟಲ್​ ಬಿಹಾರಿ ವಾಜಪೇಯಿ ಜೊತೆ ಕಾರ್ಯ ನಿರ್ವಹಿಸಿದ್ದರು. ಈಗ ನಾನು ನರೇಂದ್ರ ಮೋದಿ ಅವರೊಂದಿಗೆ ಹೆಜ್ಜೆ ಹಾಕಲು ಬಯಸಿದ್ದೇನೆ" ಎಂದರು

9.ಕಾರಿನ ಟಯರ್​ನಲ್ಲಿ ಹಣದ ಮಾಹಿತಿ ನೀಡುತ್ತೇನೆ; ಅಪ್ಪಾಜಿಗೌಡ

ಕಾರಿನ ಸ್ಟೆಪ್ನಿ ಟಯರ್​​ನಲ್ಲಿ ಹಣ ಸಿಕ್ಕ ವಿಚಾರಕ್ಕೆ ಮಾಜಿ ಶಾಸಕ ಅಪ್ಪಾಜಿಗೌಡ ಸ್ಪಷ್ಟನೆ ನೀಡಿದ್ದಾರೆ. ಹಣ ನನ್ನದೇ, ಇದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ ಎಂದು ಹೇಳಿದ್ದಾರೆ.
"ಅಕ್ರಮ ಎನ್ನುವುದಾದರೆ ಅದನ್ನು‌ ಮುಚ್ಚಿ ಹಾಕಬಹುದಿತ್ತು. ಹಾಗೇಕೆ ಮಾಡಲಿ. ಅದರ ಅವಶ್ಯಕತೆಯೂ ನನಗಿಲ್ಲ. ಸೈಟ್ ಮಾರಿದ್ರಿಂದ ಬಂದ ಹಣ ಅದು. ಅದನ್ನು ಕಾರಿನಲ್ಲಿ ತರುತ್ತಿದ್ದಾತ ನನ್ನ ಸಂಬಂಧಿ. ಅದು ಕಳ್ಳತನದ ದುಡ್ಡಲ್ಲ. ಮೂರು ತಿಂಗಳ ಹಿಂದೆಯೇ ಹಣ ತರಲು ತಿಳಿಸಿದ್ದೆ.ಅದನ್ನು ಲೇಟಾಗಿ ತರುವಾಗ ಈ ಬೆಳವಣಿಗೆಯಾಗಿದೆ. ನನ್ನ ಬಳಿ ದಾಖಲೆಗಳಿವೆ. ಅದನ್ನು ಐಟಿಗೆ ಸಲ್ಲಿಸುತ್ತೇನೆ. ಐಟಿ ನೊಟೀಸ್ ನೀಡಿದೆ. ಅದಕ್ಕೆ ವಿವರಣೆ ನೀಡಲು ಕಾಲಾವಕಾಶ ಕೇಳಿದ್ದೇನೆ," ಎಂದು ನ್ಯೂಸ್​ 18 ಕನ್ನಡಕ್ಕೆ ತಿಳಿಸಿದ್ದಾರೆ.

10.ಧೋನಿ vs ವಾರ್ನರ್: ಸೂಪರ್​ ಕಿಂಗ್ಸ್​ಗೆ ಇಂದು ಸನ್​ರೈಸರ್ಸ್​ ಸವಾಲು

ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ಮುಖಾಮುಖಿಯಾಗಲಿದೆ. ತವರಿನ ಹೊರಗೆ ಆಡಿದ ಎರಡು ಪಂದ್ಯಗಳನ್ನು ಸೋತಿರುವ ಧೋನಿ ಪಡೆಗೆ ಈ ಪಂದ್ಯ ಮಹತ್ವದ್ದಾಗಿದ್ದು, ಈ ಮೂಲಕ ಜಯದ ಲಯಕ್ಕೆ ಮರಳಲು ಯೋಜನೆ ಹಾಕಿಕೊಂಡಿದೆ. ಇನ್ನು ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡ ಚೆನ್ನೈಯನ್ನು ಮಣಿಸುವ ಮೂಲಕ ಪ್ಲೇ ಆಫ್​ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ಸತತ ವೈಫಲ್ಯ ಮಹೇಂದ್ರ ಸಿಂಗ್ ಧೋನಿಯ ಚಿಂತೆಯಾದರೆ, ಕೇನ್​ ವಿಲಿಯಮ್ಸನ್​ಗೆ ಮಧ್ಯಕ್ರಮಾಂಕದ ಆಟಗಾರರಿಂದ ರನ್​ ಸಿಡಿಯದಿರುವುದು ತಲೆನೋವುಂಟು ಮಾಡಿದೆ.

 
First published:April 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ