Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು.

G Hareeshkumar | news18
Updated:April 19, 2019, 6:58 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 19, 2019, 6:58 PM IST
  • Share this:
1. ಮೋದಿಗೆ ಮಾಡಲಾಗದ್ದನ್ನು ನಾವು ಮಾಡಿ ತೋರಿಸುತ್ತೇವೆ; ರಾಯಚೂರಿನಲ್ಲಿ ರಾಹುಲ್ ಗಾಂಧಿ ಸವಾಲು

ರಾಯಚೂರಿನಲ್ಲಿ ಕಾಂಗ್ರೆಸ್- ಜೆಡಿಎಸ್​​ ಲೋಕಸಭಾ ಮೈತ್ರಿ ಅಭ್ಯರ್ಥಿ ಬಿ.ವಿ. ನಾಯಕ್ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಆಗಮಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಚುನಾವಣೆ 2 ವಿಚಾರಧಾರೆಗಳ ನಡುವಿನ ಹೋರಾಟವಾಗಿದೆ. ಅನ್ಯಾಯ, ಸುಳ್ಳು ಮತ್ತು ಸತ್ಯದ ಹೋರಾಟವಾಗಿದೆ. ಮೋದಿ ಹೋದಲ್ಲೆಲ್ಲ ಸುಳ್ಳು ಹೇಳುತ್ತಾರೆ. ಎಲ್ಲರ ಖಾತೆಗೆ 15 ಲಕ್ಷ ರೂ. ನೀಡುತ್ತೇನೆ ಎಂದರು. ಆದರೆ,  1 ರೂ. ಕೂಡ ನೀಡಲಿಲ್ಲ. ಇದೇ ಕಾರಣಕ್ಕೆ ನ್ಯಾಯ್ ಯೋಜನೆಯನ್ನು ಜಾರಿಗೆ ತರುತ್ತೇವೆ. ಪ್ರತಿ ವರ್ಷ 5 ಕೋಟಿ ಜನರ ಖಾತೆಗೆ 72 ಸಾವಿರ ರೂ. ಹಾಕುತ್ತೇವೆ. ಮೋದಿಗೆ ಮಾಡಲಾಗದ್ದನ್ನು ನಾವು ಮಾಡಿ ತೋರಿಸುತ್ತೇವೆ ಎಂದು ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ

2. ಕಾಂಗ್ರೆಸ್​​ ತೊರೆದ ಪ್ರಿಯಾಂಕಾ ಚತುರ್ವೇದಿ

ಕಾಂಗ್ರೆಸ್​​ ತೊರೆದ ಮಾಜಿ ಎಐಸಿಸಿ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಶಿವಸೇನೆ ಸೇರ್ಪಡೆಯಾಗಿದ್ದಾರೆ. ಇಂದು ಪಕ್ಷದ ಮುಖ್ಯಸ್ಥ ಉದ್ಧವ್​​ ಠಾಕ್ರೆ ಸಮ್ಮುಖದಲ್ಲಿಯೇ ಅಧಿಕೃತವಾಗಿ ಪ್ರಿಯಾಂಕಾ ಸೇರ್ಪಡೆಯಾಗಿದ್ದಾರೆ. ಇನ್ನು ಸೇರ್ಪಡೆಯಾದ ಬಳಿಕ ಮಾತಾಡಿದ ಪ್ರಿಯಾಂಕ, ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಗೆಲ್ಲಿಸಲು ಶ್ರಮಿಸುತ್ತೇನೆ. ನನ್ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಉದ್ಧವ್​​ ಠಾಕ್ರೆ ಅವರಿಗೆ ಧನ್ಯವಾದ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಕಾಂಗ್ರೆಸ್​​ನಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಪಕ್ಷ ತೊರೆದಿರುವುದಾಗಿ ಟ್ವೀಟ್​​ನಲ್ಲಿ ತಿಳಿಸಿದ್ದರು. ಕಾಂಗ್ರೆಸ್​​ ಅಧ್ಯಕ್ಷ ತಮ್ಮ ರಾಜಿನಾಮೆ ಪತ್ರವನ್ನು ರವಾನಿಸಿರುವುದಾಗಿ ಹೇಳಿಕೊಂಡಿದ್ದರು. ತಮ್ಮೊಂದಿಗೆ  ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್‌ ಕಾರ್ಯಕರ್ತರ ಅಮಾನತನ್ನು ತೆರವುಗೊಳಿಸಿದ್ದಕ್ಕೆ ಚತುರ್ವೇದಿ ಆಕ್ರೋಶ ವ್ಯಕ್ತಪಡಿಸಿದ್ದರು

3. ವೈರತ್ವ ಮರೆತು ಮುಲಾಯಂ ಸಿಂಗ್ ಅವರನ್ನು ಹಾಡಿಹೊಗಳಿದ ಮಾಯಾವತಿ

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಪ್ರಧಾನಿ ನರೇಂದ್ರ ಮೋದಿಯಂತೆ ಹಿಂದುಳಿದ ಜನಾಂಗದ ಫೇಕ್ ನಾಯಕ ಅಲ್ಲ ಎಂದು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.  ಕೆಲವೊಮ್ಮೆ ದೇಶದ ಭವಿಷ್ಯದ ದೃಷ್ಟಿಕೋನದಲ್ಲಿ ಕಠಿಣ ನಿರ್ಧಾರಗಳನ್ನು ತಳೆಯಬೇಕಾಗಿರುತ್ತದೆ. ಮುಲಾಯಂ ಸಿಂಗ್ ಯಾದವ್ ತಾವು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಇಂತಹ ಅಭಿವೃದ್ಧಿಯ ಮುನ್ನೋಟಗಳನ್ನು ಹೊಂದಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರ ಅದರಲ್ಲೂ ಪ್ರಮುಖವಾಗಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಹಿಂದುಳಿದ ಜನಾಂಗದ ನಿಜವಾದ ನಾಯಕರಾಗಿದ್ದರೆ ಹೊರತು ಮೋದಿಯಂತೆ ಫೇಕ್ ನಾಯಕನಾಗಿರಲಿಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

4.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಜಿನಿ ಮಕ್ಕಳ್ ಮಂಡ್ರಮ್ ಕಣಕ್ಕೆ ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 'ರಜಿನಿ ಮಕ್ಕಳ್ ಮಂಡ್ರಮ್' ಸ್ಪರ್ಧಿಸಲಿದೆ ಎಂದು ತಮಿಳುನಾಡಿನ ಚಿತ್ರನಟ ಸೂಪರ್ ಸ್ಟಾರ್ ರಜಿನಿಕಾಂತ್ ಖಚಿತಪಡಿಸಿದ್ದಾರೆ. ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿರುವ ರಜಿನಿಕಾಂತ್, "ನನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಲು ನನಗೆ ಇಷ್ಟವಿಲ್ಲ. ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಯಾವ ಸಂದರ್ಭದಲ್ಲಿ ಘೋಷಣೆಯಾದರೂ ಸಹ ತಮ್ಮ ಪಕ್ಷ ಎಲ್ಲಾ 234 ವಿಧಾನಸಭೆಗಳಲ್ಲೂ ಸ್ಪರ್ಧಿಸಲಿದೆ” ಎಂದು ತಿಳಿಸಿದ್ದಾರೆ. ಆ ಮೂಲಕ ಅವರ ರಾಜಕೀಯ ಪ್ರವೇಶದ ಕುರಿತು ಮೂಡಿದ್ದ ಅಸ್ಪಷ್ಟತೆಗೊಂದು ತಾರ್ಕಿಕ ಅರ್ಧ ಕಲ್ಪಿಸಿದ್ದಾರೆ

5 ಪ್ರಧಾನಿ ಹೆಲಿಕಾಪ್ಟರ್ ಪರಿಶೀಲನೆಗೆ ಯತ್ನಿಸಿದ್ದ ಐಎಎಸ್ ಅಧಿಕಾರಿ ಅಮಾನತು; ಖಂಡನಾರ್ಹ ಎಂದ ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ಪರಿಶೀಲಿಸಿದ ಕರ್ನಾಟಕ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್​​ ಅವರನ್ನು ಸೇವೆಯಿಂದ ಅಮಾನತು ಮಾಡಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ಖಂಡಿಸಿದ್ದಾರೆ. ಈ ಬಗ್ಗೆ ಖುದ್ದು ಟ್ವೀಟ್​​ ಮಾಡಿರುವ ಸಿದ್ದರಾಮಯ್ಯ ಅವರು, ಸ್ವಯಂ ಘೋಷಿತ ಚೌಕಿದಾರ್ ಹೆಲಿಕಾಪ್ಟರ್ ಪರಿಶೀಲಿಸಿದ್ದಕ್ಕೆ ದಿಟ್ಟ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಇಂತಹ ಐಎಎಸ್​​ ಅಧಿಕಾರಿ ​ಮೊಹಮ್ಮದ್ ಮೊಹ್ಸಿನ್ ಅವರನ್ನು ಸೇವೆಯಿಂದ ವಜಾಗೊಳಿಸಿರುವುದು ಖಂಡನಾರ್ಹ. ಮುಚ್ಚಿಡಲು ಏನು ಇಲ್ಲದಿದ್ದಾಗ ಅಭದ್ರತೆ ಯಾಕೆ ಮಿಸ್ಟರ್ ಚೌಕಿದಾರ್? ಎಂದು ಪ್ರಶ್ನಿಸಿದ್ದಾರೆ.​​

6. ರಾಹುಲ್ ಗಾಂಧಿ ಪ್ರಧಾನಿಯಾದರೆ ಬೆಂಬಲಕ್ಕೆ ನಾನು ನಿಲ್ಲುತ್ತೇನೆ; ಎಚ್​.ಡಿ. ದೇವೇಗೌಡ

ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾದರೆ ನಾನು ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ವರಿಷ್ಠ ಎಚ್​.ಡಿ. ದೇವೇಗೌಡ ಅಭಯಹಸ್ತ ನೀಡಿದ್ದಾರೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನದ ಬಳಿಕ ಮಾತನಾಡಿರುವ ದೇವೇಗೌಡ, “ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರಾಜ್ಯದಲ್ಲಿ ನಮಗೆ ಬೆಂಬಲ ಸೂಚಿಸಿದ್ದಾರೆ, ಹೀಗಾಗಿ ಈಗ ಅವರ ಬೆಂಬಲಕ್ಕೆ ನಿಲ್ಲಬೇಕಾದ ಜವಾಬ್ದಾರಿ ಈ ನಮ್ಮ ಮೇಲಿದೆ. ಚುನಾವಣೆಯ ನಂತರ ರಾಹುಲ್ ಗಾಂಧಿ ಪ್ರಧಾನಿಯಾದರೆ ಲೋಕಸಭೆಯಲ್ಲಿ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ” ಎಂದು ತಿಳಿಸಿದ್ದಾರೆ

7. ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್​ಗೆ ಸಾರ್ವಜನಿಕ ಸಭೆಯಲ್ಲೇ ಕಪಾಳಮೋಕ್ಷ

ಗುಜರಾತಿನ ಪಾಟೀದಾರ್ ಸಮುದಾಯ ನಾಯಕ ಹಾರ್ದಿಕ್ ಪಟೇಲ್​ಗೆ ಬಹಿರಂಗ ಸಭೆಯಲ್ಲೇ ಓರ್ವ ಕಪಾಳಮೋಕ್ಷ ಮಾಡಿದ ಘಟನೆ ಸುರೇಂದ್ರ ನಗರ್​ನಲ್ಲಿ ನಡೆದಿದೆ. ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಹಾರ್ದಿಕ್ ಪಟೇಲ್ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಇಂದು ಸುರೇಂದ್ರ ನಗರ್​ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಆದರೆ, ಹಾರ್ದಿಕ್ ಮಾತನಾಡುತ್ತಿದ್ದಂತೆ ವೇದಿಕೆ ಏರಿದ ದಿನೇಶ್ ಬಾಂಬಾನಿಯ ಎಂಬ ವ್ಯಕ್ತಿ ಆತನ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿ ವಿವಾದಕ್ಕೆ ಕಾರಣನಾಗಿದ್ದಾನೆ.

8.ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು;  ಆರೋಪಿಯನ್ನು ಬಂಧಿಸಿದ ಪೊಲೀಸರು

ನಗರದ ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ್ (23) ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿನಿಯ ಸಹಪಾಠಿ ಸುದರ್ಶನ್ ಯಾದವ್ ಎಂಬವನನ್ನು ಗುರುವಾರ ರಾತ್ರಿ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಸುದರ್ಶನ್ ಅದೇ ಕಾಲೇಜಿನಲ್ಲೆ ವ್ಯಾಸಾಂಗ ಮಾಡುತ್ತಿದ್ದು ಮೃತ ವಿದ್ಯಾರ್ಥಿನಿ ಮಧುವಿನ ಗೆಳೆಯ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಮಗಳನ್ನು ಆರೋಪಿಗಳು ಅತ್ಯಾಚಾರ ಮಾಡಿ ನಂತರ ಆತ್ಮಹತ್ಯೆ ಎಂದು ಬಿಂಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ ಮೃತಳ ತಾಯಿ ನೀಡಿದ ದೂರಿನ ಅನ್ವಯ ನಗರದ ನೇತಾಜಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಅನುಮಾನದ ಮೇಲೆ ಆರೋಪಿ ಸುದರ್ಶನ್​ ನನ್ನು ನ್ಯಾಯಾಂಗ ಬಂಧನಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

9. ನನ್ನ ಶಾಸ್ತ್ರ ಮಿಸ್​​ ಆಗಲ್ಲ, ಜೆಡಿಎಸ್ ಅಭ್ಯರ್ಥಿಗಳು ಗೆಲ್ತಾರೆ: ರೇವಣ್ಣ ಭವಿಷ್ಯ

ಮಂಡ್ಯ, ಹಾಸನ ಮತ್ತು ತುಮಕೂರಿನಲ್ಲಿ ನೂರಕ್ಕೆ ನೂರು ಜೆಡಿಎಸ್  ಅಭ್ಯರ್ಥಿಗಳು ಗೆಲ್ತಾರೆ. ಬೇಕಾದ್ರೆ ಬರೆದಿಟ್ಟುಕೊಳ್ಳಿ. ನಾನು ಶಾಸ್ತ್ರ ಹೇಳ್ತಿದ್ದೀನಿ. ನಾನು ಶಾಸ್ತ್ರ ಹೇಳಿದ್ರೆ ಯಾವುದೇ ಕಾರಣಕ್ಕೂ  ಮಿಸ್ ಆಗಲ್ಲ ಎಂದು ಸಚಿವ ರೇವಣ್ಣ ಹೇಳಿದ್ದಾರೆ. ನಾವು ಗೆದ್ದೇ ಗೆಲ್ತೀವಿ. ನೀವು ಮಾಧ್ಯಮದವರು ಎಲ್ಲರೂ ಚೆನ್ನಾಗಿ ಸುದ್ದಿ ಮಾಡಿದ್ದೀರಿ. ಆದರಿಂದ ಜನರು ಏನಾಗುತ್ತೆ ನೋಡೋಣ ಅಂತಾ ಜೆಡಿಎಸ್​ಗೆ ವೋಟು ಹಾಕಿದ್ದಾರೆ. ಜಿಲ್ಲೆಯ ಮತದಾರರು, ಶಾಸಕರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆಗಳು. ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನವಾಗಿದೆ ಎಂದು ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದು ಹೆಚ್​​.ಡಿ .ದೇವೇಗೌಡ, ನಿಖಿಲ್ ಹಾಗೂ ಪ್ರಜ್ವಲ್ ಎಲ್ಲರೂ ದೆಹಲಿಗೆ ಹೋಗೋದು ನಿಜ. ಇವರೆಲ್ಲರೂ ಸಂಸತ್ತಿನಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

10.  ಐಪಿಎಲ್​​​ : ಆರ್​ಸಿಬಿ - ಕೋಲ್ಕತ್ತಾ ನೈಟ್ ರೈಡರ್ಸ್ 

ಐಪಿಎಲ್​ನಲ್ಲಿ ಇಂದು ನಡೆಯಲಿರುವ 35ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿ ಆಗಲಿದೆ. ಈಗಾಗಲೇ ಟೂರ್ನಿಯಿಂದ ಬಹುತೇಕ ಹೊರಬಿದ್ದಿರುವ ಆರ್​​ಸಿಬಿಗೆ ಪ್ಲೇ ಆಫ್​ ಆಸೆ ತುಂಬಾ ದೂರದ ಮಾತು. ಆದರೆ, ಪ್ಲೇ ಆಫ್​​​ಗೇರಲು ಹರಸಾಹಸ ಪಡುತ್ತಿರುವ ಕೆಕೆಆರ್​ಗೆ​​ ಇಂದಿನ ಪಂದ್ಯ ಗೆಲ್ಲಬೇಕಿದೆ. ಆರ್​ಸಿಬಿ ತಂಡಕ್ಕೆ ಡೇಲ್ ಸ್ಟೇನ್ ಕಮ್​ಬ್ಯಾಕ್ ಮಾಡಿದ್ದು, ಬೌಲಿಂಗ್​​ನಲ್ಲಿ ಬಲ ತುಂಬುತ್ತಾರ ಎಂಬುದು ಕಾದುನೋಡಬೇಕಿದೆ.
First published:April 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ