Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:April 18, 2019, 7:33 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 18, 2019, 7:33 PM IST
  • Share this:
1.ದೇಶಾದ್ಯಂತ ಎರಡನೇ ಹಂತದ ಚುನಾವಣೆ ಮುಕ್ತಾಯ

ದೇಶಾದ್ಯಂತ ಇಂದು ಎರಡನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಒಟ್ಟು 11 ರಾಜ್ಯಗಳ 95 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ರಾಜ್ಯದ 14 ಕ್ಷೇತ್ರಗಳಿಗೂ ಚುನಾವಣೆ ನಡೆದಿದ್ದು, ಒಟ್ಟಾರೆ ಶೇ.62ರಷ್ಟು ಮತದಾನವಾಗಿದೆ.

2. ರಾಜ್ಯದ 14 ಕ್ಷೇತ್ರಗಳಲ್ಲಿ ಶೇಕಡ 62ರಷ್ಟು ಮತದಾನ

14 ಲೋಕಸಭೆ ಕ್ಷೇತ್ರಗಳ ಶೇಕಡಾವಾರು ಮತದಾನ. ರಾಜ್ಯದಲ್ಲಿ ಒಟ್ಟಾರೆ ಶೇ. 63ರಷ್ಟು ಮತದಾನ. ಬೆಂಗಳೂರು ಉತ್ತರ-ಶೇ.48.19, ಕೇಂದ್ರ-ಶೇ.45.34 ಬೆಂಗಳೂರು ದಕ್ಷಿಣ ಶೇ.49.36. ತುಮಕೂರು-ಶೇ.70.28, ಚಿತ್ರದುರ್ಗ- ಶೇ.61.75, ಬೆಂಗಳೂರು ಗ್ರಾ.- ಶೇ.59.43, ಮಂಡ್ಯ-ಶೇ.70.23, ಮೈಸೂರು-ಶೇ.61.32 ಚಾಮರಾಜನಗರ- ಶೇ.66.51, ಚಿಕ್ಕಬಳ್ಳಾಪುರ- ಶೇ.69.33, ಕೋಲಾರ- ಶೇ.69.99, ದಕ್ಷಿಣಕನ್ನಡ- ಶೇ.72.97, ಹಾಸನ- ಶೇ.71.97, ಉಡುಪಿ-ಚಿಕ್ಕಮಗಳೂರು- ಶೇ.69.83ರಷ್ಟು ಮತದಾನವಾಗಿದೆ.

3. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಭಾರತ ಅಳುತ್ತಿತ್ತು, ಈಗ ಪಾಕಿಸ್ತಾನ ಜಗತ್ತಿನ ಮುಂದೆ ಅಳುತ್ತಿದೆ; ಪ್ರಧಾನಿ ಮೋದಿ

ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್​ ಪರ ಇಂದು ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡ ಮೋದಿ, ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್​-ಜೆಡಿಎಸ್​ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿ, ಅಭಿವೃದ್ಧಿ ಪಕ್ಷವಾದ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾವನಾತ್ಮಕವಾಗಿ ಕಣ್ಣೀರು ಸುರಿಸುವ ನಾಟಕ ಆಡುವವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಐದು ವರ್ಷಗಳ ಹಿಂದೆ ದೆಹಲಿಯಲ್ಲಿ ಈ ಸ್ಥಿತಿ ಇತ್ತು. ಇದೀಗ ಕರ್ನಾಟಕದಲ್ಲಿ ಆ ಪರಿಸ್ಥಿತಿ ಇದೆ ಎಂದು ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು.

4. ಟೈಮ್​ ಮ್ಯಾಗಜಿನ್​ನ ಜಗತ್ತಿನ 100 ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್​ನ ಮುಖೇಶ್​ ಅಂಬಾನಿದಿ ಟೈಮ್ ಮ್ಯಾಗಜಿನ್​​ 2019ರ ಜಗತ್ತಿನ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಜಗತ್ತಿನ ಅತ್ಯಂತ ಪ್ರಭಾವಿ ಉದ್ಯಮಿಗಳು, ಪ್ರವರ್ತಕರು, ನಾಯಕರು, ಕಲಾವಿದರ ಹೆಸರು ಈ ಪಟ್ಟಿಯಲ್ಲಿದೆ. ಟೈಮ್​ನ ಈ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್​ ಚೇರ್ಮನ್ ಮುಖೇಶ್​ ಅಂಬಾನಿ ಕೂಡ ಸ್ಥಾನ ಪಡೆದಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಕಾರ್ಯಕರ್ತರಾದ ಅರುಂಧತಿ ಕಾಟ್ಜು, ಮೇನಕಾ ಗುರುಸ್ವಾಮಿ ಸೇರಿದಂತೆ ಇನ್ನೂ ಹಲವರು ಟೈಮ್​ ಮ್ಯಾಗಜಿನ್​ನ ಈ ವರ್ಷದ 100 ಮಂದಿ ಪ್ರಭಾವಿಗಳ ಪಟ್ಟಿಯಲ್ಲಿದ್ದಾರೆ.

5. ರಾವಣ' ಹೆಸರಿನ ಉಪಗ್ರಹ ಹಾರಿಸಿದ ಶ್ರೀಲಂಕಾ

ಶ್ರೀಲಂಕಾದ ಮೊದಲ ಉಪಗ್ರಹ 'ರಾವಣ-1' ಉಪಗ್ರಹವನ್ನು ಇಂದು ಯಶಸ್ವಿ ಉಡಾವಣೆ ಮಾಡಲಾಯಿತು. ಈ ಮೂಲಕ ಶ್ರೀಲಂಕಾ ಜಾಗತಿಕ ಬಾಹ್ಯಾಕಾಶ ಕ್ಷೇತ್ರಕ್ಕೆ ಪ್ರವೇಶ ಪಡೆದಿದೆ. ಈ ಸಂಶೋಧನಾ ಉಪಗ್ರಹಕ್ಕೆ ರಾವಣ-1 ಎಂದು ಹೆಸರಿಸಲಾಗಿದೆ. ಈ ಉಪಗ್ರಹವನ್ನು ಅರ್ಥುರು ಸಿ ಕ್ಲಾರ್ಕೆ ಸಂಸ್ಥೆಯ ಇಂಜಿನಿಯರ್​ಗಳಾದ ಥಿರಿಂಡು ದಯಾರತ್ನೆ ಮತ್ತು ದುಲಾನಿ ಚಾಮಿಕಾ ಅವರು ಜಪಾನಿನ ಯೂಷು ಇನ್ಸ್​ಟಿಟ್ಯೂಟ್​ ಆಫ್​ ಟೆಕ್ನಲಾಜಿಸ್​ ಸಂಸ್ಥೆಯಲ್ಲಿ ತಯಾರಿಸಿದ್ದಾರೆ.

6. ಪಶ್ಚಿಮಬಂಗಾಳದಲ್ಲಿ ಮತ ಚಲಾವಣೆಗೆ ಅನಾಮಿಕರಿಂದ ತಡೆ, ಸ್ಥಳೀಯರಿಂದ ಪ್ರತಿಭಟನೆ

ಎರಡನೇ ಹಂತದ ಮತದಾನದ ವೇಳೆ ಪಶ್ಚಿಮಬಂಗಾಳದ ರಾಯ್​ಗಂಜ್​ನಲ್ಲಿ ಹಿಂಸಾಚಾರ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಉತ್ತರ ದಿನಜ್​ಪುರ್​ ವಿಭಾಗದ ದಿಗಿರ್​ಪರ್​ನಲ್ಲಿ ಅನಾಮಿಕ ವ್ಯಕ್ತಿಗಳು ತಮ್ಮ ಮತ ಚಲಾಯಿಸದಂತೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಎನ್​ಎಚ್​-34 ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಸಣ್ಣ ಗುಂಪೊಂದು ಮತಗಟ್ಟೆ ರಕ್ಷಣಾ ಸಿಬ್ಬಂದಿ ಮೇಲೆ ಕಲ್ಲನ್ನು ತೂರಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ.

7. ಛತ್ತೀಸ್​ಗಢದಲ್ಲಿ ಪೊಲೀಸರ ಎನ್​ಕೌಂಟರ್​ಗೆ ಇಬ್ಬರು ನಕ್ಸಲರು ಬಲಿ

ಛತ್ತೀಸ್​ಗಢದಲ್ಲಿ ಇತ್ತೀಚೆಗೆ ಚುನಾವಣೆ ಪ್ರಚಾರ ಮುಗಿಸಿಕೊಂಡು ವಾಹನದಲ್ಲಿ ಮರಳುತ್ತಿದ್ದಾಗ ನಕ್ಸಲರು​ ಸ್ಫೋಟಿಸಿದ್ದ ಸ್ಫೋಟಕ್ಕೆ ಬಿಜೆಪಿ ಶಾಸಕ ಹಾಗೂ ನಾಲ್ವರು ಭದ್ರತಾ ಸಾವಿಗೆ ಈಡಾಗಿದ್ದರು. ಇದೀಗ ಇದಕ್ಕೆ ಪ್ರತಿಯಾಗಿ ಇಲ್ಲಿನ ಪೊಲೀಸರು ಇಬ್ಬರು ನಕ್ಸಲರನ್ನು ಎನ್​ಕೌಂಟರ್​ ಮಾಡಿದ್ದಾರೆ. ಛತ್ತೀಸ್​ಗಢ ಜಿಲ್ಲೆಯ ದಾಂತೇವಾಡ ಜಿಲ್ಲೆಯಲ್ಲಿ ಪೊಲೀಸರ ಎನ್​ಕೌಂಟರ್​ಗೆ ಇಬ್ಬರು ನಕ್ಸಲರು ಹತ್ಯೆಗೀಡಾಗಿದ್ದಾರೆ. ಮತ್ತೊಬ್ಬ ನಕ್ಸಲ್​ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಮುಂಜಾನೆ 5.30 ರ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

8. ಸುಮಲತಾ-ನಿಖಿಲ್​ ಮುಖಾಮುಖಿ; ಬೆಂಬಲಿಗರ ನಡುವೆ ಮಾರಾಮಾರಿ, ಪೊಲೀಸರಿಂದ ಲಘು ಲಾಠಿ ಪ್ರಹಾರ

ಹೈವೋಲ್ಟೆಜ್​ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಇಂದು ಮತದಾನವಾಗುತ್ತಿದ್ದು, ಬೆಳಗ್ಗೆಯಿಂದ ಶಾಂತಿಯುತ ಮತದಾನ ನಡೆದಿದೆ. ಆದರೆ, ಅಂಬರೀಷ್​ ಅವರ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಬ್ಬರೂ ನಾಯಕರ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಲು ಸುಮಲತಾ ಅಂಬರೀಷ್ ಆಗಮಿಸಿದ್ದರು. ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸಿದ್ದರು. ಈ ವೇಳೆ ನಿಖಿಲ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡ ಬೆಂಬಲಿಗರು ನಿಖಿಲ್​ಗೆ ಜೈಕಾರ ಕೂಗಿದರು. ನಂತರ ನಿಖಿಲ್-ಸುಮಲತಾ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ಬೆಂಬಲಿಗರು ತಮ್ಮ ತಮ್ಮ ನಾಯಕರ ಪರ ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ  ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಬೆಂಬಲಿಗರು ಮುಂದಾದರು. ಆಗ ಪೊಲೀಸರು ಲಘ ಲಾಠಿ ಚಾರ್ಜ್​ ನಡೆಸಿ, ಪರಿಸ್ಥಿತಿ ಹತೋಟಿಗೆ ತಂದರು.

9. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಮೇಲೆ ಶೂ ಎಸೆದ ವೈದ್ಯ

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುವ ವೇಳೆ ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಅವರ ಮೇಲೆ ಶೂ ಎಸೆದ ಘಟನೆ ನಡೆದಿದೆ. ಸಾಧ್ವಿ ಪ್ರಗ್ಯಾ ಅವರಿಗೆ ಪಕ್ಷದ ಟಿಕೆಟ್ ಕೊಟ್ಟಿದ್ದಕ್ಕೆ ವಿವರಣೆ ನೀಡಲು ನಡೆಸಲಾದ ಸುದ್ದಿಗೋಷ್ಠಿಯ ವೇಳೆ ಈ ಘಟನೆ ಸಂಭವಿಸಿದೆ. ಕಾನಪುರದ ನಿವಾಸಿ ಡಾ| ಶಕ್ತಿ ಭಾರ್ಗವ ಎಂಬುವರು ಬಿಜೆಪಿ ಸಂಸದನ ಮೇಲೆ ಶೂ ಎಸೆದ ವ್ಯಕ್ತಿ ಎನ್ನಲಾಗಿದೆ.

10. ಐಪಿಎಲ್​- ಮುಂಬೈ - ಡೆಲ್ಲಿ ಮುಖಾಮುಖಿ

ಐಪಿಎಲ್​​ನಲ್ಲಿ ಇಂದಿನ 34ನೇ ಪಂದ್ಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಸವಾಲೊಡ್ಡಲಿದೆ. ಉಭಯ ತಂಡಗಳು ಸಮಾನ ಸ್ಥಾನದಲ್ಲಿದ್ದು, ರನ್​​ರೇಟ್ ಆಧಾರದ ಮೇಲೆ ಡೆಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮುಂಬೈ ಮೂರನೇ ಸ್ಥಾನದಲ್ಲಿದೆ. ಡೆಲ್ಲಿ-ಮುಂಬೈ ಈವರೆಗೆ 23 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಡೆಲ್ಲಿ 12 ಪಂದ್ಯಗಳಲ್ಲಿ ಗೆದ್ದರೆ, ಮುಂಬೈ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮುಂಬೈಗೆ ಇದು ಸೇಡಿನ ಪಂದ್ಯವಾಗಿದ್ದು, ಉಭಯ ತಂಡಗಳ ಮೊದಲ ಹಣಾಹಣಿಯಲ್ಲಿ ಡೆಲ್ಲಿ 37 ರನ್​​ಗಳ ಗೆಲುವು ಸಾಧಿಸಿತ್ತು. ಹೀಗಾಗಿ ರಾತ್ರಿ 8 ಗಂಟೆಗೆ ಆರಂಭವಾಗುವ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

First published:April 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ