Evenign Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 17, 2019, 7:03 PM IST
Evenign Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 17, 2019, 7:03 PM IST
  • Share this:
1.ಮೊದಲ ಹಂತದ ಮತದಾನಕ್ಕೆ ನಾಳೆ ರಾಜ್ಯ ಸಿದ್ಧ

ಗುರುವಾರ ದೇಶದಾದ್ಯಂತ 2ನೇ ಹಂತದ ಮತದಾನ ನಡೆಯಲಿದ್ದು, ಕರ್ನಾಟಕ ಸೇರಿದಂತೆ 13 ರಾಜ್ಯಗಳ 97 ಕ್ಷೇತ್ರಗಳಿಗೆ ಮತದಾನ ನಡೆಯಲಿವೆ. ಈ ಪೈಕಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಮೇಲುಗೈ ಸಾಧಿಸುವವರು ಯಾರು? ಎಂಬುದು ಬಹುತೇಕ ನಾಳೆ ಸಂಜೆಯ ಒಳಗೆ ಸ್ಪಷ್ಟವಾಗಲಿದೆ. 2ನೇ ಹಂತದ ಮತದಾನದಲ್ಲಿ ಅಸ್ಸಾಂನ 5, ಬಿಹಾರದ 5,  ಛತ್ತೀಸ್​ಘಡದ 3, ಜಮ್ಮು-ಕಾಶ್ಮೀರದ 2, ಕರ್ನಾಟಕದ 14, ಮಹಾರಾಷ್ಟ್ರದ 10, ಮಣಿಪುರ್​ನ 01, ಓದಿಶಾ 05, ತಮಿಳುನಾಡು 39, ತ್ರಿಪುರ 01, ಉತ್ತರಪ್ರದೇಶದ 08, ಪಶ್ಚಿಮ ಬಂಗಾಳದ 03 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

2.ಪಕ್ಷದ ಪರ ಪ್ರಚಾರ; ನಾಲ್ವರು ಪೊಲೀಸರ ವರ್ಗಾವಣೆ

ರಾಜ್ಯದ 14 ಕ್ಷೇತ್ರಗಳು ಮೊದಲ ಹಂತದ ಮತದಾನಕ್ಕೆ ಸಜ್ಜಾಗಿದ್ದು, ಇನ್ನೇನು ಮತದಾನಕ್ಕೆ ಒಂದು ದಿನ ಬಾಕಿ ಇದೆ ಎನ್ನುವಾಗ ಪೊಲೀಸ್​ ಇಲಾಖೆಯಲ್ಲಿ ಭಾರೀ ಬದಲಾವಣೆ ಆಗಿದೆ.  ಎಸಿಪಿ ಸೇರಿದಂತೆ ಮಧ್ಯಮ ಕ್ರಮಾಂಕದ ನಾಲ್ವರು ಬೆಂಗಳೂರು ಪೊಲೀಸ್​ ಅಧಿಕಾರಿಯನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿ ಆದೇಶಿಸಿದೆ. ಈ ಅಧಿಕಾರಿಗಳು ರಾಜಕೀಯ ಪಕ್ಷವೊಂದರ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ದೂರು ಬಂದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ಮೇರೆಗೆ ಈ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ನಾಲ್ವರು ಪೊಲೀಸ್​ ಅಧಿಕಾರಿಗಳು ಆಡಳಿತ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರು ದಾಖಲಾಗಿತ್ತು.ಈ ದೂರಿನ ಅನ್ವಯ ಬೆಂಗಳೂರು ಪ್ರಾದೇಶಿಕ ಆಯುಕ್ತ ಅಧಿಕಾರಿ ಶಿವಯೋಗಿ ಕಲಸದ್​ ಮತ್ತು ಬೆಂಗಳೂರು ರೈಲ್ವೆ ಪೊಲೀಸ್​ ಪ್ರಧಾನ ಇನ್ಸ್​ಪೆಕ್ಟರ್​ ಡಿ.ರೂಪ ಅವರನ್ನು ಒಳಗೊಂಡ ತಂಡವನ್ನು ರಚಿಸಿ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ

3.ಮೋದಿಗೆ ಕುಟುಂಬವಿಲ್ಲ; ಶರದ್​ ಪವಾರ್​

ನರೇಂದ್ರ ಮೋದಿ ಅವರ ಕುಟುಂಬವನ್ನು ಇಣುಕಿ ನೋಡಿದರೆ ಅಲ್ಲಿ ಅವರ ಸ್ವಂತದವರು ಎಂಬುವವರು ಯಾರೂ ಇಲ್ಲ ಎಂದು ಬುಧವಾರ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಹೇಳಿದ್ದಾರೆ. ಸೋದರ ಸಂಬಂಧಿಗಳಿಂದ ಮಹಾರಾಷ್ಟ್ರವನ್ನು ಮುಕ್ತವನ್ನಾಗಿ ಮಾಡಬೇಕು ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಶರದ್ ಪವಾರ್ ಹೀಗೆ ತಿರುಗೇಟು ನೀಡಿದ್ದಾರೆ.
"ಮೋದಿಜೀ, ಹೇಳುತ್ತಾರೆ ಪವಾರ್ ಸಾಹೇಬರು ಒಳ್ಳೆಯವರು. ಆದರೆ, ಅವರ ಕುಟುಂಬದ್ದು ಸಮಸ್ಯೆ. ಅವರ ಸೋದರ ಸಂಬಂಧಿಗಳು ಅವರ ಅಂಕೆ ಮೀರಿದ್ದಾರೆ ಎಂದು ಹೇಳಿದ್ದರು. ನಾನು ಅವರಿಗೆ ಹೇಳಲು ಬಯಸುತ್ತೇನೆ, ನನ್ನ ಮನೆಯ ವಿಷಯ ಇಟ್ಟುಕೊಂಡು ಇವರು ಏನು ಮಾಡಲು ಹೊರಟಿದ್ದಾರೆ. ಆದರೆ, ನನಗೆ ಆನಂತರ ಅರಿವಾಯಿತು. ನನಗೆ ಹೆಂಡತಿ ಮತ್ತು ಮಗಳು ಇದ್ದಾಳೆ. ನನ್ನ ಅಳಿಯಂದಿರು ಮತ್ತು ಸೋದರ ಸಂಬಂಧಿಗಳು ನಮ್ಮ ಮನೆಗೆ ಬರುತ್ತಾರೆ. ಆದರೆ, ಅವರಿಗೆ ಯಾರೊಬ್ಬರೂ ಇಲ್ಲ," ಎಂದು ಪವಾರ್ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ4.ಕರೆಂಟ್​ ಶಾಕ್​ ಹೊಡೆಯುವ ಇವಿಎಂ

ಚುನಾವಣೆ ಪ್ರಚಾರದ ವೇಳೆ ದ್ವೇಷ, ಪ್ರಚೋದನಾಕಾರಿ ಭಾಷಣ ಮಾಡದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರೂ ಛತ್ತೀಸಗಢದ ಸಚಿವರೊಬ್ಬರು ಕ್ಯಾಮರಾ ಮುಂದೆ ನಾಲಿಗೆ ಹರಿಬಿಟ್ಟಿದ್ದಾರೆ. ಮತದಾರರು ಮತಯಂತ್ರದಲ್ಲಿ ಕಾಂಗ್ರೆಸ್​ ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕಿದರೆ ಎಲೆಕ್ಟ್ರಿಕ್ ಶಾಕ್​ ಹೊಡೆಯಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. "ನೀವು ಮೊದಲ ಬಟನ್​ ಒತ್ತುವ ಮೂಲಕ ಬೈರೇಶ್ ಥಾಕೂರ್ ಅವರಿಗೆ ಮತ ಹಾಕಬೇಕು. ಮೊದಲ ಬಟನ್​ ಬಿಟ್ಟು ಎರಡನೇ ಬಟನ್​ ಒತ್ತಿದರೆ ನಿಮಗೆ ಕರೆಂಟ್ ಶಾಕ್​ ಹೊಡೆಯಲಿದೆ. ಮೂರನೇ ಬಟನ್ ಒತ್ತಿದರೂ ಕೂಡ ಶಾಕ್ ಹೊಡೆಯಲಿದೆ. ಅದಕ್ಕಾಗಿ ನಾವು ಮೊದಲ ಗುಂಡಿ ಸಿದ್ಧ ಮಾಡಿದ್ದೇವೆ," ಎಂದು ಛತ್ತೀಸಗಢದ ಅಬಕಾರಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕವಾಸಿ ಲಖ್ಮಾ ಕಂಕೇರ್ ಜಿಲ್ಲೆಯಲ್ಲಿ ಹೇಳಿದ್ದಾಗಿ ಎನ್​ಡಿಟಿವಿ ವರದಿ ಮಾಡಿದೆ

5.ರಾಷ್ಟ್ರಪತಿ ವಿರುದ್ಧ ಅಶೋಕ್​ ಗೆಹ್ಲೋಟ್​ ವಿವಾದಾತ್ಮಕ ಹೇಳಿಕೆ

ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಬಿಜೆಪಿ ನಾಯಕ ಎಲ್​.ಕೆ. ಅಡ್ವಾಣಿ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಅವರಿಗೆ ಸಿಗಬೇಕಾದ ಗೌರವವನ್ನು ನೀಡುತ್ತಿಲ್ಲ ಎಂಬ ಆಕ್ಷೇಪ ಕೇಳಿಬರುತ್ತಲೇ ಇದೆ. ಇದೀಗ, ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದು, ವೋಟ್​ ಬ್ಯಾಂಕ್​ ರಾಜಕೀಯಕ್ಕಾಗಿ ಅಡ್ವಾಣಿಯನ್ನು ಮೂಲೆಗೆ ಕೂರಿಸಿ ರಾಮನಾಥ್​ ಕೋವಿಂದ್​ ಅವರನ್ನು ರಾಷ್ಟ್ರಪತಿಯಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಎರಡನೇ ಹಂತದ ಲೋಕಸಭಾ ಚುನಾವಣೆಗೆ ಇನ್ನೇನು ಒಂದೇ ದಿನ ಇದೆ ಎನ್ನುವಾಗಲೇ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ವಿವಾದಾತ್ಮಕ ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ. ಬಿಜೆಪಿ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಅವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂಬ ಬಗ್ಗೆ ಇಂದು ಹೇಳಿಕೆ ನೀಡಿರುವ ಗೆಹ್ಲೋಟ್​, ಈ ಬಾರಿಯ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದಲಿತರ ಮತಗಳನ್ನು ಸೆಳೆಯಲೆಂದೇ ಅಡ್ವಾಣಿ ಬದಲು ರಾಮನಾಥ ಕೋವಿಂದ್​ ಅವರಿಗೆ ರಾಷ್ಟ್ರಪತಿ ಪಟ್ಟ ಕಟ್ಟಲಾಗಿದೆ ಎಂದಿದ್ದಾರೆ

6.ರಮೇಶ್​ ವಿರುದ್ಧ ಶಿಸ್ತು ಕ್ರಮಕ್ಕೆ ಸಹೋದರನ ಶಿಫಾರಸು

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಮೈತ್ರಿ ಸರ್ಕಾರದ ಸಂಪುಟ ಸಭೆ ವಿಸ್ತರಣೆಯ ನಂತರ ಸಚಿವ ರಮೇಶ್ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದರಿಂದ ಕಾಂಗ್ರೆಸ್​ ವಿರುದ್ಧ ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಕಳೆದ ಕೆಲ ತಿಂಗಳಿನಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಚಿಂಚೊಳ್ಳಿ ಮಾಜಿ ಶಾಸಕ ಉಮೇಶ್ ಜಾಧವ್ ಸೇರಿದಂತೆ 4 ಶಾಸಕರ ಜೊತೆ ಮುಂಬೈ ತೆರಳಿ ಸರ್ಕಾರವನ್ನೇ ಬೀಳಿಸುವ ಬೆದರಿಕೆಯನ್ನೂ ಒಡ್ಡಿದ್ದರು

7.ಚಿಕ್ಕಮಗಳೂರಿನಲ್ಲಿ ಸಾಮೂಹಿಕ ಮತದಾನ ಬಹಿಷ್ಕಾರ

ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.  ಆದರೆ, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮೂಲಭೂತ ಸೌಲಭ್ಯ ವಂಚಿತ ಕೆಲ ಗ್ರಾಮಗಳು ಸಾಮೂಹಿಕ ಮತದಾನ ಬಹಿಷ್ಕಾರಕ್ಕೆ ಮುಂದಾಗಿರುವುದು ಚುನಾವಣಾ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಅರೆಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಾದ ಹೆಮ್ಮಿಗೆ, ಗೂಳಿಮಕ್ಕಿ, ಅಬಿವರೆ ಗ್ರಾಮಗಳು ಮತದಾನದ ಬಹಿಷ್ಕಾರಕ್ಕೆ ಮುಂದಾಗಿವೆ. ತಮ್ಮ ಗ್ರಾಮಗಳಿಗೆ ಯಾವುದೇ ಸರ್ಕಾರಗಳು ಜನಪ್ರತಿನಿಧಿಗಳು ಅವಶ್ಯಕವಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮನಸ್ಸು ಮಾಡುತ್ತಿಲ್ಲ. ದಶಕಗಳ ಕಾಲ ರಸ್ತೆ ಇಲ್ಲದೆ, ಸೇತುವೆ ಹಾಗೂ ವಿದ್ಯುತ್​ ಇಲ್ಲದೆ ಸಂಕಷ್ಟದಲ್ಲಿ ಬದುಕು ಸವೆಸುವ ಸ್ಥಿತಿ ಇದೆ. ಇದೇ ಕಾರಣಕ್ಕೆ ತಾವು ಸಾಮೂಹಿಕ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ. ಅಲ್ಲದೆ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಬರುವವರೆಗೆ ಮತದಾನ ಮಅಡುವುದಿಲ್ಲ" ಎಂದು ಹಳ್ಳಿಯ ಪ್ರಮುಖರು ಸ್ಪಷ್ಟಪಡಿಸಿದ್ದಾರೆ.

8.ನಾನು ಭಾವುಕಜೀವಿ

ದೇವೇಗೌಡರ ಕುಟುಂಬದವರು ಚುನಾವಣೆ ವೇಳೆ ಕಣ್ಣೀರು ಹಾಕುವ ನಾಟಕ ಆಡುತ್ತಾರೆ ಎಂಬ ಆರೋಪಗಳಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದ ಆನವಟ್ಟಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿರುವ ಕುಮಾರಸ್ವಾಮಿ, ಹೃದಯದಲ್ಲಿ ಭಾವುಕತೆ ಇದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತಿತ್ತು ಎಂಬ ಯಡಿಯೂರಪ್ಪ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾನೊಬ್ಬ ಭಾವುಕ ಜೀವಿ. ಪ್ರತಿದಿನ ಕಣ್ಣೀರು ಹಾಕುತ್ತೇನೆ. ಕಣ್ಣಲ್ಲಿ ನೀರು ಸುಮ್ಮಸುಮ್ಮನೆ ಬರುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ಅವರಿಂದ ಅಳುವುದನ್ನ ಕಲಿಯಬೇಕು ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ತಾನು ಭಾವನಾತ್ಮಕ ಜೀವಿಯಾಗಿದ್ದು, ಮೊದಲಿನಿಂದಲೂ ರೈತರ ಕಷ್ಟ ಸುಖಕ್ಕೆ ಸ್ಪಂದಿಸಿಕೊಂಡು ಬೆಳೆದ ವ್ಯಕ್ತಿ. ಅದನ್ನ ನೀವು ಕಲಿಯಬೇಕು ಎಂದು ಎಸ್.ಎಂ. ಕೃಷ್ಣ ಅವರಿಗೆಯೇ ತಿಳಿಹೇಳಿದ್ದಾರೆ

9.ಬೆಂಗಳೂರಿನಲ್ಲಿ ವರುಣನ ಸಿಂಚನ

ಬೇಸಿಗೆ ಬಿಸಿಲಿನ ಝಳದಿಂದ ಪರಿತಪಿಸುತ್ತಿದ್ದ ರಾಜಧಾನಿ ಜನರಿಗೆ ಬುಧವಾರ ಸಂಜೆ ಮಳೆರಾಯ ತಂಪು ಎರೆದಿದ್ದಾನೆ. ಇಂದು ಸಂಜೆಯಿಂದ ನಗರದಲ್ಲಿ ಮೋಡ ಕವಿಡ ವಾತಾವರಣವಿದ್ದು, ಹಲವೆಡೆ ಗುಡುಗುಸಹಿತ ಭಾರೀ ಮಳೆಯಾಗಿದೆ. ಜೆ.ಪಿ.ನಗರ, ಮೆಜೆಸ್ಟಿಕ್, ಬಿಟಿಎಂ ಲೇಔಟ್, ಚಾಲುಕ್ಯ ಸರ್ಕಲ್, ಎಚ್​ಎಸ್​ಆರ್​ ಲೇಔಟ್​, ಮಾರುಕಟ್ಟೆ, ಜಯನಗರ, ಬನಶಂಕರಿ, ಶಿವಾಜಿನಗರ ಸುತ್ತಮುತ್ತ ಭಾರೀ ಮಳೆಯಾಗಿದೆ. ಇದನ್ನು ಹೊರತುಪಡಿಸಿ, ಹಲವು ಕಡೆ ತುಂತುರು ಮಳೆಯ ಸಿಂಚನವಾಗಿದೆ. ದಟ್ಟ ಕಾರ್ಮೋಡ ಕವಿದಿದ್ದು, ಮತ್ತೆ ಮಳೆ ಆರ್ಭಟಿಸುವ ಸಾಧ್ಯತೆ ಇದೆ.

10.ಐಪಿಎಲ್​-ಚೆನ್ನೈ-ಹೈದ್ರಾಬಾದ್​ ಮುಖಾಮುಖಿ

ಹೈದರಾಬಾದ್​ನ ರಾಜೀವ್​ ಗಾಂಧಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್​ನ 33ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಮುಖಾಮುಖಿಯಾಗುತ್ತಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಎದುರುಗೊಳ್ಳುತ್ತಿದ್ದು, ಹೀಗಾಗಿ ಈ ಪಂದ್ಯದಲ್ಲಿ ಪ್ರಬಲ ಪೈಪೋಟಿ ಕಂಡು ಬರುವ ನಿರೀಕ್ಷೆಯಿದೆ. ಈ ಆವೃತ್ತಿಯನ್ನು ಉತ್ತಮವಾಗಿಯೇ ಆರಂಭಿಸಿದ್ದ ಹೈದರಾಬಾದ್ ಇದೀಗ ಸತತ 3 ಸೋಲಿನೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಹಾಲಿ ಚಾಂಪಿಯನ್ ಸೂಪರ್ ಕಿಂಗ್ಸ್​ ಜಯದ ನಾಗಾಲೋಟವನ್ನು ಮುಂದುವರೆಸಿದ್ದು, ಈ ಪಂದ್ಯದಲ್ಲೂ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಯೋಜನೆ ಹಾಕಿಕೊಂಡಿದೆ.
First published:April 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ