Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:April 16, 2019, 7:08 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 16, 2019, 7:08 PM IST
  • Share this:
1.ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನು2 ದಿನಗಳು ಮಾತ್ರ ಬಾಕಿ ಇವೆ. ಇಂದು ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬೀದ್ದಿದೆ. ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ - ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಹಾಸನ, ಚಾಮರಾಜನಗರ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಪ್ರಚಾರ ಅಂತ್ಯವಾಗಿದೆ.

2. ಮಾಯಾವತಿ ನಿರ್ಬಂಧ ಹಿಂಪಡೆಯಲು ಸಾಧ್ಯವಿಲ್ಲ, ಆಯೋಗ ಕೊನೆಗೂ ತನ್ನ ಅಧಿಕಾರದ ಬಗ್ಗೆ ಎಚ್ಚೆತ್ತಿದೆ'- ಸುಪ್ರೀಂಕೋರ್ಟ್​ ಶ್ಲಾಘನೆ

ದ್ವೇಷ ಭಾಷಣ ಮಾಡಿದ ಕಾರಣಕ್ಕಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅವರ ಮೇಲೆ ಚುನಾವಣಾ ಆಯೋಗ ಕಠಿಣ ಕ್ರಮ ತೆಗೆದುಕೊಂಡ ನಿಲುವನ್ನು ಸುಪ್ರೀಂಕೋರ್ಟ್​ ಮಂಗಳವಾರ ಶ್ಲಾಘಿಸಿದೆ. ಕೊನೆಗೂ ಆಯೋಗ ತನ್ನ ಅಧಿಕಾರದ ಬಗ್ಗೆ ಎಚ್ಚೆತ್ತುಕೊಂಡಿದೆ ಎಂದು ಕೂಡ ಹೇಳಿದೆ. ನ್ಯಾಯಪೀಠವು ಚುನಾವಣಾ ಆಯೋಗದ ಕ್ರಮದಿಂದ ತೃಪ್ತಿಗೊಂಡಿದೆ. ಕೊನೆಗೂ ನೀವು ನಿಮ್ಮ ಅಧಿಕಾರದ ಬಗ್ಗೆ ಎಚ್ಚೆತ್ತುಕೊಂಡಿರಿ. ನಿಮ್ಮ ಅಧಿಕಾರವನ್ನು ನೀವು ಮರಳಿ ಪಡೆದಿದ್ದಿರಾ. ಅಧಿಕಾರ ಇಲ್ಲ ಎಂಬುದರ ಬಗ್ಗೆ ನೀವು ನೋಡಬೇಡಿ ಎಂದು  ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೋಯ್​ ಹೇಳಿದರು

3. ಆರ್ಥಿಕ ಮುಗ್ಗಟ್ಟು; ಜೆಟ್ ಏರ್​ವೇಸ್ ತಾತ್ಕಾಲಿಕ ಸ್ಥಗಿತ

ಹಣಕಾಸಿನ ಮುಗ್ಗಟ್ಟಿಗೆ ಒಳಗಾಗಿರುವ ದೇಶದ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ ವೇಸ್ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸಂಸ್ಥೆಯನ್ನು ನಿರ್ವಹಿಸಲು ಅವಶ್ಯಕತೆ ಇದ್ದ ಮಧ್ಯಂತರ ಹಣವನ್ನು ಬ್ಯಾಂಕ್​ ಒಕ್ಕೂಟ ಈ ವರೆಗೆ ಸಂದಾಯ ಮಾಡಿಲ್ಲ. ಹೀಗಾಗಿ ವಿಮಾನಯಾನ ಸೇವೆಯನ್ನು ಏಪ್ರಿಲ್. 19ರ ವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಜೆಟ್ ಏರ್​ವೇಸ್ 123 ವಿಮಾನಗಳನ್ನು ಹೊಂದಿರುವ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಆದರೆ, ನಷ್ಟಕ್ಕೊಳಗಾಗಿರುವ ಸಂಸ್ಥೆ ಕಳೆದ ಕೆಲ ತಿಂಗಳಿನಿಂದ ಕೇವಲ 7 ವಿಮಾನಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿತ್ತು.

4.ಮಸೀದಿಗೆ ಮಹಿಳೆಯರ ಪ್ರವೇಶದ ಕೂಗು: ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್​ಯಾವುದೇ ನಿರ್ಬಂಧವಿಲ್ಲದೇ ಮಹಿಳೆಯರು ಮಸೀದಿ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು ಎಂದು ಪುಣೆಯ ಮುಸ್ಲಿಂ ದಂಪತಿಗಳು ಸುಪ್ರೀಂಕೋರ್ಟ್​​ಗೆ ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್​ ಸಮ್ಮತಿಸಿದೆ. ನ್ಯಾಯಮೂರ್ತಿ ಎಸ್​​ಎ ಬೊಬ್ಡೆ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆಗೆ ಸಮ್ಮತಿ ನೀಡಿದೆ. ಶಬರಿಮಲೆ ತೀರ್ಪಿನ ಆಧಾರದ ಮೇಲೆ ಸುಪ್ರೀಂಕೋರ್ಟ್​ ಈ ಅರ್ಜಿ ವಿಚಾರಣೆಗೆ ಸಮ್ಮತಿ ಸೂಚಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಕೇಂದ್ರ ವಕ್ಫ್​ ಕೌನ್ಸಿಲ್​ಗೆ ನೊಟೀಸ್​ ನೀಡಿರುವ ಸುಪ್ರೀಂಕೋರ್ಟ್​ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

5. ಹಣ ಸಂದಾಯ ಪ್ರಕರಣ ಯಡಿಯೂರಪ್ಪ ಡೈರಿ ಸೇರಿ ಹಲವು ದಾಖಲೆಗಳನ್ನು ಪೊಲೀಸ್​ ಆಯುಕ್ತರಿ​ಗೆ ಒಪ್ಪಿಸಿದ ಈಶ್ವರಪ್ಪ ಪಿಎ ವಿನಯ್​

ಯಡಿಯೂರಪ್ಪ ಅವರು ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎನ್ನಲಾದ ದಾಖಲೆಗಳನ್ನು ಹೊಂದಿರುವ ಸಿಡಿ ಹಾಗೂ ಪೆನ್​ ಡ್ರೈವ್​​ ಸಾಕ್ಷಿಯನ್ನು ಈಶ್ವರಪ್ಪ ಆಪ್ತ ಕಾರ್ಯದರ್ಶಿ ವಿನಯ್​ ಪೊಲೀಸ್​ ಆಯುಕ್ತರಿಗೆ ನೀಡಿದ್ದು, ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಈ ಬಗ್ಗೆ ಮಾತನಾಡಿದ್ದ ವಿನಯ್​ ತಮಗೆ ಹಾಗೂ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ನೀಡಬೇಕು ಎಂದು ಅಮೃತಹಳ್ಳಿಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಅವಶ್ಯಕತೆ ಇದ್ದರೆ ತಮ್ಮ ಬಳಿಯಿರುವ ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ದನಿದ್ದೇನೆ ಎಂದಿದ್ದರು

6 .ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಆಪ್ತನ ಮನೆ ಮೇಲೆ ಐಟಿ ದಾಳಿ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಹಾಸನ ಹಾಗೂ ಮಂಡ್ಯ ಸೇರಿ ಹಲವೆಡೆ ಕಾಂಗ್ರೆಸ್​-ಜೆಡಿಎಸ್​ ಮುಖಂಡರು ಮತ್ತು ಅವರ ಆಪ್ತರ ಮನೆ ಮೇಲೆ ದಾಳಿ ನಡೆಸುತ್ತಿದ್ದ ಆದಾಯ ತೆರಿಗೆ ಇಲಾಖೆ ಇಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಆಪ್ತರ ಮನೆ ಮೇಲೆ ದಾಳಿ ನಡೆಸುವ ಮೂಲಕ ಶಾಕ್ ನೀಡಿದೆ. ಕಳೆದೊಂದು ವಾರದಿಂದ ದೇವೇಗೌಡ ಕುಟುಂಬದ ಆಪ್ತರ ಮೇಲೆ ಹಾಸನದಲ್ಲಿ ನಿರಂತರವಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದಾರೆ. ಇಂದು ಕೂಡ  ದೇವೇಗೌಡರ ಸಂಬಂಧಿಕರೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕನ ಆತ್ಮೀಯನ ಮನೆ ಮೇಲೂ ಐಟಿ ದಾಳಿ ನಡೆಸಿದೆ.

7.  ರಣಂ ಚಿತ್ರದ ನಿರ್ಮಾಪಕ ಸೇರಿದಂತೆ ನಾಲ್ವರಿಗೆ ಜಾಮೀನು ಮಂಜೂರು

ರಣಂ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ‌  ಸಿಲಿಂಡರ್ ಸ್ಫೋಟದಿಂದ ತಾಯಿ, ಮಗು  ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ  ಬಾಗಲೂರು ಪೊಲೀಸರು ಐವರನ್ನ ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ದೇವನಹಳ್ಳಿ ಸೆಷನ್ಸ್ ಕೋರ್ಟ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಸೇರಿದಂತೆ ನಾಲ್ವರಿಗೆ ಜಾಮೀನು ನೀಡಿದೆ. 50 ಸಾವಿರ ನಗದು, 1 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದು ಜಾಮೀನು ನೀಡಿದೆ.

 8. ಯಡಿಯೂರಪ್ಪನ ಡೈರಿ ಪೊಲೀಸರ ಕೈಸೇರಿದೆ, ಆ ಬಗ್ಗೆ ತನಿಖೆಯಾಗಲಿ; ದಿನೇಶ್ ಗುಂಡೂರಾವ್ ಆಗ್ರಹ

ಯಡಿಯೂರಪ್ಪ, ಈಶ್ವರಪ್ಪ ನಡುವಿನ ಜಗಳದಿಂದ ಯಡಿಯೂರಪ್ಪ ಮಾಡಿರುವ ಭ್ರಷ್ಟಾಚಾರದ ಮಾಹಿತಿ ಇರುವ ಡೈರಿ ಹೊರಬಿದ್ದಿದೆ. ಆ ಡೈರಿಯನ್ನು ಈಶ್ವರಪ್ಪನವರ ಪಿಎ ಪೊಲೀಸರಿಗೆ ನೀಡಿದ್ದಾರೆ.  ಆ ಡೈರಿಯಲ್ಲಿರುವ ವಿಷಯಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿರುವ ದಿನೇಶ್​ ಗುಂಡೂರಾವ್, ಈಶ್ವರಪ್ಪ ಮತ್ತು ಯಡಿಯೂರಪ್ಪನವರ ನಡುವಿನ ಜಗಳದಿಂದ ಯಡಿಯೂರಪ್ಪನವರ ಹಗರಣಗಳು ಬಯಲಾಗುವಂತಾಗಿದೆ. ಇದು ಬಹಳ ಗಂಭೀರವಾದ ವಿಚಾರ. ಈ ಬಗ್ಗೆ ಸಮಗ್ರ ತನಿಖೆ ಆಗಲೇಬೇಕು ಎಂದು ಹೇಳಿದ್ದಾರೆ

9. ಹಾಡುಹಗಲೇ ರಾಷ್ಟ್ರೀಯ ರಗ್ಬಿ ಆಟಗಾರನ ಗುಂಡಿಕ್ಕಿ ಹತ್ಯೆ

ಬಿಹಾರ ರಾಜಧಾನಿ ಪಾಟ್ನಾದಲ್ಲಿ ರಾಷ್ಟ್ರೀಯ ರಗ್ಬಿ ಆಟಗಾರ ಜೈಕಿ ಉರುಫ್ ಜೈ ಕುಮಾರ್ ಸಿಂಗ್​ ಅವರನ್ನು ಹಾಡುಹಗಲೇ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಮಂಗಳವಾರ ಬೆಳ್ಳಿಗ್ಗೆ ದುಷ್ಕರ್ಮಿಗಳ ತಂಡವೊಂದು ಜೈ ಕುಮಾರ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ತೀವ್ರ ಗಾಯಗೊಂಡ ಜೈಕಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಘಟನೆಯು ನಗರದ ಚರ್ಚ್​ ರಸ್ತೆಯಲ್ಲಿ ನಡೆದಿದ್ದು, ರಗ್ಬಿ ಆಟದ ಚಿತ್ರೀಕರಣಕ್ಕಾಗಿ ಜೈ ಕುಮಾರ್ ಮತ್ತು ತಂಡ ಈ ಪ್ರದೇಶಕ್ಕೆ ಆಗಮಿಸಿದ್ದರು. ಈ ವೇಳೆ ಶಸ್ತ್ರಗಳನ್ನು ಹೊಂದಿದ್ದ ದುಷ್ಕರ್ಮಿಗಳ ತಂಡ ಜೈಕಿ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ.

 

 

10. ನನ್ನಂಥ ಕಚಡಾ ನನ್ಮಗ ಇನ್ನೊಬ್ಬರಿಲ್ಲ, ನನಗೆ ಎರಡು ಮುಖ ಇದೆ'; ಚಾಲೆಂಜಿಂಗ್ ಸ್ಟಾರ್ ದರ್ಶನ್

ನನ್ನಂಥ ಕಚಡಾ ನನ್ಮಗ ಇನ್ನೊಬ್ಬರಿಲ್ಲ. ನನಗೆ ಎರಡು ಮುಖವಿದೆ. ಆ ಕಡೆ ಈ ಕಡೆ ಮುಖ. ಎಲ್ಲೂ ಮಧ್ಯ ಮುಖ ಇಟ್ಟುಕೊಂಡು ಎಲ್ಲೂ ಹೋಗಿಲ್ಲ. ಆದರೆ, ಈ ಚುನಾವಣೆಯಲ್ಲಿ ಮಧ್ಯದಲ್ಲಿ ಮುಖ ಇಟ್ಟುಕೊಂಡಿದ್ದೆ. ನನ್ನಿಂದ ಅಮ್ಮನಿಗೆ ತೊಂದರೆಯಾಗಬಾರದು ಎಂಬ ಒಂದೇ ಉದ್ದೇಶದಿಂದ ನಾನು ಏನು ಮಾತನಾಡಿಲ್ಲ,"  ಎಂದು ನಟ ದರ್ಶನ್ ಸ್ಪಷ್ಟಪಡಿಸಿದರು. ಅಂತಿಮ ಪ್ರಚಾರದ ದಿನವಾದ ಇಂದು ಮಂಡ್ಯದಲ್ಲಿ ಸುಮಲತಾ ಪರವಾಗಿ ನಡೆಸಿದ ಸ್ವಾಭಿಮಾನ ಸಮಾವೇಶದಲ್ಲಿ ಐಟಿ ದಾಳಿಗೆ ಸುಮಲತಾ ಕಾರಣ ಎಂದು ಸಿಎಂ ಕುಮಾರಸ್ವಾಮಿ ಆರೋಪದ ವಿರುದ್ಧ ಅಬ್ಬರಿಸಿದ ದರ್ಶನ್, ಅವರು ಈಗ ತಾನೇ ರಾಜಕೀಯಕ್ಕೆ ಬಂದಿರುವುದು. ಅವರ ಮೇಲೆ ಇಂತಹ ಸುಳ್ಳು ಆಪಾದನೆ ಹೊರಿಸುವುದು ಎಷ್ಟು ಸರಿ ಎಂದು ಕಿಡಿ ಕಾರಿದರು.
First published: April 16, 2019, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading