Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 14, 2019, 5:15 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು
  • News18
  • Last Updated: April 14, 2019, 5:15 PM IST
  • Share this:
1.ಬ್ಯಾಲೆಟ್​ ಪೇಪರ್​ಬಳಕೆಗೆ ವಿಪಕ್ಷಗಳ ಆಗ್ರಹ

ದೇಶದಲ್ಲಿ ನಡೆದ 91 ಕ್ಷೇತ್ರಗಳ ಮೊದಲ ಹಂತದ ಮತದಾನದಲ್ಲಿ ಅನೇಕ ವಿದ್ಯುನ್ಮಾನ ಮತ ಯಂತ್ರಗಳು ಕೈ ಕೊಟ್ಟವು. ಇನ್ನು ಆಂಧ್ರ ಪ್ರದೇಶದಲ್ಲಿ ಇವಿಎಂಗಳ ದೋಷದಿಂದ ಅವುಗಳನ್ನು ನೆಲಕ್ಕೆ ಎಸೆದು ಪುಡಿ ಮಾಡಿದ ಘಟನೆ ನಡೆಯಿತು. ದೋಷಪೂರಿತ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅದರ ಸಾಚಾತನವನ್ನು ಪ್ರಶ್ನಿಸಿ ದೂರು ಕೂಡ ನೀಡಿದರು. ಮತಯಂತ್ರಗಳ ಮೇಲೆ ನಮಗೆ ನಂಬಿಕೆ ಇಲ್ಲವಾಗಿದ್ದು, ಬ್ಯಾಲೆಟ್​ ಪೇಪರ್​ ವ್ಯವಸ್ಥೆಯನ್ನೇ ಮತ್ತೆ ಚುನಾವಣೆಯಲ್ಲಿ ಜಾರಿಗೆ ತರಬೇಕು ಎಂದು ಚಂದ್ರಬಾಬು ನಾಯ್ಡು ಸೇರಿ ಆರು ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ. ಈ ಕುರಿತು ಇಂದು ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಾಯ್ಡು ಅವರಿಗೆ ಆರು ಪ್ರಮುಖ ಪಕ್ಷಗಳು ಕೂಡ ಬೆಂಬಲ ನೀಡಿವೆ. ಈ ಕುರಿತು ಮಾತನಾಡಿರುವ ಅವರು, ಇವಿಎಂ ವಿಷಯ ಕುರಿತು ಮತ್ತೆ ನಾವು ಸುಪ್ರೀಂ ಕೋರ್ಟ್​ ಮೆಟ್ಟಿಲು ಹತ್ತಲು ಸಿದ್ದವಿದ್ದೇವೆ ಎಂದಿದ್ದಾರೆ.

2. ಆಸ್ಟ್ರೇಲಿಯಾದಲ್ಲಿ ಗುಂಡಿನದಾಳಿ

ಇಬ್ಬರು ವ್ಯಕ್ತಿಗಳ ನಡುವಿನ ಜಗಳ ನಡೆದು ನಂತರ ಮೇಲ್ಬೊರ್ನ್ ನೈಟ್​ಕ್ಲಬ್​ ಹೊರಗೆ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಆಸ್ಟ್ರೇಲಿಯಾದ ಎರಡನೇ ಅತಿದೊಡ್ಡ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇವರಲ್ಲಿ ಮೂರು ಜನರ ವಯಸ್ಸು 29 ರಿಂದ 50 ಇದೆ  ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್​ ವಕ್ತಾರ ಮಾತನಾಡಿ, ಈ ಗುಂಡಿನ ದಾಳಿ ಯಾವುದೇ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೋಟಾರ್​ಸೈಕಲ್​ ಗ್ಯಾಂಗ್​ ಸುತ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮೇಲ್ಬೊರ್ನ್​ನ ಏಜ್​ ಸುದ್ದಿಪತ್ರಿಕೆ ವರದಿ ಮಾಡಿದೆ

3. ಮತದಾನ ಪಟ್ಟಿಯಲ್ಲಿ ರಾಹುಲ್​ ದ್ರಾವಿಡ್​ ಹೆಸರಿಲ್ಲ

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗರಾಗಿರುವ ರಾಹುಲ್​ ದ್ರಾವಿಡ್​ ಕರ್ನಾಟಕ ಚುನಾವಣಾ ಆಯೋಗದ ರಾಯಭಾರಿ. 2018ರ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರಿಗೆ  ತಪ್ಪದೇ ಮತ ಚಲಾಯಿಸುವಂತೆ ಮತದಾನದ ಜಾಗೃತಿ ಮೂಡಿಸಿದ  ರಾಹುಲ್​ ದ್ರಾವಿಡ್​ಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಆಶ್ಚರ್ಯವಾದರೂ ಇದು ಸತ್ಯ. ಈ ಬಾರಿ ದ್ರಾವಿಡ್​ ಕುಟುಂಬ ಮತದಾನದ ಹಕ್ಕಿನಿಂದ ವಂಚಿತವಾಗಿದೆ. ಪ್ರತಿ ಬಾರಿಯೂ ತಪ್ಪದೇ ಮತದಾನ ಮಾಡುತ್ತಿದ್ದ ಕ್ರಿಕೆಟಿಗ ಇದೇ ಮೊದಲ ಬಾರಿ ಈ ಹಕ್ಕಿನಿಂದ ವಂಚಿವಾಗಿದೆ. ಇದಕ್ಕೆ ಕಾರಣ ಸ್ಥಳಾಂತರ. ಇಂದಿರಾನಗರದಲ್ಲಿದ್ದ ರಾಹುಲ್​ ಕುಟುಂಬ ಈಗ ಮತ್ತಿಕೆರೆಗೆ ಸ್ಥಳಾಂತರಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ಗೊಂದಲ ಸೃಷ್ಟಿಯಾಗಿದೆ.

4. ನಿಖಿಲ್​ ನಿಮ್ಮ ಹೃದಯದಲ್ಲಿದ್ದಾನೆ ಎನ್ನಿ; ಸಿಎಂಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಟ್ರೆಂಡ್​ ಸೃಷ್ಟಿಸಿದ್ದು 'ನಿಖಿಲ್​ ಎಲ್ಲಿದೀಯಪ್ಪಾ?' ಡೈಲಾಗ್​. ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್​ ಸೃಷ್ಟಿಸಿದ ಈ ಡೈಲಾಗ್​ ಹಿಡಿದು ಮಂಡ್ಯ ಅಭ್ಯರ್ಥಿ ಟ್ರೋಲ್​ಗೆ ಒಳಗಾಗಿದ್ದರು. ಈ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ, ನಿಖಿಲ್​ ಎಲ್ಲಿದೀಯಪ್ಪ ಎಂದು ಯಾರಾದ್ರೂ ಕೇಳಿದ್ರೆ ಈ ರೀತಿ ಉತ್ತರ ಕೊಡಿ ಎಂದು ಜನರಿಗೆ ತಿಳಿಸಿದ್ದಾರೆ. ಕೆ.ಆರ್​ನಗರದ ನಾರಾಯಣಪುರ ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು, ಯಾರಾದರೂ 'ನಿಖಿಲ್​ ಎಲ್ಲಿದ್ದಿಯಪ್ಪ ಎಂದರೆ, ನಮ್ಮ ಹೃದಯದಲ್ಲಿದ್ದಾನೆ' ಎಂದು ಹೇಳಬೇಕು ಎಂದು  ಪಾಠ ಹೇಳಿಕೊಟ್ಟರು. ಗ್ರಾಮಕ್ಕೆ ಸಿಎಂ ತೆರಳಿದ ವೇಳೆ 'ನಿಖಿಲ್ ಎಲ್ಲಿದೀಯಪ್ಪಾ' ಎಂದು ಬಹಳ ಚರ್ಚೆಯಾಗ್ತಿದೆ ಈ ಬಗ್ಗೆ ಮಾತನಾಡಿ ಎಂದು ಊರಿನ ಯುವಕರು ಸಿಎಂಗೆ ಆಗ್ರಹಿಸಿದಾಗ ಅವರು ಹೀಗೆ ಹೇಳಿದರು.

5. ಎಲ್ಲ ಮುಗಿದಿದೆ ಪ್ರಚಾರದ ಅವಶ್ಯಕತೆ ಇಲ್ಲ; ಚಲುವರಾಯಸ್ವಾಮಿ

ನಿಖಿಲ್ ಪರವಾಗಿ ದೇವೇಗೌಡರ ಕುಟುಂಬ ಹಾಗೂ ಸಚಿವರು ಪ್ರಚಾರ ಮಾಡ್ತಿದ್ದಾರೆ. ಸಮಲತಾ ಪರವಾಗಿ ದರ್ಶನ್ ,ಯಶ್ ಹಾಗೂ ಸಾಮಾನ್ಯ ಕಾರ್ಯಕರ್ತರು , ಸಾಮಾನ್ಯ ಜನ ಪ್ರಚಾರ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಹೇಳಿದ್ದಾರೆ. ನ್ಯೂಸ್ 18 ಕನ್ನಡ ಜೊತೆಗೆ ಮಾತನಾಡಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ಶಿವರಾಮೇಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಯಾರಿಗೂ ಗೌರವವಲ್ಲ. ಪಿಟೀಲ್ ಚೌಡಯ್ಯ ಕುಟುಂಬದ ಬಗ್ಗೆ ಗೌರವವಿದೆ. ಶ್ರೀಮತಿಯವರನ್ನು ಬೇರೆ ಅನ್ನೋದಕ್ಕೆ ಆಗುತ್ತಾ. ಯಾರಾದರೂ ಮಾತಾಡಲಿ. ಮಹಿಳೆ ಬಗ್ಗೆ ಮಾತಾನಾಡೋದು ಗೌರವವಲ್ಲ. ಜನ ನೋಡ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ಸಚಿವರನ್ನು ನೋಡ್ತಿದ್ದಾರೆ.  ವೈಯಕ್ತಿಕವಾಗಿ ಟೀಕೆ ಮಾಡೋದು ಚುನಾವಣೆಯಲ್ಲ. ನಮ್ಮ ಜಿಲ್ಲೆಗೆ ಗೌರವವಲ್ಲ ಎಂದರು.

6. ಬಿಎಸ್​ವೈ ಮನೆ ಮೇಲೆ ದಾಳಿಯಾಗುತ್ತಿಲ್ಲ; ಎಂಬಿಪಿ

ಚುನಾವಣೆಗೂ ಮೊದಲು ಯಡಿಯೂರಪ್ಪ ಒಬ್ಬೊಬ್ಬ ಶಾಸಕರಿಗೂ 10 ಕೋಟಿ ರೂ. ಕೊಡುವುದಾಗಿ ಹೇಳಿದ್ದರು. ಲೀಕ್ ಆಗಿದ್ದ ಆಡಿಯೋ ಕೂಡ ತಮ್ಮದೇ ಎಂದು ಒಪ್ಪಿಕೊಂಡಿದ್ದರು. ಆದರೂ ಯಾಕೆ ಯಡಿಯೂರಪ್ಪನವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿಲ್ಲ? ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಮಾತನಾಡಿರುವ ಸಚಿವ ಎಂ.ಬಿ. ಪಾಟೀಲ್, ಯಡಿಯೂರಪ್ಪನವರು ಚುನಾವಣೆ ಖರ್ಚಿಗೆ 50 ಲಕ್ಷ ಕೊಡಬಹುದು. ಆದರೆ ಉಳಿದ 9.5 ಕೋಟಿ ರೂ. ಯಾಕೆ ಕೊಡಲು ಹೊರಟಿದ್ದರು? ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಆದರೆ ನೀತಿಸಂಹಿತೆ ಹಿನ್ನೆಲೆ ಆ ಬಗ್ಗೆ ಮಾತನಾಡಲಾರೆ ಎಂದು ಹೇಳಿದ್ದಾರೆ

7. ಬಿಜೆಪಿಗೆ ಕೈ ಗೊಟ್ರಾ ತುಪ್ಪದ ಬೆಡಗಿ?

ತುಪ್ಪದ ಬೆಡಗಿ ರಾಗಿಣಿ ಇಂದು ನಡೆಯಬೇಕಿದ್ದ ಬಿಜೆಪಿ ಸೇರ್ಪಡೆ ಸುದ್ದಿಗೋಷ್ಠಿ ದಿಢೀರನೇ ರದ್ದಾಗುವ ಮೂಲಕ ಕುತೂಹಲದ ಜೊತೆಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಟಿ ರಾಗಿಣಿ ದ್ವಿವೇದಿ ಬಿಜೆಪಿ ಸೇರ್ಪಡೆಯ ಸುದ್ದಿಗೋಷ್ಠಿ ಇಂದು ಆಯೋಜನೆಯಾಗಿದ್ದು, ಆದರೆ, ಈ ಸುದ್ದಿಗೋಷ್ಠಿಗೆ ಪಕ್ಷದ ಮುಖ್ಯಸ್ಥರು ಸೇರಿದಂತೆ ಸ್ವತಃ ರಾಗಿಣಿ ಅವರೇ ಬಾರದಿದ್ದುದ್ದರಿಂದ ಸುದ್ದಿಗೋಷ್ಠಿಯನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ಕೇಳಲು ರಾಗಿಣಿ ಅವರಿಗೆ ಕರೆ ಮಾಡಿದರೂ ಅವರು ಪ್ರತಿಕ್ರಿಯಿ ಸಿಗಲಿಲ್ಲ. ಸುದ್ದಿಗೋಷ್ಠಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಹಾಗೂ ಅರವಿಂದ್​ ಲಿಂಬಾವಳಿ ಆಗಮಿಸಬೇಕಿತ್ತು. ಆದರೆ, ಇಬ್ಬರೂ ನಾಯಕರು ಸುದ್ದಿಗೋಷ್ಠಿಗೆ ಹಾಜರಾಗಲಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಸೇರ್ಪಡೆ ಕಾರ್ಯಕ್ರಮ ರದ್ದಾಗಿದೆ. ನಮ್ಮ ನಾಯಕರಾದ ಅರವಿಂದ ಲಿಂಬಾವಳಿ ತುರ್ತಾಗಿ ಚಾಮರಾಜನಗರ ಪ್ರವಾಸ ಕೈಗೊಂಡಿದ್ದಾರೆ. ಮುರಳೀಧರ್ ರಾವ್ ಕೂಡ ಲಭ್ಯರಿಲ್ಲ. ಹಾಗಾಗಿ ಇವತ್ತಿನ ಸೇರ್ಪಡೆ ಕಾರ್ಯಕ್ರಮ ರದ್ದಾಗಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಹೇಳಿಕೆ ನೀಡಿದರು

8. ನಾವು ಸೋತರೆ ಸರ್ಕಾರ ಇರತ್ತಾ!

ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ. ಮೈತ್ರಿ ಸರ್ಕಾರ ಐದು ವರ್ಷ ನಡೆಯಬೇಕು. ನಾವು ಸೋತರೆ ಸರ್ಕಾರ ಇರುತ್ತದೆಯಾ ಎನ್ನುವ ಮೂಲಕ ಜೆಡಿಎಸ್​ ನಾಯಕರಿಗೆ ನಮ್ಮ ಅಭ್ಯರ್ಥಿ ಸೋತರೆ ಅದಕ್ಕೆ ನೀವೇ ಕಾರಣ. ಇದು ಮುಂದೆ ಮೈತ್ರಿಗೆ ಎಳ್ಳುನೀರು ಬಿಡಬೇಕಾದ ಪರಿಸ್ಥಿತಿ ಉದ್ಭವವಾಗಬಹುದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಜಯಪುರದಲ್ಲಿ ಜಿಟಿ ದೇವೇಗೌಡ ಸೇರಿದಂತೆ ಜೆಡಿಎಸ್​ ನಾಯಕರೊಂದಿಗೆ ಜಂಟಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಮೈತ್ರಿ ಸರ್ಕಾರದಲ್ಲಿ ನಾನು ಮಂತ್ರಿಯಲ್ಲ, ಮುಖ್ಯಮಂತ್ರಿ ಆಗಿರುವುದು ಕುಮಾರಸ್ವಾಮಿ. ಮಂತ್ರಿ ಆಗಿರುವುದು ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು. ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು‌, ನಾವು ಗೆಲ್ಲಬೇಕು‌. ನಾವು ಸೋತರೆ ಸರ್ಕಾರ ಇರುತ್ತಾ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮೈತ್ರಿ ನಾಯಕರಿಗೆ ವಿಜಯಶಂಕರ್​ ಸೋತರೆ, ಈ ಸರ್ಕಾರ ಇರುವುದಿಲ್ಲ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.

9. ನೇಪಾಳದಲ್ಲಿ ವಿಮಾನ ಅಪಘಾತ;ಮೂವರ ಸಾವು

ನೇಪಾಳದಲ್ಲಿ ಟೇಕ್​ ಆಫ್​ ಆಗುತ್ತಿದ್ದ ವಿಮಾನವೊಂದು ಎರಡು ಹೆಲಿಕಾಪ್ಟರ್​ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೌಂಟ್​ ಎವರೆಸ್ಟ್​​ ಸಮೀಪ ಇರುವ ಲುಕ್ಲಾ ಏರ್​ಪೋರ್ಟ್​​ನಲ್ಲಿ ಈ ಘಟನೆ ನಡೆದಿದೆ. ಚಿಕ್ಕ ವಿಮಾನ ಟೇಕ್​ ಆಫ್​ ಆಗುವುದರಲ್ಲಿತ್ತು. ಈ ವೇಳೆ ವಿಮಾನ ನಿಯಂತ್ರಣ ತಪ್ಪಿ ಹೆಲಿಪ್ಯಾಡ್​ ಕಡೆ ನುಗ್ಗಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್​ ಅಧಿಕಾರಿಗಳು ಮೃತಪಟ್ಟಿದ್ದಾರೆ.ಎವರೆಸ್ಟ್​ ಶಿಖರ ಏರುವವರು ಇದೇ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಾರೆ. ಇಲ್ಲಿ ವಿಮಾನ ಲ್ಯಾಂಡಿಂಗ್​ ಹಾಗೂ ಟೇಕ್​ ಆಫ್​ ಮಾಡುವುದು ಬಹುತೇಕ ಪೈಲಟ್​ಗಳಿಗೆ ಸವಾಲಿನ ಸಂಗತಿಯಂತೆ.

10. ಆರ್​ಸಿಬಿ ಗೆಲುವಿನ ಸಿಹಿಯಲ್ಲಿ ಕ್ಯಾಪ್ಟನ್ ಕೊಹ್ಲಿಗೆ ಕಹಿ

ಐಪಿಎಲ್​​ನಲ್ಲಿ ನಿನ್ನೆ ನಡೆದ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ಸತತ ಆರು ಸೋಲುಗಳ ಬಳಿಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಪ್ಲೇ ಆಫ್​ ಕನಸನ್ನು ಜೀವಂತವಾಗಿರಿಸಿದೆ.ಆದರೆ, ಪಂದ್ಯ ಮುಗಿದ ಬಳಿಕ ನಾಯಕ ವಿರಾಟ್ ಕೊಹ್ಲಿಗೆ ಆಘಾತ ಉಂಟಾಗಿದೆ. ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ವಿರಾಟ್​ಗೆ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಪ್ರಕಾರ ನಿಗದಿತ ಅವಧಿಯೊಳಗೆ ಓವರ್​​ರೇಟ್ ಕಾಯ್ದುಕೊಳ್ಳುವಲ್ಲಿ ವಿಫಲರಾದ ಕೊಹ್ಲಿ 12 ಲಕ್ಷ ರೂ. ದಂಡ ತರಬೇಕಾಗಿ ಬಂದಿದೆ.
First published:April 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ